ಕನ್ನಡಪ್ರಭ ವಾರ್ತೆ ತುಮಕೂರು
ತಾಲೂಕಿನ ತೋವಿನಕೆರೆ ಸಮೀಪದ ಇತಿಹಾಸ ಪ್ರಸಿದ್ಧ ಕುರಂಕೋಟೆ ದೊಡ್ಡಕಾಯಪ್ಪ ದೇವಸ್ಥಾನದ ಹತ್ತಿರ ಹಳೆಯ ವಿದ್ಯಾರ್ಥಿಗಳ ಸ್ನೇಹ ಸಮ್ಮಿಲನ ಹಾಗೂ ಕುಟುಂಬ ಮಿಲನದ ಮೊದಲ ವರ್ಷದ ಸಂಭ್ರಮಾಚರಣೆ ವಿಭಿನ್ನ ಸಮಾರಂಭಕ್ಕೆ ಸಾಕ್ಷಿಯಾಯಿತು.ಕೊರಟಗೆರೆ ತಾಲೂಕಿನ ತೋವಿನಕೆರೆ ಸರ್ಕಾರಿ ಪ್ರಾಥಮಿಕ ಪಾಠ ಶಾಲೆ ಹಾಗೂ ಗಂಗಾಧರೇಶ್ವರ ಪ್ರೌಢಶಾಲೆಯ 1982-92ರ ಸಾಲಿನ ಸ್ನೇಹಿತರೆಲ್ಲ ಒಂದೆಡೆ ಸೇರಿ ಸ್ನೇಹ ಸಮ್ಮಿಲನ ಹಾಗೂ ಕುಟುಂಬ ಮಿಲನ ಹಾಗೂ ಮೊದಲ ವರ್ಷದ ಸಂಭ್ರಮಾಚರಣೆಯನ್ನು ಏರ್ಪಡಿಸಿದ್ದು ಬಹಳ ವಿಶೇಷವಾಗಿತ್ತು.
ಮೊದಲ ವರ್ಷದ ಸ್ನೇಹ ಸಮ್ಮಿಲನ ಹಾಗೂ ಕುಟುಂಬ ಮಿಲನ ಕಾರ್ಯಕ್ರಮ ಖುಷಿ ಖುಷಿಯಾಗಿ ಎಲ್ಲ ಸ್ನೇಹಿತರು ತಮ್ಮ ಕುಟುಂಬದೊಂದಿಗೆ ಭಾಗವಹಿಸಿ ಬೆಳಿಗ್ಗೆಯಿಂದ ಸಂಜೆವರೆಗೆ ಎಲ್ಲರೊಂದಿಗೆ ಬೆರೆತು ವಿದ್ಯಾರ್ಥಿ ಜೀವನದ ಸಿಹಿ-ಕಹಿ ನೆನಪುಗಳನ್ನು ಮೆಲುಕು ಹಾಕಿದರು.32 ವರ್ಷಗಳ ಬಳಿಕ ಒಂದೆಡೆ ಸೇರುತ್ತಿರುವುದೇ ಒಂದು ವಿಸ್ಮಯವಾಗಿದೆ. ಅಂದು ಶಾಲೆ ಬಿಟ್ಟು ಬೇರೆ ಕಡೆ ಹೋದ ನಂತರ ಯಾರೂ ಸಂಪರ್ಕದಲ್ಲಿರಲಿಲ್ಲ. ಎಲ್ಲೆಲ್ಲೋ ಹರಿದುಹಂಚಿಹೋಗಿದ್ದರು. ಕೇವಲ ಒಂದು ವರ್ಷದಿಂದೀಚೆಗೆ ಎಲ್ಲರು ಸಂಪರ್ಕಕ್ಕೆ ಬಂದು ಈಗ ಕುಟುಂಬದವರೊಂದಿಗೆ ಒಟ್ಟಾಗಿ ಸೇರಿದ್ದು ಭಾರಿ ಖುಷಿ ತಂದಿದೆ. ಬಾಲ್ಯದ ದಿನಗಳನ್ನು ನೆನೆದು ಎಲ್ಲರೂ ಭಾವುಕರಾಗಿದ್ದೇವೆ ಎಂದು ಅನೇಕರು ಅಭಿಪ್ರಾಯಪಟ್ಟರು.
ತಮ್ಮ ವಿದ್ಯಾರ್ಥಿ ಜೀವನ, ಶೈಕ್ಷಣಿಕ ಸಾಧನೆ, ವೃತ್ತಿ ಜೀವನ ಕುರಿತು ಪರಸ್ಪರ ಅನಿಸಿಕೆಗಳನ್ನು ವ್ಯಕ್ತಪಡಿಸಿದರು.ಇತಿಹಾಸ ಪ್ರಸಿದ್ಧ ದೊಡ್ಡಕಾಯಪ್ಪ ದೇವರಿಗೆ ಎಲ್ಲ ಸ್ನೇಹಿತರು ಹಾಗೂ ಅವರ ಕುಟುಂಬದೊಂದಿಗೆ ಅಭಿಷೇಕ, ವಿಶೇಷ ಪೂಜೆ ಹಾಗೂ ಎಲ್ಲರಿಗೂ ಒಳ್ಳೆಯದಾಗಲಿ ಎಂದು ದೇವರಲ್ಲಿ ಪ್ರಾರ್ಥನೆ ಮಾಡಿದರು
ಇಡೀ ದಿನ ಪ್ರತಿ ಹಂತದಲೂ ಜಾಗೃತೆ ವಹಿಸಿ ಹಳೆಯ ವಿದ್ಯಾರ್ಥಿಗಳಿಗೆ ಮಾದರಿಯಾದ ಸ್ನೇಹ ಸಮ್ಮಿಲನ ಹಾಗೂ ಕುಟುಂಬ ಮಿಲನ ಕಾರ್ಯಕ್ರಮವನ್ನು ಯಶ್ವಸಿಯಾಗಿ ನಡೆಸಿದರು. ವರ್ಷದಿಂದ ವರ್ಷಕ್ಕೆ ಈ ಸ್ನೇಹ ಗಟ್ಡಿಗೊಳ್ಳುತ್ತಲೇ ಹೋಗುತ್ತಿರುವುದಕ್ಕೆ ಸ್ನೇಹಿತರ ಮುಖದಲ್ಲಿ ಸಂತೋಷದ ಮಂದಹಾಸ ಎದ್ದು ಕಾಣುತ್ತಿತ್ತು.ಎಲ್ಲ ಸ್ನೇಹಿತರು ತಮ್ಮ ಕುಟುಂಬ ಹಾಗೂ ಸ್ನೇಹಿತರೊಂದಿಗೆ ಸಾಮೂಹಿಕವಾಗಿ ಊಟ ಮಾಡಿದರು ಹಾಗೂ ದೇವಸ್ಥಾನಕ್ಕೆ ಬಂದ ಭಕ್ತಾಧಿಗಳಿಗೆಲ್ಲ ಊಟದ ವ್ಯವಸ್ಥೆ ಮಾಡಿದರು. ಕಾರ್ಯಕ್ರಮ ಆಯೋಜನೆ ಮಾಡಿದ ಸಂಘಟಕರಿಗೆ ಪ್ರಶಂಸೆ ನೀಡಿ ಎಲ್ಲರೂ ಸಂಜೆವರೆಗೂ ಕಾಲಕಳೆದು ಖುಷಿಯಿಂದ ತಮ್ಮ ತಮ್ಮ ಮನೆ ಕಡೆ ಹೆಜ್ಜೆ ಹಾಕಿದರು.