ಚಿತ್ರದುರ್ಗ: ಭದ್ರಾ ಮೇಲ್ದಂಡೆಗೆ ಕೇಂದ್ರದ ಅನುದಾನಕ್ಕೆ ಸಚಿವ ಎ.ನಾರಾಯಣಸ್ವಾಮಿಗೆ ಮನವಿ

KannadaprabhaNewsNetwork |  
Published : Jan 09, 2024, 02:00 AM IST
ಭದ್ರಾ ಮೇಲ್ದಂಡೆಗೆ ಕೇಂದ್ರದ ಅನುದಾನ ಒದಗಿಸುವಂತೆ ಆಗ್ರಹಿಸಿ ನೀರಾವರಿ ಅನುಷ್ಠಾನ ಹೋರಾಟ ಸಮಿತಿಯಿಂದ ಕೇಂದ್ರ ಸಚಿವ ಎ.ನಾರಾಯಣಸ್ವಾಮಿಗೆ ಮನವಿ ಸಲ್ಲಿಸಲಾಯಿತು. | Kannada Prabha

ಸಾರಾಂಶ

ಭದ್ರಾ ಮೇಲ್ದಂಡೆ ಯೋಜನೆ ಕಾಮಗಾರಿಗೆ ಅನುದಾನ ಬಿಡುಗಡೆ ಮಾಡುವಂತೆ ಆಗ್ರಹಿಸಿ, ನೀರಾವರಿ ಅನುಷ್ಠಾನ ಹೋರಾಟ ಸಮಿತಿ, ರೈತ ಸಂಘದಿಂದ ಕೇಂದ್ರ ಸಚಿವ ಎ.ನಾರಾಯಣಸ್ವಾಮಿಗೆ ಪ್ರತ್ಯೇಕ ಮನವಿ ಸಲ್ಲಿಸಲಾಯಿತು.

ಕನ್ನಡಪ್ರಭ ವಾರ್ತೆ ಚಿತ್ರದುರ್ಗ

ಮಧ್ಯ ಕರ್ನಾಟಕದ ಬಯಲು ಸೀಮೆ ಪ್ರದೇಶಗಳಿಗೆ ನೀರುಣಿಸುವ ಮಹತ್ವದ ಭದ್ರಾ ಮೇಲ್ದಂಡೆ ಯೋಜನೆ ಕಾಮಗಾರಿಗೆ ಅನುದಾನ ಬಿಡುಗಡೆ ಮಾಡುವಂತೆ ಆಗ್ರಹಿಸಿ, ನೀರಾವರಿ ಅನುಷ್ಠಾನ ಹೋರಾಟ ಸಮಿತಿ ಹಾಗೂ ರೈತ ಸಂಘದ ಕಾರ್ಯಕರ್ತರು ಸೋಮವಾರ ಕೇಂದ್ರ ಸಚಿವ ಎ.ನಾರಾಯಣಸ್ವಾಮಿಗೆ ಪ್ರತ್ಯೇಕ ಮನವಿ ಸಲ್ಲಿಸಿದರು.

ನೀರಾವರಿ ಅನುಷ್ಠಾನ ಹೋರಾಟ ಸಮಿತಿ ಕಾರ್ಯಾಧ್ಯಕ್ಷ ಬಿ.ಎ.ಲಿಂಗಾರೆಡ್ಡಿ ಈ ಸಂಬಂಧ ಸಚಿವ ಎ.ನಾರಾಯಣಸ್ವಾಮಿಗೆ ಮನವಿ ಸಲ್ಲಿಸಿ, ಕೇಂದ್ರ ಸರ್ಕಾರ ಕೂಡಲೇ ಘೋಷಿತ ₹5300 ಕೋಟಿ ಅನುದಾನ ಬಿಡುಗಡೆ ಮಾಡಬೇಕೆಂದು ಆಗ್ರಹಿಸಿದರು.

ಯೋಜನೆ ನಿಧಾನಗತಿಯಲ್ಲಿ ಸಾಗಿರುವುದು ರೈತಾಪಿ ಸಮುದಾಯದಲ್ಲಿ ಕಳವಳ ಮೂಡಿಸಿದೆ. ರಾಜ್ಯ ಸರ್ಕಾರದ ಉದಾಸೀನ ಮನೋಭಾವ, ಕೇಂದ್ರ ಸರ್ಕಾರ ಘೋಷಿತ ವಚನ ಈಡೇರಿಸದೇ ಇರುವುದು ಪ್ರಮುಖ ಕಾರಣ. ಪ್ರಭುತ್ವದ ಇಚ್ಚಾಶಕ್ತಿ ಕೊರತೆಯಿಂದಾಗಿ ಜನತೆ ಪರಿತಪಿಸುವಂತಾಗಿದೆ ಎಂದು ದೂರಿದರು.

ಭದ್ರಾ ಮೇಲ್ದಂಡೆ ರಾಷ್ಟ್ರೀಯ ಯೋಜನೆಯಾಗಿ ಘೋಷಿಸಿ ಕೇಂದ್ರದಿಂದ ಅನುದಾನ ಪಡೆಯುವ ಪ್ರಸ್ತಾಪಗಳು ಕಳೆದ ಹತ್ತು ವರ್ಷಗಳಿಂದಲೂ ಭಾರತ ಸರ್ಕಾರದ ಮುಂದಿದೆ. ಈ ಹಿಂದೆ ಯಡಿಯೂರಪ್ಪರ ಸರ್ಕಾರ ಇದ್ದಾಗಲೇ ರಾಷ್ಟ್ರೀಯ ಯೋಜನೆ ಕಡತಗಳು ರಾಜ್ಯದಿಂದ ಕೇಂದ್ರ ಜಲಶಕ್ತಿ ಕಚೇರಿಗೆ ಮಂಡನೆಯಾಗಿದ್ದವು. ಕಳೆದ ವಿಧಾನಸಭೆ ಚುನಾವಣೆ ವೇಳೆ ಚಿತ್ರದುರ್ಗಕ್ಕೆ ಆಗಮಿಸಿದ್ದ ಪ್ರಧಾನಿ ಮೋದಿ ಅವರು ಭದ್ರಾ ಮೇಲ್ದಂಡೆ ರಾಷ್ಟ್ರೀಯ ಯೋಜನೆಯಾಗಿ ಘೋಷಿಸಿ ₹5300 ಕೋಟಿ ಅನುದಾನ ಒದಗಿಸುವುದಾಗಿ ಹೇಳಿದ್ದರು.

ಪ್ರಧಾನಿ ಮೋದಿಯವರು ಚಿತ್ರದುರ್ಗ ನೆಲದಲ್ಲಿ ನಿಂತು ಮಾಡಿದ ಘೋಷಣೆ ರೈತಾಪಿ ಸಮುದಾಯದಲ್ಲಿ ಸಂತಸದ ಹೊಳೆ ಹರಿಸಿತ್ತು. ಭದ್ರಾ ಕಾಮಗಾರಿಗೆ ಚುರುಕಿನ ವೇಗ ಸಿಕ್ಕು ಬೇಗನೆ ಪೂರ್ಣಗೊಳ್ಳುತ್ತದೆ ಎಂದು ಎಲ್ಲರೂ ನಂಬಿದ್ದರು. ಆದರೆ ದೇಶದ ಪ್ರಭುತ್ವದ ವಾರಸುದಾರಿಕೆ ಹೊತ್ತಿರುವ ಪ್ರಧಾನಿಯವರ ಅನುದಾನದ ಘೋಷಣೆ ಹುಸಿಯಾಗಿದ್ದು, ಸಾಂವಿಧಾನಿಕ ಹುದ್ದೆಗಳ ಜವಾಬ್ಧಾರಿ ನಿರ್ವಹಣೆಯಾಗುತ್ತಿರುವ ಬಗ್ಗೆ ಜನ ಅನುಮಾನ ಪಡುವಂತಾಗಿದೆ ಎಂದರು.

ಸದ್ಯದ ಪರಿಸ್ಥಿತಿಯಲ್ಲಿ ಭದ್ರಾ ಮೇಲ್ದಂಡೆ ರಾಷ್ಟ್ರೀಯ ಯೋಜನೆಯನ್ನಾಗಿ ಘೋಷಣೆ ಮಾಡಲು ಸಾಧ್ಯವಿಲ್ಲ. ಬದಲಿ ಪ್ರಸ್ತಾವನೆ ಸಲ್ಲಿಸಿದರೆ ಕೇಂದ್ರ ಸರ್ಕಾರ ಪರಿಗಣಿಸುತ್ತದೆ ಎಂಬ ಜಲಶಕ್ತಿ ಸಚಿವಾಲಯದ ನಿರ್ದೇಶನವನ್ನು ರಾಜ್ಯ ಸರ್ಕಾರ ಪಾಲಿಸಿದೆ. ಪ್ರಧಾನ ಮಂತ್ರಿ ಕೃಷಿ ಸಂಚಾಯಿನಿ ಯೋಜನೆ (PMKSY-AIBP) ಅಡಿ ಅನುದಾನ ಒದಗಿಸುವ ಪ್ರಸ್ತಾವನೆ ಕೇಂದ್ರದ ಮುಂದೆ ಮಂಡಿಸಲಾಗಿದೆ. ಈ ಸಂಬಂಧ ತಾವುಗಳೂ 3-7-3023 ರಂದು ಕೇಂದ್ರ ಜಲಶಕ್ತಿ ಸಚಿವ ಶೆಖಾವತ್ ಅವರಿಗೆ ಪತ್ರ ಬರೆದು ಪಿಎಂಕೆಎಸ್‌ವೈ-ಎಐಬಿಪಿ ಯೋಜನೆಯಡಿ ಭದ್ರಾ ಮೇಲ್ದಂಡೆಗೆ ಅನುದಾನ ಒದಗಿಸುಂತೆ ಮನವಿ ಮಾಡಿಕೊಂಡಿದ್ದು ಅದೂ ಕೂಡಾ ಈಡೇರಿಲ್ಲ ಎಂದು ದೂರಿದರು.

ಭದ್ರಾ ಮೇಲ್ದಂಡೆ ಯೋಜನೆ ವ್ಯಾಪ್ತಿಯಲ್ಲಿ ಕೇಂದ್ರ ಸರ್ಕಾರದಲ್ಲಿ ಇಬ್ಬರು ಸಚಿವರಿದ್ದಾರೆ. ಪ್ರಧಾನಿ ಅವರ ಮೇಲೆ ಒತ್ತಡ ಹಾಕಿ ಮಂದಿನ ಕೇಂದ್ರ ಸಂಪುಟದಲ್ಲಿ ಒಪ್ಪಿಗೆ ಪಡೆದು ಅನುದಾನ ಬಿಡುಗಡೆ ಮಾಡಬೇಕು. ಈ ಬಗ್ಗೆ ಮಧ್ಯ ಕರ್ನಾಟಕದ ರೈತಾಪಿ ಸಮುದಾಯದ ತಾಳ್ಮೆ ಪರೀಕ್ಷಿಸುವುದು ತರವಲ್ಲ. ಕೇಂದ್ರ ಹಾಗೂ ರಾಜ್ಯ ಸರ್ಕಾರ ಇದೇ ಉದಾಸೀನ ಮನೋಭಾವ ತಳೆದಲ್ಲಿ ಹೋರಾಟ ಉಗ್ರ ರೂಪಕ್ಕೆ ಒಯ್ಯುವುದು ಅನಿವಾರ್ಯವಾಗುತ್ತದೆ ಎಂದು ಮನವಿಯಲ್ಲಿ ನೀರಾವರಿ ಅನುಷ್ಠಾನ ಹೋರಾಟ ಸಮಿತಿ ಎಚ್ಚರಿಸಿದೆ.

ನೀರಾವರಿ ಅನುಷ್ಠಾನ ಹೋರಾಟ ಸಮಿತಿ ಪ್ರಧಾನ ಕಾರ್ಯದರ್ಶಿ ಕೆ.ಆರ್.ದಯಾನಂದ್, ರೈತ ಸಂಘದ ಜಿಲ್ಲಾ ಕಾರ್ಯಾಧ್ಯಕ್ಷ ಕೆ.ಸಿ.ಹೊರಕೇರಪ್ಪ, ಜಿಲ್ಲಾ ಉಪಾಧ್ಯಕ್ಷ ಚಿಕ್ಕಪ್ಪನಹಳ್ಳಿ ರುದ್ರಸ್ವಾಮಿ, ಮಲ್ಲಾಪುರ ತಿಪ್ಪೇಸ್ವಾಮಿ, ಮುದ್ದಾಪುರ ನಾಗರಾಜ್, ಹಿರಿಯೂರು ತಾಲೂಕು ಅಧ್ಯಕ್ಷ ಶಿವಕುಮಾರ್ ಬ್ಯಾಡರಹಳ್ಳಿ, ಚಿತ್ರದುರ್ಗ ತಾಲೂಕು ಅಧ್ಯಕ್ಷ ಹಂಪಯ್ಯನಮಾಳಿಗೆ ಧನಂಜಯ, ಸಮಿತಿ ಸಂಚಾಲಕ ಚಿಕ್ಕಪ್ಪನಹಳ್ಳಿ ಷಣ್ಮುಖ ಈ ವೇಳೆ ಉಪಸ್ಥಿತರಿದ್ದರು.

PREV
Get the latest news from across Karnataka (ಕರ್ನಾಟಕ ನ್ಯೂಸ್)— breaking headlines, politics, local developments, crime reports, district updates, civic issues and more. Stay informed with Kannada Prabha’s real‑time Karnataka news coverage.

Recommended Stories

ಪೋಲಿಯೋ ಲಸಿಕೆ ಹಾಕಿಸಿ ಅಂಗವಿಕಲತೆ ಹೋಗಲಾಡಿಸಿ: ಪೂರ್ಣಿಮಾ
ಬಡವರಿಗೆ ನಲ್ಲೂರು ಕುಟುಂಬ ಕೊಡುಗೆ ಅಪಾರ: ಓಂಕಾರ ಶ್ರೀ