ಪುತ್ತೂರು: ಇಂದಿನ ಕಾಲಘಟ್ಟದ ಅಧರ್ಮಿಗಳ ಬಗೆಗೆ ಅನೇಕರಿಗೆ ತಿಳಿದೇ ಇಲ್ಲ. ಅಂತಹವರ ಬಗೆಗೆ ನಾವು ಸರಿಯಾಗಿ ತಿಳಿದುಕೊಳ್ಳುವುದೇ ನಮ್ಮ ಧರ್ಮ, ಪರಂಪರೆ ಉಳಿಸಿಕೊಳ್ಳುವ ಮಾರ್ಗ ಎಂದು ತಿರುವನಂತಪುರಂನ ಆರ್ಷ ವಿದ್ಯಾ ಸಮಾಜದ ಸಂಸ್ಥಾಪಕ ಆಚಾರ್ಯ ಕೆ.ಆರ್.ಮನೋಜ್ ಜಿ. ಅಭಿಪ್ರಾಯಪಟ್ಟಿದ್ದಾರೆ.ನಗರದ ನಟ್ಟೋಜ ಫೌಂಡೇಶನ್ ಟ್ರಸ್ಟ್ ಮುನ್ನಡೆಸುತ್ತಿರುವ ಅಂಬಿಕಾ ಶಿಕ್ಷಣ ವ್ಯವಸ್ಥೆಗೆ 25 ವರ್ಷ ಹಾಗೂ ಬಪ್ಪಳಿಗೆಯಲ್ಲಿನ ಅಂಬಿಕಾ ವಸತಿಯುತ ವಿದ್ಯಾಲಯಕ್ಕೆ ಹತ್ತು ವರ್ಷಗಳು ತುಂಬಿದ ಹಿನ್ನೆಲೆಯಲ್ಲಿ ರೂಪಿಸಲಾಗಿರುವ ವಿದ್ಯಾಲಯದ ಕಟ್ಟಡದ ನೂತನ ಅಂತಸ್ತು, ವ್ಯಾಯಾಮಶಾಲೆ ಹಾಗೂ ‘ಸುಶೀಲಾ - ಶಿವಾನಂದ ರಾವ್’ ವೇದಿಕೆ ಸಭಾಂಗಣವನ್ನು ಶುಕ್ರವಾರ ಉದ್ಘಾಟಿಸಿ ಅಂಬಿಕಾ ಸಂಸ್ಥೆಗಳಲ್ಲಿ ಆಯೋಜಿಸಲಾದ ಪಾರಂಪರಿಕ ದಿನಾಚರಣೆ ಹಿನ್ನೆಲೆಯಲ್ಲಿ ಅವರು ಮಾತನಾಡಿದರು.ಯುವಕ ಯುವತಿಯರ ಮತಾಂತರಗೊಳಿಸುವ ಬಹುದೊಡ್ಡ ಜಾಲವೇ ಇದೆ. ಆರಂಭದಲ್ಲಿ ಗೆಳೆತನ ಬೆಳೆಸುತ್ತಾ, ಸನಾತನ ಧರ್ಮದ ಬಗೆಗೆ ಜಿಜ್ಞಾಸುಗಳಂತೆ ಪ್ರಶ್ನೆ ಮಾಡುವುದಕ್ಕೆ ಆರಂಭಿಸುತ್ತಾರೆ. ಆ ಪ್ರಶ್ನೆಗಳಿಗೆ ಸರಿಯಾದ ಉತ್ತರ ನಮ್ಮ ಬಳಿ ಇರದಿದ್ದರೆ ನಂತರ ನಮ್ಮನ್ನು ಗೊಂದಲಕ್ಕೀಡುಮಾಡತೊಡಗುತ್ತಾರೆ ಎಂದರು.
ಅಧ್ಯಕ್ಷತೆ ವಹಿಸಿದ್ದ ಅಂಬಿಕಾ ಸಮೂಹ ಶಿಕ್ಷಣ ಸಂಸ್ಥೆಗಳ ಅಧ್ಯಕ್ಷ ಸುಬ್ರಮಣ್ಯ ನಟ್ಟೋಜ ಮಾತನಾಡಿ ಭಾರತವನ್ನು ಉಳಿಸುವ ಬೆಳೆಸುವ ಕಾರ್ಯವನ್ನು ಮಾಡಬೇಕಾದದ್ದು ಪ್ರತಿಯೊಬ್ಬರ ಆದ್ಯ ಕರ್ತವ್ಯ. ಅಂತೆಯೇ ವಿದ್ಯಾರ್ಥಿಗಳಿಗೆ ನೀಡಬೇಕಾದ ನ್ಯಾಯಯುತ ವಿಚಾರಗಳನ್ನು ನೀಡುವುದು ಶಿಕ್ಷಣ ಸಂಸ್ಥೆಗಳ ಜವಾಬ್ದಾರಿ ಎಂದರು.ಆಚಾರ್ಯ ಕೆ.ಆರ್.ಮನೋಜ್ ಜಿ ಹಾಗೂ ಅಂಬಿಕಾ ಶಿಕ್ಷಣ ಸಂಸ್ಥೆಗಳಿಗೆ ನಿರಂತರವಾಗಿ ಸಹಕಾರ ಒದಗಿಸಿಕೊಡುತ್ತಿರುವ ಶರವೂರು ಸುಬ್ಬ ರಾವ್ ದಂಪತಿಯನ್ನು ಗೌರವಿಸಲಾಯಿತು. ‘ನಾನು ಆತಿರಾ’ ಕೃತಿ ಲೇಖಕಿ ಹಾಗೂ ಅನುವಾದಕರನ್ನು ಅಭಿನಂದಿಸಲಾಯಿತು. ಅಂಬಿಕಾ ಪದವಿಪೂರ್ವ ವಿದ್ಯಾಲಯಗಳಲ್ಲಿ ಆಯೋಜಿಸಲಾದ ವಾರ್ಷಿಕೋತ್ಸವ ಸಾಂಸ್ಕೃತಿಕ ಸ್ಪರ್ಧೆಗಳಲ್ಲಿ ವಿಜೇತರಾದವರಿಗೆ ಬಹುಮಾನ ವಿತರಿಸಲಾಯಿತು.
ಅಂಬಿಕಾ ಸಮೂಹ ಶಿಕ್ಷಣ ಸಂಸ್ಥೆಗಳ ಕಾರ್ಯದರ್ಶಿ ರಾಜಶ್ರೀ ಎಸ್ ನಟ್ಟೋಜ, ಆಡಳಿತ ಮಂಡಳಿ ಸದಸ್ಯರಾದ ಡಾ.ಎಚ್.ಮಾಧವ ಭಟ್, ಸತ್ಯಪ್ರಸಾದ್ ಕೋಟೆ, ಬಾಲಕೃಷ್ಣ ಬೋರ್ಕರ್, ಪ್ರಸನ್ನ ಭಟ್, ಅಂಬಿಕಾ ವಿದ್ಯಾಲಯ ಸಿಬಿಎಸ್‌ಇ ಸಂಸ್ಥೆಯ ಪ್ರಾಚಾರ್ಯೆ ಮಾಲತಿ ಡಿ ಉಪಸ್ಥಿತರಿದ್ದರು.ಬಪ್ಪಳಿಗೆ ಅಂಬಿಕಾ ಪದವಿಪೂರ್ವ ವಿದ್ಯಾಲಯದ ಪ್ರಾಚಾರ್ಯ ಗಣೇಶ್ ಪ್ರಸಾದ್ ಡಿ.ಎಸ್ ಸ್ವಾಗತಿಸಿದರು. ನೆಲ್ಲಿಕಟ್ಟೆ ಅಂಬಿಕಾ ಪದವಿಪೂರ್ವ ವಿದ್ಯಾಲಯದ ಪ್ರಾಚಾರ್ಯ ಸತ್ಯಜಿತ್ ಉಪಾಧ್ಯಾಯ ವಂದಿಸಿದರು. ನೆಲ್ಲಿಕಟ್ಟೆ ಅಂಬಿಕಾ ಪದವಿಪೂರ್ವ ವಿದ್ಯಾಲಯದ ಉಪಪ್ರಾಂಶುಪಾಲೆ ಶೈನಿ ಹಾಗೂ ಕನ್ನಡ ಉಪನ್ಯಾಸಕ ಸತೀಶ್ ಇರ್ದೆ ಸನ್ಮಾನ ಪತ್ರಗಳನ್ನು ವಾಚಿಸಿದರು. ಆರ್ಷ ವಿದ್ಯಾಸಮಾಜದ ಶೃತಿ ಭಟ್ ಅವರು ಆಚಾರ್ಯ ಮನೋಜ್ ಜಿ ಅವರ ಮಳೆಯಾಳಂ ಭಾಷಣವನ್ನು ಕನ್ನಡಕ್ಕೆ ಭಾಷಾಂತರಿಸಿದರು.
ಆರ್ಷ ವಿದ್ಯಾ ಸಮಾಜ ಸಂಸ್ಥೆಗೆ ೧೦ ಲಕ್ಷ ರು. ದೇಣಿಗೆ
ಸುದರ್ಶನ ಕೋರ್ಸ್ ಆಳವಡಿಕೆ: ಮತಾಂತರ ಅವ್ಯಾಹತವಾಗಿ ನಡೆಯುತ್ತಿರುವುದಕ್ಕೆ ಸನಾತನ ಧರ್ಮದ ಬಗೆಗೆ ಯುವಸಮುದಾಯಕ್ಕೆ ಮಾಹಿತಿ ಇಲ್ಲದಿರುವುದೇ ಕಾರಣ ಎಂಬ ನೆಲೆಯಲ್ಲಿ ಆರ್ಷ ವಿದ್ಯಾ ಸಮಾಜದ ಮೂಲಕ ಸುದರ್ಶನ ಎಂಬ ಕೋರ್ಸ್ ಒಂದನ್ನು ರೂಪಿಸಲಾಗಿದೆ. ಈ ಕೋರ್ಸ್ ಕುತಂತ್ರಿಗಳ ವಾಮಮಾರ್ಗವನ್ನು ತಡೆಯುವಲ್ಲಿ ಪರಿಣಾಮಕಾರಿ ಎನಿಸಲಿದೆ. ಈ ಹಿನ್ನೆಲೆಯಲ್ಲಿ ಅಂಬಿಕಾ ಶಿಕ್ಷಣ ಸಂಸ್ಥೆಗಳಲ್ಲಿ ಪ್ರತಿಯೊಬ್ಬರಿಗೂ ಈ ಕೋರ್ಸ್ ಅನ್ನು ಒದಗಿಸಿಕೊಡುವುದಾಗಿ ಅಂಬಿಕಾ ಸಮೂಹ ಶಿಕ್ಷಣ ಸಂಸ್ಥೆಗಳ ಕಾರ್ಯದರ್ಶಿ ರಾಜಶ್ರೀ ಎಸ್ ನಟ್ಟೋಜ ಘೋಷಿಸಿದರು.