ಕನ್ನಡಪ್ರಬ ವಾರ್ತೆ ಮಂಗಳೂುರು
ಅಂಬ್ಲಮೊಗರು ಗ್ರಾಮದ ನೂರಾರು ಎಕರೆ ಭೂ ಕಬಳಿಕೆ ಮಾಡಿ ಪಂಚಾಯ್ತಿಯಿಂದ ನಿರ್ಮಿಸಲ್ಪಟ್ಟಿದ್ದ 1.40 ಕೋಟಿ ರು. ವೆಚ್ಚದ ಪ್ರಮುಖ ರಸ್ತೆಯನ್ನು ಕಡಿತ ಮಾಡಿದ ವಿರುದ್ಧ ಹಾಗೂ ಸರ್ಕಾರಿ ಭೂಮಿ ಅತಿಕ್ರಮಿಸಿಕೊಂಡಿರುವುದನ್ನು ಖಂಡಿಸಿ ಅಂಬ್ಲಮೊಗರು ಗ್ರಾಮದ ಕ್ರಷಿಭೂಮಿ ಸಂರಕ್ಷಣಾ ಹೋರಾಟ ಸಮಿತಿ ನೇತೃತ್ವದಲ್ಲಿ ಮಂಗಳವಾರ ನಾಟೆಕಲ್‌ನಲ್ಲಿರುವ ಉಳ್ಳಾಲ ತಾಲೂಕು ಕಚೇರಿ ಎದುರು ಧರಣಿ ಸತ್ಯಾಗ್ರಹ ನಡೆಸಲಾಯಿತು.ಧರಣಿಯನ್ನು ಉದ್ಘಾಟಿಸಿ ಮಾತನಾಡಿದ ಸಿಪಿಎಂ ಜಿಲ್ಲಾ ಕಾರ್ಯದರ್ಶಿ ಮಂಡಳಿ ಸದಸ್ಯ ಸುಕುಮಾರ್ ತೊಕ್ಕೊಟ್ಟು, ಸರ್ಕಾರಿ ಭೂಮಿ, ಆಸ್ತಿಪಾಸ್ತಿಗಳನ್ನು ರಕ್ಷಣೆ ಮಾಡಬೇಕಾದ ತಾಲೂಕು ಆಡಳಿತವು ಲೂಟಿಗೈಯ್ಯಲು ಅವಕಾಶ ನೀಡಿರುವುದು ಮಾಹಾಪರಾಧ. ತಹಸೀಲ್ದಾರ್ ಪಾತ್ರವನ್ನೇ ಪ್ರಶ್ನಿಸಬೇಕಾಗಿದೆ. ಈ ಬಗ್ಗೆ ಸ್ಥಳೀಯ ಗ್ರಾಮಸ್ಥರು ಹಲವಾರು ಬಾರಿ ಮನವಿ ಸಲ್ಲಿಸಿದರೂ ಯಾವುದೇ ಕ್ರಮ ವಹಿಸದೆ ದಿವ್ಯ ಮೌನ ವಹಿಸಿರುವ ಪಂಚಾಯ್ತಿ ಆಡಳಿತ ಹಾಗೂ ತಾಲೂಕು ಆಡಳಿತ ವಿರುದ್ಧ ಕ್ರಿಮಿನಲ್ ಮೊಕದ್ದಮೆ ಹೂಡುವ ಮೂಲಕ ಕಾನೂನು ಸಮರಕ್ಕೆ ಸಜ್ಜಾಗಬೇಕಾಗಿದೆ ಎಂದು ಆಕ್ರೋಶ ವ್ಯಕ್ತಪಡಿಸಿದರು.
ಸಿಪಿಎಂ ಉಳ್ಳಾಲ ವಲಯ ಕಾರ್ಯದರ್ಶಿ ಸುನಿಲ್ ಕುಮಾರ್ ಬಜಾಲ್ ಮಾತನಾಡಿ, ಸ್ಥಳೀಯ ಗ್ರಾಮಸ್ಥರು ಭೂಮಿ ಕಳೆದುಕೊಂಡಿರುವುದು ಮಾತ್ರವಲ್ಲ, ನಡೆದಾಡಲು ರಸ್ತೆಯಿಲ್ಲದೆ, ಕುಡಿಯಲು ನೀರಿಲ್ಲದೆ, ದಾರಿದೀಪವಿಲ್ಲದೆ ಪರದಾಡುವಂತಹ ಪರಿಸ್ಥಿತಿ ನಿರ್ಮಾಣವಾಗಿದೆ. ತಮ್ಮ ಕೈವಶದಲ್ಲಿರುವ ಭೂಮಿ ಸುತ್ತ ಎತ್ತರದ ತಡೆಗೋಡೆ ನಿರ್ಮಿಸುವ ಮೂಲಕ ನವ ಭೂಮಾಲೀಕರು ಸ್ಥಳೀಯರ ಭಾವನೆಗಳಿಗೆ ಗೌರವ ನೀಡದೆ ಸರ್ವಾಧಿಕಾರಿಯಂತೆ ವರ್ತಿಸುತ್ತಿರುವುದು ಖಂಡನೀಯ ಎಂದರು.ಧರಣಿ ನಿರತ ಸ್ಥಳಕ್ಕೆ ಭೇಟಿ ನೀಡಿದ ತಾಲೂಕು ತಹಸೀಲ್ದಾರ್ ಅವರು ಕಡಿತ ಮಾಡಿದ ಪ್ರಮುಖ ರಸ್ತೆಯ ಕಾರ್ಯವನ್ನು ಕೂಡಲೆ ನಿಲ್ಲಿಸುವುದಾಗಿ ಹಾಗೂ ಮೇ 30ರಂದು ತಮ್ಮ ಸಮಕ್ಷಮದಲ್ಲಿ ಸಮಾಲೋಚನಾ ಸಭೆ ಕರೆಯುವುದಾಗಿ ಭರವಸೆ ನೀಡಿದರು.ಮುಖಂಡರಾದ ರಫೀಕ್ ಹರೇಕಳ, ಜಯಂತ ನಾಯಕ್, ಶೇಖರ್ ಕುಂದರ್, ಸುಂದರ ಕುಂಪಲ, ರಿಜ್ವಾನ್ ಹರೇಕಳ, ರಜಾಕ್ ಮೊಂಟೆಪದವು, ರಜಾಕ್ ಮುಡಿಪು, ಸಾಮಾಜಿಕ ಹೋರಾಟಗಾರ ಅಬೂಬಕ್ಕರ್ ಜೆಲ್ಲಿ, ಹೋರಾಟ ಸಮಿತಿ ಮುಖಂಡರಾದ ಇಬ್ರಾಹಿಂ ಮದಕ, ಸುಂದರ ಅಂಬ್ಲಮೊಗರು, ಶಾಲಿನಿ ಪೂಜಾರಿ, ಕಮರುನ್ನೀಸಾ, ಯಶೋಧಾ, ಭಾರತಿ, ಪುಷ್ಪಾ, ಜಮೀಲಾ, ರಫೀಕ್, ಉಮೇಶ್, ನಾಗೇಶ್ ಮುಂತಾದವರು ವಹಿಸಿದ್ದರು.