ಅಂಬು ಒಡೆದು ವಿಜಯದಶಮಿ ಆಚರಣೆ

KannadaprabhaNewsNetwork |  
Published : Oct 13, 2024, 01:07 AM IST
ಪೋಟೋ ಫೈಲ್‌ ನೇಮ್‌ 12 ಕೆಸಿಕೆಎಂ 5ಚಿಕ್ಕಮಗಳೂರು ತಾಲೂಕಿನ ಆರದವಳ್ಳಿ ಗ್ರಾಮದಲ್ಲಿ ವಿಜಯದಶಮಿ ದಿನದಂದು ಅಂಬು ಒಡೆದ ನಂತರ ಗ್ರಾಮಸ್ಥರ ಮಹಿಳೆಯರೊಂದಿಗೆ ಮೂಡಿಗೆರೆ ಶಾಸಕಿ ನಯನಾ ಮೋಟಮ್ಮ ಡ್ಯಾನ್ಸ್‌ ಮಾಡಿದರು. | Kannada Prabha

ಸಾರಾಂಶ

ಚಿಕ್ಕಮಗಳೂರು: ದಸರಾ, ನವರಾತ್ರಿಯ ನಾಡಹಬ್ಬದ ಅಂಗವಾಗಿ ತಾಲ್ಲೂಕಿನ ಆರದವಳ್ಳಿ ಗ್ರಾಮದಲ್ಲಿ ನೂರಾರು ಗ್ರಾಮಸ್ಥರು ಹಾಗೂ ಶಾಸಕರ ಸಮ್ಮುಖದಲ್ಲಿ ಗ್ರಾಮದ ಪಟೇಲ ವಂಶಸ್ಥರಾದ ಎ.ಎನ್.ಮಹೇಶ್ ಸಾರಥ್ಯದಲ್ಲಿ ಶನಿವಾರ ಸಾಂಪ್ರದಾಯಿಕ ಪೂಜಾ ವಿಧಿವಿಧಾನಗಳ ಮೂಲಕ ಅಂಬು ಒಡೆದು ಸಂಭ್ರಮದಿಂದ ವಿಜಯದಶಮಿ ಆಚರಿಸಿದರು.

ಚಿಕ್ಕಮಗಳೂರು: ದಸರಾ, ನವರಾತ್ರಿಯ ನಾಡಹಬ್ಬದ ಅಂಗವಾಗಿ ತಾಲ್ಲೂಕಿನ ಆರದವಳ್ಳಿ ಗ್ರಾಮದಲ್ಲಿ ನೂರಾರು ಗ್ರಾಮಸ್ಥರು ಹಾಗೂ ಶಾಸಕರ ಸಮ್ಮುಖದಲ್ಲಿ ಗ್ರಾಮದ ಪಟೇಲ ವಂಶಸ್ಥರಾದ ಎ.ಎನ್.ಮಹೇಶ್ ಸಾರಥ್ಯದಲ್ಲಿ ಶನಿವಾರ ಸಾಂಪ್ರದಾಯಿಕ ಪೂಜಾ ವಿಧಿವಿಧಾನಗಳ ಮೂಲಕ ಅಂಬು ಒಡೆದು ಸಂಭ್ರಮದಿಂದ ವಿಜಯದಶಮಿ ಆಚರಿಸಿದರು.

ಗ್ರಾಮಸ್ಥರು ಗ್ರಾಮ ದೇವರನ್ನು ಹೊತ್ತು ಊರಿನ ಸುತ್ತ ಮೆರವಣಿಗೆ ನಡೆಸಿ ಅಂಬು ಒಡೆಯುವ ಸ್ಥಳಕ್ಕೆ ಸಾಗಿದರು. ಸಾಂಪ್ರದಾಯಿಕ ಅಲಂಕೃತ ಉಡುಗೆಯೊಂದಿಗೆ ಸಿಂಗಾರಗೊಂಡಿದ್ದ ಪಟೇಲ ವಂಶಸ್ಥ ಎ.ಎನ್.ಮಹೇಶ್ ಹಾಗೂ ಕುಟುಂಬಸ್ಥರನ್ನು ಊರಿನ ಮುಖಂಡರು, ಗ್ರಾಮಸ್ಥರುಗಳು ವಾದ್ಯಗೋಷ್ಠಿಯೊಂದಿಗೆ ಮೆರವಣಿಗೆ ಮೂಲಕ ಗ್ರಾಮದ ಅಂಬು ಒಡೆಯುವ ದೊಡ್ಡಕೆರೆ ಬಳಿಗೆ ಕರೆ ತರಲಾಯಿತು.

ಗ್ರಾಮದೇವತೆಗಳಿಗೆ ಪೂಜೆ ಸಲ್ಲಿಸಿ ಬನ್ನಿ ಮರದ ಬಳಿ ಶಮಿ ಪೂಜೆ ನೆರವೇರಿಸಿದ ನಂತರ ಊರಿನ ದೊಡ್ಡ ಕೆರೆ ಬಳಿ ಏರ್ಪಡಿಸಿದ್ದ ಅಂಬು ಒಡೆದು ಸಾಂಪ್ರದಾಯಿಕ ಕಾರ್ಯಕ್ರಮದಲ್ಲಿ ಬಾಳೆಗೊನೆಗೆ ಬಿಲ್ಲು ಹೊಡೆದು, ಬಂದೂರಿನಿಂದ ಬಾಳೆ ದಿಂಡನ್ನು ತುಂಡರಿಸಿದ ಬಳಿಕ ಶಾಸಕಿ ನಯನಾ ಮೋಟಮ್ಮ, ಮಹಿಳೆಯರು, ಮಕ್ಕಳು ಕುಣಿದು ಸಂಭ್ರಮಾಚರಿಸಿದರು. ಶ್ರೀ ಆಂಜನೇಯಸ್ವಾಮಿ, ಮಲ್ಲೇಶ್ವರಸ್ವಾಮಿ, ಗ್ರಾಮದೇವತೆಗಳಾದ ಮಾರಮ್ಮದೇವಿ ಹಾಗೂ ಭೂತಪ್ಪ ದೇವರ ಉತ್ಸವದೊಂದಿಗೆ ಬನ್ನಿ ಮರಕ್ಕೆ ವಿಶೇಷ ಪೂಜೆ ಸಲ್ಲಿಸಿ ಸಾಂಪ್ರದಾಯಿಕವಾಗಿ ಬಾಳೆ ಗೊನೆಗೆ ಬಿಲ್ಲು ಹೊಡೆಯುವ ಮೂಲಕ ಅಂಬಿನ ಉತ್ಸವವನ್ನು ಯಶಸ್ವಿಗೊಳಿಸಿದರು.ಈ ವೇಳೆ ಮಾತನಾಡಿದ ಮೂಡಿಗೆರೆ ಶಾಸಕಿ ನಯನಾ ಮೋಟಮ್ಮ, ಆರದವಳ್ಳಿ ಗ್ರಾಮಸ್ಥರು ಮನೆ ಮಗಳಂತೆ ಕೈಗೆ ಕಂಕಣಗಟ್ಟಿ ತಮ್ಮನ್ನು ಹಬ್ಬಕ್ಕೆ ಬರ ಮಾಡಿಕೊಂಡಿರುವುದು ಸಂತಸ ಮೂಡಿಸಿದೆ. ತಮ್ಮ ವ್ಯಾಪ್ತಿಯ ಮಲೆನಾಡು ಹಾಗೂ ಬಯಲುಸೀಮೆಯಲ್ಲಿ ನವರಾತ್ರಿಯನ್ನು ವಿಭಿನ್ನವಾಗಿ ಆಚರಿಸಲಾಗುತ್ತಿದ್ದು, ಅದರಂತೆ ಆರದವಳ್ಳಿ ಗ್ರಾಮದಲ್ಲಿ ಹಳ್ಳಿ ಸೊಗಡಿನಿಂದ ಆಚರಿಸುತ್ತಿರುವುದು ಖುಷಿ ತಂದಿದೆ ಎಂದರು.ವಿಜಯದಶಮಿ ದಿನದಂದು ಶ್ರೀ ದುರ್ಗಾದೇವಿ ಅಸುರರನ್ನು ಸಂಹರಿಸಿ ಮಾನವ ಜನಾಂಗಕ್ಕೆ ಒಳಿತನ್ನು ಕರುಣಿಸಿದ ಮಹಾತಾಯಿ. ಆ ನಿಟ್ಟಿನಲ್ಲಿ ಮನುಷ್ಯ ತನ್ನಲ್ಲಿರುವ ಕೆಡುಕಗಳನ್ನು ಮನಸ್ಸಿನಿಂದ ಸಂಹರಿಸಿ, ಒಳಿತನ್ನು ಎಲ್ಲೆಡೆ ಪಸರಿಸುವ ಜೊತೆಗೆ ನವರಾತ್ರಿ ಸಂದೇಶಗಳನ್ನು ಮೈಗೂಡಿಸಿಕೊಳ್ಳಬೇಕು ಎಂದು ಹೇಳಿದರು.ಗ್ರಾಮದ ಪಟೇಲ ವಂಶಸ್ಥರಾದ ಎ.ಎನ್.ಮಹೇಶ್ ಮಾತನಾಡಿ, ವಿಜಯದಶಮಿ ಒಂದು ಐತಿಹಾಸಿಕ ಕಾರ್ಯಕ್ರಮವಾಗಿದೆ. ವಿಜಯನಗರ ಅರಸರ ಕಾಲದಿಂದಲೂ ದಸರಾ ಉತ್ಸವ ಅತ್ಯಂತ ವಿಜೃಂಭಣೆಯಿಂದ ನಡೆದುಕೊಂಡು ಬರುತ್ತಿದೆ. ಮೈಸೂರು ಅರಸರ ಕಾಲದಲ್ಲಿ ನವರಾತ್ರಿ ದಸರಾಗೆ ಮತ್ತಷ್ಟು ಮಹತ್ವ ಬಂದಿದೆ ಎಂದು ತಿಳಿಸಿದರು.

ರಾಜ ಪ್ರಜಾಪ್ರಭುತ್ವದ ಕಾಲದಲ್ಲಿ ಸ್ಥಳೀಯ ಆಡಳಿತ ನಡೆಸುವ ಪಟೇಲರನ್ನು ನೇಮಿಸಿ ಅವರಿಂದ ದಸರಾ ಆಚರಣೆಗೆ ಚಾಲನೆ ನೀಡಲಾಗುತ್ತಿತ್ತು. ಅಂದಿನಿಂದ ನಿರಂತರವಾಗಿ ನಡೆದುಕೊಂಡು ಬರುತ್ತಿದೆ. ತಮ್ಮ ಕುಟುಂಬದ ಪೂರ್ವಜರು ಪಟೇಲರಾಗಿ ಕಾರ್ಯನಿರ್ವಹಿಸುತ್ತಿದ್ದರು. ಇದೀಗ ಅದನ್ನು ಮುಂದುವರಿಸಿಕೊಂಡು ಬರಲಾಗುತ್ತಿದೆ ಎಂದರು.

ಈ ಸಂದರ್ಭದಲ್ಲಿ ಹರಿಹರದಹಳ್ಳಿ ಗ್ರಾ.ಪಂ. ಅಧ್ಯಕ್ಷೆ ಸ್ವಪ್ನ ಚಂದ್ರಶೇಖರ್, ಉಪಾಧ್ಯಕ್ಷ ಯಶ್ವಂತ್‌ರಾಜ್, ಎಪಿಎಂಸಿ ಮಾಜಿ ಅಧ್ಯಕ್ಷ ಅರೇನಳ್ಳಿ ಪ್ರಕಾಶ್, ಕಾಂಗ್ರೆಸ್ ಅಂಬಳೆ ಹೋಬಳಿ ಅಧ್ಯಕ್ಷ ವಿಜಯ್‌ಕುಮಾರ್, ಆರದವಳ್ಳಿ ಗ್ರಾಮಸ್ಥರಾದ ಪಾಪಣ್ಣ, ಎ.ಪಿ.ಜಯಣ್ಣ, ವೀರತ್ತೇಗೌಡ, ನಾಗರಾಜ್, ಕಲ್ಲೇಗೌಡ, ತಾಂಡಮೂರ್ತಿಚಾರ್, ಎ.ಎಂ.ಅಣ್ಣೇಗೌಡ, ಎ.ಎಂ.ಚಂದ್ರೇಗೌಡ, ಹಾಲೇಶ್, ಎ.ಎಂ.ಪುಟ್ಟೇಗೌಡ, ಸಣ್ಣೇಗೌಡ ಹಾಜರಿದ್ದರು.

PREV
Get the latest news from across Karnataka (ಕರ್ನಾಟಕ ನ್ಯೂಸ್)— breaking headlines, politics, local developments, crime reports, district updates, civic issues and more. Stay informed with Kannada Prabha’s real‑time Karnataka news coverage.

Recommended Stories

ರಸಗೊಬ್ಬರ ಬಳಕೆ ಕಡಿಮೆ ಮಾಡಿ : ಸಿಎಂ ಸಲಹೆ
''ತಾಕತ್ತು ಇದ್ದರೆ ನೋಟಿನಲ್ಲಿರುವ ಗಾಂಧೀಜಿಯವರ ಭಾವಚಿತ್ರವನ್ನು ತೆಗೆಯಲಿ''