ಬೂದಿಕೋಟೆ ಆರೋಗ್ಯ ಕೇಂದ್ರದ ಆ್ಯಂಬುಲೆನ್ಸ್ ಕೊರತೆ ನೀಗಿಸಿ

KannadaprabhaNewsNetwork |  
Published : Jan 03, 2026, 01:30 AM IST
2ಕೆಬಿಪಿಟಿ.3.ಬಂಗಾರಪೇಟೆ ತಾಲೂಕಿನ ಬೂದಿಕೋಟೆ ಗ್ರಾಮದ ಪ್ರಾಥಮಿಕ ಆರೋಗ್ಯ ಕೇಂದ್ರದ ಚಿತ್ರ. | Kannada Prabha

ಸಾರಾಂಶ

ಅಂಬುಲೆನ್ಸ್‌ ಚಾಲಕರ ಕೊರತೆ ಇದ್ದು ತುರ್ತು ಸಮಯದಲ್ಲಿ ಆ್ಯಂಬುಲೆನ್ಸ್ ಸೇವೆ ದೊರಕದೆ ಜನಸಾಮಾನ್ಯರು ಪರದಾಡುವ ಸ್ಥಿತಿ ನಿರ್ಮಾಣವಾಗಿದೆ.

ಕನ್ನಡಪ್ರಭ ವಾರ್ತೆ ಬಂಗಾರಪೇಟೆ

ಮೈಸೂರು ಹುಲಿ ಟಿಪ್ಪು ಸುಲ್ತಾನರ ತಂದೆ ಹೈದರಾಲಿ ಜನಿಸಿದ ಇತಿಸಾಹ ಸ್ಥಳ ತಾಲೂಕಿನ ಬೂದಿಕೋಟೆ ಪ್ರಾಥಮಿಕ ಆರೋಗ್ಯ ಕೇಂದ್ರದ ಅಂಬುಲೆನ್ಸ್‌ ಚಾಲಕರ ಕೊರತೆ ಇದ್ದು ತುರ್ತು ಸಮಯದಲ್ಲಿ ಆ್ಯಂಬುಲೆನ್ಸ್ ಸೇವೆ ದೊರಕದೆ ಜನಸಾಮಾನ್ಯರು ಪರದಾಡುವ ಸ್ಥಿತಿ ನಿರ್ಮಾಣವಾಗಿದೆ. ಇದಕ್ಕೆ ಪರಿಹಾರ ಕಲ್ಪಿಸುವುದರ ಜೊತೆಗೆ ಕೇಂದ್ರವನ್ನು ಸಿಎಚ್‌ಸಿ ಆಗಿ ಮೇಲ್ದರ್ಜೆಗೆ ಏರಿಸಬೇಕೆಂದು ಗ್ರಾಮಸ್ಥರು ಒತ್ತಾಯಿಸಿದ್ದಾರೆ.ಈ ಕೇಂದ್ರ ವ್ಯಾಪ್ತಿಗೆ 96 ಗ್ರಾಮಗಳು ಒಳಪಡಲಿದ್ದು, ಸುಮಾರು 59 ಸಾವಿರಕ್ಕೂ ಹೆಚ್ಚಿನ ಜನಸಂಖ್ಯೆ ಕೇಂದ್ರದ ವ್ಯಾಪ್ತಿಯಲ್ಲಿ ಇರುತ್ತಾರೆ. ಇಷ್ಟೂ ಜನಕ್ಕೆ ಅನಾರೋಗ್ಯ ಸಮಸ್ಯೆ ಎದುರಾದರೆ ಪ್ರಾಥಮಿಕ ಆರೋಗ್ಯ ಕೇಂದ್ರಕ್ಕೆ ಬರಲು ಸಾಧ್ಯವಿಲ್ಲ. ಬದಲಾಗಿ ಹತ್ತಿರದಲ್ಲೇ ಸಣ್ಣಪುಟ್ಟ ಅನಾರೋಗ್ಯ ಸಮಸ್ಯೆಗಳಿಗೆ ಆರೋಗ್ಯ ಸೇವೆ ನೀಡಲು ಮಾಗೊಂದಿ, ಗುಲ್ಲಹಳ್ಳಿ, ಅತ್ತಿಗಿರಿಕೊಪ್ಪ, ಹುಣಸನಹಳ್ಳಿ, ಕಾರಮಂಗಲ, ಸೂಲಿಕುಂಟೆ ಮತ್ತು ಹುಲಿಬೆಲೆ ಗ್ರಾಮಗಳಲ್ಲಿ ಉಪ ಕೇಂದ್ರಗಳನ್ನು ತೆರೆಯಲಾಗಿದೆ.

ಸರ್ಕಾರ ಚಾಲರನ್ನು ನೀಡಿದೆ, ಆದರೆ ಅವರು ಹಗಲಿನಲ್ಲಿ ಮಾತ್ರ ಕಾರ್ಯ ನಿರ್ವಹಿಸುತ್ತಾರೆ. ಜೊತೆಗೆ ಸರ್ಕಾರಿ ರಜೆಗಳು ಮತ್ತು ಭಾನುವಾರಗಳಂದು ಅವರಿಗೆ ರಜೆ ಇರುವುದರಿಂದ ಚಾಲಕ ಕೆಲಸಕ್ಕೆ ಹಾಜರಾಗುವುದಿಲ್ಲ. ಹೆಚ್ಚಾಗಿ ಪ್ರಮಾಣದಲ್ಲಿ ಅಪಘಾತ ಸೇರಿದಂತೆ ಇತರೆ ಅವಘಡಗಳು ರಾತ್ರಿಯ ವೇಳೆ ನಡೆಯುತ್ತದೆ. ಆಸ್ಪತ್ರೆಯಲ್ಲಿ 24 ಗಂಟೆಗಳ ಕಾಲ ವೈದ್ಯರ ಸೇವೆ ಇಲ್ಲದ ಕಾರಣ ಚಿಕಿತ್ಸೆಗೆ ತಾಲೂಕು ಆಸ್ಪತ್ರೆಗೆ ಕಳುಹಿಸಲು ಆಸ್ಪತ್ರೆ ಸಿಬ್ಬಂದಿ ಹಾಗೂ ಸಂಬಂಧಿಕರು ಆ್ಯಂಬುಲೆನ್ಸ್‌ಗೆ ಪರದಾಡಬೇಕಾದ ಪರಿಸ್ಥಿತಿ ಎದುರಾಗಿದೆ.

ರೋಗಿಯನ್ನು ಆಸ್ಪತ್ರೆಯಲ್ಲಿ ಕೂರಿಸಿಕೊಂಡು 108ಕ್ಕೆ ಹತ್ತಾರು ಬಾರಿ ಕರೆ ಮಾಡಿದರೂ ಆ್ಯಂಬುಲೆನ್ಸ್ ಬರದೆ ಖಾಸಗಿ ವಾಸಹನಗಳಲ್ಲಿ ಕರೆದುಕೊಂಡು ಹೋಗಿ ಆಸ್ಪತ್ರೆಯಲ್ಲಿ ದಾಖಲಿಸಿದ ಘಟನೆಗಳು ನಡೆದಿದೆ. ಇದರೊಟ್ಟಿಗೆ ಪ್ರಾಥಮಿಕ ಆರೋಗ್ಯ ಕೇಂದ್ರರಲ್ಲಿ 24 ಗಂಟೆಗಳ ಹೆರಿಗೆ ಸೌಲಭ್ಯ ಇರುವುದರಿಂದ ಸುತ್ತಮುತ್ತಲಿನ ಗ್ರಾಮದವರು ಆಸ್ಪತ್ರೆಗೆ ಹೆರಗಿಗೆಗೆ ದಾಖಲಿಸುತ್ತಾರೆ. ಸುಗಮ ಹೆರಿಗೆಗೆ ಸಮಸ್ಯೆ ಆದರೆ ಅಥವಾ ಬೇರೆ ಯಾವುದಾದರೂ ಸಮಸ್ಯೆ ಎದುರಾದರೆ ಆಗಲೂ ಸಹ ಬಡ ಜನರು ಖಾಸಗಿ ಕಾರು ಅಥವಾ ಆಟೋಗಳನ್ನು ಬಾಡಿಗೆಗೆ ಪಡೆದು ರೋಗಿಯನ್ನು ಹೆಚ್ಚಿನ ಚಿಕಿತ್ಸೆಗೆ ದಾಖಲಿಸಲಿಕ್ಕೆ ಹೋಗುವಂತಾಗಿದೆ.

ಈ ಹಿಂದೆ ಆಸ್ಪತ್ರೆಯಲ್ಲಿ ಇರುವ ಖಾಯಂ ಚಾಲಕರ ಜೊತೆಗೆ ಮತ್ತೊಬ್ಬರನ್ನು ಗುತ್ತಿಗೆ ಆಧಾರದಲ್ಲಿ ನೇಮಕ ಮಾಡಿಕೊಂಡು 24 ಗಂಟೆಗಳ ಆ್ಯಂಬುಲೆನ್ಸ್ ಸೇವೆಯನ್ನು ನೀಡಲಾಗುತ್ತಿತ್ತು. ಆದರೆ ಏಕಾ ಏಕಿ ಗುತ್ತಿಗೆ ಆಧಾರದ ಚಾಲಕರ ಸೇವೆಯನ್ನು ನಿಲ್ಲಿಸಿರುವುದರಿಂದ ಸಮಸ್ಯೆ ಬಿಗಡಾಯಿಸಿದೆ. ಆದ್ದರಿಂದ ಸರ್ಕಾರ ಕೂಡಲೇ ಮತ್ತೊಬ್ಬ ಚಾಲಕರನ್ನು ನೀಡಬೇಕು. ಜೊತೆಗೆ ಪ್ರಾಥಮಿಕ ಆರೋಗ್ಯ ಕೇಂದ್ರದ ವ್ಯಾಪ್ತಿಯಲ್ಲಿ ಗ್ರಾಮಗಳು ಮತ್ತು ಜನಸಂಖ್ಯೆ ಹೆಚ್ಚಿದ್ದು, ರಾತ್ರಿ ವೇಳೆ ವೈಧ್ಯರು ಇಲ್ಲದ ಕಾರಣ ಆರೋಗ್ಯ ಸಮಸ್ಯೆಗೆ ದೂರದ ತಾಲೂಕು ಆಸ್ಪತ್ರೆಗೆ ಹೋಗಬೇಕಿದೆ. ಆದ್ದರಿಂದ ಪ್ರಾಥಮಿಕ ಆರೋಗ್ಯ ಕೇಂದ್ರವನ್ನು ಸಮುದಾಯ ಆರೋಗ್ಯ ಕೇಂದ್ರವನ್ನಾಗಿ ಮೇಲ್ದರ್ಜೆಗೆ ಏರಿಸಿ 24 ಗಂಟೆಗಳ ಕಾಲ ಜನರಿಗೆ ವೈದ್ಯಕೀಯ ಸೇವೆ ಲಭ್ಯವಾಗುವಂತೆ ಸರ್ಕಾರ ಕ್ರಮ ಕೈಗೊಳ್ಳಬೇಕು. ಸದ್ಯ ಆಸ್ಪತ್ರೆಯಲ್ಲಿ ನರ್ಸ್ ಸೇರಿದಂತೆ ಇತರೆ ಸಿಬ್ಬಂದಿ ಕೊರತೆ ಸಹ ಇದ್ದು ತುರ್ತಾಗಿ ಸಿಬ್ಬಂದಿಯನ್ನು ನೇಮಕ ಮಾಡಬೇಕು ಎಂಬುದು ಸಾರ್ವಜನಿಕರ ಒತ್ತಾಯವಾಗಿದೆ.

ಕೋಟ್‌...

ಆ್ಯಂಬುಲೆನ್ಸ್‌ ಚಾಲಕರ ವಿಚಾರವಾಗಿ ಜಿಲ್ಲಾ ಆರೋಗ್ಯಾಧಿಕಾರಿಗಳು ಹಾಗೂ ಇತರೆ ಹಿರಿಯ ಅಧಿಕಾರಿಗಳಿಗೆ ಮನವಿಯನ್ನು ಸಲ್ಲಿಸಿ ಸೂಕ್ತ ಕ್ರಮ ಕೈಗೊಳ್ಳಲಾಗುತ್ತದೆ.

ಡಾ. ಸುನೀಲ್, ತಾಲೂಕು ಆರೋಗ್ಯಾಧಿಕಾರಿ.

PREV
Get the latest news from across Karnataka (ಕರ್ನಾಟಕ ನ್ಯೂಸ್)— breaking headlines, politics, local developments, crime reports, district updates, civic issues and more. Stay informed with Kannada Prabha’s real‑time Karnataka news coverage.

Recommended Stories

ಸಹಕಾರ ಕ್ಷೇತ್ರಕ್ಕೆ ಆರ್ಥಿಕ ಶಿಸ್ತು ಅಗತ್ಯ
ಅಧಿಕಾರಿಗಳು ಜಾತ್ಯತೀತವಾಗಿ ಕೆಲಸ ಮಾಡಿ : ಸಿಎಂ ಸಿದ್ದರಾಮಯ್ಯ