ನಿಂತಲ್ಲೇ ನಿಂತ ಆ್ಯಂಬುಲೆನ್ಸ್‌!

KannadaprabhaNewsNetwork |  
Published : Jul 23, 2024, 12:37 AM IST
೨೨ಕೆಎನ್‌ಕೆ-೧ ಜಖಂ ಗೊಂಡಿರುವ ಕನಕಗಿರಿಯ ೧೦೮ ಆ್ಯಂಬುಲೆನ್ಸ್. | Kannada Prabha

ಸಾರಾಂಶ

ಇಲ್ಲಿನ ರೋಗಿಗಳು ಉಚಿತ ಆ್ಯಂಬುಲೆನ್ಸ್ ಸೇವೆಯಿಂದ ವಂಚಿತರಾಗಿದ್ದು, ಖಾಸಗಿ ವಾಹನಗಳಲ್ಲಿ ಆಸ್ಪತ್ರೆಗೆ ಬಂದು ಚಿಕಿತ್ಸೆ ಪಡೆಯುವ ಸ್ಥಿತಿ ನಿರ್ಮಾಣವಾಗಿದೆ.

ಉಚಿತ ಆ್ಯಂಬುಲೆನ್ಸ್ ಸೇವೆಯಿಂದ ಬಡ ರೋಗಿಗಳು ವಂಚಿತ

ಸಚಿವ ತಂಗಡಗಿ ಕ್ಷೇತ್ರದಲ್ಲಿ ನೀಗದ ಆ್ಯಂಬುಲೆನ್ಸ್ ಸಮಸ್ಯೆ

ಎಂ. ಪ್ರಹ್ಲಾದ

ಕನ್ನಡಪ್ರಭ ವಾರ್ತೆ ಕನಕಗಿರಿ

ಹೆರಿಗೆ ಹಾಗೂ ಅಪಘಾತದ ತುರ್ತು ಸಂದರ್ಭಗಳಲ್ಲಿ ಸಾರ್ವಜನಿಕರ ನೆರವಿಗೆ ಧಾವಿಸಬೇಕಿದ್ದ ೧೦೮ ಆ್ಯಂಬುಲೆನ್ಸ್ ಕಳೆದ ೨೦ ದಿನಗಳಿಂದ ನಿಂತಲ್ಲೆ ನಿಂತುಕೊಂಡಿದ್ದರಿಂದ ಇಲ್ಲಿನ ರೋಗಿಗಳು ಉಚಿತ ಆ್ಯಂಬುಲೆನ್ಸ್ ಸೇವೆಯಿಂದ ವಂಚಿತರಾಗಿದ್ದು, ಖಾಸಗಿ ವಾಹನಗಳಲ್ಲಿ ಆಸ್ಪತ್ರೆಗೆ ಬಂದು ಚಿಕಿತ್ಸೆ ಪಡೆಯುವ ಸ್ಥಿತಿ ನಿರ್ಮಾಣವಾಗಿದೆ.

ಇದು ಜಿಲ್ಲಾ ಉಸ್ತುವಾರಿ ಸಚಿವ ಶಿವರಾಜ ತಂಗಡಗಿಯವರ ತವರು ಕ್ಷೇತ್ರ ಕನಕಗಿರಿಯಲ್ಲಿನ ದುಸ್ಥಿತಿ. ಏಳೆಂಟು ವರ್ಷಗಳಿಂದ ಪಟ್ಟಣಕ್ಕೆ ಬಂದಿದ್ದ ಹೊಸ ಆ್ಯಂಬುಲೆನ್ಸ್ ಈಗ ಮೇಲಿಂದ ಮೇಲೆ ದುರಸ್ತಿಯಾಗುತ್ತಿದ್ದು, ಗುಜರಿ ವಾಹನಕ್ಕಿಂತ ಕಡೆಯಾಗಿದೆ. ಹೆರಿಗೆ ಹಾಗೂ ಅಪಘಾತದ ತುರ್ತು ಸಂದರ್ಭಗಳಲ್ಲಿ ಬಡವರಿಗೆ ಸಿಗಬೇಕಾದ ಉಚಿತ ಆ್ಯಂಬುಲೆನ್ಸ್ ಸೇವೆ ಈಗ ಸಿಗದಂತಾಗಿದ್ದು, ರೋಗಿಗಳು ಪರದಾಡುತ್ತಿದ್ದಾರೆ.

ತಾಲೂಕು ವ್ಯಾಪ್ತಿಯ ಕನಕಗಿರಿ ಹಾಗೂ ನವಲಿ ಸಮುದಾಯ ಆರೋಗ್ಯ ಕೇಂದ್ರದ ೧೦೮ ಆ್ಯಂಬುಲೆನ್ಸ್‌ಗಳು ಕೆಟ್ಟು ನಿಂತಿವೆ. ಇದರಲ್ಲಿ ನವಲಿ ಆ್ಯಂಬುಲೆನ್ಸ್‌ನ್ನು ರಿಪೇರಿಗೆ ಕಳುಹಿಸಿದರೆ, ಕನಕಗಿರಿಯ ಆ್ಯಂಬುಲೆನ್ಸ್‌ ೨೦ ದಿನಗಳಿಂದ ನಿಂತಲ್ಲೆ ನಿಂತುಕೊಂಡಿದ್ದು, ಯಾರೂ ಇತ್ತ ಸುಳಿಯುತ್ತಿಲ್ಲ.

ನಿಲ್ಲದ ದುರಸ್ತಿ:

ಇಲ್ಲಿಯ ಆ್ಯಂಬುಲೆನ್ಸ್‌ಗಳು ಕೆಟ್ಟು ನಿಲ್ಲುವುದು ಮುಂದುವರೆದಿದ್ದು, ಹುಬ್ಬಳ್ಳಿ, ಸಿಂಧನೂರು, ಗಂಗಾವತಿ ಹಾಗೂ ಕೊಪ್ಪಳದಲ್ಲಿ ವಾಹನಗಳ ದುರಸ್ತಿ ಮಾಡಿಸಲಾಗುತ್ತಿದೆ. ಆದರೆ ಮತ್ತೆ ಎಂಟತ್ತು ದಿನದೊಳಗೆ ಕೆಟ್ಟು ನಿಲ್ಲುತ್ತವೆ. ಹೀಗೆ ವಾಹನದಲ್ಲಿ ಒಂದಿಲ್ಲಾ ಒಂದು ಸಮಸ್ಯೆ ಕಾಣಿಸಿಕೊಳ್ಳುವುದರಿಂದ ವಾಹನ ನಿಂತಲ್ಲೆ ನಿಂತುಕೊಳ್ಳುವುದು ಸಾಮಾನ್ಯವಾಗಿದೆ.ಬರುತ್ತಾ ಹೊಸ ಆ್ಯಂಬುಲೆನ್ಸ್?:

೧೦೮ ವಾಹನ ವಿನಾಕಾರಣ ಹಾಳಾಗುತ್ತಿರುವ ಹಿನ್ನೆಲೆಯಲ್ಲಿ ಸಾರ್ವಜನಿಕರಿಗೆ ಸರಿಯಾಗಿ ಸೇವೆ ಒದಗಿಸಲು ಸಾಧ್ಯವಾಗುತ್ತಿಲ್ಲ. ತೀರಾ ಹಿಂದುಳಿದ ಕನಕಗಿರಿ ತಾಲೂಕಿನ ಗ್ರಾಮೀಣ ಪ್ರದೇಶದಲ್ಲಿ ಬಡವರ ಸಂಖ್ಯೆ ಹೆಚ್ಚಿದ್ದು, ತುರ್ತು ಸಂದರ್ಭಗಳಲ್ಲಿ ಆ್ಯಂಬುಲೆನ್ಸ್ ಸಹಾಯವಾಗಿವೆ. ಸರ್ಕಾರದ ಸಂಪುಟ ದರ್ಜೆ ಸಚಿವರಾಗಿರುವ ಶಿವರಾಜ ತಂಗಡಗಿ ಹೊಸ ಆ್ಯಂಬುಲೆನ್ಸ್ ಮಂಜೂರು ಮಾಡಿಸಿ, ಕ್ಷೇತ್ರದ ಜನತೆಯ ಅಗತ್ಯ ಬೇಡಿಕೆ ಈಡೇರಿಸುತ್ತಾರೆಯೇ ಎಂಬುದನ್ನು ಕಾದು ನೋಡಬೇಕಿದೆ.ಆ್ಯಂಬುಲೆನ್ಸ್ ಸಮಸ್ಯೆಗೆ ಸ್ಪಂದಿಸಿದ್ದ ಡಾ. ಚಾರುಲ್:

ಕಳೆದ ವಿಧಾನಸಭೆ ಚುನಾವಣಾ ಪೂರ್ವದಲ್ಲಿ ಕೆಆರ್‌ಪಿಪಿ ಅಭ್ಯರ್ಥಿಯಾಗಿದ್ದ ಡಾ. ಚಾರುಲ್ ಆ್ಯಂಬುಲೆನ್ಸ್ ಸಮಸ್ಯೆಯನ್ನು ಮನಗಂಡು ತಮ್ಮ ಖರ್ಚಿನಲ್ಲಿಯೇ ಆ್ಯಂಬುಲೆನ್ಸ್ ಸೇವೆ ಆರಂಭಿಸಿದ್ದರು. ಚಾರುಲ್ ಚುನಾವಣೆಯಲ್ಲಿ ಸೋಲುಂಡ ಕಾರಣ ಆ್ಯಂಬುಲೆನ್ಸ್ ಸೇವೆ ಸ್ಥಗಿತಗೊಂಡಿತು. ಈ ವಿನೂತನ ಸೇವೆಗೆ ಜನರಿಂದ ಭಾರಿ ಪ್ರಶಂಸೆ ವ್ಯಕ್ತವಾಗಿತ್ತು.ಕನಕಗಿರಿ ಮತ್ತು ನವಲಿಗೆ ಹೊಸ ೧೦೮ ವಾಹನ ಮಂಜೂರು ಮಾಡುವುದು ಅವಶ್ಯವಿದೆ. ಈ ಹಿಂದೆ ಇದ್ದ ಆ್ಯಂಬುಲೆನ್ಸ್‌ಗಳು ಪದೇ ಪದೇ ರಿಪೇರಿಗೆ ಬರುತ್ತಿವೆ. ಸಚಿವರು ಹೊಸ ವಾಹನ ಮಂಜೂರು ಮಾಡಿಸಿ ಬಡವರಿಗೆ ನೆರವಾಗಬೇಕು ಎನ್ನುತ್ತಾರೆ ಪಪಂ ಸದಸ್ಯ ಅನಿಲ ಬಿಜ್ಜಳ.

ಕನಕಗಿರಿ, ನವಲಿಗೆ ಸಂಬಂಧಿಸಿದ ೧೦೮ ವಾಹನಗಳು ದುರಸ್ತಿಗೆ ಬಂದಿವೆ. ತುರ್ತು ಸಂದರ್ಭ ಕರೆಗಳಿಗೆ ಸ್ಪಂದಿಸುತ್ತೇವೆ. ಯಾವುದೇ ಕಾರಣಕ್ಕೂ ಸಾರ್ವಜನಿಕರಿಗೆ ತೊಂದರೆಯಾಗದಂತೆ ನೋಡಿಕೊಳ್ಳಲಾಗುವುದು. ಹಾಳಾದ ವಾಹನ ಸರಿಪಡಿಸಿ ಸೇವೆಗೆ ಬಿಡಲು ಕ್ರಮ ಕೈಗೊಳ್ಳಲಾಗುವುದು. ಹುಬ್ಬಳ್ಳಿಯ 108ನ ಪ್ರಾದೇಶಿಕ ವ್ಯವಸ್ಥಾಪಕ ಮಹ್ಮದ್ ಶಫಿ.

PREV
Get the latest news from across Karnataka (ಕರ್ನಾಟಕ ನ್ಯೂಸ್)— breaking headlines, politics, local developments, crime reports, district updates, civic issues and more. Stay informed with Kannada Prabha’s real‑time Karnataka news coverage.

Recommended Stories

ಲಕ್ಷ್ಮೇಶ್ವರದಲ್ಲಿ ಪ್ರಾರಂಭವಾದ ಮೆಕ್ಕೆಜೋಳ ಖರೀದಿ, ಮುಗಿಯದ ಗೊಂದಲ!
ವಿಶ್ವಕರ್ಮ ಮಹಾ ಒಕ್ಕೂಟ ಜಿಲ್ಲಾ ಘಟಕ ಉದ್ಘಾಟನೆ