- ಚನ್ನಗಿರಿ ತಾಪಂ ಕೆಡಿಪಿ ಸಭೆಯಲ್ಲಿ ಶಾಸಕ ಶಿವಗಂಗಾ ತಾಕೀತು । ತಾಲೂಕುಮಟ್ಟದ ಅಧಿಕಾರಿಗಳಿಂದ ಇಲಾಖೆ ಪ್ರಗತಿ ಮಾಹಿತಿ
- - -ಕನ್ನಡಪ್ರಭ ವಾರ್ತೆ ಚನ್ನಗಿರಿ
ಚನ್ನಗಿರಿ ದೊಡ್ಡ ತಾಲೂಕಾಗಿದೆ. ಉಬ್ರಾಣಿ ಹೋಬಳಿಯ ತಾವರೆಕೆರೆ ಮತ್ತು ಸಂತೆಬೆನ್ನೂರು ಗ್ರಾಮಗಳಲ್ಲಿರುವ ಪ್ರಾಥಮಿಕ ಆರೋಗ್ಯ ಕೇಂದ್ರಗಳ ಬಳಿ ಒಂದೊಂದು ಆಂಬ್ಯುಲೆನ್ಸ್ ಕಡ್ಡಾಯವಾಗಿ ಇರಬೇಕು. ಆ ಭಾಗದ ಜನರಿಗೆ ಆರೋಗ್ಯ ಸಮಸ್ಯೆಗಳು ಉಂಟಾದರೆ ಚನ್ನಗಿರಿ ಪಟ್ಟಣದ ಸರ್ಕಾರಿ ಆಸ್ಪತ್ರೆಗೆ ಬರಲು ಸಹಾಯಕವಾಗಲಿದೆ ಎಂದು ಶಾಸಕ ಬಸವರಾಜು ವಿ.ಶಿವಗಂಗಾ ಹೇಳಿದರು.ಸೋಮವಾರ ಸಂಜೆ ಪಟ್ಟಣದ ತಾಲೂಕು ಪಂಚಾಯಿತಿಯ ಜೆ.ಎಚ್. ಪಟೇಲ್ ಸಭಾಂಗಣದಲ್ಲಿ ನಡೆದ ತಾಲೂಕುಮಟ್ಟದ ಅಧಿಕಾರಿಗಳ 2025-26ನೇ ಸಾಲಿನ ತ್ರೈ ಮಾಸಿಕ ಪ್ರಗತಿ ಪರಿಶೀಲನಾ ಸಭೆ ಅಧ್ಯಕ್ಷತೆ ವಹಿಸಿದ್ದ ತಾಲೂಕು ವೈದ್ಯಾಧಿಕಾರಿ ಡಾ.ಶಿವಕುಮಾರ್ ಅವರಿಗೆ ಸೂಚಿಸಿದರು. ಈ ಬಗ್ಗೆ ಯಾವುದೇ ಸಮಸ್ಯೆಗಳಿದ್ದರೂ ಬಗೆಹರಿಸಿಕೊಡುವುದಾಗಿ ಶಾಸಕರು ತಿಳಿಸಿದರು. ಸಂತೆಬೆನ್ನೂರಿನ ಪ್ರಾಥಮಿಕ ಆರೋಗ್ಯ ಕೇಂದ್ರವು 24*7 ನಡೆಯಬೇಕು. ಈ ಬಗ್ಗೆ ಜಿಲ್ಲಾ ಕೆ.ಡಿ.ಪಿ. ಸಭೆಯಲ್ಲಿ ಚರ್ಚಿಸುತ್ತೇನೆ ಎಂದರು.
ಪಟ್ಟಣದಲ್ಲಿರುವ ಸರ್ಕಾರಿ ಸಾರ್ವಜನಿಕ ಆಸ್ಫತ್ರೆಯಲ್ಲಿ ಕೆಲಸ ನಿರ್ವಹಿಸುವ ವೈದ್ಯರು ಅವರ ಕರ್ತವ್ಯದ ವೇಳೆಗಳಲ್ಲಿ ಕ್ಲಿನಿಕ್‌ಗಳಲ್ಲಿ ಇರುತ್ತಾರೆ. ಆಸ್ಪತ್ರೆಯಲ್ಲಿ ಸ್ವಚ್ಚತೆ ಇಲ್ಲದಿರುವ ಬಗ್ಗೆ ಆರೋಪಗಳಿದ್ದು, ಸರಿಪಡಿಸಿಕೊಂಡು ಹೋಗಬೇಕು ಎಂದು ಆಸ್ಪತ್ರೆ ವೈದ್ಯಾಧಿಕಾರಿ ಡಾ.ಚಂದ್ರಪ್ಪ ಅವರಿಗೆ ತಿಳಿಸಿದರು.ಅಕ್ಷರ ದಾಸೋಹದ ಸಹಾಯಕ ನಿರ್ದೇಶಕ ಉಮೇಶ್ ತಾಲೂಕಿನಲ್ಲಿ ಶಾಲಾ ಮಕ್ಕಳಿಗೆ ಬಿಸಿಯೂಟ, ಕೋಳಿ ಮೊಟ್ಟೆ, ಬಾಳೆಹಣ್ಣು ವಿತರಣೆ ಮಾಡುತ್ತಿರುವ ಬಗ್ಗೆ ಮಾಹಿತಿ ಶಾಸಕರು ಪಡೆದರು. ನಾನು ತಾಲೂಕಿನ ಹಲವಾರು ಶಾಲೆಗಳಲ್ಲಿ ಮಧ್ಯಾಹ್ನದ ಬಿಸಿಊಟ ಮಾಡಿದ್ದೇನೆ. ಸಾಂಬಾರ್‌ನಲ್ಲಿ ತರಕಾರಿಗಳೇ ಇರುವುದಿಲ್ಲ. ಮಕ್ಕಳಿಗೆ ಕೊಡುವ ಆಹಾರಗಳು ಗುಣಮಟ್ಟದ್ದಾಗಿರಬೇಕು ಎಂದು ಸಲಹೆ ನೀಡಿದರು.
ಕ್ವಾಲಿಟಿ ಚಕ್ ಕಮಿಟಿ ರಚಿಸುವೆ:ಚನ್ನಗಿರಿ ತಾಲೂಕಿನಲ್ಲಿರುವ ಪರಿಶಿಷ್ಟ ಜಾತಿ- ಪಂಗಡ, ಹಿಂದುಳಿದ ವರ್ಗಗಳ ಇಲಾಖೆಗಳ ವಿದ್ಯಾರ್ಥಿ ನಿಲಯಗಳಿಗೆ ಮತ್ತು ಅಂಗನವಾಡಿ ಕೇಂದ್ರಗಳಿಗೆ ವಿತರಿಸುವ ಆಹಾರ ಪದಾರ್ಥಗಳು ಕಳಪೆ ಗುಣಮಟ್ಟದಿಂದ ಕೂಡಿರುತ್ತದೆ. ಗುಣಮಟ್ಟದ ಆಹಾರ ಪದಾರ್ಥಗಳು ವಿತರಣೆ ಆಗುತ್ತಿಲ್ಲ. ಪ್ರತಿ ತಿಂಗಳು ನಿಮಗೆ ಬೇಕಾಗುವಂತಹ ಆಹಾರ ಪದಾರ್ಥಗಳ ಬೇಡಿಕೆ ಎಷ್ಟೆಂದು ನನಗೆ ಮಾಹಿತಿ ನೀಡಬೇಕು. ಆಹಾರ ಪದಾರ್ಥಗಳ ಗುಣಮಟ್ಟ ಉತ್ತಮವಾಗಿರಬೇಕು. ಈ ಉದ್ದೇಶದಿಂದ ಕ್ವಾಲಿಟಿ ಚಕ್ ಕಮಿಟಿ ರಚನೆ ಮಾಡುತ್ತೇನೆ. ಆ ಕಮಿಟಿ ಸದಸ್ಯರ ಸಮ್ಮುಖದಲ್ಲಿ ಆಹಾರ ಪದಾರ್ಥಗಳ ವಿತರಣೆ ಆಗಬೇಕು ಎಂದು ಶಾಸಕ ಶಿವಗಂಗಾ ತಾಕೀತು ಮಾಡಿದರು.
ವಿದ್ಯಾರ್ಥಿ ನಿಲಯಗಳಿಗೆ ಆಹಾರ ಪದಾರ್ಥಗಳನ್ನು ವಿತರಣೆ ಮಾಡುವ ಗುತ್ತಿಗೆದಾರರು ಆಹಾರ ಪದಾರ್ಥಗಳನ್ನು ವಿತರಿಸದೇ ವಿದ್ಯಾರ್ಥಿ ನಿಲಯಗಳ ಮುಖ್ಯಸ್ಥರಿಗೆ ಪದಾರ್ಥಗಳ ಖರೀದಿಗೆ ಹಣ ಕೊಡುತ್ತಾರಂತೆ. ಹಾಗಾಗಬಾರದು. ಗುತ್ತಿಗೆ ಪಡೆದವರು ಆಹಾರ ಪದಾರ್ಥಗಳ ವಿತರಣೆ ಮಾಡಬೇಕು. ಇದಾಗದಿದ್ದರೆ ಸೂಕ್ತ ಕ್ರಮ ಕೈಗೊಳ್ಳುತ್ತೇನೆ ಎಂದು ಎಚ್ಚರಿಕೆ ನೀಡಿದರು.ಕೃಷಿ ಇಲಾಖೆ ಸಹಾಯಕ ನಿರ್ದೇಶಕ ಅರುಣ್ ಕುಮಾರ್ ಮಾತನಾಡಿ, ಪ್ರಸಕ್ತ ವರ್ಷದಲ್ಲಿ ವಾಡಿಕೆ ಮಳೆಗಿಂತ ಶೇ.3ರಷ್ಟು ಮಳೆ ಪ್ರಮಾಣ ಕಡಿಮೆಯಾಗಿದೆ. ಆದರೂ, ತಾಲೂಕಿನಲ್ಲಿ ಬಿತ್ತನೆಯಾಗಿರುವ ಎಲ್ಲಾ ಬೆಳೆಗಳು ಉತ್ತಮವಾಗಿವೆ. ಆರಂಭದಲ್ಲಿ ರಸಗೊಬ್ಬರದ ಸಮಸ್ಯೆಯಾಗಿತ್ತು. ಈಗ ಯಾವುದೇ ಸಮಸ್ಯೆಯಾಗಿಲ್ಲ ಎಂದು ಇಲಾಖೆ ಪ್ರಗತಿ ಬಗ್ಗೆ ಮಾಹಿತಿ ನೀಡಿದರು.
ಸಭೆಯಲ್ಲಿ ಕ್ಷೇತ್ರ ಶಿಕ್ಷಣಾಧಿಕಾರಿ ಜಯಪ್ಪ, ಪಶುಸಂಗೋಪನಾ ಇಲಾಖೆಯ ಅಶೋಕ್ ಕುಮಾರ್, ಗ್ರಾಮೀಣ ಕುಡಿಯುವ ನೀರು ಮತ್ತು ನೈರ್ಮಲ್ಯ ಇಲಾಖೆಯ ಅಭಿಯಂತರ ಲೋಹಿತ್ ಕುಮಾರ್, ಪಿಡಬ್ಲ್ಯೂಡಿ ಅಭಿಯಂತರ ರವಿಕುಮಾರ್, ತೋಟಗಾರಿಕಾ ಇಲಾಖೆಯ ಶ್ರೀಕಾಂತ್, ಅರಣ್ಯ ಸೇರಿದಂತೆ ಹಲವು ಇಲಾಖೆಗಳ ಅಧಿಕಾರಿಗಳು ಪ್ರಗತಿ ವಿವರಗಳನ್ನು ಮಂಡಿಸಿದರು.ಜಿ.ಪಂ.ನ ಯೋಜನಾ ನಿರ್ದೇಶಕರಾದ ರೇಷ್ಮಾ ಕೌಸರ್, ತಹಸೀಲ್ದಾರ್ ಎನ್.ಜೆ. ನಾಗರಾಜ್, ತಾ.ಪಂ. ಇಒ ಪ್ರಕಾಶ್ ಸಭೆಯಲ್ಲಿ ಹಾಜರಿದ್ದರು.
- - -(ಬಾಕ್ಸ್) * ವಲಯ ಅರಣ್ಯಾಧಿಕಾರಿ ಪ್ರೆಗ್ನೆಂಟ್ ಇದ್ದರೆ ರಜೆಯಲ್ಲಿರಲಿ: ಶಾಸಕ ಕಿಡಿ ಕೆಡಿಪಿ ಸಭೆಗೆ ಚನ್ನಗಿರಿ ವಲಯ ಅರಣ್ಯಾಧಿಕಾರಿ ಎಸ್.ಶ್ವೇತಾ ಬರಬೇಕಾಗಿತ್ತು. ವೈಯಕ್ತಿಕ ಸಮಸ್ಯೆಯಿಂದಾಗಿ ಅವರು ಸಭೆಗೆ ಬಾರದೇ ಸಹಾಯಕ ವಲಯ ಅರಣ್ಯಾಧಿಕಾರಿಯನ್ನು ಸಭೆಗೆ ಕಳಿಸಿದ್ದರು. ಈ ಬಗ್ಗೆ ಶಾಸಕ ಬಸವರಾಜ ಶಿವಂಗಾ ಸಭೆಯಲ್ಲಿ ಕೋಪಗೊಂಡರು.
ಅರಣ್ಯ ಇಲಾಖೆಗೆ ಸಂಬಂಧಪಟ್ಟ ಮಾಹಿತಿ ಸಹಾಯಕ ಅಧಿಕಾರಿಯಾದ ನೀವು ಹೇಳಲು ಸಾಧ್ಯವಿಲ್ಲ. ವಲಯ ಅರಣ್ಯಾಧಿಕಾರಿಯೇ ಸಭೆಗೆ ಬರಬೇಕಾಗಿತ್ತು. ಅವರು ಪ್ರಗ್ನೆಂಟ್ ಇದ್ದರೆ ರಜೆ ತೆಗೆದುಕೊಳ್ಳಲು ಹೇಳಿ. ಮೀಟಿಂಗ್‌ಗೆ ಕರೆದರೆ ಪ್ರಗ್ನೆಂಟ್ ಅಂತಾರೆ ಎಂದು ಕುಪಿತಗೊಂಡರು.ಸರ್ಕಾರ ನೀಡುವ ಸಂಬಳವೂ ಬೇಕು, ಇನ್ನಿತರೆ ಗಿಂಬಳವೂ ಬೇಕು. ಡ್ಯೂಟಿ ಮಾಡಲು ಆಗೋದಿಲ್ಲವಾ? ಪ್ರತಿ ಬಾರಿ ಮೀಟಿಂಗ್‌ಗೆ ಕರೆದರೂ ಬಾರದೇ ಸಬೂಬು ಉತ್ತರ ನೀಡುತ್ತಾರೆ. ಈ ಬಗ್ಗೆ ಅರಣ್ಯ ಇಲಾಖೆ ಮೇಲಾಧಿಕಾರಿಗಳಿಗೆ, ಜಿಲ್ಲಾಧಿಕಾರಿ ಮತ್ತು ಸರ್ಕಾರಕ್ಕೆ ಪತ್ರ ಬರೆಯುವಂತೆ ಸಭೆಯಲ್ಲಿದ್ದ ಅಧಿಕಾರಿಗಳಿಗೆ ಶಾಸಕ ಬಸವರಾಜ ಶಿವಗಂಗಾ ತಿಳಿಸಿದರು.
- - --14ಕೆಸಿಎನ್‌ಜಿ2:
ಚನ್ನಗಿರಿ ತಾ.ಪಂ. ಸಭಾಂಗಣದಲ್ಲಿ ನಡೆದ ತ್ರೈಮಾಸಿಕ ಕೆಡಿಪಿ ಸಭೆಯಲ್ಲಿ ಶಾಸಕ ಬಸವರಾಜು ವಿ. ಶಿವಗಂಗಾ ಮಾತನಾಡಿದರು. ಜಿ.ಪಂ.ನ ಯೋಜನಾ ನಿರ್ದೇಶಕರಾದ ರೇಷ್ಮಾ ಕೌಸರ್, ತಹಸೀಲ್ದಾರ್ ನಾಗರಾಜ್, ತಾಪಂ ಇಒ ಪ್ರಕಾಶ್, ಮತ್ತಿತರ ಅಧಿಕಾರಿಗಳು ಪಾಲ್ಗೊಂಡಿದ್ದರು.