ಬಳ್ಳಾರಿ: ಕೇಂದ್ರದ ಬಿಜೆಪಿ ಸರ್ಕಾರ ನರೇಗಾ ಯೋಜನೆಯನ್ನು ಜಿ ರಾಮ್ ಜಿ ಹೆಸರಿನ ಕಾಯ್ದೆ ಮೂಲಕ ಜಾರಿಗೊಳಿಸಲು ಮುಂದಾಗಿರುವುದನ್ನು ಖಂಡಿಸಿ ಇಲ್ಲಿನ ಜಿಲ್ಲಾಧಿಕಾರಿ ಕಚೇರಿ ಎದುರಿನ ಗಾಂಧಿಪ್ರತಿಮೆ ಎದುರು ಕಾಂಗ್ರೆಸ್ ಮುಖಂಡರು ಹಾಗೂ ಪಕ್ಷದ ಕಾರ್ಯಕರ್ತರು ಪ್ರತಿಭಟನಾ ಧರಣಿ ನಡೆಸಿದರು.ನಿಧಾನವಾಗಿ ಉದ್ಯೋಗ ಖಾತ್ರಿ ಯೋಜನೆ ರದ್ದು ಪಡಿಸುವ ಹುನ್ನಾರ ನಡೆಸಿರುವ ಕೇಂದ್ರದ ಬಿಜೆಪಿ ಸರ್ಕಾರ ಗಾಂಧೀಜಿಯವರ ಹೆಸರನ್ನು ತೆಗೆದು ಹಾಕುವ ಮೂಲಕ ತನ್ನ ಹುನ್ನಾರದ ಮೊದಲ ಹಂತದ ಪ್ರಕ್ರಿಯೆ ಪೂರ್ಣಗೊಳಿಸಿದೆ. ಆರ್‌ಎಸ್‌ಎಸ್‌ನ ಸೂಚನೆಯಂತೆಯೇ ಬಿಜೆಪಿ ಸರ್ಕಾರ ಯೋಜನೆಯ ಸ್ವರೂಪವನ್ನೇ ಬದಲಾಯಿಸಿ, ಗ್ರಾಮ ಪಂಚಾಯಿತಿಗಳ ಅಧಿಕಾರವನ್ನೇ ಕಿತ್ತುಕೊಳ್ಳಲು ಮುಂದಾಗಿದೆ. ಇನ್ನು ಮುಂದೆ ಉದ್ಯೋಗ ಖಾತ್ರಿ ಯೋಜನೆಯನ್ನು ಕೇಂದ್ರ ಸರ್ಕಾರವೇ ರೂಪಿಸಲಿದ್ದು, ಇದರಿಂದ ಉದ್ಯೋಗ ಖಾತ್ರಿಯ ಆಶಯವೇ ಹಾಳಾದಂತಾಗಿದೆ ಎಂದು ಪ್ರತಿಭಟನಾಕಾರರು ದೂರಿದರು.
ನರೇಗಾ ಯೋಜನೆಯಿಂದ ಶೇ.53ರಷ್ಟು ಮಹಿಳೆಯರು, ಶೇ.28ರಷ್ಟು ಪರಿಶಿಷ್ಟ ಜಾತಿ, ಪರಿಶಿಷ್ಟ ಪಂಗಡದವರು, 5 ಲಕ್ಷ ಅಂಗವಿಕಲರಿಗೆ ಉದ್ಯೋಗ ಸಿಗುವಂತಾಗಿತ್ತು. ಬಡವರು ಮುಖ್ಯವಾಹಿನಿಗೆ ಬರುವುದು ಆರ್‌ಎಸ್ಎಸ್‌ನವರಿಗೆ ಬೇಕಾಗಿಲ್ಲ. ಬಡವರ ಪರವಾದ ಎಲ್ಲ ಕಾರ್ಯಕ್ರಮ ಬಿಜೆಪಿ ರದ್ದುಗೊಳಿಸುತ್ತಿದ್ದು, ಇದರ ಭಾಗವಾಗಿಯೇ ನರೇಗಾ ಯೋಜನೆ ಬದಲಾಯಿಸಲಾಗುತ್ತಿದೆ. ಕೇಂದ್ರ ಸರ್ಕಾರ ಜನವಿರೋಧಿಯಾಗಿ ಕಾರ್ಯನಿರ್ವಹಿಸುತ್ತಿದೆ ಎಂಬುದಕ್ಕೆ ಕೇಂದ್ರದ ನಡೆಯೇ ಸಾಕ್ಷಿಯಾಗಿದೆ ಎಂದು ದೂರಿದರು.
ಪ್ರತಿಭಟನೆ ಹಿನ್ನೆಲೆಯಲ್ಲಿ ಪಕ್ಷದ ಜಿಲ್ಲಾಧ್ಯಕ್ಷ ಅಲ್ಲಂ ಪ್ರಶಾಂತ್ ಸೇರಿದಂತೆ 11 ಮುಖಂಡರು ಉಪವಾಸ ಸತ್ಯಾಗ್ರಹ ಮಾಡಿದರು. ಕೇಂದ್ರದ ಬಿಜೆಪಿ ಸರ್ಕಾರ ಪ್ರಧಾನಿ ನರೇಂದ್ರ ಮೋದಿ ವಿರುದ್ಧ ಘೋಷಣೆಗಳನ್ನು ಕೂಗಿದ ಪ್ರತಿಭಟನಾಕಾರರು ಮಹಾತ್ಮಗಾಂಧೀಜಿಯವರ ಹೆಸರು ಕೈ ಬಿಟ್ಟಿರುವ ಕೇಂದ್ರದ ನಡೆಯನ್ನು ಖಂಡಿಸಿದರು.ಪಕ್ಷದ ಜಿಲ್ಲಾಧ್ಯಕ್ಷ ಅಲ್ಲಂ ಪ್ರಶಾಂತ್ ಪ್ರತಿಭಟನೆಯ ನೇತೃತ್ವ ವಹಿಸಿದ್ದರು. ಲಿಡ್ಕರ್ ನಿಗಮದ ಅಧ್ಯಕ್ಷ ಮುಂಡರಗಿ ನಾಗರಾಜ್, ಪಕ್ಷದ ಹಿರಿಯ ಮುಖಂಡರಾದ ಕಲ್ಲುಕಂಬ ಪಂಪಾಪತಿ, ಎಲ್.ಮಾರೆಣ್ಣ, ಕಮಲಾ ಮರಿಸ್ವಾಮಿ, ಎ.ಮಾನಯ್ಯ, ವೆಂಕಟೇಶ್ ಹೆಗಡೆ, ಮೇಯರ್ ಪಿ.ಗಾದೆಪ್ಪ, ಜಿಲ್ಲಾ ಗ್ಯಾರಂಟಿ ಪ್ರಾಧಿಕಾರದ ಅಧ್ಯಕ್ಷ ಕೆ.ಇ. ಚಿದಾನಂದಪ್ಪ, ವಿಷ್ಣು ಬೋಯಪಾಟಿ, ವಿವೇಕ್, ಕುಬೇರ, ನೂರ್ ಅಹ್ಮದ್, ವೀರಸೇನಾ ರೆಡ್ಡಿ, ನಾಗಭೂಷಣ ಗೌಡ, ಸಂಗನಕಲ್ಲು ವಿಜಯಕುಮಾರ್, ಯತೀಂದ್ರ ಗೌಡ, ಬೆಣಕಲ್ ಬಸವರಾಜ್, ಬಿ.ಎಂ.ಪಾಟೀಲ್, ಸರಗು ನಾಗರಾಜ್, ಎಚ್.ಸಿದ್ದೇಶ್, ಮಹಿಳಾ ಘಟಕದ ಅಧ್ಯಕ್ಷೆ ಎಂ.ಎಸ್. ಮಂಜುಳಾ, ಶಮೀಮ್ ಜಕ್ಲಿ ಸೇರಿದಂತೆ ಪಕ್ಷದ ಜಿಲ್ಲಾ ಹಾಗೂ ತಾಲೂಕು ಸಮಿತಿ ಸದಸ್ಯರು ಪ್ರತಿಭಟನೆಯಲ್ಲಿ ಭಾಗವಹಿಸಿದ್ದರು.