ಮಂಗಳೂರು: ಕರ್ನಾಟಕದ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಸಚಿವ ಯು.ಟಿ. ಖಾದರ್ ಫರೀದ್ ಅವರಿಗೆ ಅಮೆರಿಕದ ಚಿಕಾಗೋ ಮೂಲದ ಅಮೆರಿಕನ್ ಮಲ್ಟಿ ಎಥ್ನಿಕ್ ಕಮಿಷನ್ (ಎಎಂಇಸಿ) ವತಿಯಿಂದ ನೀಡಲಾಗುವ ಪ್ರತಿಷ್ಠಿತ ‘ಗ್ಲೋಬಲ್ ಸಿವಿಕ್ ಲೀಡರ್‌ಶಿಪ್’ ಪ್ರಶಸ್ತಿ ಪ್ರದಾನವಾಗಲಿದೆ. ಈ ಹಿನ್ನೆಲೆಯಲ್ಲಿ ಸಚಿವ ಖಾದರ್ ಅವರು ಜು. 23ರಿಂದ 29ರ ವರೆಗೆ ಅಮೆರಿಕ ಪ್ರವಾಸ ಕೈಗೊಳ್ಳಲಿದ್ದಾರೆ.
ಸಾರ್ವಜನಿಕ ಆರೋಗ್ಯ ಕ್ಷೇತ್ರದ ಸುಧಾರಣೆ, ಜನಪರ ಆಡಳಿತ, ಸಮುದಾಯ ಕೇಂದ್ರಿತ ಅಭಿವೃದ್ಧಿ ಹಾಗೂ ಹಲವು ದಶಕಗಳ ಸಾರ್ವಜನಿಕ ಸೇವೆಯನ್ನು ಪರಿಗಣಿಸಿ ಈ ಗೌರವ ನೀಡಲಾಗುತ್ತಿದೆ ಎಂದು ಎಎಂಇಸಿ ಪ್ರಕಟಣೆಯಲ್ಲಿ ತಿಳಿಸಿದೆ.
ಪ್ರಶಸ್ತಿ ಸ್ವೀಕಾರದ ಜೊತೆಗೆ ಸಚಿವ ಖಾದರ್ ಅಮೆರಿಕದಲ್ಲಿ ಹಲವು ಪ್ರಮುಖ ಕಾರ್ಯಕ್ರಮಗಳಲ್ಲಿ ಭಾಗವಹಿಸಲಿದ್ದಾರೆ.ಜು.24 ರಂದು ಚಿಕಾಗೋದಲ್ಲಿರುವ ಭಾರತದ ಕಾನ್ಸುಲೇಟ್ ಜನರಲ್ ಕಚೇರಿಯಲ್ಲಿ ನಡೆಯುವ ‘Building the India-America Millet Partnership for a Healthier, Sustainable and Food Secure Future’ ವಿಷಯದ ದುಂಡುಮೇಜು ಸಭೆಯಲ್ಲಿ ಮುಖ್ಯ ಭಾಷಣ ಮಾಡಲಿದ್ದಾರೆ.
ಜು.27 ರಂದು ಇಂಡಿಯಾನಾದ Purdue Universityಯಲ್ಲಿ ನಡೆಯುವ Global Strategic Alliance Dialogue on Food Science ಕಾರ್ಯಕ್ರಮದಲ್ಲಿ ಭಾಗವಹಿಸಿ, ಮಕ್ಕಳ ಆರೋಗ್ಯ, ಪೌಷ್ಟಿಕ ಆಹಾರ ಹಾಗೂ ಜೀವನಶೈಲಿ ಕಾಯಿಲೆಗಳ ತಡೆ ಕುರಿತು ವಿಚಾರ ವಿನಿಮಯ ನಡೆಸಲಿದ್ದಾರೆ.
ಜಾಗತಿಕ ನಾಯಕರಿಗೂ ಗೌರವ
ಎಎಂಇಸಿ 2009ರಲ್ಲಿ ಸ್ಥಾಪನೆಯಾದ ಅಮೆರಿಕದ ಲಾಭರಹಿತ ಸಂಸ್ಥೆಯಾಗಿದ್ದು, ಬಹುಸಾಂಸ್ಕೃತಿಕ ನಾಯಕತ್ವ, ನಾಗರಿಕ ಪಾಲ್ಗೊಳ್ಳುವಿಕೆ ಮತ್ತು ಅಂತಾರಾಷ್ಟ್ರೀಯ ಸಹಕಾರವನ್ನು ಉತ್ತೇಜಿಸುವ ಉದ್ದೇಶದಿಂದ ಕಾರ್ಯನಿರ್ವಹಿಸುತ್ತಿದೆ. ವಾರ್ಷಿಕ ಕಾರ್ಯಕ್ರಮದ ಮೂಲಕ ವಿಶ್ವದ ವಿವಿಧ ಕ್ಷೇತ್ರಗಳಲ್ಲಿ ವಿಶಿಷ್ಟ ಸಾಧನೆ ಮಾಡಿದ ನಾಯಕರನ್ನು ಗೌರವಿಸುವ ಪರಂಪರೆಯನ್ನು ಮುಂದುವರಿಸಿಕೊಂಡು ಬಂದಿದೆ.