ದುರ್ಗಾಕುಮಾರ್ ನಾಯರ್ ಕೆರೆ
ಚುನಾವಣೆ ಮೂಲಕ ನ್ಯಾಯಾಧೀಶರ ಆಯ್ಕೆ ನಡೆಯುವ ಅಮೇರಿಕಾದಲ್ಲಿ ಜಡ್ಜ್ ಚುನಾವಣೆಯಲ್ಲಿ ವಿಜಯಿಯಾದ ಮೊದಲ ಭಾರತೀಯ ಎಂಬ ಕೀರ್ತಿಗೂ ಇವರು ಭಾಜನರಾಗಿದ್ದಾರೆ.ಕೇರಳ ರಾಜ್ಯದ ಕಾಸರಗೋಡು ಜಿಲ್ಲೆಯ ಹೊಸದುರ್ಗ ತಾಲೂಕಿನ ಬಳಾಲ್ ಗ್ರಾಮದ ಸುರೇಂದ್ರನ್ ಕೆ. ಪಟೇಲ್ ಈ ಸಾಧನೆ ಮಾಡಿದ ವ್ಯಕ್ತಿ. ಹೊಸದುರ್ಗ ತಾಲೂಕು ದಕ್ಷಿಣ ಕನ್ನಡ ಜಿಲ್ಲೆಯ ಸುಳ್ಯ ತಾಲೂಕಿನ ಗಡಿ ತಾಲೂಕಾಗಿದೆ.
ಬಡತನದ ಬಾಲ್ಯ : ಅತ್ಯಂತ ಬಡ ಕುಟುಂಬದಲ್ಲಿ ಸುರೇಂದ್ರನ್ ಅವರ ಜನನವಾಯಿತು. ಇವರ ಕುಟುಂಬದಲ್ಲಿ ಹೈಸ್ಕೂಲ್ ಪಾಸಾದ ಮೊದಲ ಹುಡುಗ ಇವರಾಗಿದ್ದರು. ತೀವ್ರ ಬಡತನದ ಕಾರಣ ಅಕ್ಕನವರೊಂದಿಗೆ ಬೀಡಿ ಕಟ್ಟಿ ಸಂಪಾದನೆ ಮಾಡಿ ಹತ್ತನೇ ತರಗತಿ ಮುಗಿಸಿದರು. ಒಂದು ವರ್ಷ ಶಿಕ್ಷಣಕ್ಕೆ ವಿರಾಮ ನೀಡಿ ಸಂಪಾದನೆಯ ದಾರಿ ಹಿಡಿದರು. ಆದರೆ ಆ ಒಂದು ವರ್ಷ ಶಿಕ್ಷಣದ ಅನಿವಾರ್ಯತೆಯ ಬಗ್ಗೆ ಅವರು ಚಿಂತಿಸುವಂತೆ ಮಾಡಿತು. ಅಂಗಡಿಗಳಲ್ಲಿ ಸೇಲ್ಸ್ ಮ್ಯಾನ್ ಆಗಿ ಕೆಲಸ ಮಾಡುತ್ತಾ ಪದವಿಪೂರ್ವ ಶಿಕ್ಷಣವನ್ನು ರ್ಯಾಂಕ್ ನೊಂದಿಗೆ ಮುಗಿಸಿದರು. ಪದವಿ ಕಾಲೇಜಿಗೆ ಹೋಗಬೇಕಿದ್ದರೆ ಎರಡು ಬಸ್ ಹಿಡಿಯಬೇಕಿತ್ತು. ರಾಜಕೀಯ ಶಾಸ್ತ್ರದಲ್ಲಿ ಉನ್ನತ ವಿದ್ಯಾಭ್ಯಾಸ ಮಾಡಬೇಕೆಂಬ ಕನಸಿತ್ತು. ಆದರೆ ಬೇರೆ ಕಡೆ ಕೆಲಸ ನಿರ್ವಹಿಸಿ ಕಾಲೇಜಿಗೆ ಹೋಗುವ ಸಂದರ್ಭವಿದ್ದುದರಿಂದ ಹಾಜರಾತಿ ಸಿಗುತ್ತಿರಲಿಲ್ಲ. ಆದರೂ ಮನವಿ ಮಾಡಿ ಪರೀಕ್ಷೆ ಬರೆದಾಗ ವಿಶ್ವವಿದ್ಯಾಲಯದಲ್ಲಿ ರ್‍ಯಾಂಕ್ ಲಭಿಸಿತು. ಕಾನೂನು ಶಿಕ್ಷಣ : ಮುಂದೆ ಹೌಸ್ ಕೀಪರ್ ಕೆಲಸ ನಿರ್ವಹಿಸುತ್ತಾ ಕಾನೂನು ಶಿಕ್ಷಣ ಪೂರೈಸಿದರು. ಬಳಿಕ ಕಾಞಂಗಾಡ್‌ನಲ್ಲಿ ಪ್ರಸಿದ್ಧ ನ್ಯಾಯವಾದಿಯೊಂದಿಗೆ ಹತ್ತು ವರ್ಷ ನ್ಯಾಯವಾದಿಯಾಗಿ ವೃತ್ತಿ ನಡೆಸಿದರು. ಈ ಸಂದರ್ಭದಲ್ಲಿ ಮದುವೆಯಾಯಿತು.ನರ್ಸ್ ಆಗಿದ್ದ ಪತ್ನಿಗೆ ದೆಹಲಿಯ ಆಸ್ಪತ್ರೆಯೊಂದರಲ್ಲಿ ಕೆಲಸ ದೊರೆತಾಗ ಪತ್ನಿ ಅಲ್ಲಿಗೆ ತೆರಳಿದರು. ಅವರಿಗೆ ಮಗು ವಾದಾಗ ಅನಿವಾರ್ಯವಾದಾಗ ಸುರೇಂದ್ರನ್ ಕೂಡಾ ದಿಲ್ಲಿಗೆ ತೆರಳುವ ಅನಿವಾರ್ಯತೆ ಉಂಟಾಯಿತು. ಅಲ್ಲಿ ಸುಪ್ರೀಂ ಕೋರ್ಟ್‌ನಲ್ಲಿ ಮೂರು ವರ್ಷ ಪ್ರಾಕ್ಟೀಸ್ ಮಾಡಿದರು.
ಇದೇ ಸಂದರ್ಭದಲ್ಲಿ ಪತ್ನಿಗೆ ಅಮೇರಿಕಾದಲ್ಲಿ ಒಳ್ಳೆಯ ಉದ್ಯೋಗಾವಕಾಶ ದೊರೆಯಿತು. ಅಮೇರಿಕಾದಲ್ಲಿ ಕೆಲಸ ನಿರ್ವಹಿಸುವುದು ಅವರ ಕನಸಾಗಿತ್ತು. ಆ ಕನಸಿಗೆ ಭಂಗ ತರಬಾರದೆಂದು ಹೈಕೋರ್ಟ್ ನ್ಯಾಯವಾದಿ ಅವಕಾಶ ಬಿಟ್ಟ ಸುರೇಂದ್ರನ್ ಪತ್ನಿಯೊಂದಿಗೆ ತಾನೂ ಅಮೆರಿಕಾ ಹಾದಿ ಹಿಡಿದರು.ಸುಪ್ರೀಂಕೋರ್ಟ್‌ನಲ್ಲಿ ನ್ಯಾಯವಾದಿಯಾಗಿ ಬ್ಯುಸಿಯಾಗಿದ್ದ ಅವರು ಅಮೆರಿಕಾದಲ್ಲಿ ಸ್ವಲ್ಪಕಾಲ ಏನೂ ಕೆಲಸವಿಲ್ಲದೆ ಇರುವಂತಾಯಿತು. ಆದರೆ ಇಬ್ಬರು ಮಕ್ಕಳ ಕೇರ್ ಟೇಕರ್ ಜವಾಬ್ದಾರಿಯಿತ್ತು. ಒಬ್ಬನ ದುಡಿಮೆ ಜೀವನಕ್ಕೆ ಸಾಕಾಗಲಿಲ್ಲ. ಆದರೆ ಇಲ್ಲಿಯ ಲೈಸೆನ್ಸ್ ನಲ್ಲಿ ಅಲ್ಲಿ ಲಾ ಪ್ರಾಕ್ಟೀಸ್ ಮಾಡುವಂತಿರಲಿಲ್ಲ. ಹಾಗಾಗಿ ಅಲ್ಲಿಯ ಅಂಗಡಿಯೊಂದರಲ್ಲಿ ಕೆಲಸ ನಿರ್ವಹಿಸತೊಡಗಿದರು.ಆದರೆ ಅಲ್ಲಿ ಪ್ರಾಕ್ಟೀಸ್ ಮಾಡಬೇಕೆಂಬುದು ಸುರೇಂದ್ರನ್ ಹಂಬಲವಾಗಿತ್ತು. ಬಳಿಕ ಅಲ್ಲಿಯ ಅವಕಾಶದಂತೆ ಮಾಹಿತಿ ಪಡೆದು ಕಾನೂನು ಪರೀಕ್ಷೆ ಬರೆದು ಪಾಸಾದರು. ಅಲ್ಲಿಯೂ ಪ್ರಾಕ್ಟೀಸ್ ಮುಂದುವರಿಸಿದರು. ಬಳಿಕ ಕಾನೂನಿನಲ್ಲಿ ಮಾಸ್ಟರ್ ಡಿಗ್ರಿಯನ್ನೂ ಪಡೆದರು. ಅಲ್ಲಿನ ನ್ಯಾಯಾಲಯದಲ್ಲಿನ ಹಲವು ತೀರ್ಪುಗಳನ್ನು ವಿವೇಚಿಸಿದಾಗ "ನಾನೇ ಯಾಕೆ ಅದರ ಭಾಗವಾಗಬಾರದು " ಎಂದುಕೊಂಡ ಸುರೇಂದ್ರನ್ ಅಲ್ಲಿನ ಪದ್ಧತಿಯಂತೆ 2022 ರಲ್ಲಿ ನ್ಯಾಯಾಧೀಶರ ಚುನಾವಣೆಗೆ ನಿಂತರು.ಗೆಲುವು ಸಾಧಿಸಿ ನ್ಯಾಯಾಧೀಶರಾದರು. ಚುನಾವಣೆಯ ಸಂದರ್ಭದಲ್ಲಿ ಕೊಟ್ಟ ಆಶ್ವಾಸನೆಗಳನ್ನು ಈಡೇರಿಸಿದರು. ಮಾತ್ರವಲ್ಲ ಅಮೇರಿಕಾದ ಕೌಂಟಿ ನ್ಯಾಯಾಲಯಗಳ ಪೈಕಿ ಅತಿ ಹೆಚ್ಚು ಟ್ರಯಲ್ ಮತ್ತು ಅತಿ ಹೆಚ್ಚು ತೀರ್ಪು ನೀಡಿದ ನ್ಯಾಯಾಧೀಶರೆಂಬ ದಾಖಲೆಗೆ ಪಾತ್ರರಾಗಿ ಬಾರ್ ಕೌನ್ಸಿಲ್ ನಿಂದ ಗೌರವಕ್ಕೂ ಪಾತ್ರರಾಗಿದ್ದಾರೆ. ಅವರ ನ್ಯಾಯಾಧೀಶ ಟರ್ಮಿನ ಅವಧಿ ನಾಲ್ಕು ವರ್ಷದ್ದಾಗಿದ್ದು, ಈ ವರ್ಷ ನಡೆಯುವ ಚುನಾವಣೆಯಲ್ಲಿ ಮತ್ತೆ ಸ್ಪರ್ಧಿಸುತ್ತಿದ್ದಾರೆ.
ನೀವು ಬದುಕಿನಲ್ಲಿ ಏನಾಗಬೇಕೆಂದು ಅಂದುಕೊಂಡಿದ್ದೀರೋ ಅದರ ಆಯ್ಕೆ ನಿಮ್ಮದೇ ಆಗಬೇಕು. ನನ್ನ ಬದುಕೇ ಇತರರಿಗೆ ಪ್ರಚೋದನೆ ಎಂದು ಸುರೇಂದ್ರನ್ ಕನ್ನಡ ಪ್ರಭದೊಂದಿಗೆ ಹೇಳಿದರು.ಭಾರತದಲ್ಲಿ ಹುಟ್ಟಿ ಬೆಳೆದ ನನಗೇ ಅಮೇರಿಕಾದಲ್ಲಿ ನ್ಯಾಯಾಧೀಶನಾಗಲು ಅವಕಾಶ ಸಿಗುವುದಾದರೆ ಇಲ್ಲಿಂದ ಅಲ್ಲಿಗೆ ಹೋದ ಎರಡನೇ ತಲೆಮಾರು ಇಂತಹ ಅನೇಕ ಅವಕಾಶಗಳನ್ನು ಪಡೆಯಬಹುದಲ್ಲವೇ ಎಂದು ಹೇಳಿದರು.ಅಕ್ಕನ ಸಾವಿಗೆ ನ್ಯಾಯ ಸಿಗದಿರುವುದೇ ವಕೀಲರಾಗಲು ಪ್ರೇರಣೆಯಾಯಿತುಸುರೇಂದ್ರನ್ ಎಂಟನೇ ತರಗತಿಯಲ್ಲಿರುವಾಗ ಅವರ ಹಿರಿಯ ಸಹೋದರಿ ಅಸಹಜವಾಗಿ ಸಾವಿಗೀಡಾದರು. " ಆ ಘಟನೆಯಲ್ಲಿ ನಮ್ಮ ಕುಟುಂಬಕ್ಕೆ ನ್ಯಾಯ ಸಿಗಲಿಲ್ಲ ಎಂಬ ಕೊರಗು ನನ್ನಲ್ಲಿತ್ತು. ಇದೇ ನನ್ನನ್ನು ನ್ಯಾಯವಾದಿಯಾಗಲು ಪ್ರೇರೇಪಿಸಿತು " ಎನ್ನುತ್ತಾರೆ ಸುರೇಂದ್ರನ್.