ಶಿರಸಿ ತಾಲೂಕು 9ನೇ ಕನ್ನಡ ಸಾಹಿತ್ಯ ಸಮ್ಮೇಳನ
ಇಂಗ್ಲಿಷ್ ಭಾಷೆಯ ಮೇಲಿನ ಅತಿಯಾದ ವ್ಯಾಮೋಹದಿಂದ ಸರ್ಕಾರಿ ಕನ್ನಡ ಶಾಲೆಗಳ ಬಾಗಿಲು ಮುಚ್ಚುತ್ತಿರುವುದಕ್ಕೆ ಬಣ್ಣದಮಠದ ಶ್ರೀ ಶಿವಲಿಂಗ ಸ್ವಾಮೀಜಿ ವಿಷಾದ ವ್ಯಕ್ತಪಡಿಸಿದರು.
ನಗರದ ಬಣ್ಣದ ಮಠದ ಗುರು ಸಿದ್ದೇಶ್ವರ ಸಾಂಸ್ಕೃತಿಕ ಭವನದಲ್ಲಿ ಬುಧವಾರ ಕನ್ನಡ ಸಾಹಿತ್ಯ ಪರಿಷತ್ ಶಿರಸಿ ತಾಲೂಕು ಘಟಕ ಹಮ್ಮಿಕೊಂಡ 9ನೇ ಕನ್ನಡ ಸಾಹಿತ್ಯ ಸಮ್ಮೇಳನ ಉದ್ಘಾಟಿಸಿ ಮಾತನಾಡಿದರು.ಕನ್ನಡ ಮಾಧ್ಯಮ ಶಾಲೆಗಳಿಗೆ ಮಕ್ಕಳನ್ನು ಪಾಲಕರು ಕಳುಹಿಸುತ್ತಿಲ್ಲ. ಇದು ಮುಂದೊಂದು ದಿನ ಬಹಳ ಅಪಾಯಕಾರಿಯಾಗಲಿದೆ. ಅದ್ಭುತವಾದ ಭಾಷೆ ನಮ್ಮ ಕನ್ನಡ. ಇದು ಹೃದಯ ಭಾಷೆ. ಇಲ್ಲಿ ಮೋಸ, ಕಪಟಗಳಿಲ್ಲ. ನಮ್ಮ ಭಾಷೆಯ ಮೇಲೆ ನಮಗೆ ಅಭಿಮಾನ ವಿರಬೇಕು. ಆಗ ನಮ್ಮ ನಾಡು ನುಡಿ ಬೆಳೆಯುತ್ತದೆ ಎಂದರು.
ಸಾಹಿತ್ಯ ಸಮ್ಮೇಳನದ ನಿಕಟಪೂರ್ವ ಅಧ್ಯಕ್ಷ ರಾಜೀವ ಅಜ್ಜೀಬಳ ಮಾತನಾಡಿ, ಡಿ.ಎಸ್. ನಾಯ್ಕ ಅವರನ್ನು ಸರ್ವಾಧ್ಯಕ್ಷ ಸ್ಥಾನದಲ್ಲಿ ಕಂಡು ಬಹಳ ಸಂತಸವಾಗುತ್ತಿದೆ. ಕನ್ನಡ ಶಾಲೆಗಳು ಮುಚ್ಚುವ ಹಂತಕ್ಕೆ ಬಂದು ತಲುಪಿದೆ. ಸರ್ಕಾರದಿಂದ ಸಾಹಿತ್ಯ ಸಮ್ಮೇಳನಕ್ಕೆ ಅನುದಾನಗಳು ಬರುತ್ತಿಲ್ಲ. ಮನಸ್ಸಿದ್ದರೆ ಕಾರ್ಯಕ್ರಮಗಳನ್ನು ಮಾಡಬಹುದು. ಆದರೆ, ಅನುದಾನದ ಅವಶ್ಯಕತೆ ಸಾಕಷ್ಟಿರುತ್ತದೆ ಎಂದರು.
ಕಸಾಪ ಉತ್ತರ ಕನ್ನಡ ಜಿಲ್ಲಾಧ್ಯಕ್ಷ ಬಿ.ಎನ್. ವಾಸರೆ ಮಾತನಾಡಿ, ಶಿರಸಿಯಲ್ಲಿ ನಡೆಯುವಷ್ಟು ಸಾಂಸ್ಕೃತಿಕ ಹಾಗೂ ಸಾಹಿತ್ಯ ಕಾರ್ಯಕ್ರಮಗಳು ಬೇರೆಲ್ಲೂ ನಡೆಯುವುದಿಲ್ಲ. ಇಂತಹ ಶ್ರೇಷ್ಠ ಪುಣ್ಯ ಭೂಮಿ ಶಿರಸಿ. ಕನ್ನಡದ ಕಾರ್ಯಕ್ರಮಗಳನ್ನು ಮಾಡಲೂ ಅಡ್ಡಗಾಲು ಹಾಕುವವರೂ ಇದ್ದಾರೆ. ಸಂಘಟನೆ ಮಾಡುವುದು ಹೇಳಿದಷ್ಟು ಸುಲಭವಲ್ಲ. ಅನುದಾನಗಳಿಲ್ಲದೇ ಸಮ್ಮೇಳನ ನಡೆಸಲಾಗುತ್ತಿದೆ. ನಿರ್ವಹಣಾ ಅನುದಾನವೂ ವಿಲ್ಲದೇ ನಾವು ಸಾಹಿತ್ಯ ಪರಿಷತ್ತನ್ನು ನಡೆಸುತ್ತಿದ್ದೇವೆ. ಕನ್ನಡದ ಕೆಲಸಕ್ಕಾಗಿಯೇ ಕಟ್ಟಿದ ಸಂಸ್ಥೆ ಕನ್ನಡ ಸಾಹಿತ್ಯ ಪರಿಷತ್ತು. ಸಮ್ಮೇಳನಕ್ಕೆ ಮಾತ್ರ ಪರಿಷತ್ತು ಸೀಮಿತವಾಗದೇ ನಮ್ಮ ಅವಧಿಯಲ್ಲಿ ಸಾಕಷ್ಟು ಕೆಲಸಗಳನ್ನು ಮಾಡಿದ್ದೇವೆ ಎಂದರು.
ಕಸಾಪ ಶಿರಸಿ ತಾಲೂಕು ಘಟಕದ ಅಧ್ಯಕ್ಷ ಜಿ. ಸುಬ್ರಾಯ ಭಟ್ ಬಕ್ಕಳ ಸ್ವಾಗತಿಸಿ, ಪ್ರಾಸ್ತಾವಿಕ ಮಾತನಾಡಿದರು. ನಿಕಟಪೂರ್ವ ಸಮ್ಮೇಳನಾಧ್ಯಕ್ಷ ರಾಜೀವ ಅಜ್ಜೀಬಳ ಅವರು 8ನೇ ಕನ್ನಡ ಸಾಹಿತ್ಯ ಸಮ್ಮೇಳನದ ಸಮ್ಮೇಳನಾಧ್ಯಕ್ಷ ಡಿ.ಎಸ್. ನಾಯ್ಕ ಅವರಿಗೆ ಹಸ್ತಾಂತರಿಸಿದರು.
ನಗರದ ಅಂಚೆ ವೃತ್ತದಿಂದ ಸಮ್ಮೇಳನಾಧ್ಯಕ್ಷ ಡಿ.ಎಸ್. ನಾಯ್ಕ ಅವರನ್ನು ತೆರೆದ ವಾಹನದಲ್ಲಿ ಭರ್ಜರಿ ಮೆರವಣಿಗೆಯೊಂದಿಗೆ ಬಣ್ಣದ ಮಠಕ್ಕೆ ಕರೆತರಲಾಯಿತು. ಶಾಲಾ ವಿದ್ಯಾರ್ಥಿಗಳ ಶಿಸ್ತು ಬದ್ಧ ಸಂಚಲನ ಹಾಗೂ ಡೊಳ್ಳು ಕುಣಿತ ಗಮನ ಸೆಳೆಯಿತು.
ಲೇಖರಾದ ಸುರೇಂದ್ರ ರೇವಣಕರ ಅವರ ಆದರ್ಶ ಕತೆಗಳು ಹಾಗೂ ಜಗತ್ತಿನ ಮಹಾ ವ್ಯಕ್ತಿಗಳು, ಹನುಮಂತ ಸಾಲಿಯವರ ನೆಗಿಸ್ಯಾವ ಸಾಲುಗಳು, ಪೂರ್ಣಿಮಾ ಹೆಗಡೆ ಅವರ ಮನೋಲ್ಲಾಸ, ಮಂಜುನಾಥ ಹೆಗಡೆಯವರ ಪೌರಾಣಿಕ ಸಾರ ಸಂಗ್ರಹ, ಗಜಾನನ ಭಟ್ಟ ಅವರ ಕಣದಂಗ ಕೃತಿಗಳು ಬಿಡುಗಡೆಗೊಂಡವು.