ಹೊಸಪೇಟೆ: ಐತಿಹಾಸಿಕ ವಿಜಯನಗರ ಸಾಮ್ರಾಜ್ಯದ ರಾಜಧಾನಿಯಾಗಿದ್ದ ಹಂಪಿಯಲ್ಲಿ ಫೆ.13, 14, 15ರಂದು ಹಂಪಿ ಉತ್ಸವ- 2026 ಅದ್ಧೂರಿಯಾಗಿ ನಡೆಯಲಿದೆ ಎಂದು ಜಿಲ್ಲಾ ಉಸ್ತುವಾರಿ ಸಚಿವ ಜಮೀರ್ ಅಹಮದ್ ಖಾನ್ ತಿಳಿಸಿದರು.
ಫೆ.13ರಂದು ಮುಖ್ಯಮಂತ್ರಿ ಸಿದ್ದರಾಮಯ್ಯ ಈ ಸಾಂಸ್ಕೃತಿಕ ವೈಭವಕ್ಕೆ ಚಾಲನೆ ನೀಡುವರು. ಉದ್ಘಾಟನೆಯ ದಿನದಂದು ಮುಖ್ಯಮಂತ್ರಿ ಹಂಪಿಯಲ್ಲೇ ವಾಸ್ತವ್ಯ ಹೂಡಲಿದ್ದು, ಮರುದಿನ ಹಾವೇರಿಯಲ್ಲಿ ನಡೆಯಲಿರುವ ಕಾರ್ಯಕ್ರಮಕ್ಕೆ ತೆರಳಲಿದ್ದಾರೆ ಎಂದು ಹೇಳಿದರು.
ಉತ್ಸವ ಆರು ವೇದಿಕೆಗಳಲ್ಲಿ ಸಾಂಸ್ಕೃತಿಕ ಸೌರಭ ನಡೆಯಲಿದೆ. ಉತ್ಸವದ ಮುಖ್ಯವೇದಿಕೆಗೆ ಎಂ.ಪಿ. ಪ್ರಕಾಶ್ ವೇದಿಕೆ, ಎದುರು ಬಸವಣ್ಣ ಮಂಟಪದ ವೇದಿಕೆಗೆ ಶ್ರೀಕೃಷ್ಣ ದೇವರಾಯ ವೇದಿಕೆ, ಸಾಸಿವೆ ಕಾಳು ಗಣಪ ವೇದಿಕೆ, ಮಹಾನವಮಿ ದಿಬ್ಬದ ವೇದಿಕೆ ವಿದ್ಯಾರಣ್ಯ ವೇದಿಕೆ ಹಾಗೂ ಧ್ವನಿ ಮತ್ತು ಬೆಳಕು ಕಾರ್ಯಕ್ರಮ ವೇದಿಕೆಗೆ ಹಕ್ಕ-ಬುಕ್ಕ ಹೆಸರು ಇಡಲಾಗಿದೆ ಎಂದರು.ಮುಖ್ಯವೇದಿಕೆಯಲ್ಲಿ 50,000 ಆಸನಗಳ ವ್ಯವಸ್ಥೆ ಮಾಡಲಾಗಿದೆ. ಈ ಬಾರಿ 8ರಿಂದ 10 ಲಕ್ಷ ಜನ ಸೇರುವ ನಿರೀಕ್ಷೆಯಿದೆ. 15 ಸಾವಿರ ಆಸನಗಳ ಕಾಯ್ದಿರಿಸಲಾಗಿದೆ. ಈ ಬಾರಿಯ ಉತ್ಸವದಲ್ಲಿ ಸ್ಯಾಂಡಲ್‌ವುಡ್‌ನ ಖ್ಯಾತ ಕಲಾವಿದರು ಪಾಲ್ಗೊಳ್ಳಲಿದ್ದಾರೆ. ಪ್ರಮುಖವಾಗಿ ಹ್ಯಾಟ್ರಿಕ್ ಹೀರೋ ಶಿವರಾಜಕುಮಾರ್, ಅಶ್ವಿನಿ ಪುನೀತ್ ರಾಜ್‌ಕುಮಾರ್, ಗೋಲ್ಡನ್ ಸ್ಟಾರ್ ಗಣೇಶ್, ರಕ್ಷಿತ್ ಶೆಟ್ಟಿ, ರಚಿತಾರಾಮ್, ಡಾಲಿ ಧನಂಜಯ್ ಮತ್ತು ಬಿಗ್ ಬಾಸ್ ವಿಜೇತ ಗಿಲ್ಲಿನಟ ಭಾಗವಹಿಸಲಿದ್ದಾರೆ ಎಂದರು.
ಹೊಸಪೇಟೆಯಿಂದ ಹಂಪಿಗೆ ಹೋಗುವ ಎಲ್ಲ ರಸ್ತೆಗಳಿಗೆ ಹಂಪಿ ಮತ್ತು ಸುತ್ತಮುತ್ತಲಿನ ಸುಮಾರು 50 ಕಿ.ಮೀ. ವ್ಯಾಪ್ತಿಯಲ್ಲಿ ವಿಶೇಷ ಲೈಟಿಂಗ್ ವ್ಯವಸ್ಥೆ ಮಾಡಲಾಗಿದೆ. ಇಡೀ ಹಂಪಿ ವಿದ್ಯುತ್ ದೀಪಗಳಿಂದ ಝಗಮಗಿಸುತ್ತಿದೆ ಎಂದರು.
ಧ್ವನಿ ಮತ್ತು ಬೆಳಕು ಕಾರ್ಯಕ್ರಮ:
ಜಿಲ್ಲಾಧಿಕಾರಿ ಕವಿತಾ ಎಸ್ ಮನ್ನಿಕೇರಿ, ಸಿಇಒ ನೋಂಗ್ಜಾಯ್ ಮಹ್ಮದ್ ಅಲಿ ಅಕ್ರಂ ಷಾ, ಎಸ್.ಪಿ.ಜಾಹ್ನವಿ, ಕಾಂಗ್ರೆಸ್ ಜಿಲ್ಲಾಧ್ಯಕ್ಷ ಶಿರಾಜ್ ಶೇಖ್, ಗ್ಯಾರಂಟಿ ಯೋಜನೆಗಳ ಅನುಷ್ಠಾನ ಸಮಿತಿಯ ಅಧ್ಯಕ್ಷ ಕುರಿ ಶಿವಮೂರ್ತಿ, ಸ್ಥಳೀಯ ಮುಖಂಡ ಗಾದಿನೂರು ಹಾಲಪ್ಪ ಸೇರಿದಂತೆ ವಿವಿಧ ಅಧಿಕಾರಿಗಳು ಉಪಸ್ಥಿತರಿದ್ದರು.