ಕನ್ನಡಪ್ರಭ ವಾರ್ತೆ ಮಂಡ್ಯ
ಕೆಆರ್‌ಎಸ್‌ನ ಐತಿಹಾಸಿಕ ಕಾವೇರಿ ಆರತಿ ಕಾರ್ಯಕ್ರಮ ರಾಜ್ಯ, ದೇಶದಲ್ಲಿ ಮಾತ್ರವಲ್ಲದೆ ವಿದೇಶಗಳಲ್ಲೂ ಸಾಕಷ್ಟು ಪ್ರಶಂಸೆಗೆ ಪಾತ್ರವಾಗಿದೆ. ಅಮೆರಿಕಾದ ಫೀನಿಕ್ಸ್ ನೆಲೆಸಿರುವ ಬೆಂಗಳೂರು ಮೂಲದ ಜ್ಯೋತಿ ಮತ್ತು ವಿಕಾಸ್ ದಂಪತಿ ಕಾವೇರಿ ಆರತಿ ಆಯೋಜನೆಯನ್ನು ಮೆಚ್ಚಿ5 ಲಕ್ಷ ರು. ಸಮರ್ಪಣೆ ಮಾಡಿದ್ದಾರೆ.ನಾನು ಬೆಂಗಳೂರಿನವರಾಗಿ ಕಾವೇರಿ ನೀರನ್ನು ಕುಡಿದು ಬಾಲ್ಯ ಜೀವನ ಕಳೆದಿದ್ದೇನೆ. ಎಂಜಿನಿಯರಿಂಗ್ ಪದವಿ ಪೂರೈಸಿ ಅಮೆರಿಕಾದಲ್ಲಿ ನೆಲೆಸಿದ್ದೇವೆ. ಸೆಪ್ಟೆಂಬರ್ 26ರಿಂದ ಕೆಆರ್‌ಎಸ್‌ನ ಬೃಂದಾವನದಲ್ಲಿ ಆರಂಭವಾಗಿರುವ ಐತಿಹಾಸಿಕ ಕಾವೇರಿ ಆರತಿಯನ್ನು ಮಾಧ್ಯಮ ಮತ್ತು ಸಾಮಾಜಿಕ ಮಾಧ್ಯಮದಲ್ಲಿ ವೀಕ್ಷಿಸಿ ಭಾವುಕರಾಗಿರುವುದಾಗಿ ತಿಳಿಸಿದ್ದಾರೆ.
ಅಮೆರಿಕಾದಲ್ಲಿ ನೆಲೆಸಿದ್ದರೂ ನಾವು ಕುಡಿದು ಬೆಳೆದಿರುವುದು ಕಾವೇರಿ ನೀರೇ. ಕಾವೇರಿ ತಾಯಿ ಕೋಟ್ಯಂತರ ಜನರ ದಾಹ ನೀಗಿಸುತ್ತಿದ್ದಾಳೆ. ರೈತರ ಬದುಕಿಗೆ ಆಸರೆಯಾಗಿ, ಜೀವನದ ಅವಿಭಾಜ್ಯ ಅಂಗವಾಗಿದ್ದಾಳೆ. ಕನ್ನಡ ನಾಡಿನ ಜನತೆ ಕಾವೇರಿಯನ್ನು ಮರೆಯಲು ಸಾಧ್ಯವಿಲ್ಲ. ಇಂತಹ ಜೀವನದಿಗೆ ವಂದಿಸಿ ನಮಿಸುವ ಕಾರ್ಯಕ್ಕೆ ಮುನ್ನುಡಿ ಬರೆದಿರುವ ರಾಜ್ಯ ಸರ್ಕಾರದ ಈ ಕಾರ್ಯಕ್ಕೆ ಎಲ್ಲಾ ಅನಿವಾಸಿ ಕನ್ನಡಿಗರ ಪರ ಅಭಿನಂದನೆಗಳನ್ನು ಸಲ್ಲಿಸುವುದಾಗಿ ಹೇಳಿದ್ದಾರೆ.ಕಾವೇರಿ ಆರತಿ ಪೂಜಾ ವಿಧಾನ ಹಾಗೂ ಕಾರ್ಯಕ್ರಮದ ಬಗ್ಗೆ ಸಂತಸಗೊಂಡಿದ್ದೇವೆ. ರಾಜ್ಯ ಸರ್ಕಾರದ ಈ ಕಾರ್ಯ ಪ್ರಶಂಸನೀಯ. ರಾಜ್ಯದ ಇತಿಹಾಸದಲ್ಲಿ ಈ ಕಾರ್ಯ ನಿರಂತರವಾಗಿ ನಡೆಯಬೇಕು. ಕಾವೇರಿ ಮಾತೆಗೆ ವಂದಿಸಿ ಪೂಜಿಸುವುದು ಪ್ರತಿಯೊಬ್ಬರ ಆದ್ಯ ಕರ್ತವ್ಯ ಮತ್ತು ಜವಾಬ್ದಾರಿ. ದೇವರು ಎಂದರೆ ಪ್ರಕೃತಿ. ಆ ಪ್ರಕೃತಿ ರೂಪವೇ ಕಾವೇರಿ ಎಂದಿದ್ದಾರೆ.
ಕಾವೇರಿಯನ್ನು ಪೂಜಿಸುವುದರಿಂದ ಮಾನವ ಕುಲ ಮಾತ್ರವಲ್ಲದೆ ಸಕಲ ಜೀವಸಂಕುಲಕ್ಕೂ ಸನ್ಮಾರ್ಗ ಉಂಟಾಗಲಿದೆ. ಆದ್ದರಿಂದ ಕಾವೇರಿ ಆರತಿಯನ್ನು ಕೇವಲ ದಸರಾಗೆ ಮಾತ್ರ ಸೀಮಿತಗೊಳಿಸದೆ ವರ್ಷ ಪೂರ್ತಿ ಶಾಸ್ತ್ರೋಕ್ತವಾಗಿ ಆಚರಿಸಬೇಕು. ಇದೊಂದು ಪುಣ್ಯದ ಕಾರ್ಯ. ಮುಂದಿನ ದಿನಗಳಲ್ಲಿ ಕರ್ನಾಟಕಕ್ಕೆ ಬಂದಾಗ ಕಾವೇರಿ ತಾಯಿಗೆ ಪೂಜೆ ಸಲ್ಲಿಸುವುದಾಗಿ ಅನಿವಾಸಿ ಫೀನಿಕ್ಸ್ ನಲ್ಲಿರುವ ಭಾರತೀಯರಾದ ಜ್ಯೋತಿ ವಿಕಾಸ್ ಫೀನಿಕ್ಸ್ ತಿಳಿಸಿದ್ದಾರೆ.ಜ್ಯೋತಿ ವಿಕಾಸ ಅವರು 5 ಲಕ್ಷ ರು. ಅನ್ನು ಕಾವೇರಿ ಆರತಿ ಹಾಗೂ ಅಭಿವೃದ್ಧಿಗಾಗಿ ಬಳಸಿಕೊಳ್ಳಲು ಕಳುಹಿಸಿಕೊಟ್ಟಿರುತ್ತಾರೆ. ಈ ಬಗ್ಗೆ ಜಿಲ್ಲಾ ಉಸ್ತುವಾರಿ ಸಚಿವರೊಂದಿಗೆ ಚರ್ಚಿಸಿ ಮುಂದಿನ ಕ್ರಮ ಕೈಗೊಳ್ಳುತ್ತೇವೆ.- ದಿನೇಶ್ ಗೂಳಿಗೌಡ, ವಿಧಾನ ಪರಿಷತ್ ಶಾಸಕರು