ಕನ್ನಡಪ್ರಭ ವಾರ್ತೆ ಯಾದಗಿರಿ
ಜಾತಿ-ಮತ, ಪಂಥ-ಪಂಗಡಗಳನ್ನು ಮೀರಿ ಮಾನವತೆಯ ನೆಲೆಗಟ್ಟಿನಲ್ಲಿ ಎಲ್ಲರೂ ಸೌಹಾರ್ದಭಾವದಿಂದ ಬಾಳಿ ಬದುಕಬೇಕು ಎಂಬುದು ಶ್ರೀ ವಿಶ್ವಾರಾಧ್ಯರ ಆಶಯವಾಗಿತ್ತು. ಅದರಂತೆಯೇ ಅಬ್ಬೆತುಮಕೂರಿನ ಮಠದಲ್ಲಿ ಜಾತ್ಯಾತೀತ ಭಾವವನ್ನು ಕಾಪಾಡಿಕೊಂಡು ಬಂದಲಾಗುತ್ತಿದ್ದು, ಸಕಲ ಜೀವಾತ್ಮರಿಗೆ ಲೇಸನ್ನೇ ಬಯಸಲಾಗುತ್ತಿದೆ ಎಂದು ಸುಕ್ಷೇತ್ರ ಅಬ್ಬೆತುಮಕೂರು ಶ್ರೀವಿಶ್ವಾರಾಧ್ಯರ ಮಠದ ಪೀಠಾಧಿಪತಿ ಡಾ. ಗಂಗಾಧರ ಮಹಾಸ್ವಾಮಿಗಳು ನುಡಿದರು.ಸುಕ್ಷೇತ್ರದಲ್ಲಿ ಭಾನುವಾರ ಸಂಜೆ ಏರ್ಪಡಿಸಿದ್ದ ಪರಂಪರಾ ಪಾದಯಾತ್ರೆಯ ಸಮಾರೋಪ ಹಾಗೂ ಅಮವಾಸ್ಯೆಯ ಶಿವಾನುಭವ ಗೋಷ್ಠಿಯ ಸಾನಿಧ್ಯ ವಹಿಸಿ ಶ್ರೀಗಳು ಆಶೀರ್ವಚನ ನೀಡಿದರು.ಮಾನವ ಜನ್ಮ ದೊಡ್ಡದು, ಇದನ್ನು ಹಾಳು ಮಾಡಬೇಡಿ ಹುಚ್ಚಪ್ಪಗಳಿರಾ ಎಂಬ ದಾಸರ ವಾಣಿಯಂತೆ, ಮನುಷ್ಯರಾಗಿ ಹುಟ್ಟಿ ಬಂದ ಮೇಲೆ ಮಾನವ ಜನ್ಮವನ್ನು ಸಾರ್ಥಕ ಮಾಡಿಕೊಳ್ಳುವ ರೀತಿಯಲ್ಲಿ ಬಾಳಿ ಬದುಕಬೇಕೆಂದು ಶ್ರೀವಿಶ್ವಾರಾಧ್ಯರು ಲೋಕದ ಜನತೆಗೆ ತಿಳಿ ಹೇಳುತ್ತಿದ್ದರು ಎಂದು ಶ್ರೀಗಳು ಆಶೀರ್ವಚನದಲ್ಲಿ ನೀಡಿದರು.ಮೂರು ದಿನಗಳ ಕಾಲ ನಡೆದ ಪರಂಪರಾ ಪಾದ ಯಾತ್ರೆಯಲ್ಲಿ ಮಕ್ಕಳಿಂದ ಹಿಡಿದು ವಯೋವೃದ್ಧರವರೆಗೆ ಎಲ್ಲರೂ ಭಕ್ತಿ-ಭಾವದಿಂದ ಪಾಲ್ಗೊಂಡು ವಿಶ್ವಾರಾಧ್ಯರ ಕೃಪೆಗೆ ಪಾತ್ರರಾಗಿದ್ದೀರಿ. ವರ್ಷವಿಡೀ ಸದ್ಗುರುವಿನ ಆಶೀವಾರ್ದದಿಂದ ನಿಮ್ಮೆಲ್ಲರ ಬದುಕಿನಲ್ಲಿ ಸನ್ಮಂಗಳವುಂಟಾಗಲಿ ಎಂದು ಶುಭ ಹಾರೈಸಿದರು.ಭಾನುವಾರ ಸಂಜೆ ಹೊತ್ತಿಗೆ ಪರಂಪರಾ ಪಾದಯಾತ್ರೆಯು ಅಬ್ಬೆತುಮಕೂರಿನ ಪಾದಗಟ್ಟೆಯನ್ನು ತಲುಪಿದ ಕೂಡಲೇ ಅಲ್ಲಿ ನೆರೆದ ಸಹಸ್ರಾರು ಭಕ್ತರು ಅತ್ಯಂತ ಸಡಗರ ಭಕ್ತಿಯಿಂದ ಪಾದ ಯಾತ್ರೆಯನ್ನು ಬರಮಾಡಿಕೊಂಡರು. ಡೊಳ್ಳು, ಬಾಜಾ, ಭಜಂತ್ರಿ, ಮುಂತಾದ ಮಂಗಳವಾದ್ಯಗಳು, ಸುಮಂಗಲಿಯರ ಕಳಸ, ಕೋಲಾಟ, ನೂರಾರು ಭಜನಾ ಮೇಳಗಳು, ಪೌರಾಣಿಕ ವೇಷಧರಿಸಿದ ಪಾತ್ರಧಾರಿಗಳು, ರಂಗುರಂಗಿನ ವಿದ್ಯುತ್ ದೀಪಗಳು ಪಾದಗಟ್ಟೆಯ ಆವರಣದಲ್ಲಿ ಭಕ್ತಿಯ ಮೆರಗನ್ನು ಹೆಚ್ಚಿಸಿದ್ದವು.
ಈ ವೇಳೆ ಮಾಜಿ ಸಚಿವರಾದ ಸಿದ್ಧರಾಮ ಮೇತ್ರೆ, ಶಂಕರ ಮೇತ್ರೆ, ಗುರುಮಠಕಲ್ ಶಾಸಕ ಶರಣಗೌಡ ಕಂದಕೂರ, ಮಾಜಿ ಶಾಸಕ ದೊಡಪ್ಪಗೌಡ ಪಾಟೀಲ ನರಬೋಳ, ಜಯಶ್ರೀ ಮತ್ತಿಮೂಡ, ನರಸಣಗೌಡ ರಾಯಚೂರು, ಹನುಮೇಗೌಡ ಬೀರನಕಲ್, ಕರವೇ ಜಿಲ್ಲಾಧ್ಯಕ್ಷ ಭೀಮುನಾಯಕ್, ಡಾ. ಸುಭಾಶ್ಚಂದ್ರ ಕೌಲಗಿ, ಚನ್ನಪ್ಪಗೌಡ ಮೋಸಂಬಿ, ಸೇರಿದಂತೆ ಅನೇಕ ಮುಖಂಡರು ಇದ್ದರು.----
4ವೈಡಿಆರ್9ಯಾದಗಿರಿ ಸಮೀಪದ ಶ್ರೀಕ್ಷೇತ್ರ ಅಬ್ಬೆತುಮಕೂರಿನಲ್ಲಿ ಭಾನುವಾರ ಸಂಜೆ ಪರಂಪರಾ ಪಾದಯಾತ್ರೆಯ ಸಮಾರೋಪ ಸಮಾರಂಭ ನಡೆಯಿತು. ಪೀಠಾಧಿಪತಿ ಡಾ. ಗಂಗಾಧರ ಮಹಾಸ್ವಾಮಿಗಳ ಜೊತೆ ಗುರುಮಠಕಲ್ ಶಾಸಕ ಶರಣಗೌಡ ಕಂದಕೂರ ಹೆಜ್ಜೆ ಹಾಕಿದರು.
-----4ವೈಡಿಆರ್10
ಯಾದಗಿರಿ ಸಮೀಪದ ಶ್ರೀಕ್ಷೇತ್ರ ಅಬ್ಬೆತುಮಕೂರಿನಲ್ಲಿ ಭಾನುವಾರ ಸಂಜೆ ಪರಂಪರಾ ಪಾದಯಾತ್ರೆಯಲ್ಲಿ ವಿವಿಧ ರಾಜಕೀಯ ಗಣ್ಯರು, ಭಕ್ತಾದಿಗಳು ಭಾಗವಹಿಸಿದ್ದರು.