ರೈತರ ತೀವ್ರ ವಿರೋಧದ ಮಧ್ಯೆಯೂ ಮೃಣಾಲ ಸಕ್ಕರೆ ಕಾರ್ಖಾನೆಗೆ ಪೂಜೆ

KannadaprabhaNewsNetwork | Updated : Apr 04 2025, 01:04 PM IST

ಸಾರಾಂಶ

ಸಮೀಪದ ಯಾದವಾಡ ಹಾಗೂ ಇತರೆ ಗ್ರಾಮಸ್ಥರ, ರೈತರ ತೀವ್ರ ವಿರೋಧದ ಮಧ್ಯೆಯೂ ಗುರುವಾರ ಯಾದವಾಡ, ಪುಡಕಲಕಟ್ಟಿ, ಕರಡಿಗುಡ್ಡ ಗ್ರಾಮಗಳ ಮಧ್ಯೆ ಸ್ಥಾಪನೆಗೊಳ್ಳುತ್ತಿರುವ ಮೃಣಾಲ್ ಸಕ್ಕರೆ ಕಾರ್ಖಾನೆ ಕಟ್ಟಡದ ಕಾಲಂ ಪೂಜೆಯನ್ನು ಮಹಿಳಾ ಮತ್ತು ಮಕ್ಕಳ ಕಲ್ಯಾಣ ಸಚಿವೆ ಲಕ್ಷ್ಮೀ ಹೆಬ್ಬಾಳ್ಕರ ನೆರವೇರಿಸಿದರು.

ಧಾರವಾಡ: ಸಮೀಪದ ಯಾದವಾಡ ಹಾಗೂ ಇತರೆ ಗ್ರಾಮಸ್ಥರ, ರೈತರ ತೀವ್ರ ವಿರೋಧದ ಮಧ್ಯೆಯೂ ಗುರುವಾರ ಯಾದವಾಡ, ಪುಡಕಲಕಟ್ಟಿ, ಕರಡಿಗುಡ್ಡ ಗ್ರಾಮಗಳ ಮಧ್ಯೆ ಸ್ಥಾಪನೆಗೊಳ್ಳುತ್ತಿರುವ ಮೃಣಾಲ್ ಸಕ್ಕರೆ ಕಾರ್ಖಾನೆ ಕಟ್ಟಡದ ಕಾಲಂ ಪೂಜೆಯನ್ನು ಮಹಿಳಾ ಮತ್ತು ಮಕ್ಕಳ ಕಲ್ಯಾಣ ಸಚಿವೆ ಲಕ್ಷ್ಮೀ ಹೆಬ್ಬಾಳ್ಕರ ನೆರವೇರಿಸಿದರು.

ಇದಕ್ಕೆ ತೀವ್ರ ಆಕ್ಷೇಪ ವ್ಯಕ್ತಪಡಿಸಿದ ಯಾದವಾಡ ಗ್ರಾಮಸ್ಥರು ಫ್ಯಾಕ್ಟರಿ ಬಳಿ ಪ್ರತಿಭಟನೆ ನಡೆಸಿದರು. ಸಹೋದರ ಚೆನ್ನರಾಜ ಹಟ್ಟಿಹೊಳಿ, ಪುತ್ರ ಮೃಣಾಲ, ಶಿವಲೀಲಾ ಕುಲಕರ್ಣಿ, ತವನಪ್ಪ ಅಷ್ಟಗಿ ಅವರೊಂದಿಗೆ ಬಂದ ಸಚಿವೆ ಹೆಬ್ಬಾಳಕರ ಆಕ್ಷೇಪದ ಮಧ್ಯೆಯೂ ಪೂಜೆ ನೆರವೇರಿಸಿದರು.

ಇದೇ ವೇಳೆ ಯಾದವಾಡ ಗ್ರಾಮಸ್ಥರು ಟ್ರ್ಯಾಕ್ಟರ್‌ನಲ್ಲಿ ಬಂದು ಪ್ರತಿಭಟನೆ ಆರಂಭಿಸಿದರು. ಹೆಬ್ಬಾಳಕರ ವಿರುದ್ಧ ಘೋಷಣೆ ಕೂಗಿದರು. ಫ್ಯಾಕ್ಟರಿ ಆರಂಭಕ್ಕೆ ಅವಕಾಶ ನೀಡುವುದಿಲ್ಲ ಎಂದು ಅಸಮಾಧಾನ ಹೊರಹಾಕಿದರು.

ಪ್ರತಿಭಟನಾಕಾರರ ಬಳಿ ಬಂದ ಸಚಿವರು ಮನವಿ ಪತ್ರ ಸ್ವೀಕರಿಸಿದರು. ರೈತರ ಮನವೊಲಿಸಲು ಪ್ರಯತ್ನಿಸಿದ ಸಚಿವೆ ಹೆಬ್ಬಾಳಕರ್, ಸ್ವತಃ ತಾನೂ ರೈತನ ಮಗಳಾಗಿದ್ದು ರೈತರ ಮಕ್ಕಳಿಗೆ ಉದ್ಯೋಗ ಮತ್ತು ಅವರು ಆರ್ಥಿಕ ಅಭಿವೃದ್ಧಿ ಹೊಂದಲು ವ್ಯವಸಾಯ ಆಧಾರಿತ ಕೈಗಾರಿಕೆಗಳು ಸಹಕಾರಿಯಾಗಿವೆ. ಈ ದಿಸೆಯಲ್ಲಿ ಮೃಣಾಲ್ ಶುಗರ್ಸ್ ಸ್ಥಾಪಿಸಲಾಗುತ್ತಿದೆ. ರೈತರಿಗೆ ಕಷ್ಟ ಕೊಡಲು ನಾವಿಲ್ಲಿ ಬಂದಿಲ್ಲ. ಫ್ಯಾಕ್ಟರಿಯಿಂದ ಎಲ್ಲವೂ ಮುಳುಗಲಿದೆ ಎಂದುಕೊಳ್ಳಬೇಡಿ. ಹಲವೆಡೆ ನಡು ಊರಲ್ಲಿ ಕಾರ್ಖಾನೆಗಳಿವೆ. ಸಮಸ್ಯೆ ಹೇಳಿ ಸಮಜಾಯಿಸಿ ನೀಡುತ್ತೇನೆ. ಚರ್ಚೆಗೆ ಕರೆದರೆ ಬರಲು ನಾವು ಸಿದ್ಧರಿದ್ದೇವೆ ಎಂದು ಹೇಳಿದರು.

ನನ್ನ ಸಹೋದರ ನಿಮ್ಮ ಕಾಲು ಮುಗಿತೇನಿ ಅಂತ ಹೇಳಿದ್ದಾರೆ. ಬೇಕಿದ್ದರೆ ನಾನೂ ಮುಗಿತೀನಿ ಎಂದು ಲಕ್ಷ್ಮಿ ಹೆಬ್ಬಾಳಕರ ಹೇಳಿದರು. ಇದಕ್ಕೆ ಪ್ರತಿಕ್ರಿಯಿಸಿದ ಪ್ರತಿಭಟನಾಕಾರರು ನೀವು ಆ ಮಾತು ಆಡಬೇಡಿ. ಬೇಕಿದ್ದರೆ ನಾವು ನಿಮ್ಮ ಕಾಲು ಮುಗಿತೀವಿ ನಮಗೆ ಫ್ಯಾಕ್ಟರಿ ಬೇಡ ಎಂದು ಕೈಮುಗಿದು ಕೇಳಿಕೊಂಡರು.

ಹರ್ಷಾ ಶುಗರ್ಸ್ ಎಂ.ಡಿ, ಶಾಸಕ ಚೆನ್ನರಾಜ ಹಟ್ಟಿಹೊಳಿ, ಇದು ಪರಿಸರ ಸ್ನೇಹಿ ಫ್ಯಾಕ್ಟರಿ ಆಗಲಿದೆ. ಜನರಿಗೆ ಅನಾನುಕೂಲ ಆಗದು. ಜರ್ಮನಿ ತಂತ್ರಜ್ಞಾನ ಬಳಸಿಕೊಳ್ಳಲಾಗುತ್ತಿದೆ. ಜಲ ಮತ್ತು ವಾಯು ಮಾಲಿನ್ಯ ಆಗದು. ಒಂದು ಹಿಡಿ ಬೂದಿಯೂ ಹೊರಬರಲಾರದು. ಕಲ್ಮಶ ನೀರನ್ನು ಪುನರ್‌ ಬಳಕೆ ಮಾಡಿಕೊಳ್ಳಲಾಗುವುದು. ಕಾರ್ಬನ್ ಅಂಶ ತಡೆಹಿಡಿದು ಹೊಗೆ ಹೊರಬಿಡಲಾಗುವುದು ಎಂದು ಸಮಜಾಯಿಸಿದರು.

ಇದಕ್ಕೆ ತೀವ್ರ ಆಕ್ಷೇಪ ವ್ಯಕ್ತಪಡಿಸಿದ ಗ್ರಾಮಸ್ಥ ಬಸವರಾಜ ಬೆಂಡಿಗೇರಿ, ಪಕ್ಕದಲ್ಲಿ ನಿಮ್ಮ ಮಾಲಿಕತ್ವದ ಹರ್ಷ ಶುಗರ್ಸ್ ಇದೆ. ಅಲ್ಲಿಯೂ ಆರಂಭದಲ್ಲಿ ನೀವು ಹೀಗೆ ಹೇಳಿದ ಮಾಹಿತಿ ಇದೆ. ಆದರೆ ಈಗ ಅಲ್ಲಿನ ಸುತ್ತಲಿನ ಪ್ರದೇಶದಲ್ಲಿ ರೈತರು ಸಮಸ್ಯೆಯಿಂದ ನರಳುತ್ತಿದ್ದಾರೆ. ಆಧುನಿಕ ತಂತ್ರಜ್ಞಾನ ಅಲ್ಲಿ ಏಕೆ ಬಳಸಲಿಲ್ಲ? ಹೊಸ ಕಾರ್ಖಾನೆ ಇದ್ದ ಸ್ಥಳದಲ್ಲಿನ ಹಳ್ಳವನ್ನು ಎರಡೇ ದಿನದಲ್ಲಿ ಮಾರ್ಗ ಬದಲಾವಣೆ ಮಾಡಲಾಗಿದೆ. ನೀವು ಅಧಿಕಾರದಲ್ಲಿ ಇದ್ದಿದ್ದರಿಂದ ನಿಮಗೆ ಪರವಾನಗಿ ಸಿಕ್ಕಿದೆಯೇ? ಯಾವುದೇ ಕಾರಣಕ್ಕೂ ನಾವು ಫ್ಯಾಕ್ಟರಿ ಆರಂಭಕ್ಕೆ ಅವಕಾಶ ನೀಡುವುದಿಲ್ಲ. ನಿಮ್ಮ ಸ್ಪಂದನೆ ಸಿಗದಿದ್ದರೆ ಉಗ್ರ ಹೋರಾಟ ಮಾಡುತ್ತೇವೆ ಎಂದು ಆಕ್ರೋಶ ವ್ಯಕ್ತಪಡಿಸಿದರು.

ಬುಲೆಟ್‌ನಂತೆ ತೂರಿ ಬಂದ ಗ್ರಾಮಸ್ಥರ ಪ್ರಶ್ನೆಗಳಿಗೆ ತಬ್ಬಿಬ್ಬಾದ ಸಚಿವೆ ಲಕ್ಷ್ಮಿ ಹೆಬ್ಬಾಳಕರ್, ತಲೆ ಮೇಲೆ ಬಂದೂಕು ಹಿಡಿದು ಕೇಳಬೇಡಿ. ಮಾಧ್ಯಮಗಳ ಮುಂದೆ ಹೆಚ್ಚಿನ ಚರ್ಚೆ ಬೇಡ ಎಂದರು.

ಅವಕಾಶ ನೀಡಲಾಗದು: ಇಲ್ಲಿ ವೈವಿದ್ಯವಾದ ಬೆಳೆ ಬೆಳೆಯಲಾಗುತ್ತಿದೆ. ರೈತರು ನೆಮ್ಮದಿಯಿಂದ ಇದ್ದಾರೆ. ಕಬ್ಬು ಬೆಳೆಗಾರರೂ ಇಲ್ಲಿ ಇಲ್ಲ. ಈ ಫ್ಯಾಕ್ಟರಿ ಆರಂಭಗೊಂಡರೆ ನಮ್ಮ ಕೃಷಿ ಪದ್ಧತಿ ಕಳೆದು ಹೋಗಲಿದೆ. ಜನರ ಹಾಗೂ ಮಣ್ಣಿನ ಆರೋಗ್ಯ ಕೆಡಲಿದೆ. ಜನರ ಹಿತಕ್ಕಾಗಿ ನಾವು ಫ್ಯಾಕ್ಟರಿ ಆರಂಭಕ್ಕೆ ಅವಕಾಶ ನೀಡಿಲ್ಲ, ನೀಡುವುದೂ ಇಲ್ಲ ಎಂದು ಪಂಚಾಯ್ತಿ ನಿರ್ಣಯವನ್ನು ಹೆಬ್ಬಾಳಕರ ಎದುರು ಗ್ರಾಪಂ ಅಧ್ಯಕ್ಷೆ ಲಕ್ಷ್ಮಿ ಗಳಗಿ, ಸದಸ್ಯ ಮಡಿವಾಳಪ್ಪ ದಿಂಡಲಕೊಪ್ಪ ತಿಳಿಸಿದರು.

ಸರ್ಕಾರಿ ವಾಹನ ದುರ್ಬಳಕೆ: ಕರಡಿಗುಡ್ಡ ಗ್ರಾಮದಲ್ಲಿ ಮೃಣಾಲ್ ಹೆಬ್ಬಾಳಕರ ಸಕ್ಕರೆ ಕಾರ್ಖಾನೆ ಪೂಜೆಗೆ ಜನರನ್ನು ಆಹ್ವಾನಿಸಲು ಗ್ರಾಪಂ ಸರ್ಕಾರಿ ವಾಹನ ಬಳಸಿರುವುದು ಅಚ್ಚರಿ ಮೂಡಿಸಿದೆ. ಕಸ ತುಂಬುವ ವಾಹನ ಬಳಸಿ ಫ್ಯಾಕ್ಟರಿ ಉದ್ಘಾಟನೆಗೆ ಜನರು ಬರಬೇಕು ಎಂದು ಮೈಕ್‌ನಲ್ಲಿ ಅನೌನ್ಸ್ ಮಾಡಿದ ವಿಡಿಯೋ ವೈರಲ್ ಆಗಿದ್ದು, ವಿವಾದದ ಮೂಲ.

ಪೊಲೀಸ್ ಬಂದೋಬಸ್ತ್ ನಲ್ಲಿ ಪೂಜೆ : ಸಕ್ಕರೆ ಕಾರ್ಖಾನೆಗೆ ಯಾದವಾಡ ಗ್ರಾಮಸ್ಥರು ವಿರೋಧ ವ್ಯಕ್ತಪಡಿಸಿದ್ದರಿಂದ ಮೃಣಾಲ್ ಶುಗರ್ಸ್‌ ಬಳಿ ಬಿಗಿ ಪೊಲೀಸ್ ಬಂದೋಬಸ್ತ್ ಕಲ್ಪಿಸಲಾಗಿತ್ತು. ಜತೆಗೆ ಯಾದವಾಡ ಗ್ರಾಮದಲ್ಲಿಯೂ ಡಿಎಆರ್ ತುಕಡಿ, ಹಾಗೂ ಪಿಎಸ್‌ಐ ಒಬ್ಬರನ್ನು ನಿಯೋಜಿಸಲಾಗಿತ್ತು. ಇದು ಬೆದರಿಸುವ ತಂತ್ರ, ಅಧಿಕಾರದ ದುರ್ಬಳಕೆ ಎಂದು ಪ್ರತಿಭಟನಾಕಾರರು ಆರೋಪಿಸಿದರು.

ಮೃಣಾಲ್ ಕಾರ್ಖಾನೆ ಜಿರೋ ಡಿಸ್ಚಾರ್ಜ್ ಪಾಯಿಂಟ್‌ ಆಗಲಿದೆ. ಇಎಸ್‌ಪಿ ತಂತ್ರಜ್ಞಾನ ಬಳಸಲಾಗುತ್ತಿದೆ. ಈ ಭಾಗದಲ್ಲಿ ಸಾಕಷ್ಟು ನೀರಿದೆ. ಕಬ್ಬು ಬೆಳೆಯಲು ಅನುಕೂಲ. ಹೀಗಾಗಿ ಕಾರ್ಖಾನೆ ಮಾಡಿದ್ದೇವೆ. ಕೇಂದ್ರದ ಒಪ್ಪಿಗೆಯೊಂದಿಗೆ ರಾಜ್ಯ ಸರ್ಕಾರದ ಮಾನ್ಯತೆ ಸಿಕ್ಕಿದೆ. ನಮ್ಮ ಜಮೀನಿನಲ್ಲಿ ಮಾತ್ರ ಹಳ್ಳದ ಮಾರ್ಗ ಬದಲಾಯಿಸಲಾಗಿದೆ. ಸ್ಥಳೀಯರ ವಿಶ್ವಾಸ ಪಡೆದು ಕಾರ್ಖಾನೆ ಆರಂಭಿಸುತ್ತೇವೆ ಎಂದು ಹರ್ಷಾ ಶುಗರ್ಸ್ ಎಂಡಿ ಚೆನ್ನರಾಜ ಹಟ್ಟಿಹೊಳಿ ತಿಳಿಸಿದ್ದಾರೆ.

Share this article