ಕನ್ನಡಪ್ರಭ ವಾರ್ತೆ, ಗುಂಡ್ಲುಪೇಟೆ
ಬಂಡೀಪುರ ಹುಲಿ ಸಂರಕ್ಷಿತ ಪ್ರದೇಶವೀಗ ಹಸಿರಿನಿಂದ ಕಂಗೊಳಿಸುತ್ತಿದ್ದರೆ, ಮತ್ತೊಂದೆಡೆ ಗುಂಡ್ಲುಪೇಟೆ-ಕೇರಳ ರಸ್ತೆ ಆಜು ಬಾಜು ಗ್ರಾಮಗಳಲ್ಲಿ ಮಳೆಯಾಶ್ರಿತ ಪ್ರದೇಶದಲ್ಲಿ ಅತೀ ಹೆಚ್ಚಾಗಿ ಚೆಂಡು ಹೂ ಬೆಳೆದರೆ, ಪಂಪ್ ಸೆಟ್ ಇರುವವರು ಸ್ವಲ್ಪ ಪ್ರದೇಶದಲ್ಲಿ ಹೂ ಬೆಳೆಯುತ್ತಿರುವುದರಿಂದ ಬರದ ಭೂಮಿಯಲ್ಲಿ ರೈತರು ಹೂವಿನ ಚಿತ್ತಾರ ಮೂಡಿಸಿದ್ದಾರೆ!.ತಾಲೂಕಿನ ಗೋಪಾಲಪುರ, ಬೇರಂಬಾಡಿ, ಹೊಂಗಹಳ್ಳಿ, ಮದ್ದೂರು, ಮದ್ದೂರು ಕಾಲೋನಿ, ದೇಶಿಪುರ, ಚನ್ನಮಲ್ಲಿಪುರ ಹಾಗೂ ಹಂಗಳ ಗ್ರಾಮದ ಸುತ್ತಮುತ್ತ ಸಾವಿರಾರು ಎಕರೆಯಲ್ಲಿ ಚೆಂಡು ಮಲ್ಲಿಗೆ ಹೂ ಜಗಮಗಿಸುತ್ತಿದೆ. ಗುಂಡ್ಲುಪೇಟೆ ಬಳಿ ಚೀನಾ ಮೂಲದ ಚೆಂಡು ಮಲ್ಲಿಗೆ ಹೂ ಕಂಪನಿ ಇರುವ ಕಾರಣ ರೈತರು ಚೆಂಡು ಮಲ್ಲಿಗೆ ಹೂ ಬೆಳೆಯಲು ಆರಂಭಿಸಿದ್ದರು. ಇತರೆ ಬೆಳೆಗೆ ಬೆಂಬಲ ಬೆಲೆ ಇಲ್ಲದ ಕಾರಣ ರೈತರು ನಿಗದಿತ ಬೆಲೆ ಸಿಗುವ ಕಾರಣ ರೈತರು ಚೆಂಡು ಮಲ್ಲಿಗೆ ಬೆಳೆ ಬೆಳೆಯಲು ಆಸಕ್ತಿ ತೋರಿದ್ದು, ರೈತರ ಜಮೀನುಗಳಲ್ಲಿ ಚೆಂಡು ಹೂ ಎತ್ತ ನೋಡಿದರೂ ಪ್ರವಾಸರಿಗೆ ಕಣ್ಣಿಗೆ ಮುದ ನೀಡುತ್ತಿದೆ.
ರೈತರು ಚೆಂಡು ಹೂ ಕಂಪನಿಗೆ ಹೂ ಮಾರಾಟ ಮಾಡುತ್ತಿದ್ದಾರೆ. ಜೊತೆಗೆ ಕೇರಳ ಓಣಂಗೆ ವಿವಿಧ ಬಗೆಯ ಹೂವುಗಳನ್ನು ಬೆಳೆಯುವುದನ್ನು ಕರಗತ ಮಾಡಿಕೊಂಡ ರೈತರು ಲಾಭ ಗಳಿಸುತ್ತಿದ್ದಾರೆ.ಮಳೆಯಾಶ್ರಿತ ಪ್ರದೇಶದಲ್ಲಿ ದಶಕದ ಹಿಂದೆ ಚೆಂಡು ಹೂ ಬೆಳೆಯುತ್ತಿರಲಿಲ್ಲ. ಚೆಂಡು ಹೂವಿಗೆ ನಿಗದಿತ ಬೆಲೆ ಸಿಗುವ ಕಾರಣ ಜೊತೆಗೆ ಕಾಡಂಚಿನ ಗ್ರಾಮಗಳ ಭೂಮಿಯಲ್ಲಿ ಇತರೆ ಫಸಲು ಬೆಳೆದರೆ ಕಾಡು ಪ್ರಾಣಿಗಳ ಹಾವಳಿಗೆ ಬೆಳೆ ನಾಶವಾಗುತ್ತದೆ ಎಂದು ಹೂವು ಬೆಳೆಯಲು ರೈತರು ಮುಖ ಮಾಡಿದ್ದಾರೆ.
ನೆರೆಯ ಕೇರಳ ರಾಜ್ಯದ ದೊಡ್ಡ ಹಬ್ಬವಾದ ಓಣಂ ಸಮಯಕ್ಕೆ ಬರುವಂಗೆ ರೈತರು ಕೇರಳ ರಸ್ತೆಯ ಗ್ರಾಮಗಳಲ್ಲಿ ಚೆಂಡು ಮಲ್ಲಿಗೆ (ಅರಿಶಿನ ಬಣ್ಣ), ಕಾಶಿಗೊಂಡ ಬೆಳೆಯುತ್ತಾರೆ ಎಂದು ಚನ್ನಮಲ್ಲೀಪುರದ ಪರಶಿವ ಮೂರ್ತಿ ಹೇಳಿದರು.ಚೆಂಡು ಮಲ್ಲಿಗೆ ಹೂ ಪ್ರಸ್ತುತ ದಿನಗಳಲ್ಲಿ ಚೆಂಡು ಹೂ ಕಂಪನಿಗಳು ಕೆಜಿಗೆ ೯.೪೦ ರು.ಗೆ ಖರೀದಿ ಮಾಡುತ್ತಿದ್ದಾರೆ. ಓಣಂ ಹಬ್ಬದ ಸಮಯದಲ್ಲಿ ಚೆಂಡು ಮಲ್ಲಿಗೆ ಹೂಗೆ ೨೦ ರಿಂದ ೨೫ ರು.ಗೆ ಖರೀದಿ ಆಗುತ್ತದೆ, ಕಾಶಿ ಗೊಂಡ ಹೂ ೩೦ ರಿಂದ ೪೦ ರು. ತನಕವೂ ಮಾರಾಟ ಆಗುತ್ತದೆ ಎಂದರು.
ಕೇರಳ-ಗುಂಡ್ಲುಪೇಟೆ ರಸ್ತೆಯಲ್ಲದೆ ಹಂಗಳ ಭಾಗದ ಹಗ್ಗದಹಳ್ಳ, ಕಳ್ಳಿಪುರದಲ್ಲೂ ಹೂವಿನ ಬೆಳೆ ಬೆಳೆಯುತ್ತಿದ್ದಾರೆ. ನಿಗದಿತ ಬೆಲೆ ಸಿಗುತ್ತದೆ ಎಂದು ತಾಲೂಕಿನ ಹಲವು ಭಾಗದಲ್ಲೂ ರೈತರು ಹೂವಿನ ಬೆಳೆ ಬೆಳೆಯಲು ಆಸಕ್ತಿ ತೋರಿದ್ದಾರೆ. ಗುಂಡ್ಲುಪೇಟೆ-ಕೇರಳ ರಸ್ತೆ, ಗೋಪಾಲಸ್ವಾಮಿ ಬೆಟ್ಟದ ರಸ್ತೆಯಲ್ಲಿ ಹೂವಿನ ಬೆಳೆ ಕಂಡು ಪ್ರವಾಸಿಗರು ನಿಲ್ಲಿಸಿ, ರೈತರಿಗೆ ದುಡ್ಡು ಕೊಟ್ಟು ಫೋಟೋ ತೆಗೆದುಕೊಳ್ಳುವ ಮೂಲಕ ಪ್ರವಾಸಿಗರ ಕಣ್ಣಿಗೆ ಹಬ್ಬದ ವಾತಾವರಣ ಕಾಣುತ್ತಿದೆ.ಮೈಸೂರು-ಊಟಿ ಹಾಗೂ ಗುಂಡ್ಲುಪೇಟೆ-ಕೇರಳ ರಾಷ್ಟ್ರೀಯ ಹೆದ್ದಾರಿಯಲ್ಲೂ ರೈತರು ಸೂರ್ಯಕಾಂತಿ ಬೆಳೆಯುವ ಜಮೀನುಗಳ ಮುಂದೆ ಪ್ರವಾಸಿಗರ ದಂಡು ಇರುತ್ತೇ, ಇಲ್ಲಿ ಸೂರ್ಯಕಾಂತಿ ಹೂ ಕೂಡ ಪ್ರವಾಸಿಗರ ಆಕರ್ಷಿಸುತ್ತಿದೆ.
ಸೂರ್ಯಕಾಂತಿಯ ಹೂ ಜೊತೆ ಸೆಲ್ಪೀಗೆ ಪ್ರವಾಸಿಗರು ಮನಸೋತು ರೈತನಿಗೆ ಹಣ ಕೊಟ್ಟು ಫೋಟೋ ಕ್ಲಿಕ್ಕಿಸುತ್ತಿರುವುದು ಎಲ್ಲೆಡೆ ಕಂಡು ಬಂದಿದೆ. ಕೇರಳ ಹಾಗೂ ತಮಿಳುನಾಡಿನ ಪ್ರವಾಸಿಗರು ಹಾಗೂ ರಾಜ್ಯದ ಪ್ರವಾಸಿಗರು ಹಣ ನೀಡಿ ಸೂರ್ಯಕಾಂತಿ ಹೂ ಕಂಡು ಇಳಿದು ಜಮೀನಿಗೆ ಒಳ ಹೋಗಲು ಮುಖ ನೋಡಿ ಹಣ ಪಡೆಯುತ್ತಿದ್ದಾರೆ ರೈತರು.