ಧಾರಾಕಾರ ಮಳೆ: ಮ್ಯಾದನಹೊಳೆ ಸೇತುವೆ ಕಾಮಗಾರಿ ಸ್ಥಗಿತ

KannadaprabhaNewsNetwork |  
Published : Aug 11, 2025, 12:30 AM IST
ಚಿತ್ರ 3 | Kannada Prabha

ಸಾರಾಂಶ

ಹಿರಿಯೂರು ತಾಲೂಕಿನ ಮ್ಯಾದನ ಹೊಳೆ ಬಳಿ ನಿರ್ಮಾಣವಾಗುತ್ತಿರುವ ಸೇತುವೆ ಕಾಮಗಾರಿ ಹಾಗೂ ಮಳೆಯಿಂದಾಗಿ ನದಿ ತುಂಬಿ ಹರಿಯುತ್ತಿರುವುದು.

ಕನ್ನಡಪ್ರಭ ವಾರ್ತೆ ಹಿರಿಯೂರು

ಎಡೆಬಿಡದೆ ತಾಲೂಕಿನಲ್ಲಿ ದಿನವೂ ಸುರಿಯುತ್ತಿರುವ ಮಳೆಯಿಂದಾಗಿ ಅಲ್ಲಲ್ಲಿ ಬೆಳೆ ಹಾನಿ, ಮನೆ ಹಾನಿ ಸಂಭವಿಸಿವೆ. ಶನಿವಾರ ರಾತ್ರಿ ಉತ್ತಮ ಮಳೆಯಾಗಿದ್ದು ಸುವರ್ಣಮುಖಿ ನದಿ ತುಂಬಿ ಹರಿಯುತ್ತಿದೆ. ತಾಲೂಕಿನ ಇಕ್ಕನೂರು ಗ್ರಾಮದಲ್ಲಿ 188.8 ಮಿಮೀ ಅತಿ ಹೆಚ್ಚು ಮಳೆಯಾಗಿದ್ದು ಹಿರಿಯೂರು 22.7 ಮಿಮೀ, ಸೂಗೂರು 4.2 ಮಿಮೀ, ಈಶ್ವರಗೆರೆ 124.2 ಮಿಮೀ, ಬಬ್ಬೂರು 36.6 ಮಿಮೀ ಮಳೆಯಾದ ವರದಿಯಾಗಿದೆ. ತಾಲೂಕಿನಲ್ಲಿ ವಿವಿಧೆಡೆ ಎರಡು ಮನೆಗೆ ಭಾಗಶಃ ಹಾನಿಯಾಗಿದ್ದು ಸುಮಾರು ಐದಾರು ಎಕರೆ ತೋಟಗಾರಿಕೆ ಬೆಳೆಗಳಿಗೆ ಹಾನಿಯಾಗಿದೆ.

ಇಕ್ಕನೂರು ಭಾಗದಲ್ಲಿ ಶನಿವಾರ ರಾತ್ರಿ ಸುಮಾರು 188 ಮಿಮೀ ಪ್ರಮಾಣದಲ್ಲಿ ಮಳೆಯಾಗಿದ್ದು ಸುವರ್ಣಮುಖಿ ನದಿಯು ತುಂಬಿ ಹರಿದಿದ್ದು ಮ್ಯಾದನಹೊಳೆ ಬಳಿ ನಿರ್ಮಾಣವಾಗುತ್ತಿದ್ದ ಸೇತುವೆಯ ಕೆಳಭಾಗದಲ್ಲಿ ನೀರು ರಭಸವಾಗಿ ಹರಿದ ಹಿನ್ನೆಲೆಯಲ್ಲಿ ನೀರಿನಲ್ಲಿ ಕಬ್ಬಿಣ ರಾಡು, ಸೆಂಟ್ರಿoಗ್ ಶೀಟ್, ಮರಳು, ಜೆಲ್ಲಿ ತೇಲಿ ಹೋಗಿವೆ. ಅಲ್ಲದೇ ನದಿಯಲ್ಲಿಯೇ ಸಂಗ್ರಹವಾಗಿಟ್ಟಿದ್ದ ಸುಮಾರು ಸಾವಿರಕ್ಕೂ ಅಧಿಕ ಸಿಮೆಂಟ್ ಚೀಲಗಳ ರಾಶಿ ಜಲಾವೃತ್ತಗೊಂಡಿದ್ದು ನೀರಿನಲ್ಲಿ ನೆನೆದು ಬಹುತೇಕ ಗಟ್ಟಿಯಾಗಿದೆ. ಸಿಮೆಂಟ್ ಮೇಲೆ ಹಾಕಿದ್ದ ತಡಪಾಲು ನೀರಿನಲ್ಲಿ ತೇಲಿ ಹೋಗಿದ್ದು ಕೆಲಸಕ್ಕೆ ಬಳಸುತ್ತಿದ್ದ ಜನರೇಟರ್, ನೀರಿನ ಟ್ಯಾಂಕ್, ಟ್ರಾಕ್ಟರ್, ಮಿಕ್ಸರ್ ಮಿಷನ್, ಇತರೆ ಯಂತ್ರೋಪಕರಣಗಳು ನೀರಿನಲ್ಲಿ ಮುಳುಗಿವೆ.

1982ರಲ್ಲಿ ಸುವರ್ಣಮುಖಿ ನದಿಗೆ ಅಡ್ಡಲಾಗಿ ಕಟ್ಟಿದ್ದ ಈ ಸೇತುವೆ 2022ರ ಸೆ.20 ರಂದು ಈ ಭಾಗದಲ್ಲಿ ಸುರಿದ ಧಾರಾಕಾರ ಮಳೆಗೆ ಕುಸಿದು ಬಿದ್ದು ಸಂಚಾರ ಸಂಪೂರ್ಣ ಸ್ಥಗಿತಗೊಂಡಿತ್ತು. ಅದಾದ ಮರುದಿನವೇ ಅಂದಿನ ಶಾಸಕಿ ಪೂರ್ಣಿಮಾ ಶ್ರೀನಿವಾಸ್ ವಿಧಾನಸಭೆ ಅಧಿವೇಶನದಲ್ಲಿ ಈ ವಿಷಯವನ್ನು ಪ್ರಸ್ಥಾಪಿಸಿ ಸೇತುವೆ ಬಿದ್ದ ಬಗ್ಗೆ ಸದನದ ಗಮನ ಸೆಳೆದಿದ್ದರು. ಹೊಸ ಸೇತುವೆ ನಿರ್ಮಾಣಕ್ಕೆ ಒತ್ತಾಯಿಸಿದ್ದರು.ಜೊತೆಗೆ ಅನೇಕ ಬಾರಿ ಸೇತುವೆ ನಿರ್ಮಾಣಕ್ಕಾಗಿ ಗ್ರಾಮಸ್ಥರು ಮನವಿ ಮಾಡಿದ್ದರು. ಆದರೂ ಸಹ ಎರಡು ವರ್ಷಗಳ ಕಾಲ ಈ ಸೇತುವೆ ನಿರ್ಮಾಣ ನೆನೆಗುದಿಗೆ ಬಿದ್ದಿತ್ತು.

ಗ್ರಾಮಸ್ಥರ ಒತ್ತಾಯದಿಂದ ಜಿಲ್ಲಾ ಉಸ್ತುವಾರಿ ಸಚಿವ ಡಿ.ಸುಧಾಕರ್ ಸ್ಥಳಕ್ಕೆ ಭೇಟಿ ನೀಡಿ ಪರಿಶೀಲನೆ ನಡೆಸಿದ್ದರು.ಅಧಿಕಾರಿಗಳು ಎರಡು ಬಾರಿ ಸರ್ಕಾರಕ್ಕೆ ಪ್ರಸ್ತಾವನೆ ಸಲ್ಲಿಸಿದ್ದರೂ ಪ್ರಯೋಜನ ಆಗಿರಲಿಲ್ಲ. ಆದರೆ ಸೇತುವೆ ಪುನಃನಿರ್ಮಾಣವನ್ನು ಗಂಭೀರವಾಗಿ ಪರಿಗಣಿಸಿದ ಜಿಲ್ಲಾ ಉಸ್ತುವಾರಿ ಸಚಿವರು ಒತ್ತಡ ಹಾಕಿ ಪ್ರಸ್ತಾವನೆ ಅನುಮೋದಿಸಿಕೊಂಡು ಅನುದಾನ ಬಿಡುಗಡೆಗೊಳಿಸಿದರು. ಅಂತಿಮವಾಗಿ ಸುಮಾರು 9.75 ಕೋಟಿ ವೆಚ್ಚದ ಚೆಕ್ ಡ್ಯಾಂ ಕಂ ಸೇತುವೆ ನಿರ್ಮಾಣ ಕಾಮಗಾರಿಗೆ ಟೆಂಡರ್ ಕರೆದು ಕಳೆದ ಜೂನ್ ಆರಂಭದಲ್ಲಿ ಕಾಮಗಾರಿಗೆ ಚಾಲನೆ ನೀಡಲಾಗಿತ್ತು. ಅತಿ ತುರ್ತಾಗಿ ಕಾಮಗಾರಿ ಪೂರ್ಣಗೊಳಿಸಲು ಸೂಚನೆಯನ್ನೂ ನೀಡಲಾಗಿತ್ತು.ಅದರಂತೆ ಕಾಮಗಾರಿ ವೇಗವಾಗಿ ನಡೆದಿದ್ದು ಸೇತುವೆಯ ಕೆಳಭಾಗದಲ್ಲಿ 13 ವಿಂಟೋಗಳಿದ್ದು ಅದರಲ್ಲಿ ಈಗಾಗಲೇ 11 ರ ಕಾಮಗಾರಿ ಮುಗಿದಿದೆ. ಉಳಿದ ಎರಡು ವಿಂಟೋಗಳ ಕಾಮಗಾರಿ ಮಾತ್ರ ಬಾಕಿಯಿದೆ. ತ್ವರಿತಗತಿಯಲ್ಲಿ ಕಾಮಗಾರಿ ನಡೆಯುತ್ತಿರುವ ಈ ವೇಳೆಯಲ್ಲಿ ಮಳೆ ಸುರಿದು ಸ್ವಲ್ವ ಕಾಮಗಾರಿಯಲ್ಲಿ ಅಸ್ಥವ್ಯಸ್ಥ ಉಂಟಾಗಿದೆ.

ಈ ನೂತನ ಸೇತುವೆ ನಿರ್ಮಾಣವಾಗುವುದರಿಂದ ಮ್ಯಾದನಹೊಳೆ, ಸಮುದ್ರದಹಳ್ಳಿ, ಕೋಡಿಹಳ್ಳಿ, ವಿಕೆಗುಡ್ಡ ಸೇರಿದಂತೆ ಸುಮಾರು ಹತ್ತಾರು ಹಳ್ಳಿಗಳಿಗೆ ಹಾಗೂ ಶಿರಾ ತಾಲೂಕಿಗೆ ಸುಗಮವಾಗಿ ಸಾರಿಗೆ ಸಂಚಾರಕ್ಕೆ ಅನುಕೂಲಕರವಾಗಲಿದೆ. ಅಲ್ಲದೇ ಸೇತುವೆಯಿಲ್ಲದೆ ಸುಮಾರು 8-10 ಕಿಮೀ ಸುತ್ತಿ ಬಳಸಿ ಓಡಾಡುತ್ತಿರುವ ಸಾರ್ವಜನಿಕರು, ಶಾಲಾ ಮಕ್ಕಳಿಗೆ ಹೆಚ್ಚು ಸಹಕಾರವಾಗಲಿದೆ ಎನ್ನುತ್ತಾರೆ ಗ್ರಾಮಸ್ಥರು.

ಸಣ್ಣ ನೀರಾವರಿ ಇಲಾಖೆ ಸಹಾಯಕ ಅಭಿಯಂತರ ಪರಶುರಾಮ್ ಪ್ರತಿಕ್ರಿಯಿಸಿ ಮಳೆಯಿಂದ ಯಾವುದೇ ವಸ್ತುಗಳು ಕೊಚ್ಚಿಹೋಗಿಲ್ಲ. ಸಿಮೆಂಟ್ ನೀರಿನಲ್ಲಿ ನೆನೆದು ಗಟ್ಟಿಯಾಗಿದೆ. ಕಳೆದ ಮೂರ‍್ನಾಲ್ಕು ದಿನದ ಹಿಂದೆ ಮಳೆಯ ಮನ್ಸೂಚನೆ ಇದ್ದ ಹಿನ್ನೆಲೆಯಲ್ಲಿ ಕೆಲವು ಮುಂಜಾಗ್ರತೆ ಕ್ರಮ ಕೈಗೊಳ್ಳಲಾಗಿತ್ತು. ಮಳೆಯಿಂದ ಒಂದು ವಾರಗಳ ಕಾಲ ಕಾಮಗಾರಿ ಸ್ಥಗಿತಗೊಳ್ಳಲಿದೆ. ಮಳೆ ನಿಂತರೆ ಒಂದು ತಿಂಗಳಲ್ಲಿ ಕಾಮಗಾರಿ ಪೂರ್ಣಗೊಳ್ಳಲಿದೆ ಎಂದರು.

PREV

Recommended Stories

ರೇಣುಕಾಂಬೆ ದರ್ಶನಕ್ಕೆ ಬಂದಿದ್ದಾಗ ಮಗುವಿಗೆ ಜನ್ಮ ನೀಡಿದ ಅವಿವಾಹಿತೆ
ರಾಜ್ಯದಲ್ಲಿ ಆ.15ರ ಬಳಿಕ ಭಾರೀ ಮಳೆ