ಹಲಗೂರು: ಜಿಟಿ ಜಿಟಿ ಮಳೆಗೆ ಜನ ಹೈರಾಣ...!

KannadaprabhaNewsNetwork |  
Published : Aug 11, 2025, 12:30 AM IST
10ಕೆಎಂಎನ್ ಡಿ26,27 | Kannada Prabha

ಸಾರಾಂಶ

ನಿರಂತರವಾಗಿ ಸುರಿಯುತ್ತಿರುವ ಮಳೆಯಿಂದಾಗಿ ಹಲಗೂರು ಹೋಬಳಿಯಲ್ಲಿ ಸಂತೆ ವ್ಯಾಪಾರಸ್ಥರು, ದಿನ ನಿತ್ಯದ ಕೆಲಸಗಾರರಿಗೆ ಸಾಕಷ್ಟು ಸಮಸ್ಯೆಗಳು ಅನುಭವಿಸುವಂತಾಯಿತು. ಶನಿವಾರ ಸಂಜೆ ಪ್ರಾರಂಭವಾದ ಮಳೆ ಬೆಳಗಿನ ಜಾವಾದವರಿಗೂ ಬೀಳುತ್ತಿತ್ತು. ಹಾಲು ಹಾಗೂ ಪತ್ರಿಕೆ ಸರಬರಾಜು ಮಾಡುವವರಿಗೆ ತೀವ್ರ ತೊಂದರೆ ಎದುರಾಯಿತು.

ಎಚ್.ಎನ್ .ಪ್ರಸಾದ್

ಕನ್ನಡಪ್ರಭ ವಾರ್ತೆ ಹಲಗೂರು

ನಿರಂತರವಾಗಿ ಸುರಿಯುತ್ತಿರುವ ಮಳೆಯಿಂದಾಗಿ ಹೋಬಳಿಯಲ್ಲಿ ಸಂತೆ ವ್ಯಾಪಾರಸ್ಥರು, ದಿನ ನಿತ್ಯದ ಕೆಲಸಗಾರರಿಗೆ ಸಾಕಷ್ಟು ಸಮಸ್ಯೆಗಳು ಅನುಭವಿಸುವಂತಾಯಿತು.

ಶನಿವಾರ ಸಂಜೆ ಪ್ರಾರಂಭವಾದ ಮಳೆ ಬೆಳಗಿನ ಜಾವಾದವರಿಗೂ ಬೀಳುತ್ತಿತ್ತು. ಹಾಲು ಹಾಗೂ ಪತ್ರಿಕೆ ಸರಬರಾಜು ಮಾಡುವವರಿಗೆ ತೀವ್ರ ತೊಂದರೆ ಎದುರಾಯಿತು. ಮತ್ತೆ ಭಾನುವಾರ ಮಧ್ಯಾಹ್ನ ಪ್ರಾರಂಭವಾದ ಮಳೆ ರಾತ್ರಿ 8 ಗಂಟೆಯಾದರೂ ಬೀಳುತ್ತಲೇ ಇದ್ದ ಪರಿಣಾಮ ಪಟ್ಟಣ ಪ್ರದೇಶಕ್ಕೆ ಹೋಗುವವರಿಗೂ ಹಾಗೂ ಸಂತೆಯಲ್ಲಿ ವ್ಯಾಪಾರ ವಹಿವಾಟು ನಡೆಸುವರು ತುಂಬಾ ತೊಂದರೆ ಎದುರಾಯಿತು.

ಶುಕ್ರವಾರ ವರಲಕ್ಷ್ಮಿ ಹಬ್ಬ ಹಾಗೂ ಎರಡನೇ ಶನಿವಾರ ಮತ್ತು ಭಾನುವಾರ ರಜಾದಿನದ ಪ್ರಯುಕ್ತ ಬೆಂಗಳೂರು ಪಟ್ಟಣದಿಂದ ತಮ್ಮ ಸ್ವಗ್ರಾಮಗಳಿಗೆ ಬಂದಿದ್ದವರು ಸೋಮವಾರ ಕೆಲಸಕ್ಕೆ ಹೋಗುವುದಕ್ಕಾಗಿ ಹಲಗೂರು ಬಸ್ ನಿಲ್ದಾಣದಲ್ಲಿ ಕಾದು ಕಾದು ಸಕಾಲಕ್ಕೆ ಬಸ್ಸುಗಳು ಬಾರದೆ ಪರಿಣಾಮ ಜನರು ತುಂಬಿದ್ದ ಬಸ್ಸಿನಲ್ಲಿ ನಿಂತು ಕೊಂಡೆ ಪ್ರಯಾಣ ಮಾಡುತ್ತಿದ್ದ ದೃಶ್ಯ ಕಂಡು ಬಂದಿತ್ತು.

ಜಿಟಿ ಜಿಟಿ ಮಳೆಯಿಂದಾಗಿ ಪ್ರತಿ ಭಾನುವಾರ ಹಲಗೂರಿನಲ್ಲಿ ನಡೆಯುವ ಸಂತೆಗೆ ಗ್ರಾಮೀಣ ಪ್ರದೇಶದಿಂದ ಬರಬೇಕಾಗಿದ್ದ ವ್ಯಾಪಾರಸ್ಥರು ಬರಲಿಲ್ಲ. ಪರಿಣಾಮ ಹಾಗೂ ಬಂಡವಾಳ ಹಾಕಿ ವ್ಯಾಪಾರ ನಡೆಯುತ್ತದೆ ಎಂದು ದೂರ ದೂರ ಊರುಗಳಿಂದ ತರಕಾರಿಗಳನ್ನು ತಂದು ವ್ಯಾಪಾರಕ್ಕಾಗಿ ಕಾಯುತ್ತಿದ್ದವರಿಗೆ ವ್ಯಾಪಾರ ಇಲ್ಲದೆ ತುಂಬಾ ನಷ್ಟಕ್ಕೆ ಒಳಗಾದರು.

ಮಳೆಬಿದ್ದ ಪರಿಣಾಮ ಸಂತೆ ನಡೆಯುವ ಸ್ಥಳದಲ್ಲಿ ನೀರು ನಿಂತು ಕೇಸರಿನಲ್ಲೂ ಸಹ ತಮಗೆ ಬೇಕಾದ ತರಕಾರಿಗಳನ್ನು ಕೊಂಡುಕೊಳ್ಳಲು ಛತ್ರಿಯನ್ನು ಹಿಡಿದು ವ್ಯಾಪಾರ ಮಾಡುತ್ತಿದ್ದು ಕಂಡುಬಂದಿತು. ಸಂಜೆ ವೇಳೆ ಫುಟ್ ಪಾತ್‌ನಲ್ಲಿ ವ್ಯಾಪಾರ ಮಾಡುವವರು, ಅಂಗಡಿ ಮುಂಗಟ್ಟಿನವರು ವ್ಯಾಪಾರವಿಲ್ಲದೆ ಸಂಜೆ ಬೇಗ ಬಾಗಿಲು ಹಾಕಿಕೊಂಡು ಮನೆ ಸೇರುವಂತಾಯಿತು.

ಹಲಗೂರು ದೊಡ್ಡ ಹೋಬಳಿ ಕೇಂದ್ರ. ಸುತ್ತಮುತ್ತಲಿನ ಗ್ರಾಮಸ್ಥರು ಯಾವುದೇ ವ್ಯಾಪಾರ ವಹಿವಾಟಿಗೆ ಹಲಗೂರಿಗೆ ಬರಬೇಕು. ಪ್ರತಿ ಭಾನುವಾರ ಸಂತೆ ನಡೆಯುವುದರಿಂದ ಹೆಚ್ಚು ಜನರು ಬರುತ್ತಾರೆ. ಮಳೆಬಿದ್ದ ದಿವಸಗಳಲ್ಲಿ ಸಂತೆ ಒಳಗೆ ಕಾಲಿಡುವುದಕ್ಕೂ ಸಹ ಆಗುವುದಿಲ್ಲ.

ಚನ್ನಪಟ್ಟಣ ರಸ್ತೆಯಿಂದ ಹರಿದು ಬರುವ ನೀರು ಸಂತೆ ನಡೆಯುವ ಸ್ಥಳಕ್ಕೆ ನುಗ್ಗುತ್ತದೆ. ಆ ಸ್ಥಳದಲ್ಲಿ ವ್ಯಾಪಾರ ಮಾಡುವುದಕ್ಕೆ ತುಂಬಾ ತೊಂದರೆಯಾಗುತ್ತಿದೆ. ಸಂಬಂಧಪಟ್ಟ ಅಧಿಕಾರಿಗಳು ಇದರ ಬಗ್ಗೆ ಗಮನ ಹರಿಸಿ ವ್ಯಾಪಾರಸ್ಥರಿಗೆ ಅನುಕೂಲ ಮಾಡಿಕೊಡಲು ಕ್ರಮ ವಹಿಸಬೇಕು ಎಂದು ಅಲ್ಲಿನ ವ್ಯಾಪಾರಸ್ಥ ಬೇಕ್ರಿ ಪುಟ್ಟರಾಜು ಮನವಿ ಮಾಡಿದರು.

PREV

Recommended Stories

ರೇಣುಕಾಂಬೆ ದರ್ಶನಕ್ಕೆ ಬಂದಿದ್ದಾಗ ಮಗುವಿಗೆ ಜನ್ಮ ನೀಡಿದ ಅವಿವಾಹಿತೆ
ರಾಜ್ಯದಲ್ಲಿ ಆ.15ರ ಬಳಿಕ ಭಾರೀ ಮಳೆ