ಜಯಘೋಷಗಳ ನಡುವೆ ಅಗ್ನಿಕೊಂಡ ಹಾಯ್ದ ಕರಗಧಾರಕ

KannadaprabhaNewsNetwork | Published : Jul 25, 2024 1:21 AM

ಸಾರಾಂಶ

ರಾಮನಗರ: ನಗರದ ಚಾಮುಂಡೇಶ್ವರಿ ಅಮ್ಮನವರ ಕರಗ ಮಹೋತ್ಸವದ ಅಂಗವಾಗಿ ನಡೆದ ಅಗ್ನಿಕೊಂಡೋತ್ಸವದಲ್ಲಿ ಅಪಾರ ಸಂಖ್ಯೆಯ ಭಕ್ತರ ಜಯಘೋಷಗಳ ನಡುವೆ ಕರಗಧಾರಕ ದೇವಿ ಪ್ರಸಾದ್ ಅವರು ಅಗ್ನಿಕೊಂಡ ಹಾಯ್ದರು.

ರಾಮನಗರ: ನಗರದ ಚಾಮುಂಡೇಶ್ವರಿ ಅಮ್ಮನವರ ಕರಗ ಮಹೋತ್ಸವದ ಅಂಗವಾಗಿ ನಡೆದ ಅಗ್ನಿಕೊಂಡೋತ್ಸವದಲ್ಲಿ ಅಪಾರ ಸಂಖ್ಯೆಯ ಭಕ್ತರ ಜಯಘೋಷಗಳ ನಡುವೆ ಕರಗಧಾರಕ ದೇವಿ ಪ್ರಸಾದ್ ಅವರು ಅಗ್ನಿಕೊಂಡ ಹಾಯ್ದರು.

ಮಂಗಳವಾರ ರಾತ್ರಿ ನಗರದ ಸಿಂಗ್ರಾಬೋವಿದೊಡ್ಡಿಯಲ್ಲಿರುವ ಚಾಮುಂಡೇಶ್ವರಿ ದೇವಸ್ಥಾನದಲ್ಲಿ ಕರಗಧಾರಣೆ ಮಾಡಿ, ನಂತರ ದ್ಯಾವರಸೇಗೌಡನದೊಡ್ಡಿ, ಚಾಮುಂಡಿಪುರ, ವಿನಾಯಕನ ನಗರ, ಅಂಚೇಕೆಂಪೇಗೌಡನ ದೊಡ್ಡಿ, ಪೊಲೀಸ್ ಕ್ವಾಟ್ರಸ್, ಶೆಟ್ಟಿಹಳ್ಳಿ, ಮಾರ್ಗವಾಗಿ ಕುಂಬಾರ ಬೀದಿ, ಮೇಗಳ ಪೇಟೆ, ಹೂವಾಡಿಗರ ಬೀದಿ, ತಿಗಳರ ಬೀದಿ, ಐಜೂರು, ಮಲ್ಲೇಶ್ವರ ರಸ್ತೆ, ಹನುಮಂತ ನಗರ ಅಗ್ರಹಾರ, ಚಾಮುಂಡೇಶ್ವರಿ ಬಡಾವಣೆ, ಶೆಟ್ಟಿ ಬಲಜಿಗರ ಬೀದಿ, ಗಾಂಧಿ ನಗರ, ಕಾಯಿಸೊಪ್ಪಿನ ಬೀದಿ, ಎಂ.ಜಿ ರಸ್ತೆ ನಂತರ ರಾಜಬೀದಿ ಮಾರ್ಗವಾಗಿ ಬಂದ ಕರಗ ಬುಧವಾರ ಬೆಳಿಗ್ಗೆ 8 ಗಂಟೆಗೆ ಅಗ್ನಿಕೊಂಡ ಪ್ರವೇಶ ಮಾಡಿತು.

ಕರಗ ಸಂಚರಿಸುವ ದಾರಿಗಳಲ್ಲಿ ಭಕ್ತರು ಹೂವಿನ ನೆಲ ಹಾಸನ್ನು ನಿರ್ಮಿಸಿ ಕರಗವನ್ನು ಬರಮಾಡಿಕೊಂಡರು. ಅಗ್ನಿಕೊಂಡದ ಬಳಿ ಪೋಲಿಸ್ ಭದ್ರತೆಯನ್ನು ಒದಗಿಸಲಾಗಿತ್ತು. ಅಗ್ನಿಕೊಂಡ ಪ್ರವೇಶದ ನಂತರ ಭಕ್ತರು ಕೊಂಡಕ್ಕೆ ಎಳ್ಳು ಮತ್ತು ಉಪ್ಪನ್ನು ಹಾಕುವ ಮೂಲಕ ಹರಕೆಯನ್ನು ತೀರಿಸಿಕೊಂಡರು. ಉತ್ಸವ ಮೂರ್ತಿಯನ್ನು ನಗರದ ಪ್ರಮುಖ ಬೀದಿಗಳಲ್ಲಿ ಮೆರವಣಿಗೆ ಮಾಡಲಾಯಿತು. ದೇವಾಲಯದ ಆವರಣದಲ್ಲಿ ಸಿಡಿ ಉತ್ಸವ ನಡೆಯಿತು. ಸಾವಿರಾರು ಭಕ್ತರು ಉತ್ಸವದಲ್ಲಿ ಪಾಲ್ಗೊಂಡಿದ್ದರು.

ಚಾಮುಂಡೇಶ್ವರಿ ಕರಗದ ಜತೆಗೆ, ಬಿಸಿಲುಮಾರಮ್ಮ, ಮಗ್ಗದಕೆರೆ ಮಾರಮ್ಮ, ಮುತ್ತುಮಾರಮ್ಮ, ಭಂಡಾರಮ್ಮ, ಕೊಂಕಾಣಿದೊಡ್ಡಿ, ಚಾಮುಂಡಿಪುರ, ಶೆಟ್ಟಿಹಳ್ಳಿ ಬೀದಿ ಆದಿಶಕ್ತಿ, ಹುಲಿಯೂರಮ್ಮ ಅಮ್ಮನವರ ಹೂವಿನ ಕರಗ ಮಹೋತ್ಸವವೂ ವಿಜೃಂಭಣೆಯಿಂದ ನಡೆಯಿತು. ಒಟ್ಟಾರೆ ಭಕ್ತರ ಜಯಘೋಷಣೆಯ ನಡುವೆ ಕರಗ ಮಹೋತ್ಸವ ಸಂಪನ್ನಗೊಂಡಿತು.

ಮಳೆಯ ಸಿಂಚನ:

ಕರಗ ಮಹೋತ್ಸವ ಕಣ್ತುಂಬಿಕೊಳ್ಳಲು ಜಿಲ್ಲೆ ಸೇರಿದಂತೆ ಇತರೆ ಕಡೆಯಿಂದ ಸಾಕಷ್ಟು ಜನತೆ ಆಗಮಿಸಿದರು. ಮಂಗಳವಾರ ಇಡೀ ರಾತ್ರಿ ದೇವಾಲಯಗಳು ತೆರೆದಿತ್ತು. ಇನ್ನು ಭಕ್ತಿಯಲ್ಲಿ ಮಿಂದಿದ್ದ ಜನತೆಗೆ ಆಗೊಮ್ಮೆ ಈಗೊಮ್ಮೆ ಸುರಿದ ಮಳೆಯು ಸಾಕಷ್ಟು ತೊಂದರೆಯ್ನನುಂಟು ಮಾಡಿತು. ಹಾಗಾಗಿ ಕರಗಗಳ ನಗರ ಸಂಚಾರಕ್ಕೆ ಕೆಲ ವೇಳೆ ಕಷ್ಟ ಉಂಟಾಯಿತು.

24ಕೆಆರ್ ಎಂಎನ್ 4.ಜೆಪಿಜಿ

ರಾಮನಗರದ ಚಾಮುಂಡೇಶ್ವರಿ ಅಮ್ಮನವರ ಕರಗ ಮಹೋತ್ಸವದಲ್ಲಿ ಅಪಾರ ಸಂಖ್ಯೆಯ ಭಕ್ತರ ಜಯಘೋಷಗಳ ನಡುವೆ ಕರಗಧಾರಕ ದೇವಿ ಪ್ರಸಾದ್ ಅಗ್ನಿಕೊಂಡ ಹಾಯ್ದರು.

Share this article