ಸಹಕಾರ ಕ್ಷೇತ್ರಕ್ಕೆ ಅಮಿತ್ ಶಾ ಹೊಸ ಚೈತನ್ಯ

KannadaprabhaNewsNetwork |  
Published : Sep 20, 2026, 04:00 AM IST
ಚಿಕ್ಕೋಡಿ | Kannada Prabha

ಸಾರಾಂಶ

ದೇಶದ ಅಭಿವೃದ್ಧಿಯಲ್ಲಿ ಸಹಕಾರ ಕ್ಷೇತ್ರದ ಪಾತ್ರ ಮಹತ್ವದ್ದಾಗಿದೆ. ಪ್ರಧಾನಿ ನರೇಂದ್ರ ಮೋದಿಯವರು ಪ್ರತ್ಯೇಕ ಸಹಕಾರ ಸಚಿವಾಲಯ ರಚಿಸಿದ ಬಳಿಕ ಈ ಕ್ಷೇತ್ರಕ್ಕೆ ಹೆಚ್ಚಿನ ಉತ್ತೇಜನ ದೊರೆತಿದೆ. ಮೊದಲ ಕೇಂದ್ರ ಸಹಕಾರ ಸಚಿವ ಅಮಿತ್ ಶಾ ಅವರು ಸಹಕಾರ ಕ್ಷೇತ್ರವನ್ನು ಬಲಪಡಿಸಿ, ಜನಪರವಾಗಿಸಲು ಹಲವು ಮಹತ್ವದ ನಿರ್ಧಾರಗಳನ್ನು ಕೈಗೊಂಡಿದ್ದಾರೆ ಎಂದು ಕೇಂದ್ರ ಸಹಕಾರ ರಾಜ್ಯ ಸಚಿವ ಮುರಳೀಧರ ಮೊಹೋಳ ಹೇಳಿದರು.

ಕನ್ನಡಪ್ರಭ ವಾರ್ತೆ ಚಿಕ್ಕೋಡಿ

ದೇಶದ ಅಭಿವೃದ್ಧಿಯಲ್ಲಿ ಸಹಕಾರ ಕ್ಷೇತ್ರದ ಪಾತ್ರ ಮಹತ್ವದ್ದಾಗಿದೆ. ಪ್ರಧಾನಿ ನರೇಂದ್ರ ಮೋದಿಯವರು ಪ್ರತ್ಯೇಕ ಸಹಕಾರ ಸಚಿವಾಲಯ ರಚಿಸಿದ ಬಳಿಕ ಈ ಕ್ಷೇತ್ರಕ್ಕೆ ಹೆಚ್ಚಿನ ಉತ್ತೇಜನ ದೊರೆತಿದೆ. ಮೊದಲ ಕೇಂದ್ರ ಸಹಕಾರ ಸಚಿವ ಅಮಿತ್ ಶಾ ಅವರು ಸಹಕಾರ ಕ್ಷೇತ್ರವನ್ನು ಬಲಪಡಿಸಿ, ಜನಪರವಾಗಿಸಲು ಹಲವು ಮಹತ್ವದ ನಿರ್ಧಾರಗಳನ್ನು ಕೈಗೊಂಡಿದ್ದಾರೆ ಎಂದು ಕೇಂದ್ರ ಸಹಕಾರ ರಾಜ್ಯ ಸಚಿವ ಮುರಳೀಧರ ಮೊಹೋಳ ಹೇಳಿದರು.

ಯಕ್ಸಂಬಾದ ಶ್ರೀ ಬೀರೇಶ್ವರ ಕೋ-ಆಪರೇಟಿವ್ ಕ್ರೆಡಿಟ್ ಸೊಸೈಟಿ ಲಿಮಿಟೆಡ್‌ (ಬಹುರಾಜ್ಯ) ನೂತನ ಆಡಳಿತ ಮುಖ್ಯ ಕಚೇರಿ ಉದ್ಘಾಟಿಸಿ ಮಾತನಾಡಿದ ಅವರು, ದೇಶದಲ್ಲಿ 8.5 ಲಕ್ಷಕ್ಕೂ ಅಧಿಕ ಸಹಕಾರಿ ಸಂಸ್ಥೆಗಳಿದ್ದು, 32 ಕೋಟಿಗೂ ಹೆಚ್ಚು ಜನರು ಸಹಕಾರ ಕ್ಷೇತ್ರದೊಂದಿಗೆ ಸಂಪರ್ಕ ಹೊಂದಿದ್ದಾರೆ. ಪ್ರತ್ಯೇಕ ಸಹಕಾರ ಸಚಿವಾಲಯ ಸ್ಥಾಪನೆಯಾದ ಬಳಿಕ ಅಮಿತ್ ಶಾ ಅವರು ಸಹಕಾರ ಕ್ಷೇತ್ರದ ಬಲವರ್ಧನೆಗೆ ಸುಮಾರು 160 ಮಹತ್ವದ ನಿರ್ಧಾರಗಳನ್ನು ಕೈಗೊಂಡಿದ್ದಾರೆ. ಗ್ರಾಮೀಣ ಭಾಗದ 80 ಸಾವಿರ ಸೊಸೈಟಿಗಳನ್ನು ಸಹಕಾರದ ಜಾಲದೊಂದಿಗೆ ಸಂಪರ್ಕಿಸಲಾಗಿದೆ ಎಂದರು.ಸಹಕಾರಿ ಸಂಸ್ಥೆಗಳ ಮೂಲಕ ಯುವಕರಿಗೆ ಉದ್ಯೋಗಾವಕಾಶಗಳು ದೊರೆಯುತ್ತಿವೆ. ಎನ್‌ಸಿಡಿಸಿ ಮೂಲಕ 2014ರವರೆಗೆ ಸಹಕಾರ ಕ್ಷೇತ್ರಕ್ಕೆ ₹45 ಸಾವಿರ ಕೋಟಿ ವೆಚ್ಚ ಮಾಡಲಾಗಿತ್ತು. ನಂತರದ 12 ವರ್ಷಗಳಲ್ಲಿ ಕೇಂದ್ರ ಸರ್ಕಾರ ₹4.5 ಲಕ್ಷ ಕೋಟಿ ಒದಗಿಸಿದೆ ಎಂದು ತಿಳಿಸಿದರು.ಯಕ್ಸಂಬಾದ ಗ್ರಾಮೀಣ ಭಾಗದಿಂದ ಆರಂಭವಾದ ಬೀರೇಶ್ವರ ಸಂಸ್ಥೆ ಇಂದು ಕರ್ನಾಟಕ, ಮಹಾರಾಷ್ಟ್ರ ಹಾಗೂ ಗೋವಾ ರಾಜ್ಯಗಳಲ್ಲಿ ಸೇವೆ ನೀಡುತ್ತಿದ್ದು, ಸುಮಾರು ₹10 ಸಾವಿರ ಕೋಟಿ ವಹಿವಾಟು ನಡೆಸುವ ಸಂಸ್ಥೆಯಾಗಿ ಬೆಳೆದಿದೆ. ಅಣ್ಣಾಸಾಹೇಬ ಜೊಲ್ಲೆ ಹಾಗೂ ಶಶಿಕಲಾ ಜೊಲ್ಲೆ ನೇತೃತ್ವದಲ್ಲಿ ಸಂಸ್ಥೆ ಈ ಪ್ರಗತಿ ಸಾಧಿಸಿದೆ. ಮುಂದಿನ ದಿನಗಳಲ್ಲಿ ಸಂಸ್ಥೆ ದೇಶದಾದ್ಯಂತ ವಿಸ್ತರಿಸಬೇಕು. ದೇಶದ ಸಹಕಾರಿ ಸಂಸ್ಥೆಗಳ ಪ್ರಮುಖ ಒಕ್ಕೂಟವಾದ ಎನ್‌ಸಿಯುಐನಲ್ಲಿ ಅಣ್ಣಾಸಾಹೇಬ ಜೊಲ್ಲೆ ಆಯ್ಕೆಯಾಗಿರುವುದು ಕರ್ನಾಟಕದ ಸಹಕಾರ ಕ್ಷೇತ್ರದ ಬೆಳವಣಿಗೆಗೆ ಸಹಕಾರಿಯಾಗಲಿದೆ. ಅಣ್ಣಾಸಾಹೇಬ ಜೊಲ್ಲೆ ಹಾಗೂ ಶಶಿಕಲಾ ಜೊಲ್ಲೆ ಕೇವಲ ಸಹಕಾರಿ ಕ್ಷೇತ್ರ ಸೀಮಿತವಾಗಿರದೇ ಶಿಕ್ಷಣ, ಆರೋಗ್ಯ, ರಾಜಕೀಯ ಕ್ಷೇತ್ರದಲ್ಲಿ ಸಾಕಷ್ಟು ಕೆಲಸ ಮಾಡಿದ್ದು, ಜನರಿಗೆ ಹತ್ತಿರವಾಗಲು ಅವರ ಜನಪರ ಕಾರ್ಯಗಳೇ ಕಾರಣ ಎಂದರು.ಕನ್ಹೇರಿ ಮಠದ ಅದೃಶ್ಯ ಕಾಡಸಿದ್ದೇಶ್ವರ ಸ್ವಾಮೀಜಿ ಮಾತನಾಡಿ, ಅಣ್ಣಾಸಾಹೇಬ ಜೊಲ್ಲೆ ಹಾಗೂ ಶಶಿಕಲಾ ಜೊಲ್ಲೆ ದಂಪತಿ ಸಹಕಾರ ಕ್ಷೇತ್ರದ ಮೂಲಕ ಸಮಾಜಮುಖಿ ಕಾರ್ಯಗಳನ್ನು ಮಾಡುತ್ತಿದ್ದಾರೆ. ಕ್ರೀಡೆ, ಸಂಸ್ಕೃತಿ, ಶಿಕ್ಷಣ ಹಾಗೂ ಆರೋಗ್ಯ ಕ್ಷೇತ್ರಗಳಲ್ಲಿಯೂ ಸಮಾಜದ ಹಿತಕ್ಕೆ ಆದ್ಯತೆ ನೀಡಿ ಸಾವಿರಾರು ಜನರಿಗೆ ಉದ್ಯೋಗ ಕಲ್ಪಿಸಿದ್ದಾರೆ ಎಂದರು.ಬಿಜೆಪಿ ರಾಜ್ಯಾಧ್ಯಕ್ಷ ಬಿ.ವೈ.ವಿಜಯೇಂದ್ರ ಮಾತನಾಡಿ, ಕರ್ನಾಟಕ, ಮಹಾರಾಷ್ಟ್ರ ಹಾಗೂ ಗೋವಾ ರಾಜ್ಯಗಳಲ್ಲಿ ಶ್ರೀ ಬೀರೇಶ್ವರ ಸಹಕಾರಿ ಸಂಸ್ಥೆ ಬಡವರ ಆರ್ಥಿಕ ಶಕ್ತಿಯಾಗಿ ಕಾರ್ಯನಿರ್ವಹಿಸುತ್ತಿದೆ. ಜೊಲ್ಲೆ ದಂಪತಿ ಸಹಕಾರ ಕ್ಷೇತ್ರದ ಮೂಲಕ ಸಮಾಜಮುಖಿ ಕಾರ್ಯ ಮಾಡುತ್ತಿದ್ದು, ಯುವಕರಿಗೆ ಉದ್ಯೋಗಾವಕಾಶ ಕಲ್ಪಿಸುತ್ತಿದ್ದಾರೆ ಎಂದರು.ವಿರೋಧ ಪಕ್ಷದ ನಾಯಕ ಆರ್.ಅಶೋಕ ಮಾತನಾಡಿ, ಗ್ರಾಮೀಣ ಜನರ ಆರ್ಥಿಕ ಪರಿಸ್ಥಿತಿ ಸುಧಾರಿಸುವಲ್ಲಿ ಸಹಕಾರಿ ಸಂಸ್ಥೆಗಳ ಪಾತ್ರ ಪ್ರಮುಖವಾಗಿದೆ. ಪ್ರಧಾನಿ ನರೇಂದ್ರ ಮೋದಿ ಅವರ ಕನಸು ನನಸಾಗಿಸಲು ಸಹಕಾರಿ ಸಂಸ್ಥೆಗಳು ಮತ್ತಷ್ಟು ಪ್ರಗತಿ ಸಾಧಿಸಬೇಕು. ಅಮಿತ್ ಶಾ ಅವರ ಸಹಕಾರ ಕ್ಷೇತ್ರದ ಬೆಳವಣಿಗೆಯ ಪ್ರಯತ್ನಗಳಿಗೆ ಎಲ್ಲರೂ ಕೈಜೋಡಿಸಬೇಕು. ಜೊಲ್ಲೆ ಪರಿವಾರ ಸಹಕಾರಿ ಸಂಸ್ಥೆಗಳನ್ನು ಇನ್ನಷ್ಟು ಬೆಳೆಸಬೇಕು ಎಂದು ಹಾರೈಸಿದರು.ನಿಡಸೋಶಿ ಮಠದ ಡಾ.ಪಂಚಮಶಿವಲಿಂಗೇಶ್ವರ ಸ್ವಾಮೀಜಿ, ರಾಜ್ಯಸಭಾ ಸದಸ್ಯ ಅಜಿತ್ ಗೋಪಚಡೆ, ವಿಧಾನಸಭೆ ವಿರೋಧ ಪಕ್ಷದ ನಾಯಕ ಆರ್.ಅಶೋಕ, ಬಿಜೆಪಿ ರಾಜ್ಯಾಧ್ಯಕ್ಷ ಬಿ.ವೈ.ವಿಜಯೇಂದ್ರ, ರಾಜ್ಯಸಭಾ ಸದಸ್ಯ ಧನಂಜಯ ಮಹಾಡಿಕ್ ಮಾತನಾಡಿದರು.

ವೇದಿಕೆಯಲ್ಲಿ ಬೀರೇಶ್ವರ ಸಂಸ್ಥೆಯ ಸಂಸ್ಥಾಪಕ ಅಣ್ಣಾಸಾಹೇಬ ಜೊಲ್ಲೆ, ಸಮರಜಿತ್ ಘಾಟಗೆ, ದುರ್ಯೋಧನ ಐಹೊಳೆ, ಪಿ.ರಾಜೀವ್, ಶ್ರೀಮಂತ ಪಾಟೀಲ, ಅರವಿಂದ ದೇಶಪಾಂಡೆ, ಸಂಜಯ ಪಾಟೀಲ, ಅನಿಲ್ ಬೆನಕೆ, ಚಂದಗಡ ಶಾಸಕ ಶಿವಾಜಿ ಪಾಟೀಲ, ಅಪ್ಪಾಸಾಹೇಬ ಜೊಲ್ಲೆ, ಜಯಕುಮಾರ ಖೋತ್, ರಾಜೇಂದ್ರ ಪಾಟೀಲ ಸೇರಿದಂತೆ ಗಣ್ಯರು ಉಪಸ್ಥಿತರಿದ್ದರು. ಶಾಸಕಿ ಶಶಿಕಲಾ ಜೊಲ್ಲೆ ಸ್ವಾಗತಿಸಿದರು. ಸಂಸ್ಥೆಯ ಉಪಾಧ್ಯಕ್ಷ ಬಸವಪ್ರಸಾದ ಜೊಲ್ಲೆ ವಂದಿಸಿದರು.

ದೇಶದ ಎಲ್ಲ ರಾಜ್ಯಗಳಲ್ಲೂ ಶಾಖೆಗಳನ್ನು ಆರಂಭಿಸಿ: ಕೇಂದ್ರ ಸಚಿವ ಜೋಶಿ

ಚಿಕ್ಕೋಡಿ: ಬಹುರಾಜ್ಯ ಸಹಕಾರಿ ಸಂಸ್ಥೆಯಾಗಿ ಕಾರ್ಯನಿರ್ವಹಿಸುತ್ತಿರುವ ಬೀರೇಶ್ವರ ಸಂಸ್ಥೆಯು ದೇಶದ ಎಲ್ಲ ರಾಜ್ಯಗಳಲ್ಲೂ ಶಾಖೆಗಳನ್ನು ಆರಂಭಿಸಿ ಜನರಿಗೆ ಆರ್ಥಿಕ ಸೌಲಭ್ಯ ಒದಗಿಸುವಂತಾಗಬೇಕು ಎಂದು ಕೇಂದ್ರ ಸಚಿವ ಪ್ರಲ್ಹಾದ ಜೋಶಿ ಹೇಳಿದರು.ಯಕ್ಸಂಬಾ ಪಟ್ಟಣದಲ್ಲಿ ನಿರ್ಮಿಸಲಾಗಿರುವ ಶ್ರೀ ಬೀರೇಶ್ವರ ಸಹಕಾರಿ ಸಂಸ್ಥೆಯ ನೂತನ ಮುಖ್ಯ ಕಚೇರಿಯನ್ನು ಉದ್ಘಾಟಿಸಿ ಮಾತನಾಡಿದ ಅವರು, ಸಂಸ್ಥೆಯ ಪ್ರಗತಿಯತ್ತ ಗಮನಹರಿಸಿದಾಗ 4.60 ಲಕ್ಷ ಸದಸ್ಯರನ್ನು ಹೊಂದಿರುವ ಬೀರೇಶ್ವರ ಸಂಸ್ಥೆ, ₹5,667 ಕೋಟಿ ಠೇವಣಿ ಸಂಗ್ರಹಿಸಿದ್ದು, ₹4,038 ಕೋಟಿ ಸಾಲ ವಿತರಿಸಿದೆ. ₹51.04 ಕೋಟಿ ನಿವ್ವಳ ಲಾಭ ಗಳಿಸಿದ್ದು, ₹9,700 ಕೋಟಿ ಒಟ್ಟು ವ್ಯವಹಾರ ನಡೆಸುವ ಮೂಲಕ ದಕ್ಷಿಣ ಭಾರತದಲ್ಲಿ ಗಮನಾರ್ಹ ಸಾಧನೆ ಮಾಡಿದೆ. ಗ್ರಾಮೀಣ ಭಾಗದಿಂದ ಆರಂಭವಾಗಿ ಇಷ್ಟೊಂದು ದೊಡ್ಡ ಪ್ರಮಾಣದಲ್ಲಿ ಬೆಳವಣಿಗೆ ಸಾಧಿಸಿರುವುದು ಹೆಮ್ಮೆಯ ವಿಷಯ ಎಂದರು.ಮಹಾರಾಷ್ಟ್ರ ರಾಜ್ಯಸಭೆ ಸದಸ್ಯ ಅಜಿತ ಗೊಪಚಡೆ ಮಾತನಾಡಿ, ಜೊಲ್ಲೆ ದಂಪತಿ ದೂರದೃಷ್ಟಿಯಿಂದ ಹೆಮ್ಮರವಾಗಿ ಬೆಳೆದಿರುವ ಬೀರೇಶ್ವರ ಕೊ ಆಪ್ ಕ್ರೆಡಿಟ್ ಸೊಸೈಟಿ ಬಡ ಜನರ ಆರ್ಥಿಕ ಶಕ್ತಿಯಾಗುವುದರ ಜತೆಗೆ ಸಾವಿರಾರು ಜನರಿಗೆ ಉದ್ಯೋಗ ನೀಡಿದೆ. ಬ್ಯಾಂಕಿಂಗ್, ಸಕ್ಕರೆ ಕಾರ್ಖಾನೆ ಸೇರಿದಂತೆ ಹಕವಾರು ಕ್ಷೇತ್ರದಲ್ಲಿ ಜೊಲ್ಲೆ ಕುಟುಂಬ ತೊಡಗುವ ಮೂಲಕ ಬಡ ಜನರಿಗೆ ಶಕ್ತಿ ನೀಡಿದ್ದಾರೆ. ಸಹಕಾರಿ ಕ್ಷೇತ್ರದ ಮೂಲಕ ಜನರಿಗೆ ಅನುಕೂಲವಾಗುವಂತೆ ಕೆಲಸ ಮಾಡುತ್ತಿದ್ದಾರೆ ಎಂದರು.ಮಹಾರಾಷ್ಟ್ರದ ರಾಜ್ಯಸಭೆ ಸದಸ್ಯ ಧನಂಜಯ ಮಹಡಿಕ ಮಾತನಾಡಿ, ಸಣ್ಣ ಪ್ರಮಾಣದಿಂದ ಬೆಳೆದಿರುವ ಬೀರೇಶ್ವರ ಸಂಸ್ಥೆ ಇಂದು ಕರ್ನಾಟಕ, ಮಹಾರಾಷ್ಟ್ರ ಮತ್ತು ಗೋವಾ ರಾಜ್ಯಗಳಲ್ಲಿ ತನ್ನ ಸೇವೆ ನೀಡುತ್ತಿದೆ. ಸುಸಜ್ಜಿತ ಕಟ್ಟಡ ಇಂದು ಲೋಕಾರ್ಪಣೆಗೊಳುತ್ತಿದ್ದು, ಈ ಮೂಲಕ ಇನಷ್ಟು ಗ್ರಾಹಕರ ಉತ್ತಮ ಸೇವೆ ನೀಡಲಿದೆ. ಜೊಲ್ಲೆ ದಂಪತಿ ಶಿಕ್ಷಣ ಸಂಸ್ಥೆಯ ಮೂಲಕ ಬಡ ವಿದ್ಯಾರ್ಥಿಗಳಿಗೆ ಸಾಕಷ್ಟು ಅನುಕೂಲ ಮಾಡಿದ್ದಾರೆ. ಅನೇಕ ಸಾಮಾಜಿಕ ಕಾರ್ಯಕ್ರಮ ಮಾಡುವ ಮೂಲಕ ಜನರಿಗೆ ಹತ್ತಿರವಾಗಿದ್ದಾರೆ ಎಂದು ಜೊಲ್ಲೆ ಕಾರ್ಯಗಳನ್ನು ಬಣ್ಣಿಸಿದರು.ಕನ್ಹೇರಿ ಅದೃಶ್ಯ ಕಾಡಸಿದ್ದೇಶ್ವರ ಸ್ವಾಮೀಜಿ, ನಿಡಸೋಸಿ ಸ್ವಾಮೀಜಿ, ಬೆಳಗಾವಿ ಸಂಸದ ಜಗದೀಶ ಶೆಟ್ಟರ, ಸಂಸ್ಥಾಪಕ ಅಣ್ಣಾಸಾಹೇಬ ಜೊಲ್ಲೆ, ಶಾಸಕಿ ಶಶಿಕಲಾ ಜೊಲ್ಲೆ, ಬಸವಪ್ರಸಾದ ಜೊಲ್ಲೆ, ಪ್ರಧಾನ ವ್ಯವಸ್ಥಾಪಕ ಬಿ.ಎ.ಗುರವ ಮುಂತಾದವರು ಇದ್ದರು.ಯಕ್ಸಂಬಾದ ಶ್ರೀ ಬೀರೇಶ್ವರ ಕೋ-ಆಪರೇಟಿವ್ ಕ್ರೆಡಿಟ್ ಸೊಸೈಯಿಟಿ ಲಿಮಿಟೆಡ್‌ (ಬಹುರಾಜ್ಯ) ನೂತನ ಮುಖ್ಯ ಕಚೇರಿ ಉದ್ಘಾಟನಾ ಕಾರ್ಯಕ್ರಮಕ್ಕೆ ಕೇಂದ್ರ ಗೃಹ ಹಾಗೂ ಸಹಕಾರ ಸಚಿವ ಅಮಿತ ಶಾ ಅವರು ಆಗಮಿಸಬೇಕಾಗಿತ್ತು. ಆದರೆ, ಆಹಾರ ಕಲುಷಿತದಿಂದ ವಾಂತಿ, ಬೇಧಿ ಕಾಣಿಸಿಕೊಂಡು ಆರೋಗ್ಯದಲ್ಲಿ ಏರುಪೇರಾದ ಹಿನ್ನೆಲೆಯಲ್ಲಿ ವೈದ್ಯರ ಸಲಹೆಯಂತೆ ಕಾರ್ಯಕ್ರಮಕ್ಕೆ ಆಗಮಿಸಲು ಸಾಧ್ಯವಾಗಲಿಲ್ಲ. ಸದ್ಯ ಅವರು ಚೇತರಿಸಿಕೊಳ್ಳುತ್ತಿದ್ದಾರೆ.

-ಪ್ರಲ್ಹಾದ ಜೋಶಿ,

ಕೇಂದ್ರ ಸಚಿವರು.ಸಹಕಾರಿ ಕ್ಷೇತ್ರದಲ್ಲಿ ಇದೊಂದು ಮಹತ್ತರ ದಿನ, ಸಹಕಾರಿ ಕ್ಷೇತ್ರ ಉಳಿಬೇಕೆಂದರೆ ಸಂಸ್ಥೆಗಳು ಜನರ ವಿಶ್ವಾಸ ಗಳಿಸಬೇಕು. ಇಂದು ಸಂಸ್ಥೆಗಳನ್ನು ಸ್ಥಾಪಿಸುವುದು ಸುಲಭ. ಆದರೆ, ಅವುಗಳನ್ನು ಯಶಸ್ವಿಯಾಗಿ ನಡೆಸಿಕೊಂಡು ಹೋಗುವುದು ಮಹತ್ತರ ಕಾರ್ಯವಾಗಿದೆ. ಜೊಲ್ಲೆ ದಂಪತಿ ಮೂರು ರಾಜ್ಯದಲ್ಲಿ ಸಂಘವನ್ನು ಬೆಳೆಸುವ ಮೂಲಕ ಜನರ ವಿಶ್ವಾಸ ಗಳಿಸಿದ್ದಾರೆ‌.

-ಮುರಳೀಧರ ಮೊಹೋಳ, ಕೇಂದ್ರ ಸಹಕಾರ ರಾಜ್ಯ ಸಚಿವರು.

PREV
Get the latest news from across Karnataka (ಕರ್ನಾಟಕ ನ್ಯೂಸ್)— breaking headlines, politics, local developments, crime reports, district updates, civic issues and more. Stay informed with Kannada Prabha’s real‑time Karnataka news coverage.

Recommended Stories

ಪ್ರಜಾ ಸೇವಾ ಆಂದೋಲನದಲ್ಲಿ ಅವ್ಯವಸ್ಥೆ
ಮಕ್ಕಳ ಭವಿಷ್ಯ ರೂಪಿಸುವಲ್ಲಿ ಅಂಗನವಾಡಿಗಳ ಕೊಡುಗೆ ಅಪಾರ: ಯಶವಂತರಾಯಗೌಡ