ಕನ್ನಡಪ್ರಭ ವಾರ್ತೆ ರಬಕವಿ-ಬನಹಟ್ಟಿರಾಜ್ಯ ಸರ್ಕಾರದ ಮಹತ್ವಾಕಾಂಕ್ಷೆಯ ಪ್ರಜಾ ಸೇವಾ ಆಂದೋಲನ ಕಾರ್ಯಕ್ರಮದಲ್ಲಿ ಅರ್ಜಿ ಸ್ವೀಕಾರ ಕೇಂದ್ರಗಳಲ್ಲಿ ಸಿಬ್ಬಂದಿ ಕೊರತೆ ಹಾಗೂ ವ್ಯವಸ್ಥೆಯ ಲೋಪದಿಂದಾಗಿ ಗೊಂದಲದ ವಾತಾವರಣ ನಿರ್ಮಾಣವಾಯಿತು.

ಕನ್ನಡಪ್ರಭ ವಾರ್ತೆ ರಬಕವಿ-ಬನಹಟ್ಟಿ

ರಾಜ್ಯ ಸರ್ಕಾರದ ಮಹತ್ವಾಕಾಂಕ್ಷೆಯ ಪ್ರಜಾ ಸೇವಾ ಆಂದೋಲನ ಕಾರ್ಯಕ್ರಮದಲ್ಲಿ ಅರ್ಜಿ ಸ್ವೀಕಾರ ಕೇಂದ್ರಗಳಲ್ಲಿ ಸಿಬ್ಬಂದಿ ಕೊರತೆ ಹಾಗೂ ವ್ಯವಸ್ಥೆಯ ಲೋಪದಿಂದಾಗಿ ಗೊಂದಲದ ವಾತಾವರಣ ನಿರ್ಮಾಣವಾಯಿತು.

ಬೆಳಗ್ಗೆ 10 ಗಂಟೆಯಿಂದ 18 ಅರ್ಜಿ ಸ್ವೀಕಾರ ಕೇಂದ್ರಗಳಲ್ಲಿ ಕೇವಲ 34 ಅರ್ಜಿಗಳು ಸ್ವೀಕೃತವಾಗಿದ್ದು, ಅರ್ಜಿದಾರರ ಕೂಗಾಟ, ಅಧಿಕಾರಿಗಳೊಂದಿಗೆ ವಾಗ್ವಾದದಿಂದ ಕಾರ್ಯಕ್ರಮ ಕೆಲಕಾಲ ಅವ್ಯವಸ್ಥೆಯ ಆಗರವಾಗಿ ಪರಿಣಮಿಸಿತು.

ಶನಿವಾರ ತೇರದಾಳದ ಗುರುಕುಲ ಆವರಣದಲ್ಲಿರುವ ಜಿನಸೇನಾಚಾರ್ಯ ಸಭಾಮಂಟಪದಲ್ಲಿ ಬಾಗಲಕೋಟೆ ಜಿಲ್ಲಾಡಳಿತ ಹಾಗೂ ಸಂಬಂಧಿತ ಇಲಾಖೆಗಳ ಸಹಯೋಗದಲ್ಲಿ ‘ಬಾಗಿಲಿಗೆ ಬಂತು ಸರ್ಕಾರ, ಸೇವೆಗೆ ಇರಲಿ ಸಹಕಾರ’ ಯೋಜನೆಯಡಿ ಪ್ರಜಾ ಸೇವಾ ಕಾರ್ಯಕ್ರಮ ಆಯೋಜಿಸಲಾಗಿತ್ತು. ನಿಗದಿತ ಸಮಯಕ್ಕಿಂತ ಸುಮಾರು ಎರಡು ಗಂಟೆ ತಡವಾಗಿ ಆರಂಭವಾದ ಕಾರ್ಯಕ್ರಮಕ್ಕೆ ಸಚಿವ ವಿಜಯಾನಂದ ಕಾಶಪ್ಪನವರ ಸಸಿಗೆ ನೀರುಣಿಸುವ ಮೂಲಕ ಚಾಲನೆ ನೀಡಿದರು.

ಎಸಿ ಶ್ವೇತಾ ಬೀಡಕರ ಮಾತನಾಡಿ, ಸರ್ಕಾರದ ವಿವಿಧ ಸೌಲಭ್ಯಗಳನ್ನು ಜನರಿಗೆ ನೇರವಾಗಿ ತಲುಪಿಸುವ ಉದ್ದೇಶದಿಂದ ಜಿಲ್ಲಾಡಳಿತ ತಾಲೂಕು ಕೇಂದ್ರಗಳಲ್ಲಿ ಇಂತಹ ಕಾರ್ಯಕ್ರಮಗಳನ್ನು ಆಯೋಜಿಸುತ್ತಿದೆ. ಗುಳೇದಗುಡ್ಡದಲ್ಲಿ ಮೊದಲ ಕಾರ್ಯಕ್ರಮ ನಡೆದಿದ್ದು, ತೇರದಾಳದಲ್ಲಿ ಎರಡನೇ ಕಾರ್ಯಕ್ರಮ ನಡೆಯುತ್ತಿದೆ ಎಂದು ತಿಳಿಸಿದರು.

ಸಚಿವ ವಿಜಯಾನಂದ ಕಾಶಪ್ಪನವರ ಮಾತನಾಡಿ, ಪ್ರಜಾಸೇವಾ ಆಂದೋಲನದಲ್ಲಿ ವಹಿಸಿದ ಜವಾಬ್ದಾರಿಯನ್ನು ಸಮರ್ಪಕವಾಗಿ ನಿರ್ವಹಿಸದ ಅಧಿಕಾರಿಗಳ ವಿರುದ್ಧ ನೇರ ಕ್ರಮ ಕೈಗೊಳ್ಳಲಾಗುವುದು ಎಂದು ಎಚ್ಚರಿಸಿದರು.

ಸರ್ಕಾರದ ವಿವಿಧ ಯೋಜನೆಗಳು ರೈತರು, ಮಹಿಳೆಯರು, ಪರಿಶಿಷ್ಟ ಜಾತಿ ಮತ್ತು ಪರಿಶಿಷ್ಟ ಪಂಗಡ ಹಾಗೂ ಅಲ್ಪಸಂಖ್ಯಾತರ ಅಭಿವೃದ್ಧಿಗೆ ನೆರವಾಗುತ್ತಿವೆ. ಯುವಶಕ್ತಿಯನ್ನು ಸಂಘಟಿಸುವ ಉದ್ದೇಶದಿಂದ ಪ್ರತಿ ಗ್ರಾಪಂ ವ್ಯಾಪ್ತಿಯ ಯುವಕ ಸಂಘಗಳಿಗೆ ₹5 ಲಕ್ಷ ಅನುದಾನ ನೀಡುವ ಮೂಲಕ ಸಾಂಸ್ಕೃತಿಕ ಹಾಗೂ ಕ್ರೀಡಾ ಚಟುವಟಿಕೆಗಳಿಗೆ ಉತ್ತೇಜನ ನೀಡಲಾಗುತ್ತಿದೆ ಎಂದರು.

ಜಿಲ್ಲೆಯ 8 ತಾಲೂಕುಗಳನ್ನು ಬರಪೀಡಿತ ಎಂದು ಘೋಷಿಸಲಾಗಿದ್ದು, ರಾಜ್ಯದ ಇನ್ನಷ್ಟು ತಾಲೂಕುಗಳನ್ನು ಬರಪೀಡಿತವೆಂದು ಘೋಷಿಸುವ ನಿರೀಕ್ಷೆಯಿದೆ. 11ಎ ಮತ್ತು 11ಬಿ ವ್ಯಾಪ್ತಿಯ ಭೂಮಿಗೆ ಸಂಬಂಧಿಸಿದಂತೆ ಭೂಗ್ಯಾರಂಟಿ ಯೋಜನೆ ಜಾರಿಗೊಳಿಸುವುದಾಗಿ ಸರ್ಕಾರ ಘೋಷಿಸಿದೆ. ಪ್ರತಿ ಜಿಲ್ಲೆಗೆ 50 ಸಾವಿರ ಮನೆಗಳನ್ನು ಒದಗಿಸುವ ಉದ್ದೇಶವಿದೆ ಎಂದು ತಿಳಿಸಿದರು.

ಶಾಸಕ ಸಿದ್ದು ಸವದಿ ಅಧ್ಯಕ್ಷತೆ ವಹಿಸಿದ್ದರು. ಜಿಲ್ಲಾಧಿಕಾರಿ ಎಂ.ಸಂಗಪ್ಪ, ಜಿಪಂ ಸಿಇಒ ಗಜಾನನ ಬಾಲೆ, ಯೋಜನಾಧಿಕಾರಿ ನಾನಾಸಾಹೇಬ ಬಸರಿಗಿಡದ, ಲೆಕ್ಕಾಧಿಕಾರಿ ಸಿದ್ದು ಉಕ್ಕಲಿ, ತಹಶೀಲ್ದಾರ ವಿಜಯಕುಮಾರ ಕಡಕೋಳ, ಗ್ರೇಡ್ 2 ತಹಶೀಲ್ದಾರರಾದ ಎಸ್.ಬಿ.ಕಾಂಬಳೆ, ಸುನೀಲಕುಮಾರ, ಉಪತಹಶೀಲ್ದಾರ ಸಂಗಮೆಶ ಕಾಗಿಯವರ, ಶಿರಸ್ತೇದಾರ ರಾಜಶೇಖರ ಸಾತಿಹಾಳ, ಕಂದಾಯ ನಿರೀಕ್ಷಕ ಪ್ರಕಾಶ ಮಠಪತಿ, ಆಗ್ನಿಶಾಮಕ ದಳದ ಜಿಲ್ಲಾ ಅಧಿಕಾರಿ ಪ್ರಕಾಶ ಪವಾರ, ಸಿಪಿಐ ಆರ್.ಆರ್.ಪಾಟೀಲ, ಪಿಎಸ್ಸೈ ಶಿವಾನಂದ ಸಿಂಗನ್ನವರ ಸೇರಿದಂತೆ ವಿವಿಧ ಇಲಾಖೆಗಳ ಮುಖ್ಯಸ್ಥರಿದ್ದರು.

ವೇದಿಕೆಯತ್ತ ಧಾವಿಸಿದ ಅರ್ಜಿದಾರರು:

ಕಾರ್ಯಕ್ರಮ ಆರಂಭವಾದ ಕೆಲವೇ ಹೊತ್ತಿನಲ್ಲಿ ಹೊಸ ಪಡಿತರ ಚೀಟಿ ಅರ್ಜಿಗಳನ್ನು ಸ್ವೀಕರಿಸುತ್ತಿಲ್ಲ ಎಂದು ಅಧಿಕಾರಿಗಳು ಹೇಳುತ್ತಿದ್ದಾರೆ ಎಂಬ ಆರೋಪ ಕೇಳಿಬಂದಿತು. ಇದರಿಂದ ಕೆಲ ಅರ್ಜಿದಾರರು ಆಕ್ರೋಶ ವ್ಯಕ್ತಪಡಿಸಿದರು. ಇದೇ ವೇಳೆ ಬುದ್ಧಿಮಾಂದ್ಯ ಮಹಿಳೆಯೊಬ್ಬರು ಪೊಲೀಸ್ ಇಲಾಖೆಯಿಂದ ತಮಗೆ ಅನ್ಯಾಯವಾಗಿದೆ ಎಂದು ಆರೋಪಿಸಿ ವೇದಿಕೆಯ ಸಮೀಪ ಕೂಗಾಟ ನಡೆಸುತ್ತ ಬೊಬ್ಬೆ ಹಾಕಿದಳು.

ಅಲ್ಲಿಂದ ವ್ಯವಸ್ಥಿತವಾಗಿದ್ದ ಸಭೆಯ ಸ್ಥಿತಿಯೇ ಬದಲಾಯ್ತು. ಅರ್ಜಿದಾರರು, ರೈತರು ಒಟ್ಟಾಗಿ ವೇದಿಕೆಯತ್ತ ಧಾವಿಸಿ ಸಚಿವ ವಿಜಯಾನಂದರನ್ನು ಗುಂಪಿನೊಳಗೆ ಕೇಂದ್ರವಾಗಿಸಿದರು.

ಜಿಲ್ಲಾ ಹೆಸ್ಕಾಂ ಅಭಿಯಂತರ ಯಂಕಂಚಿಗೆ ಕನಿಷ್ಠ 12 ತಾಸು ಸಿಂಗಲ್‌ಫೇಸ್, 6.5 ತಾಸು ತ್ರೀಫೇಸ್ ವಿದ್ಯುತ್ ಪೂರೈಸುವಂತೆ ಸಚಿವ ಕಾಶಪ್ಪನವರ ತಾಕೀತು ಮಾಡಿದರು. ಜಿಎಲ್‌ಬಿಸಿ ಕಾಲುವೆ ನೀರು ಹರಿಸಲು ಒತ್ತಾಯಿಸಿದ ರೈತರಿಗೆ ನೀರಾವರಿ ಇಲಾಖೆ ಅಧಿಕಾರಿಗಳಿಗೆ ನೀರು ಹರಿಸುವಂತೆ ಸೂಚಿಸಿದರು. ಕಳೆದ ೮ ತಿಂಗಳಿಂದ ವಿಧವಾ, ವಿಕಲಚೇತನ, ಸಂಧ್ಯಾಸುರಕ್ಷಾ ಯೋಜನೆಯ ಮಾಸಾಶನ ದೊರೆತಿಲ್ಲವೆಂದು ಹಲವರು ಅಲವತ್ತುಗೊಂಡರು.

ಪುಸರಭೆಗೆ ಸಂಬಂಧಿತ ಪ್ರಕರಣಗಳನ್ನು ತಕ್ಷಣ ಕೊನೆಗೊಳಿಸಲು ಮುಖ್ಯಾಧಿಕಾರಿಗೆ ಆದೇಶಿಸಲಾಯಿತು. ಕಾರ್ಯಕ್ರಮದ ಅವ್ಯವಸ್ಥೆಗೆ ಅರ್ಜಿ ಸ್ವೀಕಾರ ಕೇಂದ್ರಗಳಲ್ಲಿ ಸಿಬ್ಬಂದಿ ಇಲ್ಲದಿರುವುದರಿಂದ ಅರ್ಜಿದಾರರು ನೇರವಾಗಿ ಸಚಿವರತ್ತಲೇ ಬಂದದ್ದರಿಂದ ಈ ಅವಾಂತರಕ್ಕೆ ಕಾರಣವೆಂದು ಅರ್ಜಿದಾರರು ಹೇಳಿದರು.