ಲಿಂಗಾಯತ ತತ್ವಗಳ ಪರಿಣಾಮಕಾರಿ ಪ್ರಚಾರದ ಮೂಲಕ ಮಾತ್ರ ಲಿಂಗಾಯತ ಸ್ವತಂತ್ರ ಧರ್ಮದ ವಿರೋಧ ಮಾಡುವವರ ಮನ ಪರಿವರ್ತನೆ ಮತ್ತು ವಿರೋಧವನ್ನು ಕಡಿಮೆ ಮಾಡಲು ಸಾಧ್ಯ ಎಂದು ನಾಗನೂರು ರುದ್ರಾಕ್ಷಿ ಮಠದ ಪೀಠಾಧಿಪತಿ ಡಾ.ಅಲ್ಲಮಪ್ರಭು ಮಹಾಸ್ವಾಮಿಗಳು ನುಡಿದರು.

ಕನ್ನಡಪ್ರಭ ವಾರ್ತೆ ಬೆಳಗಾವಿ

ಲಿಂಗಾಯತ ತತ್ವಗಳ ಪರಿಣಾಮಕಾರಿ ಪ್ರಚಾರದ ಮೂಲಕ ಮಾತ್ರ ಲಿಂಗಾಯತ ಸ್ವತಂತ್ರ ಧರ್ಮದ ವಿರೋಧ ಮಾಡುವವರ ಮನ ಪರಿವರ್ತನೆ ಮತ್ತು ವಿರೋಧವನ್ನು ಕಡಿಮೆ ಮಾಡಲು ಸಾಧ್ಯ ಎಂದು ನಾಗನೂರು ರುದ್ರಾಕ್ಷಿ ಮಠದ ಪೀಠಾಧಿಪತಿ ಡಾ.ಅಲ್ಲಮಪ್ರಭು ಮಹಾಸ್ವಾಮಿಗಳು ನುಡಿದರು.

ನಗರದ ಎಸ್.ಜಿ.ಬಾಳೆಕುಂದ್ರಿ ತಾಂತ್ರಿಕ ಮಹಾವಿದ್ಯಾಲಯದ ಸಭಾಗ್ರಹದಲ್ಲಿ ಆರಂಭವಾದ ಎರಡು ದಿನಗಳ ಜಾಗತಿಕ ಲಿಂಗಾಯತ ಮಹಾಸಭೆಯ ವಾರ್ಷಿಕ ಸರ್ವಸಾಮಾನ್ಯ ಸಭೆ ಮತ್ತು ರಾಷ್ಟ್ರೀಯ ಕಾರ್ಯಕಾರಿಣಿ ಸಭೆ ಉದ್ಘಾಟಿಸಿ ಮಾತನಾಡಿದ ಅವರು, ಲಿಂಗಧಾರಣೆ, ರುದ್ರಾಕ್ಷಿ ಧಾರಣೆ, ಲಿಂಗಪೂಜೆ ಮುಂತಾದವುಗಳನ್ನು ಆಚರಣೆಯಲ್ಲಿ ಪರಿಣಾಮಕಾರಿಯಾಗಿ ತರಬೇಕು ಎಂದು ಸಲಹೆ ನೀಡಿದರು.ಜಾಗತಿಕ ಲಿಂಗಾಯತ ಮಹಾಸಭೆ ರಾಷ್ಟ್ರೀಯ ಪ್ರಧಾನ ಕಾರ್ಯದರ್ಶಿ ಡಾ.ಎಸ್.ಎಂ.ಜಾಮದಾರ ಪ್ರಾಸ್ತಾವಿಕವಾಗಿ ಮಾತನಾಡಿದ

ಅವರು, ಅಂತಾರಾಷ್ಟ್ರೀಯ ಬಸವ ಕೇಂದ್ರ ಕಟ್ಟಡ ಸಿದ್ಧವಾಗಿ 22 ವರ್ಷಗಳಾಯಿತು. ಅಲ್ಲಿ ಯಾವುದೇ ಬಸವಪರ ಚಟುವಟಿಗಳು ನಡೆಯುತ್ತಿಲ್ಲ ಎಂದು ವಿಷಾದಿಸಿದರು. ಸಿದ್ದರಾಮಯ್ಯನವರ ಕಾಲದಲ್ಲಿ ₹560 ಕೋಟಿ ವೆಚ್ಚದಲ್ಲಿ ಆರಂಭವಾದ ಅನುಭವ ಮಂಟಪ ಬೃಹತ್ ಕಟ್ಟಡದ ಕಾರ್ಯ ಇನ್ನೊಂದು ವರ್ಷದಲ್ಲಿ ಮುಕ್ತಾಯಗೊಳ್ಳಲಿದೆ. ನಂತರ ಮುಂದೇನು ಅಲ್ಲಿ ಯಾವ ರೀತಿಯ ಚಟುವಟಿಕೆಗಳು ಕೈಗೊಳ್ಳುವಂತಾಗಬೇಕು ಎಂಬುವುದು ದೊಡ್ಡ ಪ್ರಶ್ನೆಯಾಗಿದೆ. ಈ ಕುರಿತು ಎರಡು ದಿನಗಳ ಸಭೆಯಲ್ಲಿ ಗಟ್ಟಿಯಾದ ನಿರ್ಧಾರ ಕೈಗೊಳ್ಳಬೇಕಾಗಿದೆ ಎಂದು ತಿಳಿಸಿದರು. 900 ವರ್ಷಗಳ ಹಿಂದೆ ಸ್ಥಾಪಿತವಾಗಿದ್ದ ಅನುಭವ ಮಂಟಪದ ಉದ್ದೇಶ ಏನಿತ್ತು ಮತ್ತು ಈಗ ಬದಲಾದ ವಾತಾವರಣದ ಹಿನ್ನೆಲೆಯಲ್ಲಿ ಅನುಭವ ಮಂಟಪದಲ್ಲಿ ಯಾವ ಕಾರ್ಯಕ್ರಮಗಳು ಯಾವ ಮಾದರಿಯ ಚಟುವಟಿಕೆಗಳು ನಡೆಯಬೇಕು, ಪ್ರಸ್ತುತ ಸನ್ನಿವೇಶದಲ್ಲಿ ಏನು ಮಾಡಬೇಕು ಎಂಬುವುದನ್ನು ಸಭೆ ನಿರ್ಧರಿಸಬೇಕಿದೆ ಎಂದರು.

ರಾಷ್ಟ್ರೀಯ ಉಪಾಧ್ಯಕ್ಷ ಎನ್.ಎಸ್.ಕೆಂಪೇಗೌಡರ ಸಭೆಯ ಅಧ್ಯಕ್ಷತೆ ವಹಿಸಿದ್ದರು. ಬೆಳಗಾವಿ ಜಿಲ್ಲಾ ಅಧ್ಯಕ್ಷ ಬಸವರಾಜ ರೊಟ್ಟಿ ಸ್ವಾಗತಿಸಿದರು. ಉಪಾಧ್ಯಕ್ಷ ಮುರುಗೇಶ್ ಶಿವಪೂಜಿ ವಂದಿಸಿದರು. ಕಾರ್ಯಕ್ರಮವನ್ನು ಪ್ರಧಾನ ಕಾರ್ಯದರ್ಶಿ ಅಶೋಕ ಮಳಗಲಿ ನಿರ್ವಹಿಸಿದರು. ರಾಷ್ಟ್ರೀಯ ಉಪಾಧ್ಯಕ್ಷರುಗಳಾದ ಗೊಂಗಡ ಶೆಟ್ಟರ್, ಮಹದೇವಪ್ಪ, ನಿವೃತ್ತ ಐಎಎಸ್ ಅಧಿಕಾರಿ ಜಿ.ವಿ.ಕೊಂಗವಾಡ ರಾಷ್ಟ್ರೀಯ ಮತ್ತು ರಾಜ್ಯ ಪದಾಧಿಕಾರಿಗಳಾದ ಬಸವರಾಜ ಧನ್ನೂರ್, ಜಿ.ಬಿ.ಹಲ್ಯಾಳ, ಪರಮೇಶ್ವರಪ್ಪ ಕಾಗಿನೆಲೆ, ಸವಿತಾ ನಡಕಟ್ಟಿ, ಪ್ರಭಣ್ಣ ನಡಕಟ್ಟಿ, ರಾಜಶೇಖರ ತಂಬಾಕೆ, ಬಸವರಾಜ ಕಣಜೆ, ಗವಿ ಸಿದ್ದಪ್ಪ, ಜಿಲ್ಲಾ ಪದಾಧಿಕಾರಿಗಳಾದ ಮುರಿಗೆಪ್ಪ ಬಾಳಿ, ಸಿಎಂ ಬೂದಿಹಾಳ, ಎಸ್.ಜಿ.ಸಿದ್ನಾಳ, ಪ್ರವೀಣ್ ಚಿಕ್ಕಲಿ, ಚಿನುಗುಡಿ, ಎಫ್.ಆರ್.ಪಾಟೀಲ ಉಪಸ್ಥಿತರಿದ್ದರು. ಜಾಗತಿಕ ಲಿಂಗಾಯತ ಮಹಾಸಭೆಯ ಮಹಿಳಾ ಪದಾಧಿಕಾರಿಗಳಾದ ರತ್ನಾ ಬೆಣಚಿನಮರಡಿ, ಕಾವೇರಿ ಕಿಲಾರಿ, ಶೋಭಾ ಶಿವಳ್ಳಿ, ಅನಸೂಯ ಬಶೆಟ್ಟಿ ಇವರುಗಳಿಂದ ವಚನ ಪ್ರಾರ್ಥನೆಯೊಂದಿಗೆ ಕಾರ್ಯಕ್ರಮ ಆರಂಭವಾಯಿತು. ಆರಂಭದಲ್ಲಿ ಷಟಸ್ಥಲ ಧ್ವಜಾರೋಹಣ ನೆರವೇರಿಸಿ ಜಗದ್ಗುರು ಬಸವಣ್ಣನವರ ಪುತ್ಥಳಿಗೆ ಪುಷ್ಪಾರ್ಚನೆ ನೆರವೇರಿತು. ಕಾರ್ಯಕ್ರಮದಲ್ಲಿ ಜಾಗತಿಕ ಲಿಂಗಾಯತ ಮಹಾಸಭೆಯಿಂದ ಪ್ರಕಟವಾದ ಅನುಭವ ಮಂಟಪ ಮುಂದೇನು? ಮತ್ತು ಲಿಂಗಾಯತ ಧರ್ಮದ ಆಚರಣೆಗಳು ಹಾಗೂ ಮರಾಠಿ ಭಾಷೆಯ ಲಿಂಗಾಯತ್ ಸ್ವತಂತ್ರ ಧರ್ಮಚ್ ಎಂಬ 3 ಗ್ರಂಥಗಳು ಬಿಡುಗಡೆಗೊಂಡವು. ಕರ್ನಾಟಕ ಮಹಾರಾಷ್ಟ್ರ ತೆಲಂಗಾಣ ಆಂಧ್ರಪ್ರದೇಶ ಮತ್ತು ಕೇರಳ ರಾಜ್ಯಗಳ ನೂರಾರು ಪದಾಧಿಕಾರಿಗಳು ಮತ್ತು ಪ್ರತಿನಿಧಿಗಳು ಭಾಗವಹಿಸಿದ್ದರು.ಲಿಂಗಾಯತ ಧರ್ಮದ ತತ್ವಗಳನ್ನು ಸರ್ವಸಾಮಾನ್ಯರಿಗೆ ತಿಳಿಸುವುದು ಮತ್ತು ಲಿಂಗಾಯತ ತತ್ವಗಳ ಆಚರಣೆಯ ಮೂಲಕ ಮಾತ್ರ ಧರ್ಮದ ಪರಿಣಾಮಕಾರಿ ಅನುಷ್ಠಾನ ಸಾಧ್ಯ.

-ಡಾ.ಅಲ್ಲಮಪ್ರಭು ಮಹಾಸ್ವಾಮಿಗಳು,

ನಾಗನೂರು ರುದ್ರಾಕ್ಷಿ ಮಠದ ಪೀಠಾಧಿಪತಿ.ಲಿಂಗಾಯತ ಧರ್ಮದ ಬೇಡಿಕೆಗಾಗಿ ನಡೆದ ಕಾರ್ಯಕ್ರಮಗಳ ಮತ್ತು ಭಾಗವಹಿಸಿದ ಸ್ವಾಮೀಜಿಗಳ ವಿರುದ್ಧ ಹಲವಾರು ಸ್ವಾಮೀಜಿಗಳೇ ಅವಾಚ್ಯ ಶಬ್ದಗಳಲ್ಲಿ ಟೀಕಿಸಿದ್ದು ಮತ್ತು ಲಿಂಗಾಯತರ ವಿರುದ್ಧ ಚಟುವಟಿಕೆಗಳಿಗಾಗಿ ಲಿಂಗಾಯತರನ್ನು ಬಳೆಸಿಕೊಳ್ಳುವುದಕ್ಕೆಲ್ಲ ದಾಖಲೆಗಳ ಸಮೇತ ಉತ್ತರ ನೀಡಲಾಗಿದೆ. ಇಂಥದಕ್ಕೆಲ್ಲ ಹಿಂದೆ ಸರಿಯುವ ಪ್ರಶ್ನೆ ಇಲ್ಲ.

-ಡಾ.ಎಸ್.ಎಂ.ಜಾಮದಾರ,
ರಾಷ್ಟ್ರೀಯ ಪ್ರಧಾನ ಕಾರ್ಯದರ್ಶಿ, ಜಾಗತಿಕ ಲಿಂಗಾಯತ ಮಹಾಸಭೆ.