ಚಾಮರಾಜನಗರ: ಲೋಕಸಭೆಯಲ್ಲಿ ಸಂವಿಧಾನ ಶಿಲ್ಪಿ ಡಾ.ಬಾಬಾಸಾಹೇಬ್ ಅಂಬೇಡ್ಕರ್ ಅವರನ್ನು ಅವಮಾನಿಸುವಂತಹ ಹೇಳಿಕೆ ನೀಡಿದ ಕೇಂದ್ರ ಗೃಹ ಸಚಿವ ಅಮಿತ್ ಶಾ ರಾಜೀನಾಮೆ ನೀಡಬೇಕು ಎಂದು ಒತ್ತಾಯಿಸಿ ದಲಿತ ಸಂಘಟನೆ ಒಕ್ಕೂಟದ ವತಿಯಿಂದ ನಗರದಲ್ಲಿ ಪ್ರತಿಭಟನೆ ನಡೆಸಲಾಯಿತು.ನಗರದ ಭುವನೇಶ್ವರಿ ವೃತ್ತದಲ್ಲಿ ದಲಿತ ಸಂಘರ್ಷ ಸಮಿತಿ ಸಂಯೋಜಕ ಸಿ.ರಾಜಣ್ಣ ಯರಿಯೂರು, ದಲಿತ ಸಂಘರ್ಷ ಸಮಿತಿ ಡಿ.ಜಿ.ಸಾಗರ್ ಬಣದ ಸಂಯೋಜಕ ಸಿ.ಎಂ. ಶಿವಣ್ಣ ನೇತೃತ್ವದಲ್ಲಿ ಪ್ರತಿಭಟನಾನಿರತರು ಬಿಜೆಪಿ ಸರ್ಕಾರ, ಅಮಿತ್ ಶಾ ವಿರುದ್ಧ ಧಿಕ್ಕಾರ ಕೂಗಿ ಆಕ್ರೋಶ ವ್ಯಕ್ತಪಡಿಸಿದರು. ದಲಿತ ಸಂಘರ್ಷ ಸಮಿತಿ ಸಂಯೋಜಕ ಸಿ. ರಾಜಣ್ಣ ಯರಿಯೂರು, ಸಿ.ಎಂ. ಶಿವಣ್ಣ ಮಾತನಾಡಿ, ಸಂವಿಧಾನ ಶಿಲ್ಪಿ ಡಾ.ಬಿ.ಆರ್. ಅಂಬೇಡ್ಕರ್ ಅವರನ್ನು ಅವಮಾನಿಸಿದ ಗೃಹ ಸಚಿವ ಅಮಿತ್ ಶಾ ರಾಜೀನಾಮೆ ನೀಡಬೇಕು ಮತ್ತು ರಾಷ್ಟ್ರದ ಜನತೆಯಲ್ಲಿ ಕ್ಷಮೆಯಾಚಿಸಬೇಕು ಇಲ್ಲದಿದ್ದರೆ ರಾಜ್ಯ ಬಂದ್ ಕರೆ ನೀಡಬೇಕಾಗುತ್ತದೆ ಎಂದು ಎಚ್ಚರಿಸಿದರು. ಲೋಕಸಭೆಯಲ್ಲಿ ಕೇಂದ್ರ ಗೃಹ ಸಚಿವ ಅಮಿತ್ ಶಾ ಅವರು ಡಾ.ಅಂಬೇಡ್ಕರ್ ಹೆಸರು ಹೇಳುವುದು ಒಂದು ಫ್ಯಾಶನ್ ಆಗಿದೆ ಎಂದು ಟೀಕಿಸಿದ್ದಾರೆ. ಇದು ದಲಿತರು, ಬಾಬಾಸಾಹೇಬರಿಗೆ ಮಾಡಿದ ಅವಮಾನವಾಗಿದೆ. ಬಿಜೆಪಿ ನಾಯಕರಿಗೆ ಯಾವ ರೀತಿಯ ಚಿಂತನೆ ಇದೆ ಎಂದು ಕೇಂದ್ರ ಗೃಹ ಸಚಿವ ಅಮಿತ್ ಶಾ ಅವರು ಇಡೀ ದೇಶಕ್ಕೆ ತೋರಿಸಿದ್ದಾರೆ. ಕೂಡಲೇ ಅವರನ್ನು ಸಚಿವ ಸ್ಥಾನದಿಂದ ವಜಾಗೊಳಿಸಬೇಕು ಎಂದು ಒತ್ತಾಯಿಸಿದರು.ಸಾಹಿತಿ ಸೋಮಶೇಖರ್ ಬಿಸಲ್ವಾಡಿ, ರಾಮಸಮುದ್ರ ಸುರೇಶ್, ಗೂಳೀಪುರ ಅನಿಲ್, ಹೊನ್ನೂರು ಕೃಷ್ಣಮೂರ್ತಿ, ಮಂಜೇಶ್ ಗೀಜರ್, ಆಟೋ ಉಮೇಶ್, ಕಂದಹಳ್ಳಿ ನಾರಾಯಣ, ಆಲೂರು ನಾಗೇಂದ್ರ, ನಂಜುಂಡಸ್ವಾಮಿ, ರಂಗಸ್ವಾಮಿ ಮಾಡ್ರಹಳ್ಳಿ, ರವಿಕುಮಾರ್, ಆಟೋ ಕೆಂಪರಾಜು, ರಂಗಸ್ವಾಮಿ ಇದ್ದರು.