ಕನ್ನಡಪ್ರಭ ವಾರ್ತೆ ಬೆಂಗಳೂರು
ಖಾಸಗಿ ಕಾರ್ಯಕ್ರಮದ ನಿಮಿತ್ತ ನಗರಕ್ಕೆ ಆಗಮಿಸಿದ್ದ ಕೇಂದ್ರ ಗೃಹ ಸಚಿವ ಅಮಿತ್ ಶಾ ಅವರು ಮಾಜಿ ಮುಖ್ಯಮಂತ್ರಿ ಬಿ.ಎಸ್.ಯಡಿಯೂರಪ್ಪ ಮತ್ತು ಬಿಜೆಪಿ ರಾಜ್ಯಾಧ್ಯಕ್ಷ ಬಿ.ವೈ.ವಿಜಯೇಂದ್ರ ಅವರೊಂದಿಗೆ ಏಕಕಾಲದಲ್ಲಿ ಕೆಲ ನಿಮಿಷ ಮಾತುಕತೆ ನಡೆಸಿರುವುದು ಕುತೂಹಲ ಮೂಡಿಸಿದೆ.ಶುಕ್ರವಾರ ನಗರದ ಮಾರತ್‌ಹಳ್ಳಿಯಲ್ಲಿ ನಡೆದ ಆಸ್ಪತ್ರೆಯೊಂದರ ಉದ್ಘಾಟನಾ ಸಮಾರಂಭದಲ್ಲಿ ಅಮಿತ್ ಶಾ, ಯಡಿಯೂರಪ್ಪ, ವಿಜಯೇಂದ್ರ, ಮಾಜಿ ಸಚಿವ ಅರವಿಂದ ಲಿಂಬಾವಳಿ ಮತ್ತಿತರರು ಪಾಲ್ಗೊಂಡಿದ್ದರು. ಸಮಾರಂಭದ ಬಳಿಕ ಅಮಿತ್ ಶಾ ಅವರಿಗೆ ಪ್ರತ್ಯೇಕವಾಗಿ ಮತ್ತು ಇತರ ಎಲ್ಲ ನಾಯಕರಿಗೆ ಮತ್ತೊಂದೆಡೆ ಭೋಜನ ವ್ಯವಸ್ಥೆ ಕಲ್ಪಿಸಲಾಗಿತ್ತು.
ಭೋಜನ ಸ್ವೀಕರಿಸುವ ವೇಳೆ ಯಡಿಯೂರಪ್ಪ ಮತ್ತು ವಿಜಯೇಂದ್ರ ಅವರನ್ನು ತಮ್ಮ ಬಳಿ ಕರೆಸಿಕೊಂಡ ಅಮಿತ್ ಶಾ ಅವರು, ಸುಮಾರು 10ರಿಂದ 15 ನಿಮಿಷಗಳ ಕಾಲ ಮಾತುಕತೆ ನಡೆಸಿದರು. ಈ ಮಾತುಕತೆ ವೇಳೆ ಅಮಿತ್ ಶಾ ಅವರು ಮಾತನಾಡಿದ್ದೇ ಹೆಚ್ಚು ಎಂದು ಮೂಲಗಳು ತಿಳಿಸಿವೆ.ಅಮಿತ್ ಶಾಗೆ ಲಿಂಬಾವಳಿ 5 ಪುಟದ ದೂರು:ಶಾಸಕ ಬಸನಗೌಡ ಪಾಟೀಲ್ ಯತ್ನಾಳ ಬಣದಲ್ಲಿ ಗುರುತಿಸಿಕೊಂಡಿರುವ ಮಾಜಿ ಸಚಿವ ಅರವಿಂದ ಲಿಂಬಾವಳಿ ಅವರು ರಾಜ್ಯ ಬಿಜೆಪಿಯಲ್ಲಿನ ಪ್ರಸಕ್ತ ಬೆಳವಣಿಗೆಗಳ ಬಗ್ಗೆ ಕೇಂದ್ರ ಗೃಹ ಸಚಿವ ಅಮಿತ್ ಶಾ ಅವರಿಗೆ ದೂರಿನ ರೂಪದ ಲಿಖಿತ ಮಾಹಿತಿ ನೀಡಿದ್ದಾರೆ.ಶುಕ್ರವಾರ ಖಾಸಗಿ ಆಸ್ಪತ್ರೆ ಉದ್ಘಾಟನೆಗಾಗಿ ಆಗಮಿಸಿದ್ದ ಅಮಿತ್ ಶಾ ಅವರಿಗೆ ಲಿಂಬಾವಳಿ ಅವರು ವೇದಿಕೆ ಮೇಲೆಯೇ ಐದು ಪುಟಗಳ ದೂರು ಸಲ್ಲಿಸಿದರು. ಇದಕ್ಕೆ ಸಕಾರಾತ್ಮಕವಾಗಿ ಪ್ರತಿಕ್ರಿಯಿಸಿರುವ ಅಮಿತ್ ಶಾ ಅವರು ಸೂಕ್ತ ಸಮಯದಲ್ಲಿ ದೆಹಲಿಗೆ ಆಹ್ವಾನಿಸುವೆ, ಬನ್ನಿ ಎಂಬ ಮಾತನ್ನೂ ಹೇಳಿದ್ದಾರೆ ಎನ್ನಲಾಗಿದೆ.ವಿಜಯೇಂದ್ರ ಅವರು ರಾಜ್ಯಾಧ್ಯಕ್ಷರಾದ ಬಳಿಕ ನಡೆದ ಹೊಂದಾಣಿಕೆ ರಾಜಕಾರಣ, ವಿವಿಧ ಚುನಾವಣೆಗಳಲ್ಲಿನ ಸೋಲು, ಹಿರಿಯ ನಾಯಕರ ಕಡೆಗಣನೆ, ಯತ್ನಾಳ ಅವರು ಪ್ರಸ್ತಾಪಿಸುತ್ತಿದ್ದ ವಿಜಯೇಂದ್ರ ಅವರ ಕುರಿತ ಭ್ರಷ್ಟಾಚಾರದ ಆರೋಪಗಳು, ಯಡಿಯೂರಪ್ಪ ವಿರುದ್ಧದ ಪೋಕ್ಸೋ ಪ್ರಕರಣ ಸೇರಿದಂತೆ ವಿವಿಧ ವಿಷಯಗಳನ್ನು ಲಿಂಬಾವಳಿ ತಮ್ಮ ಪತ್ರದಲ್ಲಿ ವಿವರಿಸಿದ್ದಾರೆ ಎಂದು ತಿಳಿದು ಬಂದಿದೆ.ಜತೆಗೆ ಯಾವುದೇ ಕಾರಣಕ್ಕೂ ವಿಜಯೇಂದ್ರ ಅವರನ್ನು ರಾಜ್ಯಾಧ್ಯಕ್ಷ ಸ್ಥಾನದಲ್ಲಿ ಮುಂದುವರೆಸಬಾರದು. ಅವರ ಬದಲು ಜಾತಿ ಸಮೀಕರಣದ ಆಧಾರದ ಮೇಲೆ ಬೇರೊಬ್ಬರನ್ನು ರಾಜ್ಯಾಧ್ಯಕ್ಷರನ್ನಾಗಿ ನೇಮಿಸಬೇಕು ಎಂಬ ಮನವಿಯನ್ನೂ ಮಾಡಿದ್ದಾರೆ ಎಂದು ಮೂಲಗಳು ತಿಳಿಸಿವೆ.