ಚನ್ನಪಟ್ಟಣ : ಉಪಮುಖ್ಯಮಂತ್ರಿ ಡಿ.ಕೆ.ಶಿವಕುಮಾರ್ ಭದ್ರಕೋಟೆಯಾಗಿರುವ ಬೆಂಗಳೂರು ಗ್ರಾಮಾಂತರ ಲೋಕಸಭಾ ಕ್ಷೇತ್ರ ವ್ಯಾಪ್ತಿಯ ಬೊಂಬೆನಾಡು ಚನ್ನಪಟ್ಟಣದಲ್ಲಿ ಬಿಜೆಪಿ ಚಾಣಕ್ಯ ಅಮಿತ್ ಶಾ ಮಂಗಳವಾರ ಸಂಜೆ ಭರ್ಜರಿ ರೋಡ್ ಶೋ ಮಾಡುವ ಮೂಲಕ ಮತಬೇಟೆ ನಡೆಸಿದರು.
ಬಿಜೆಪಿ-ಜೆಡಿಎಸ್ ಮೈತ್ರಿ ಅಭ್ಯರ್ಥಿ ಡಾ.ಸಿ.ಎನ್.ಮಂಜುನಾಥ್, ಮಾಜಿ ಮುಖ್ಯಮಂತ್ರಿ ಎಚ್.ಡಿ.ಕುಮಾರಸ್ವಾಮಿ, ಬಿಜೆಪಿ ರಾಜ್ಯಾಧ್ಯಕ್ಷ ವಿಜಯೇಂದ್ರ ಅವರೊಂದಿಗೆ ಶಾ ತೆರೆದ ವಾಹನದಲ್ಲಿ ೧ ಕಿಮೀ ರೋಡ್ ಶೋ ನಡೆಸಿ ಮತದಾರರನ್ನು ಸೆಳೆದರು.
ಇದಕ್ಕೂ ಮೊದಲು ಬೆಂಗಳೂರಿನಿಂದ ಸಂಜೆ ೫.೪೫ರ ವೇಳೆಗೆ ಶೆಟ್ಟಿಹಳ್ಳಿ ಹೆಲಿಪ್ಯಾಡ್‌ನಲ್ಲಿ ಬಂದಿಳಿದ ಶಾ ಅವರು ೬.೪೫ಕ್ಕೆ ಮಂಗಳವಾರಪೇಟೆಯ ಬಸವನಗುಡಿ ಬಳಿಗೆ ಆಗಮಿಸಿ ತೆರೆದ ವಾಹನ ಏರಿದರು. ಈ ವೇಳೆ ರಸ್ತೆಯ ಇಕ್ಕೆಲಗಳಲ್ಲಿ ನಿಂತಿದ್ದ ಸಾವಿರಾರು ಸಂಖ್ಯೆಯ ಕಾರ್ಯಕರ್ತರು ಮತ್ತು ಅಭಿಮಾನಿಗಳು ಹೂ ಮಳೆ ಸುರಿಸುವ ಮೂಲಕ ಭವ್ಯ ಸ್ವಾಗತ ನೀಡಿದರು.
ಭರ್ಜರಿ ರೋಡ್ ಶೋ: ಬಸವನಗುಡಿಯಿಂದ ಆರಂಭಗೊಂಡ ರೋಡ್ ಶೋ, ಗಾಂಧಿ ಭವನದ ವೃತ್ತದ ಬಳಿ ನಿರ್ಮಿತವಾಗಿದ್ದ ವೇದಿಕೆವರೆಗೆ ಸಾಗಿತು. ಮಾರ್ಗಮಧ್ಯೆ ಅಮಿತ್ ಶಾ ಅವರ ಮೇಲೆ ಜನ ಹೂ ಮಳೆ ಸುರಿಸಿದರೆ, ಶಾ ಜನರತ್ತ ಕೈಬೀಸಿ ನಗೆ ಬೀರಿದರು.
ಈ ವೇಳೆ ಎಲ್ಲೆಡೆಯೂ ‘ಮೋದಿ , ಮೋದಿ’ ಎಂಬ ಘೋಷ ಮಾರ್ಧನಿಸಿತು. ‘ಜೈ ಶ್ರೀರಾಮ್’ , ‘ಜೈ ಭಜರಂಗಬಲಿ’, ‘ವಂದೇ ಮಾತರಂ’, ‘ಭಾರತ್ ಮಾತಾಕೀ ಜೈ’, ‘ಜಿಂದಾಬಾದ್ ಜಿಂದಾ ಬಾದ್ ಹಿಂದೂಸ್ತಾನ್ ಜಿಂದಾಬಾದ್’ ... ಎಂಬ ಘೋಷಣೆಗಳು ದಾರಿಯುದ್ದಕ್ಕೂ ಕೇಳಿದವು.
ವಿಧಾನ ಪರಿಷತ್ ಸದಸ್ಯ ಸಿ.ಪಿ.ಯೋಗೇಶ್ವರ್, ಮಾಜಿ ಶಾಸಕ ಎ.ಮಂಜುನಾಥ್ , ಜೆಡಿಎಸ್ ಯುವ ಘಟಕ ರಾಜ್ಯಾಧ್ಯಕ್ಷ ನಿಖಿಲ್ ಕುಮಾರಸ್ವಾಮಿ, ಬಿಜೆಪಿ ರಾಜ್ಯ ವಕ್ತಾರ ಅಶ್ವತ್ಥ ನಾರಾಯಣಗೌಡ ಮತ್ತಿತರರು ಕೂಡ ಈ ವೇಳೆ ಭಾಗವಹಿಸಿದ್ದರು.
45 ನಿಮಿಷದ ರೋಡ್ ಶೋ
ಚನ್ನಪಟ್ಟಣದ ಮಂಗಳವಾರಪೇಟೆಯ ಬಸವಗುಡಿಯ ಬಳಿ ಸಂಜೆ ೬.೪೫ಕ್ಕೆ ಬಹಿರಂಗ ಪ್ರಚಾರದ ವಾಹನವೇರಿದ ಅಮಿತ್ ಶಾ, ೪೫ ನಿಮಿಷ ರೋಡ್ ಶೋ ನಡೆಸಿದರು. ಬಸವನಗುಡಿ ಮುಂಭಾಗದಿಂದ ಚನ್ನಪಟ್ಟಣ ಪೊಲೀಸ್ ಠಾಣೆ ಮುಂಭಾಗದ ವರೆಗೆ ನಡೆದ ಈ ರೋಡ್ ಶೋ ನಡೆಸಿದ ಶಾ ನಂತರ ಜನರನ್ನುದ್ದೇಶಿಸಿ ಮಾತನಾಡಿದರು.ಮೊದಲಬಾರಿಗೆ ಪ್ರಚಾರದ ವಾಹನ ಬಳಕೆ
ಚನ್ನಪಟ್ಟಣ: ಈ ಬಾರಿಯ ಲೋಕಸಭೆ ಚುನಾವಣೆಗೆ ಎನ್‌ಡಿಎ ಅಭ್ಯರ್ಥಿಗಳ ಪರ ಪ್ರಚಾರ ನಡೆಸಲು ಬಿಜೆಪಿ ಸಿದ್ಧಪಡಿಸಿದ ನೂತನ ಪ್ರಚಾರ ವಾಹನಕ್ಕೆ ಅಮಿತ್ ಶಾ ಚಾಲನೆ ನೀಡಿದರು.
ಲೋಕಸಭಾ ಚುನಾವಣೆ ಹಿನ್ನೆಲೆಯಲ್ಲಿ ರಾಜ್ಯದಲ್ಲಿ ಮೈತ್ರಿ ಅಭ್ಯರ್ಥಿಗಳ ಪರ ಪ್ರಚಾರ ಕಾರ್ಯ ಕೈಗೊಳ್ಳಲು ರಾಜ್ಯ ಬಿಜೆಪಿ 4 ವಾಹನಗಳನ್ನು ಸಿದ್ಧಪಡಿಸಿದ್ದು, ಚನ್ನಪಟ್ಟಣದಲ್ಲಿ ಹೊಸ ವಾಹನದಲ್ಲಿ ಪ್ರಚಾರ ಕಾರ್ಯ ನಡೆಸುವ ಮೂಲಕ ಶಾ ರಾಜ್ಯದಲ್ಲಿ ಆ ವಾಹನದ ಮೂಲಕ ಪ್ರಚಾರಕ್ಕೆ ಚಾಲನೆ ನೀಡಿದರು. ಪ್ರಚಾರಕ್ಕೆ ಸಿದ್ಧಪಡಿಸಿದ್ದ ವಾಹನ ಚನ್ನಪಟ್ಟಣಕ್ಕೆ ಸೋಮವಾರ ರಾತ್ರಿಯೇ ಆಗಮಿಸಿತ್ತು.ಸುಸಜ್ಜಿತ ಬಸ್: ಬಿಜೆಪಿ ಪ್ರಚಾರಕ್ಕೆ ಸಿದ್ಧಪಡಿಸಿರುವ ವಾಹನ ಸಂಪೂರ್ಣ ಸುಸಜ್ಜಿತ ವಾಹನವಾಗಿದ್ದು, ವಾಹನದ ಮೇಲ್ಭಾಗದಲ್ಲಿ ‘ಮತ್ತೊಮ್ಮೆ ಮೋದಿ ಸರ್ಕಾರ’ ಎಂಬ ಸ್ಲೋಗನ್ನಿನ ಜೊತೆಗೆ, ‘ಈ ಬಾರಿ ೪೦೦ ಮೀರಿ’ ಎಂಬ ಘೋಷ ವಾಕ್ಯವಿದೆ. ಇದರ ಜತೆಗೆ ಬಿಜೆಪಿಯ ಕಮಲ ಹಾಗೂ ಜೆಡಿಎಸ್‌ನ ತೆನೆಹೊತ್ತ ಮಹಿಳೆಯ ಚಿಹ್ನೆ ಚಿತ್ರಿಸಲಾಗಿದೆ. ಬಸ್‌ನ ಒಳಭಾಗದಲ್ಲಿ ವಿರಮಿಸಲು ಸುಖಾಸೀನ ವ್ಯವಸ್ಥೆ ಕಲ್ಪಿಸಲಾಗಿದೆ. ಬಸ್ ಸಂಪೂರ್ಣ ಹವಾನಿಯಂತ್ರಿತವಾಗಿದ್ದು, ಆರಾಮಾಗಿ ಪ್ರಚಾರ ನಡೆಸಲು ವ್ಯವಸ್ಥೆ ಕಲ್ಪಿಸಲಾಗಿದೆ.