ಕನ್ನಡಪ್ರಭ ವಾರ್ತೆ ಸಿದ್ದಾಪುರ
ಅಮ್ಮತ್ತಿಯ ನಿತ್ಯ ಚೈತನ್ಯ ಮಠಪುರ ಶ್ರೀ ಮುತ್ತಪ್ಪ ದೇವಸ್ಥಾನದ 51 ನೇ ವರ್ಷದ ತೆರೆ ಮಹೋತ್ಸವ ಶ್ರದ್ಧಾ ಭಕ್ತಿಯಿಂದ ಸಂಭ್ರಮ ಸಡಗರದಿಂದ ನಡೆಯಿತು.ಮಾ. 29 ಮತ್ತು 30 ನಡೆದ ತೆರೆ ಮಹೋತ್ಸವದಲ್ಲಿ ಅಮ್ಮತ್ತಿ ಓಂಟಿಯಂಗಡಿ ಇಂಜಿಲಿಗೆರೆ ಪಾಲಿಬೆಟ್ಟ ಸಿದ್ದಾಪುರ ವಿರಾಜಪೇಟೆ ಸೇರಿದಂತೆ ಸುತ್ತಮುತ್ತಲಿನ ಗ್ರಾಮಗಳಿಂದ ಸಾವಿರಾರು ಭಕ್ತರು ತೆರೆ ಮಹೋತ್ಸವದಲ್ಲಿ ಪಾಲ್ಗೊಂಡರು. 2 ದಿನಗಳ ಕಾಲ ನಡೆದ ತೆರೆ ಮಹೋತ್ಸವದಲ್ಲಿ ವಿವಿಧ ದೇವರುಗಳ ಕೋಲಗಳ ತೆರೆಗಳನ್ನು ಭಕ್ತರು ನೋಡಿ ಕಣ್ತುಂಬಿಕೊಂಡರು. ವಸೂರಿ ಮಾಲಾ ತೆರೆ ಕಂಡಕರ್ಣನ್ ತೆರೆ ಪೊಟ್ಟನ್ ತೆರೆ ಭಕ್ತರನ್ನು ಹೆಚ್ಚು ಆಕರ್ಷಿಸಿತು. ಉಳಿದಂತ ಮುತ್ತಪ್ಪ ತಿರುವಪ್ಪನ ತೆರೆ, ವಿಷ್ಣುಮೂರ್ತಿ ತೆರೆ ಶಾಸ್ತಪನ್ ತೆರೆ ಗುಳಿಗನ ತೆರೆಗಳು ನಡೆದವು. ತೆರೆ ಮಹೋತ್ಸವದ ಭಾಗವಾಗಿ ಆಗಮಿಸಿದ ಭಕ್ತರಿಗೆ ಶನಿವಾರ ಹಾಗೂ ಭಾನುವಾರ ಅನ್ನಸಂತರ್ಪಣೆ ನಡೆಯಿತು. ತೆರೆ ಮಹೋತ್ಸವದ ಅಂಗವಾಗಿ ಮುತ್ತಪ್ಪ ದೇವಾಲಯ ಹಾಗೂ ರಸ್ತೆಗಳನ್ನು ವಿದ್ಯುತ್ ದೀಪಗಳಿಂದ ಅಲಂಕರಿಸಲಾಗಿತ್ತು.
ಈ ಸಂದರ್ಭ ದೇವಾಲಯದ ಅಧ್ಯಕ್ಷ ಸಿ ಕೆ ರವಿ, ಸಮಿತಿ ಪ್ರಮುಖರಾದ ಸನೀಲ್, ಪ್ರಸನ್ನ, ಮಧು, ರಂಜನ್, ವಿಜು , ಶಶಿ, ಲೋಕೇಶ್, ಪುಟ್ಟು, ಜಿತ್ತು ಸೇರಿದಂತೆ ಪ್ರಮುಖರು ಇದ್ದರು.ಸಂಸದರ ಭೇಟಿ: ಅಮ್ಮತ್ತಿ ಮುತ್ತಪ್ಪ ದೇವಾಲಯಕ್ಕೆ ಕೊಡಗು ಮೈಸೂರು ಸಂಸರಾದ ಯದುವೀರ್ ಕೃಷ್ಣದತ್ತ ಚಾಮರಾಜ ಒಡೆಯರ್ ಭೇಟಿ ನೀಡಿ ಶ್ರೀ ಮುತ್ತಪ್ಪನ ಆರ್ಶೀವಾದ ಪಡೆದರು. ನಂತರ ಮಾತನಾಡಿದ ಅವರು ದೇವಾಲಯಕ್ಕೆ ಭೇಟಿ ನೀಡಿದ್ದು ತುಂಬಾ ಸಂತಸವಾಗಿದೆ. ದೇವಾಲಯ ಮೂಲಭೂತ ಅವಶ್ಯಕತೆಗಳನ್ನು ನೆರವೇರಿಸಲು ತಾನು ಬದ್ಧನಾಗಿದ್ದು ಈಗಾಗಲೇ ಆಡಳಿತ ಮಂಡಳಿಯವರು ದೇವಾಲಯಕ್ಕೆ ಕುಡಿಯುವ ನೀರಿನ ವ್ಯವಸ್ಥೆಗಾಗಿ ಬೋರ್ ವೆಲ್ ಬೇಕೆಂದು ಮನವಿ ಮಾಡಿದ್ದು ಅದಷ್ಟು ಶೀಘ್ರವಾಗಿ ಅದನ್ನು ಒದಗಿಸಲಾಗುವುದು ಎಂದರು. ಈ ಸಂದರ್ಭ ಅಮ್ಮತ್ತಿ ಗ್ರಾಮ ಪಂಚಾಯಿತಿ ಸದಸ್ಯ ಪ್ರಶಾಂತ್ , ಸ್ಥಳೀಯರಾದ ಪಾಪಯ್ಯ ಇತರರು ಇದ್ದರು.