ಅಂಕೋಲಾ: ಸಮಾಜಕ್ಕೆ ತನ್ನಿಂದ ಉದಾತ್ತ ಕೊಡುಗೆ ನೀಡುತ್ತಾ, ಪ್ರತಿಯಾಗಿ ಸಮಾಜದಿಂದ ಏನನ್ನೂ ನಿರೀಕ್ಷಿಸದೆ ಸಂತನಂತೆ ಬದುಕಿದ ಅಮ್ಮೆಂಬಳ ಆನಂದ ಅವರ ದಣಿವರಿಯದ ಸೇವೆ ಅಂಕೋಲೆಯ ಚರಿತ್ರೆಯಲ್ಲಿ ಅಚ್ಚಳಿಯದ ಅಧ್ಯಾಯದ ವ್ಯಕ್ತಿತ್ವ ಎಂದು ಹಿರಿಯ ಪತ್ರಕರ್ತ ಗಂಗಾಧರ ಹಿರೇಗುತ್ತಿ ಹೇಳಿದರು.
ನೂರು ವರ್ಷಗಳ ಬದುಕು ಎಂಬುದು ಇಂದಿನ ಕಾಲಮಾನದಲ್ಲಿ ಭ್ರಮೆಯ ಸಂಗತಿಯಾಗಿರುವ ಸಂದರ್ಭದಲ್ಲಿ ಅಮ್ಮೆಂಬಳ ಆನಂದ ಅವರು ತಮ್ಮ ಜೀವನವನ್ನು ಒಂದೇ ಚೌಕಟ್ಟಿಗೆ ಸೀಮಿತಗೊಳಿಸದೆ ಅಲೆಮಾರಿಯಂತೆ ಸಾಗುತ್ತ, ಯಶಸ್ವಿ ಪತ್ರಕರ್ತರಾಗಿ, ಯಶಸ್ವಿ ಸಾಮಾಜಿಕ ಚಿಂತಕರಾಗಿ ರೂಪುಗೊಂಡವರಾಗಿದ್ದಾರೆ ಎಂದರು.
ಪ್ರತಿಷ್ಠಾನದ ಗೌರವಾಧ್ಯಕ್ಷ, ಹಿರಿಯ ಸಾಹಿತಿ ಶಾಂತಾರಾಮ ನಾಯಕ ಹಿಚ್ಕಡ ಅಧ್ಯಕ್ಷತೆ ವಹಿಸಿ ಮಾತನಾಡಿ, ಅಂಕೋಲೆಯ ಸಾಕುಮಗ ಅಮ್ಮೆಂಬಾಳ ಆನಂದ. ಅಂಕೋಲೆಗೆ ನೂರಾರು ಸಮಸ್ಯೆಗಳಿಗೆ ಕಣ್ಣಾಗಿ, ಕಿವಿಯಾಗಿ, ಬಾಯಾಗಿ ತೊಡಗಿಸಿಕೊಂಡವರು. ಸಮಾಧಾನದ ಸಾಮರಸ್ಯದ ಬದುಕಿನಲ್ಲಿ ಬದುಕಿ ಇತರರಿಗೂ ಕಲಿಸಿಕೊಟ್ಟವರು ಎಂದರು. ಹಿರಿಯ ಪತ್ರಕರ್ತ ವಿಠ್ಠಲದಾಸ ಕಾಮತ ಮಾತನಾಡಿ, ಅಂಕೋಲೆಯ ಪತ್ರಿಕೋದ್ಯಮದ ಇತಿಹಾಸದಲ್ಲಿ ಅಚ್ಚಳಿಯದ ಛಾಪು ಮೂಡಿಸಿರುವ ಅಮ್ಮೆಂಬಳ ಆನಂದ ಅವರು ಯುವ ಪೀಳಿಗೆಗೆ ಆದರ್ಶಪ್ರಾಯರಾಗಿದ್ದಾರೆ ಎಂದರು.ಪ್ರತಿಷ್ಠಾನದ ಅಧ್ಯಕ್ಷ ಡಾ. ರಾಮಕೃಷ್ಣ ಗುಂದಿ ಸ್ವಾಗತಿಸಿ, ಪ್ರಾಸ್ತಾವಿಕವಾಗಿ ಮಾತನಾಡಿದರು. ಮೇಘನಾ ಆಗೇರ ಆಶಯಗೀತೆ ಹಾಡಿದರು. ಕಾರವಾರ ಕಸಾಪ ತಾಲೂಕಾಧ್ಯಕ್ಷ ರಾಮಾ ನಾಯ್ಕ ಸನ್ಮಾನ ಪತ್ರ ವಾಚಿಸಿದರು. ಖಜಾಂಚಿ ಮಹಾಂತೇಶ ರೇವಡಿ ನಿರೂಪಿಸಿದರು. ಕಾರ್ಯದರ್ಶಿ ಜಗದೀಶ ನಾಯಕ ವಂದಿಸಿದರು.
ಬಾಳ ಪಥ: ನನ್ನ ಜನ್ಮದಿನವನ್ನು ಉತ್ಸವದಂತೆ ಆಚರಿಸಿದ ನನ್ನ ಎರಡನೇ ತವರುಮನೆ ಅಂಕೋಲಾದ ಅಭಿಮಾನಿಗಳಿಗೆ ಧನ್ಯವಾದಗಳನ್ನು ಸಲ್ಲಿಸಲು ಸೂಕ್ತ ಶಬ್ದಗಳೇ ಸಿಗದಂತಹ ಸಂದಿಗ್ಧತೆಯಲ್ಲಿ ನಾನಿದ್ದೇನೆ. ನನ್ನ ನೆನಪಿನ ಕಾಣಿಕೆಯಾಗಿ ಬಾಳ ಪಥ ಎಂಬ ಒಂದು ಶತಾಬ್ದಿ ಸಂಪುಟವನ್ನು ಕೊಡುತ್ತಿದ್ದೇನೆ ಎಂದು ಅಮ್ಮೆಂಬಳ ಆನಂದ ತಿಳಿಸಿದರು.