ಹೈದರಾಬಾದ್ ಕರ್ನಾಟಕಕ್ಕೆ ವಿಶೇಷ ಅನುದಾನ ನೀಡಲಾಗುತ್ತಿದ್ದರೂ ನಿರೀಕ್ಷಿತ ಮಟ್ಟದಲ್ಲಿ ಅಭಿವೃದ್ಧಿ ಸಾಧಿಸಲು ಸಾಧ್ಯವಾಗಿಲ್ಲ
ಹೊಸಪೇಟೆ: ಕಲ್ಯಾಣ ಕರ್ನಾಟಕದ ವಿಮೋಚನಾ ದಿನ ಸಂತೋಷದಿಂದ ಆಚರಿಸುವುದರ ಜತೆಗೆ, ಈ ಭಾಗವು ಮುಂದಿನ ದಿನಗಳಲ್ಲಿ ಹೇಗೆ ಅಭಿವೃದ್ಧಿ ಹೊಂದಬೇಕು ಎಂಬುದರ ಕುರಿತು ಮುನ್ನೋಟದ ಚರ್ಚೆಗಳು ನಡೆಯಬೇಕು ಎಂದು ಕನ್ನಡ ವಿಶ್ವವಿದ್ಯಾಲಯದ ಕುಲಪತಿ ಡಾ. ಡಿ.ವಿ.ಪರಮಶಿವಮೂರ್ತಿ ಹೇಳಿದರು.
ಕನ್ನಡ ವಿಶ್ವವಿದ್ಯಾಲಯದ ಅಭಿವೃದ್ಧಿ ಅಧ್ಯಯನ ವಿಭಾಗದಿಂದ ಆಯೋಜಿಸಿದ್ದ ಕಲ್ಯಾಣ ಕರ್ನಾಟಕದ ವಿಮೋಚನಾ ದಿನಾಚರಣೆ ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿ ಮಾತನಾಡಿದರು.ಹೈದರಾಬಾದ್ ಕರ್ನಾಟಕಕ್ಕೆ ವಿಶೇಷ ಅನುದಾನ ನೀಡಲಾಗುತ್ತಿದ್ದರೂ ನಿರೀಕ್ಷಿತ ಮಟ್ಟದಲ್ಲಿ ಅಭಿವೃದ್ಧಿ ಸಾಧಿಸಲು ಸಾಧ್ಯವಾಗಿಲ್ಲ. ಹಳೆ ಮೈಸೂರು ಪ್ರಾಂತ್ಯದ ಸ್ಥಿತಿಗತಿಗೂ ಕಲ್ಯಾಣ ಕರ್ನಾಟಕದ ಸ್ಥಿತಿಗತಿಗೂ ಸಾಕಷ್ಟು ವ್ಯತ್ಯಾಸವಿದೆ. ಹಳೆ ಮೈಸೂರು ಭಾಗ ಆಳಿದ ಅರಸರು ಮತ್ತು ಅಧಿಕಾರಿಗಳಲ್ಲಿ ಇದ್ದ ದೂರದೃಷ್ಟಿಯ ಕೊರತೆ ಈ ಭಾಗದ ಆಡಳಿತದಲ್ಲಿ ಕಂಡುಬಂದಿದೆ ಎಂದು ಹೇಳಿದರು.
ಹಳೆ ಮೈಸೂರು ಭಾಗದಲ್ಲಿ ನಡೆದಷ್ಟು ಶೈಕ್ಷಣಿಕ, ಆರ್ಥಿಕ ಮತ್ತು ಸಾಮಾಜಿಕ ಬೆಳವಣಿಗೆ ಹಾಗೂ ಸಾಮಾಜಿಕ ಚಳವಳಿ ನಿರೀಕ್ಷಿತ ಮಟ್ಟದಲ್ಲಿ ಕಲ್ಯಾಣ ಕರ್ನಾಟಕದಲ್ಲಿ ನಡೆಯಲಿಲ್ಲ. ಜಮೀನ್ದಾರಿ ಪದ್ಧತಿ ಇರುವ ಪ್ರದೇಶಗಳಲ್ಲಿ ಕೆಲಸ ಮಾಡುವವರು ಗುಲಾಮಗಿರಿಯಂತಹ ಪರಿಸ್ಥಿತಿಯಲ್ಲಿ ಬದುಕಬೇಕಾಗುತ್ತದೆ. ಇದರಿಂದ ಅವರಿಗೆ ತಮ್ಮ ಹಕ್ಕುಗಳಿಗಾಗಿ ಧ್ವನಿ ಎತ್ತುವ ಅವಕಾಶವೂ ಕಡಿಮೆಯಾಗುತ್ತದೆ ಎಂದು ಹೇಳಿದರು.ಸರ್ಕಾರದಿಂದ ಆರ್ಥಿಕವಾಗಿ ಹೆಚ್ಚಿನ ನೆರವು ದೊರೆಯುತ್ತಿದ್ದರೂ ಅದಕ್ಕೆ ಅನುಗುಣವಾದ ಅಭಿವೃದ್ಧಿ ಎಲ್ಲ ಕ್ಷೇತ್ರಗಳಲ್ಲೂ ಕಂಡುಬರುತ್ತಿಲ್ಲ.ಹಾಗೇ ಅಭಿವೃದ್ಧಿಯ ಮಾನದಂಡ ಪ್ರಾಂತ್ಯವಾರು ವಿಭಿನ್ನವಾಗಿ ಅನ್ವಯಿಸಿ ನೋಡಬೇಕಾಗುತ್ತದೆ ಎಂದು ತಿಳಿಸಿದರು.
ಹೈದರಾಬಾದ್ ಕರ್ನಾಟಕ ವಿಮೋಚನಾ ದಿನ ಆಚರಿಸುವ ಸಂದರ್ಭದಲ್ಲಿ ಮುಂದಿನ ಭವಿಷ್ಯದ ಉತ್ತರ ಕರ್ನಾಟಕ ಹೇಗಿರಬೇಕು ಎಂಬುದರ ಕುರಿತು ಹೆಚ್ಚು ಆಲೋಚನೆ ನಡೆಸಬೇಕು. ಆ ಆಲೋಚನೆ ಅನುಷ್ಠಾನಗೊಳಿಸಲು ಯಾರ ಮೇಲೆ ಒತ್ತಡ ಹೇರಬೇಕು, ಅದರಲ್ಲಿ ನಮ್ಮ ಪಾತ್ರವೇನು ಎಂಬ ಅರಿವು ಮೂಡಿಸಿಕೊಂಡಾಗ ಮಾತ್ರ ಈ ಭಾಗದ ಅಭಿವೃದ್ಧಿ ಸಾಧ್ಯವಾಗುತ್ತದೆ ಎಂದು ಹೇಳಿದರು.ವಿಶ್ವವಿದ್ಯಾಲಯದ ಕುಲಸಚಿವ ಡಾ.ವಿರೂಪಾಕ್ಷಿ ಪೂಜಾರಹಳ್ಳಿ ಮಾತನಾಡಿ, ಕಲ್ಯಾಣ ಕರ್ನಾಟಕವು ಹಳೆಯ ಶಿಲಾಯುಗದ ಅವಶೇಷ, ಆದಿಮಾನವನ ನೆಲೆ ಹಾಗೂ ಶರಣರ ಪರಂಪರೆಗೆ ಸಂಬಂಧಿಸಿದ ಸ್ಥಳ ಒಳಗೊಂಡಿರುವ ಮಹತ್ವದ ಐತಿಹಾಸಿಕ ಪ್ರದೇಶವಾಗಿದೆ. ಈ ಭಾಗವು ತನ್ನದೇ ಆದ ಶ್ರೀಮಂತ ಇತಿಹಾಸ ಮತ್ತು ಸಾಂಸ್ಕೃತಿಕ ಪರಂಪರೆ ಹೊಂದಿದೆ ಎಂದು ಹೇಳಿದರು.
ವಿಭಾಗದ ಹಿರಿಯ ಪ್ರಾಧ್ಯಾಪಕರು ಮತ್ತು ಮುಖ್ಯಸ್ಥ ಡಾ.ಎಚ್.ಡಿ.ಪ್ರಶಾಂತ್ ಸ್ವಾಗತಿಸಿ, ಪ್ರಾಸ್ತಾವಿಕವಾಗಿ ಮಾತನಾಡಿದರು.ವಿಭಾಗದ ಪ್ರಾಧ್ಯಾಪಕರುಗಳಾದ ಡಾ. ಎ.ಶ್ರೀಧರ, ಡಾ.ಜನಾರ್ದನ ಮತ್ತು ವಿವಿಧ ವಿಭಾಗಗಳ ಡೀನರು, ಬೋಧಕ ಹಾಗೂ ಬೋಧಕೇತರ ಸಿಬ್ಬಂದಿ, ಅಧಿಕಾರಿ, ಸಂಶೋಧನಾ ವಿದ್ಯಾರ್ಥಿಗಳು ಉಪಸ್ಥಿತರಿದ್ದರು.