ಕೇಂದ್ರದಿಂದ 11 ವರ್ಷದಲ್ಲಿ ಜಿಲ್ಲೆಗೆ ಭರಪೂರ ಅನುದಾನ

KannadaprabhaNewsNetwork |  
Published : Jun 12, 2025, 02:22 AM IST
ಚಿಕ್ಕೋಡಿ ಬಿಜೆಪಿ ಕಚೇರಿಯಲ್ಲಿ ರಾಜ್ಯಸಭೆ ಸದಸ್ಯ ಈರಣಾ ಕಡಾಡಿ ಸುದ್ದಿಗೋಷ್ಠಿಯನ್ನುದ್ದೇಶಿಸಿ ಮಾತನಾಡಿದರು. ಸತೀಶ ಅಪ್ಪಾಜಿಗೋಳ,ದುಂಡಪ್ಪ ಬೆಂಡವಾಡೆ, ಅಪ್ಪಾಸಾಹೇಬ ಚೌಗಲಾ, ಅಮೃತ ಕುಲಕರ್ಣಿ ಉಪಸ್ಥಿತರಿದ್ದರು. | Kannada Prabha

ಸಾರಾಂಶ

ಬೆಳಗಾವಿಯಿಂದ ಮಹಾರಾಷ್ಟ್ರದ ಗಡಿಯವರೆಗೆ 6 ಲೇನಿಂಗ್ ಬೈಪಾಸ್ ಸುಮಾರು ₹2868 ಕೋಟಿ ವೆಚ್ಚದಲ್ಲಿ 109.87 ಕಿ.ಮೀ ಉದ್ದದ ಕಾಮಗಾರಿ ಪ್ರಗತಿಯಲ್ಲಿದೆ.

ಕನ್ನಡಪ್ರಭ ವಾರ್ತೆ ಚಿಕ್ಕೋಡಿ

ನರೇಂದ್ರ ಮೋದಿ ನೇತೃತ್ವದ ಕೇಂದ್ರ ಸರ್ಕಾರ ಕಳೆದ 11 ವರ್ಷಗಳ ಆಡಳಿತಾವಧಿಯಲ್ಲಿ ಬೆಳಗಾವಿ ಜಿಲ್ಲೆಯಲ್ಲಿ 5 ರಾಷ್ಟ್ರೀಯ ಹೆದ್ದಾರಿ ಯೋಜನೆಗಳಿಗೆ ₹3,972 ಕೋಟಿ ಅನುದಾನ ಮಂಜೂರು ಮಾಡಿದ್ದು, 238 ಕಿ.ಮೀ ಉದ್ದದ ರಸ್ತೆಗಳು ಪ್ರಗತಿಯಲ್ಲಿವೆ ಎಂದು ರಾಜ್ಯಸಭೆ ಸದಸ್ಯ ಈರಣ್ಣಾ ಕಡಾಡಿ ಹೇಳಿದರು.

ಇಲ್ಲಿನ ಬಿಜೆಪಿ ಕಚೇರಿಯಲ್ಲಿ ಮೋದಿ ನೇತೃತ್ವದ ಸರ್ಕಾರಕ್ಕೆ 11 ವರ್ಷ ಪೂರ್ಣಗೊಂಡ ಹಿನ್ನೆಲೆಯಲ್ಲಿ ಸುದ್ದಿಗೋಷ್ಠಿ ನಡೆಸಿ ಅವರು ಮಾತನಾಡಿದರು.

ಬೆಳಗಾವಿಯಿಂದ ಮಹಾರಾಷ್ಟ್ರದ ಗಡಿಯವರೆಗೆ 6 ಲೇನಿಂಗ್ ಬೈಪಾಸ್ ಸುಮಾರು ₹2868 ಕೋಟಿ ವೆಚ್ಚದಲ್ಲಿ 109.87 ಕಿ.ಮೀ ಉದ್ದದ ಕಾಮಗಾರಿ ಪ್ರಗತಿಯಲ್ಲಿದೆ. ಬೆಳಗಾವಿ ವಿಮಾನ ನಿಲ್ದಾಣದಲ್ಲಿ ಎರಡನೇ ಹೊಸ ಟರ್ಮಿನಲ್ ನಿರ್ಮಾಣಕ್ಕೆ ₹322 ಕೋಟಿ ಅನುದಾನ ಮಂಜೂರಾಗಿದೆ. ಲೋಂಡಾ- ಬೆಳಗಾವಿ- ಘಟಪ್ರಭಾ ವಿಭಾಗದ ನಡುವಿನ ರೈಲು ಮಾರ್ಗವನ್ನು ದ್ವಿಗುಣಗೊಳಿಸಲು ₹930 ಕೋಟಿ ವೆಚ್ಚದಲ್ಲಿ ಅಭಿವೃದ್ಧಿ ಪಡಿಸಲಾಗಿದೆ. ₹927 ಕೋಟಿ ವೆಚ್ಚದ ಧಾರವಾಡ ಬೆಳಗಾವಿ ಮುಖಾಂತರ ಕಿತ್ತೂರು ರೈಲ್ವೆ ಮಾರ್ಗ ನಿರ್ಮಾಣಕ್ಕೆ ಕ್ರಮ ಕೈಗೊಂಡಿದ್ದು, ಈ ಯೋಜನೆಗಾಗಿ ಭೂಸ್ವಾಧೀನ ಪ್ರಗತಿಯಲ್ಲಿದ್ದು ₹150 ಕೋಟಿ ಅನುದಾನ ಮೀಸಲಿಡಲಾಗಿದೆ ಎಂದು ತಿಳಿಸಿದರು.

ಕುಡಚಿ- ಬಾಗಲಕೋಟೆ ರೈಲು ಮಾರ್ಗಕ್ಕೆ ₹210 ಕೋಟಿ ಅನುದಾನ, ಕುಡಚಿ- ಬಾಗಲಕೋಟೆ ಮಾರ್ಗದ ಭೂಸ್ವಾಧೀನ ಪಕ್ರಿಯೆ ಪೂರ್ಣಗೊಂಡಿದೆ. ಬೆಳಗಾವಿ ರೈಲು ನಿಲ್ದಾಣವನ್ನು ₹190 ಕೋಟಿ ವೆಚ್ಚದಲ್ಲಿ ಮರು ಅಭಿವೃದ್ಧಿಪಡಿಸಲಾಗಿದೆ. ಜಿಲ್ಲೆಯ 4 ನಿಲ್ದಾಣಗಳನ್ನು ಅಮೃತ್ ನಿಲ್ದಾಣಗಳಾಗಿ ಅಭಿವೃದ್ಧಿಪಡಿಸಲಾಗುತ್ತಿದೆ. ಗೋಕಾಕ ರಸ್ತೆ (₹17 ಕೋಟಿ), ಘಟಪ್ರಭಾ (₹18.2 ಕೋಟಿ), ಚಿಕ್ಕೋಡಿ ರಸ್ತೆ (₹18.5 ಕೋಟಿ), ಹಾಗೂ ರಾಯಬಾಗ ನಿಲ್ದಾಣ (₹18.5 ಕೋಟಿ)ಕ್ಕೆ ಹುಬ್ಬಳಿ ಮತ್ತು ಮಿರಜ್ ರೈಲು ಮಾರ್ಗದ ಡಬಲಿಂಗ್ ಪೂರ್ಣಗೊಂಡು ವಿದ್ಯುತ್ ಚಾಲಿತ ರೈಲು ಸಂಚಾರ ಪ್ರಾರಂಭವಾಗಿದೆ ಎಂದು ಹೇಳಿದರು.

ಬೆಳಗಾವಿ ನಗರದಲ್ಲಿ ₹1622.04 ಕೋಟಿ ವೆಚ್ಚದಲ್ಲಿ 34.48 ಕಿ.ಮೀ ವರ್ತುಲ್ (ರಿಂಗ್)ರಸ್ತೆ ನಿರ್ಮಾಣ ಯೋಜನೆಯ ಭೂಸ್ವಾಧೀನ ಪ್ರಗತಿಯಲ್ಲಿದೆ. ರಾಷ್ಟ್ರೀಯ ಹೆದ್ದಾರಿ 548 ಬಿ ಚಿಕ್ಕೋಡಿ ಬೈಪಾಸ್‌ನಿಂದ -ಗೋಟೂರುವರೆಗೆ ₹941.61 ಕೋಟಿ ವೆಚ್ಚದಲ್ಲಿ 27.12 ಕಿ.ಮೀ ಉದ್ದದ ಚತುಷ್ಪಥ ರಸ್ತೆ ನಿರ್ಮಾಣ, ಶಿರಗುಪ್ಪಿಯಿಂದ ಅಂಕಲಿವರೆಗೆ ₹887.32 ಕೋಟಿ, ಮುರಗುಂಡಿಯಿಂದ ಚಿಕ್ಕೋಡಿ ಹತ್ತಿರವರೆಗೆ ₹785.79 ಕೋಟಿ ವೆಚ್ಚದಲ್ಲಿ 50.2 ಕಿ.ಮೀ ಉದ್ದದ ರಸ್ತೆ ಅಗಲೀಕರಣ ಕಾಮಗಾರಿಗೆ ಚಾಲನೆ ಸಿಗಲಿದೆ ಎಂದರು. ಜಲ ಜೀವನ್ ಮಿಷನ್ ಯೋಜನೆಯಡಿ ಮನೆ, ಮನೆಗೆ ನೀರು ಒದಗಿಸುವ ಸುಮಾರು ₹1585 ಕೋಟಿಗಳಲ್ಲಿ 315ಕ್ಕೂ ಹೆಚ್ಚು ಹಳ್ಳಿಗಳ ಸುಮಾರು 8.8 ಲಕ್ಷ ಜನಸಂಖ್ಯೆಗೆ ಪ್ರಯೋಜನವಾಗಿದೆ. ಮಹಾತ್ಮಾ ಗಾಂಧಿ ರಾಷ್ಟ್ರೀಯ ಗ್ರಾಮೀಣ ಉದ್ಯೋಗ ಖಾತ್ರಿ ಯೋಜನೆಯಡಿ 2020-21ರಿಂದ ಇದುವರೆಗೆ 1,50,040 ಫಲಾನುಭವಿಗಳು ₹41647.43 ಮೊತ್ತದ ಅನುದಾನ ಬಿಡುಗಡೆಯಾಗಿದೆ ಎಂದು ತಿಳಿಸಿದರು.

ಸುದ್ದಿಗೋಷ್ಠಿಯಲ್ಲಿ ಬಿಜೆಪಿ ಜಿಲ್ಲಾಧ್ಯಕ್ಷ ಸತೀಶ ಅಪ್ಪಾಜಿಗೋಳ, ದುಂಡಪ್ಪ ಬೆಂಡವಾಡೆ, ಅಪ್ಪಾಸಾಹೇಬ ಚೌಗಲಾ, ಅಮೃತ ಕುಲಕರ್ಣಿ, ಸಿದ್ದು ನರಾಟೆ, ಪವನ ಮಹಾಜನ್, ರಾಜು ಹರಗನ್ನವರ, ರಮೇಶ ಕಾಳನ್ನವರ ಉಪಸ್ಥಿತರಿದ್ದರು.

ಸಿಎಂ ಸಿದ್ದು ತಮ್ಮ ಸಾಧನೆ ಮಂಡಿಸಲಿ

ರಾಜ್ಯದಲ್ಲಿ ಆಡಳಿತ ನಡೆಸುತ್ತಿರುವ ಕಾಂಗ್ರೆಸ್ ಸರ್ಕಾರದ ಆಡಳಿತದಲ್ಲಿ ಹೊಂದಾಣಿಕೆ ಇಲ್ಲದೇ ಯೋಜನೆಗಳ ಅನುಷ್ಠಾನಕ್ಕೆ ಹಿನ್ನಡೆಯಾಗುತ್ತಿದೆ. ಕೇಂದ್ರದ ಯೋಜನೆಗಳನ್ನು ಜಾರಿಗೆ ತರಲು ವಿಫಲವಾಗಿ ಕೇಂದ್ರದ ಸಾಧನೆ ಶೂನ್ಯ ಎಂದು ಹೇಳುವ ಸಿದ್ದರಾಮಯ್ಯನವರು ಒಂದೇ ವೇದಿಕೆಯಲ್ಲಿ ಬಂದು ತಮ್ಮ ಸಾಧನೆಗಳನ್ನು ಮಂಡಿಸಲಿ ಎಂದು ರಾಜ್ಯಸಭೆ ಸದಸ್ಯ ಈರಣ್ಣಾ ಕಡಾಡಿ ಸವಾಲು ಹಾಕಿದರು.

ರಾಜ್ಯ ಸರ್ಕಾರದಲ್ಲಿ ಸಿಎಂ ಹಾಗೂ ಡಿಸಿಎಂ ನಡುವೆ ಸರಿಯಾಗಿ ಹೊಂದಾಣಿಕೆ ಇಲ್ಲದ ಕಾರಣ ಐಪಿಎಲ್ ಅಭಿನಂದನಾ ಸಮಾರಂಭದಂದು ಚಿನ್ನಸ್ವಾಮಿ ಕ್ರೀಡಾಂಗಣ ಲಾಕ್ ಮಾಡುವಂತೆ ಸಿಎಂ ಮೌಖಿಕ ಆದೇಶ ನೀಡಿದ್ದರಿಂದ ನಡೆದ ಕಾಲತ್ತುಳಿತದಿಂದ 11 ಜನ ಸಾವನಪ್ಪಿದ್ದು ಇದಕ್ಕೆ ಸಿಎಂ ಸಿದ್ದರಾಮಯ್ಯನವರೇ ಹೊಣೆ. ಕಾಲ್ತುಳಿತ ಪ್ರಕರಣ ಮುಚ್ಚಿಹಾಕಿ ಡ್ರೈವರ್ಟ್‌ ಮಾಡಲು ಈಗ ಜಾತಿಗಣತಿ ವಿಚಾರ ಮುನ್ನೆಲೆಗೆ ತಂದು, ಮರುಗಣತಿ ಮಾಡುವ ಹುನ್ನಾರ ನಡೆಸಿದ್ದಾರೆ. ಇದರಿಂದ ರಾಜ್ಯ ಸರ್ಕಾರಕ್ಕೆ ಆರ್ಥಿಕ ಹೊರೆ ಬಿಳ್ಳಲಿದೆ ಎಂದು ಅವರು ಆರೋಪಿಸಿದ್ದಾರೆ.

PREV

Recommended Stories

ಸರ್ಕಾರಿ ಶಾಲೆ ಕುಡಿವ ನೀರಿಗೆ ವಿಷ ಬೆರೆಸಿದ್ದಕ್ಕೆ ಸಿಎಂ ಗರಂ
ಡಾ.ರಾಜ್‌ಕುಮಾರ್‌ರ ನೆಚ್ಚಿನ ಸಹೋದರಿ ನಾಗಮ್ಮ ನಿಧನ