ಅಧಿಕಾರಿಗಳ ನಿರ್ಲಕ್ಷೆಗೆ ದೂರುಗಳೇ ಸಾಕ್ಷಿ: ತರಾಟೆ

KannadaprabhaNewsNetwork |  
Published : Jun 12, 2025, 02:19 AM IST
ಹೊನ್ನಾಳಿ ಫೋಟೋ 11ಎಚ್.ಎಲ್.ಐ1.ಬುಧವಾರ ಪಟ್ಟಣದ ಪ್ರವಾಸಿಮಂದಿರದಲ್ಲಿ ಲೋಕಾಯುಕ್ತರ ಭೇಟಿ ವೇಳೆ ಸಾರ್ವಜನಿಕರು ತಮ್ಮ ಸಮಸ್ಯೆಗಳ ಬಗ್ಗೆ ಅಹವಾಲುಗಳನ್ನು ಸಲ್ಲಿಸಿದರು. ಲೋಕಾಯುಕ್ತ ಎಸ್ಪಿ,ಎಂ.ಎಸ್.ಕೌಲಾಪುರೆ, ಡಿವೈಎಸ್ಪಿ ಗುರುಬವರಾಜ, ಕಲಾವತಿ, ಇನ್ಸಪೆಕ್ಟರ್ ಸರಳ ಸೇರಿದಂತೆ ಅಧಿಕಾರಿಗಳ‍ು ಇದ್ದರು.    | Kannada Prabha

ಸಾರಾಂಶ

ಸರ್ಕಾರಿ ನೌಕರಿ ಸಿಕ್ಕಿರುವುದು ಪುಣ್ಯ. ಅಧಿಕಾರಿಗಳು ತಾವೇ ಸರ್ವಾಧಿಕಾರಿಗಳೆಂದು ಭಾವಿಸದೇ, ಜನರ ಸೇವೆ ಮಾಡುವ ಮನೋಭಾವನೆ ಬೆಳೆಸಿಕೊಳ್ಳಬೇಕು ಎಂದು ಅಧಿಕಾರಿಗಳಿಗೆ ದಾವಣಗೆರೆ ಲೋಕಾಯುಕ್ತ ಎಸ್‌ಪಿ ಎಂ.ಎಸ್. ಕೌಲಾಪುರೆ ತರಾಟೆ ತೆಗೆದುಕೊಂಡರು.

- ಸರ್ಕಾರ ಸಂಬಳ ಕೊಡೋದು ಜನಸೇವೆಗೆ, ಅಲೆದಾಡಿಸಬೇಡಿ: ಲೋಕಾಯುಕ್ತ ಎಸ್‌ಪಿ

- - -

ಕನ್ನಡಪ್ರಭ ವಾರ್ತೆ ಹೊನ್ನಾಳಿ

ಸರ್ಕಾರಿ ನೌಕರಿ ಸಿಕ್ಕಿರುವುದು ಪುಣ್ಯ. ಅಧಿಕಾರಿಗಳು ತಾವೇ ಸರ್ವಾಧಿಕಾರಿಗಳೆಂದು ಭಾವಿಸದೇ, ಜನರ ಸೇವೆ ಮಾಡುವ ಮನೋಭಾವನೆ ಬೆಳೆಸಿಕೊಳ್ಳಬೇಕು ಎಂದು ಅಧಿಕಾರಿಗಳಿಗೆ ದಾವಣಗೆರೆ ಲೋಕಾಯುಕ್ತ ಎಸ್‌ಪಿ ಎಂ.ಎಸ್. ಕೌಲಾಪುರೆ ತರಾಟೆ ತೆಗೆದುಕೊಂಡರು.

ಪಟ್ಟಣದ ಪ್ರವಾಸಿ ಮಂದಿರದಲ್ಲಿ ಬುಧವಾರ ಸಾರ್ವಜನಿಕರ ಅಹವಾಲುಗಳನ್ನು ಸ್ವೀಕರಿಸಿ ಅಧಿಕಾರಿಗಳನ್ನು ಉದ್ದೇಶಿಸಿ ಮಾತನಾಡಿದರು.

ಸಾರ್ವಜನಿಕರು ಇವತ್ತು ಸಲ್ಲಿಸಿರುವ ದೂರುಗಳನ್ನು ನೋಡಿದರೆ ಅಧಿಕಾರಿಗಳು ಎಷ್ಟರಮಟ್ಟಿಗೆ ಜನರ ಕಷ್ಟಕಾರ್ಪಣ್ಯಗಳಿಗೆ ಸ್ಪಂದಿಸುತ್ತಿದ್ದೀರಿ ಎಂದು ತಿಳಿಯುತ್ತದೆ. ಸರ್ಕಾರ ನಮಗೆ ಸಂಬಳ ಕೊಟ್ಟು ನೇಮಕ ಮಾಡಿರುವುದು ಜನಸೇವೆ ಮಾಡಲೆಂದು. ಅದರೆ ನೀವು ಸಮಸ್ಯೆಗಳಿಗೆ ಸ್ಪಂದಿಸದೇ, ಅವರನ್ನು ಕಚೇರಿಯಿಂದ ಕಚೇರಿಗಳಿಗೆ ಅಲೆದಾಡಿಸುತ್ತಿದ್ದೀರಿ. ಇಂಥ ಧೋರಣೆ ಸಲ್ಲದು. ಇದು ಮುಂದುವರಿದರೆ ನಿಮ್ಮಗಳ ವಿರುದ್ಧ ಕ್ರಮ ತೆಗೆದುಕೊಳ್ಳುವುದಕ್ಕೆ ಮೇಲಧಿಕಾರಿಗಳಿಗೆ ಶಿಫಾರಸು ಮಾಡಬೇಕಾಗುತ್ತದೆ ಎಂದು ಚಾಟಿ ಬೀಸಿದರು.

ಎಸ್‌ಪಿ ಅವರು ಹೊನ್ನಾಳಿ ಪಟ್ಟಣದ ಪುರಸಭೆ ವ್ಯಾಪ್ತಿಯ ಖಾಸಗಿ ಲೇಔಟ್‌ನಲ್ಲಿ ಖರಾಬು ಜಮೀನನ್ನು ಒತ್ತುವರಿ ಮಾಡಿಕೊಂಡು ಲೇಔಟ್ ಮಾಡಿರುವ ಬಗ್ಗೆಯೂ ಸ್ಥಳೀಯರಿಂದ ದೂರು ಸ್ವೀಕರಿಸಿದರು. ಪುರಸಭೆ ಮುಖ್ಯಾಧಿಕಾರಿ ಲೀಲಾವತಿ, ಕಂದಾಯ ಇಲಾಖೆಯ ಕಸಬಾ ಆರ್.ಐ. ಮತ್ತು ವಿ.ಎ. ಅವರಿಗೆ ಒಂದು ವಾರದೊಳಗೆ ಖರಾಬು ಜಮೀನನ್ನು ತೆರವುಗೊಳಿಸಿ, ಕೂಡಲೇ ಲೋಕಾಯುಕ್ತರಿಗೆ ಸಮಗ್ರ ವರದಿ ಸಲ್ಲಿಸಬೇಕು ಎಂದು ತಾಕೀತು ಮಾಡಿದರು.

ವಸತಿ ಶಾಲೆಗಳಲ್ಲಿ ತಂದೆ ಅಥವಾ ತಾಯಿ ಕಳೆದುಕೊಂಡ (ಸಿಂಗಲ್ ಪೇರೆಂಟ್) ಮಕ್ಖಳಿಗೆ ಪ್ರವೇಶಾತಿಯಲ್ಲಿ ಆದ್ಯತೆ ನೀಡಬೇಕು. ಆದರೆ, ತಾಲೂಕಿನ ಕೆಲವು ವಸತಿ ಶಾಲೆಗಳಲ್ಲಿ ಜನಪ್ರತಿನಿಧಿಗಳು ಹೇಳಿದ ಮಕ್ಕಳಿಗೆ ಮಾತ್ರ ಪ್ರವೇಶ ನೀಡುತ್ತಿದ್ದಾರೆ ಎಂದು ಹಲವಾರು ಪೋಷಕರು ದೂರಿದ್ದರಿಂದ ಸಂಬಂಧಪಟ್ಟ ಇಲಾಖೆ ಅಧಿಕಾರಿಗಳನ್ನು ಕರೆಸಿ, ಯಾವ ಮಾನದಂಡದ ಮೇಲೆ ವಿದ್ಯಾರ್ಥಿಗಳಿಗೆ ಪ್ರವೇಶ ನೀಡುತ್ತಿದ್ದೀರಿ ಎಂದು ಪ್ರಶ್ನಿಸಿದರು. ಆಗ ವಿದ್ಯಾರ್ಥಿಗಳ ಮೆರಿಟ್ ಮತ್ತು ಇಲಾಖೆ ನಿಯಮಗಳ ಅನುಸಾರ ಪ್ರವೇಶ ನೀಡಲಾಗುತ್ತಿದೆ ಎಂದು ಅಧಿಕಾರಿಗಳು ಸಮಜಾಯಿಷಿ ನೀಡಿದರು. ಪ್ರವೇಶಾತಿಯನ್ನು ಯಾವುದೇ ಶಿಫಾರಸಿಗೆ ಮಣಿಯದೇ ನಿಯಮಾನುಸಾರ ಮಕ್ಕಳಿಗೆ ಪ್ರವೇಶ ನೀಡಿ ಎಂದು ಹೇಳಿದರು.

ಅತಿ ಹೆಚ್ಚಾಗಿ ಗ್ರಾಮ ಪಂಚಾಯಿತಿಗಳಲ್ಲಿ ಇ-ಸ್ವತ್ತು ಮಾಡಿಕೊಡದೇ ಇರುವ ಬಗ್ಗೆ ಸಾಕಷ್ಟು ದೂರುಗಳು ಬಂದಿದ್ದರ ಬಗ್ಗೆ ಮಾತನಾಡಿದ ಎಸ್‌ಪಿ ಅವರು, ಸಂಬಂಧಿಸಿದ ತಾಲೂಕು ಪಂಚಾಯಿತಿ ಇ.ಒ. ಪ್ರಕಾಶ್ ಅವರಿಗೆ ಈ ರೀತಿ ಅನಗತ್ಯ ದೂರುಗಳು ಬಾರದೇ ಇರುವ ಬಗ್ಗೆ ತಮ್ಮ ಅಧೀನ ಪಿಡಿಒಗಳಿಗೆ ಸೂಕ್ತ ಮಾರ್ಗದರ್ಶನ ನೀಡಬೇಕು ಎಂದರು.

ಸ್ಥಳೀಯ ಸರ್ಕಾರಿ ಆಸ್ಪತ್ರೆಯಲ್ಲಿ ರಾತ್ರಿ ಪಾಳಿಯಲ್ಲಿ ಕೇವಲ ಒಬ್ಬ ವೈದ್ಯರಿರುತ್ತಾರೆ. ಇದರಿಂದ ರೋಗಿಗಳಿಗೆ ಅನಾನುಕೂಲವಾಗುತ್ತಿದೆ. ಇದರ ಜೊತಗೆ ಹೊರಗೆ ಔಷಧಿಗಳನ್ನು ತರಲು ಚೀಟಿ ಬರೆದುಕೊಡಲಾಗುತ್ತಿದೆ ಎಂದು ಅಸ್ಪತ್ರೆ ಅವ್ಯವಸ್ಥೆಗಳ ಬಗ್ಗೆ ಜನರು ಲೋಕಾಯುಕ್ತ ಎಸ್‌ಪಿ ಗಮನಕ್ಕೆ ತಂದರು. ಈ ಬಗ್ಗೆ ಮೇಲಧಿಕಾರಿಗಳ ಗಮನಕ್ಕೆ ತರಲಾಗುವುದು ಎಂದು ದೂರುದಾರರಿಗೆ ಎಸ್‌ಪಿ ಅವರು ಭರವಸೆ ನೀಡಿದರು.

ಲೋಕಾಯುಕ್ತ ಡಿವೈಎಸ್‌ಪಿಗಳಾದ ಗುರುಬಸವರಾಜ, ಕಲಾವತಿ ಇನ್‌ಸ್ಪೆಕ್ಟರ್‌ ಸರಳ, ಲೋಕಾಯುಕ್ತ ಸಿಬ್ಬಂದಿ, ತಾಲೂಕಿನ ವಿವಿಧ ಇಲಾಖೆಗಳ ಅಧಿಕಾರಿಗಳು, ಸಾರ್ವಜನಿಕರು ಇದ್ದರು.

- - -

-11ಎಚ್.ಎಲ್.ಐ1:

PREV
Get the latest news from across Karnataka (ಕರ್ನಾಟಕ ನ್ಯೂಸ್)— breaking headlines, politics, local developments, crime reports, district updates, civic issues and more. Stay informed with Kannada Prabha’s real‑time Karnataka news coverage.

Recommended Stories

ಹೊಸ ವರ್ಷ 2026: ಜನರಿಂದ ತುಂಬಿ ತುಳುಕಿದ ಪ್ರವಾಸಿ ತಾಣಗಳು
ದೇಹದಾರ್ಢ್ಯ ಶಿಸ್ತು ಕಲಿಸುತ್ತದೆ: ಶಾಸಕ ಇಕ್ಬಾಲ್ ಹುಸೇನ್