ಕನ್ನಡಪ್ರಭ ವಾರ್ತೆ ಹರಿಹರ
ಶಾಸಕ ಹರೀಶ್ ಕೇಂದ್ರ ರೈಲ್ವೆ ರಾಜ್ಯ ಸಚಿವ ವಿ.ಸೋಮಣ್ಣ ಅವರನ್ನು ಕಳೆದ 15 ದಿನಗಳ ಹಿಂದೆ ಭೇಟಿ ಮಾಡಿ ನಗರದ ಅಮರಾವತಿ ಬಳಿ ಇರುವ ರೈಲ್ವೆ ಸೇತುವೆ ಅವ್ಯವಸ್ಥೆ ಬಗ್ಗೆ ಮಾಹಿತಿ ನೀಡಿದ್ದ ಹಿನ್ನೆಲೆ ಶುಕ್ರವಾರ ಪರಿಶೀಲನೆಗೆ ಆಗಮಿಸಿದ ರಾಜ್ಯ ರೈಲ್ವೆ ಅಧಿಕಾರಿಗಳೊಂದಿಗೆ ಮಾತನಾಡಿದರು.
ನಗರದಿಂದ ದಾವಣಗೆರೆಗೆ ದಿನವೂ ಸಾವಿರಾರು ವಾಹನಗಳು ಸಂಚರಿಸುತ್ತವೆ. ಅವೆಲ್ಲವೂ ರೈಲ್ವೆ ಮೇಲ್ಸೇತುವೆ ಹಾಗೂ ಪರ್ಯಾಯ ರಸ್ತೆ ಮೂಲಕ ಸಂಚರಿಸುತ್ತವೆ. ಅದರೆ ಮೇಲ್ಸೇತುವೆ ತಗ್ಗು ಗುಂಡಿಗಳಿಂದ ಕೂಡಿದೆ. ಸೇತುವೆಗೆ ಪರ್ಯಾಯವಾಗಿ ನಿರ್ಮಿಸಿರುವ ಸರ್ವೀಸ್ ರಸ್ತೆಯೂ ಹಾಳಾಗಿದೆ ಎಂದು ಹೇಳಿದರು.ಅಮರಾವತಿ, ಕೇಶವ ನಗರ, ಸಾಹಿಬಾಬಾ ಮಂದಿರ, ಪಟೇಲ್ ಬಡಾವಣೆ, ಟಿಪ್ಪು ನಗರ ಭಾಗದಿಂದ ಅನೇಕರು ರೈಲ್ವೆ ಹಳಿಯ ಕೆಳಗೆ ನಿರ್ಮಿಸಿರುವ ಅಂಡರ್ ಬಿಡ್ಜ್ ಮೂಲಕವೇ ನಗರ ಹಾಗೂ ದಾವಣಗೆರೆ ಸಂಚರಿಸಬೇಕು ಆದರೆ ಅಂಡರ್ ಬಿಡ್ಜ್ ಕೆಳಭಾಗ ಸಂಪೂರ್ಣ ಗುಂಡಿಮಯವಾಗಿದ್ದು, ಮಳೆಗಾಲದಲ್ಲಿ ಒಂದು ಬಾರಿ ಮಳೆ ಆದರೆ 15 ದಿನ ಮೊಳಕಾಲ ವರೆಗೂ ನೀರು ನಿಲ್ಲುತ್ತದೆ ಅನೇಕರು ಅದರಲ್ಲಿ ಬಿದ್ದು ತೊಂದರೆ ಅನುಭವಿಸಿದ್ದಾರೆ. ಅಂಡರ್ ಬ್ರಿಡ್ಜ್ ಹಾಗೂ ಸರ್ವೀಸ್ ರಸ್ತೆ ನಿರ್ಮಾಣ ಕಾಮಗಾರಿ ಕಳಪೆ ಗುಣಮಟ್ಟದಿಂದ ಕೂಡಿರುವ ಕಾರಣ, ನೆಲಕ್ಕೆ ಹಾಕಿರುವ ಕಬ್ಬಿಣದ ರಾಡುಗಳು ಎದ್ದು ನಿಂತಿವೆ ಎಂದರು.
ಬೆಂಗಳೂರಿನ ಎಇಇ ಪುರುಶೊತ್ತಮ್ ಮಾತನಾಡಿ, ಅಂಡರ್ ಬಿಡ್ಜ್ ಕೆಳಗೆ ಚರಂಡಿ ನೀರು ಹರಿದು ಬರುತ್ತಿದೆ. ಅದನ್ನು ನಗರಸಭೆಯವರು ಸರಿ ಪಡಿಸಿ ಚರಂಡಿ ನಿರ್ಮಿಸಿದಲ್ಲಿ ಅಂಡರ್ ಬಿಡ್ಜ್‌ನಲ್ಲಿ ನೀರು ಬರುವುದಿಲ್ಲ ಎಂದರು