ಕನ್ನಡಪ್ರಭ ವಾರ್ತೆ ಬೆಂಗಳೂರು

ರಾಜಧಾನಿ ಬೆಂಗಳೂರಿನಲ್ಲಿ ವಿಧ್ವಂಸಕ ಕೃತ್ಯಗಳನ್ನು ಎಸಗಲು ಸಂಚು ರೂಪಿಸಿದ್ದ ಲಷ್ಕರ್-ಎ-ತೊಯ್ಬಾ ಸಂಘಟನೆಯ ಶಂಕಿತ ಉಗ್ರ ಉಗ್ರನ ಪತ್ತೆಗಾಗಿ ರಾಷ್ಟ್ರೀಯ ತನಿಖಾ ದಳ (ಎನ್ಐಎ) ₹5 ಲಕ್ಷ ನಗದು ಬಹುಮಾನ ಘೋಷಿಸಿದೆ.

ಪ್ರಕರಣದ ಮಾಸ್ಟರ್ ಮೈಂಡ್ ಎನ್ನಲಾಗಿರುವ ಜುನೈದ್ ಅಹಮದ್ (33) ಪತ್ತೆಗಾಗಿ ₹5 ಲಕ್ಷ ಬಹುಮಾನವನ್ನು ಘೋಷಿಸಲಾಗಿದ್ದು, ಈತನ ಸುಳಿವು ನೀಡಿದವರ ಮಾಹಿತಿಯನ್ನು ಗೌಪ್ಯವಾಗಿ ಇರಿಸಲಾಗುವುದು ಎಂದು ಎನ್ಐಎ ತಿಳಿಸಿದೆ.

2017ರಲ್ಲಿ ನಡೆದಿದ್ದ ಕೊಲೆ ಪ್ರಕರಣವೊಂದರಲ್ಲಿ ಜುನೈದ್‌ ಬೆಂಗಳೂರಿನ ಪರಪ್ಪನ ಅಗ್ರಹಾರ ಜೈಲು ಸೇರಿದ್ದ. 2008ರಲ್ಲಿ ನಡೆದಿದ್ದ ಬೆಂಗಳೂರು ಸರಣಿ ಸ್ಫೋಟದ ರೂವಾರಿ ಟಿ.ನಾಸೀರ್‌ನನ್ನು ಜುನೈದ್‌ ಜೈಲಿನಲ್ಲಿ ಭೇಟಿಯಾಗಿದ್ದ. ನಾಸೀರ್ ಸಂಪರ್ಕಕ್ಕೆ ಬಂದ ನಂತರ ಜುನೈದ್ ಸಂಪೂರ್ಣವಾಗಿ ಮೂಲಭೂತವಾದಕ್ಕೆ ಒಳಗಾಗಿದ್ದ ಎನ್ನಲಾಗಿದೆ. ಜೈಲಿನಿಂದ ಬಿಡುಗಡೆಯಾದ ಬಳಿಕ ಲಷ್ಕರ್-ಎ-ತೊಯ್ಬಾ ಹ್ಯಾಂಡ್ಲರ್‌ಗಳ ಸೂಚನೆಯ ಮೇರೆಗೆ ಬೆಂಗಳೂರಿನಲ್ಲಿ ದೊಡ್ಡ ಮಟ್ಟದ ದಾಳಿ ನಡೆಸಲು ಈತ ಯೋಜನೆ ರೂಪಿಸಿದ್ದ ಎನ್ನಲಾಗಿದೆ.

ತನಿಖೆಯಲ್ಲಿ ಸಂಚು ದೃಢ:


2023ರ ಜುಲೈನಲ್ಲಿ ಸಿಸಿಬಿ ಪೊಲೀಸರು ನಡೆಸಿದ ಕಾರ್ಯಾಚರಣೆಯಲ್ಲಿ ಹೆಬ್ಬಾಳ, ಆರ್.ಟಿ.ನಗರ ಮತ್ತು ಕೊಡಿಗೇಹಳ್ಳಿಯ ಐವರು ಶಂಕಿತರನ್ನು ಬಂಧಿಸಲಾಗಿತ್ತು. ಅವರ ಅಡಗುತಾಣಗಳ ಮೇಲೆ ದಾಳಿ ನಡೆಸಿ 4 ಸಜೀವ ಗ್ರೆನೇಡ್‌ಗಳು, 7 ಪಿಸ್ತೂಲುಗಳು, 45 ಸುತ್ತು ಜೀವಂತ ಗುಂಡುಗಳು, ವಾಕಿ-ಟಾಕಿಗಳು ಮತ್ತು ಇತರ ಎಲೆಕ್ಟ್ರಾನಿಕ್ ಸಾಧನಗಳನ್ನು ವಶಪಡಿಸಿಕೊಳ್ಳಲಾಗಿತ್ತು. ಜುನೈದ್ ನೇತೃತ್ವದಲ್ಲಿ ಈ ಗುಂಪು ನಗರದ ವಿವಿಧೆಡೆ ಸ್ಫೋಟ ನಡೆಸಲು ಸಜ್ಜಾಗಿತ್ತು ಎಂಬುದು ಪೊಲೀಸರ ತನಿಖೆಯಿಂದ ದೃಢಪಟ್ಟಿತ್ತು.

ನಂತರ ಈ ಪ್ರಕರಣದ ಗಂಭೀರತೆಯನ್ನು ಅರಿತು ಇದರ ತನಿಖೆಯನ್ನು ಎನ್ಐಎಗೆ ವಹಿಸಲಾಗಿತ್ತು. ಕಳೆದ 4 ವರ್ಷದಿಂದ ತಲೆಮರೆಸಿಕೊಂಡಿರುವ ಜುನೈದ್, 9 ವಿಭಿನ್ನ ಹೆಸರುಗಳನ್ನು ಬಳಸುತ್ತಿದ್ದಾನೆ ಎಂದು ತಿಳಿದುಬಂದಿದೆ. ಆತನಿಗಾಗಿ ಈಗಾಗಲೇ ದೇಶಾದ್ಯಂತ ವ್ಯಾಪಕ ಶೋಧ ನಡೆಯುತ್ತಿದ್ದು, ಸಾರ್ವಜನಿಕರಲ್ಲಿ ಜಾಗೃತಿ ಮೂಡಿಸಲು ಜುನೈದ್ ಭಾವಚಿತ್ರವಿರುವ ಪೋಸ್ಟರ್‌ಗಳನ್ನು ಪ್ರಮುಖ ಸ್ಥಳಗಳಲ್ಲಿ ಅಂಟಿಸಲಾಗಿದೆ.

ಜುನೈದ್‌ ತಾಯಿಯಿಂದಲೂ ಉಗ್ರನಿಗೆ ಬೆಂಬಲ:

2026ರ ಜನವರಿಯಲ್ಲಿ ಈ ಪ್ರಕರಣಕ್ಕೆ ಸಂಬಂಧಿಸಿದಂತೆ ಪೂರಕ ದೋಷಾರೋಪಪಟ್ಟಿಯನ್ನು ನ್ಯಾಯಾಲಯಕ್ಕೆ ಎನ್ಐಎ ಸಲ್ಲಿಸಿತ್ತು. ಇದರಲ್ಲಿ ಜುನೈದ್ ಅಹಮದ್‌ನ ತಾಯಿ ಅನೀಸ್ ಫಾತಿಮಾ ಸೇರಿದಂತೆ ಇತರರ ಹೆಸರನ್ನು ಉಲ್ಲೇಖಿಸಲಾಗಿತ್ತು. ಜುನೈದ್‌ನ ತಾಯಿ ಅನೀಸ್ ಫಾತಿಮಾ, ಪರಪ್ಪನ ಅಗ್ರಹಾರ ಕಾರಾಗೃಹದಲ್ಲಿರುವ ಟಿ.ನಾಸೀರ್‌ಗೆ ಲಾಜಿಸ್ಟಿಕಲ್ ಬೆಂಬಲ ಮತ್ತು ಹಣವನ್ನು ಒದಗಿಸಿದ್ದಳು.

ಮಗನ ನಿರ್ದೇಶನದ ಮೇರೆಗೆ ಹ್ಯಾಂಡ್ ಗ್ರೆನೇಡ್‌ಗಳು ಮತ್ತು ವಾಕಿ-ಟಾಕಿಗಳನ್ನು ಸಂಗ್ರಹಿಸಿ ಪ್ರಕರಣದ ವಿವಿಧ ಆರೋಪಿಗಳ ನಡುವೆ ಸಂವಹನವನ್ನು ಸುಗಮಗೊಳಿಸಿದ್ದಳು. ಅಲ್ಲದೆ ಪ್ರಮುಖ ಶಂಕಿತ ಸಲ್ಮಾನ್ ಖಾನ್‌ಗೆ ಆಶ್ರಯ ನೀಡುವಲ್ಲಿ ಮತ್ತು ಅವನ ಪ್ರಯಾಣ ದಾಖಲೆಗಳನ್ನು ವ್ಯವಸ್ಥೆ ಮಾಡುವ ಮೂಲಕ ವಿದೇಶಕ್ಕೆ ಪರಾರಿಯಾಗಲು ಸಹಾಯ ಮಾಡಿದ್ದಳು ಎಂಬುದು ಎನ್ಐಎ ತನಿಖೆಯಿಂದ ಬಹಿರಂಗವಾಗಿತ್ತು. ಅಲ್ಲದೆ, ಜೈಲಿನಲ್ಲಿದ್ದ ಕೈದಿಗಳಿಗೆ ಮೊಬೈಲ್ ಪೂರೈಸುತ್ತಿದ್ದ ವೈದ್ಯರೊಬ್ಬನ ಪಾತ್ರವನ್ನೂ ತನಿಖಾ ಸಂಸ್ಥೆ ಬಯಲಿಗೆಳೆದಿತ್ತು.