ಅಮೃತ್ ಭಾರತ್ ಸ್ಟೇಷನ್ ತಿಪಟೂರು ರೈಲ್ವೆ ನಿಲ್ದಾಣದ ಪುನಾರಾಭಿವೃದ್ಧಿ

KannadaprabhaNewsNetwork | Published : Feb 27, 2024 1:32 AM

ಸಾರಾಂಶ

ಸಾರ್ವಜನಿಕ ಸ್ಥಳಗಳ ಅಭಿವೃದ್ಧಿಗೆ ಕೇಂದ್ರ ಸರ್ಕಾರ ಹೆಚ್ಚು ಪ್ರಾಮುಖ್ಯತೆ ನೀಡಿದ್ದು, ಅದರಲ್ಲಿ ತಿಪಟೂರು ರೈಲ್ವೆ ನಿಲ್ದಾಣವನ್ನು 25.63 ಕೋಟಿ ರು.ವೆಚ್ಚದಲ್ಲಿ ಪ್ರಧಾನಿ ನರೇಂದ್ರ ಮೋದಿಯವರು ಪುನರಾಭಿವೃದ್ಧಿಗೊಳಿಸುವ ಮೂಲಕ ಎಲ್ಲಾ ರೀತಿಯ ಅಗತ್ಯ ಮೂಲಭೂತ ಸೌಲಭ್ಯಗಳನ್ನು ಕಲ್ಪಿಸಿ ಹೈಟೆಕ್ ರೈಲ್ವೆ ನಿಲ್ದಾಣಕ್ಕೆ ಮುಂದಾಗಿರುವುದು ಶ್ಲಾಘನೀಯ.

ಪ್ರಯಾಣಿಕರ ಅನುಕೂಲಕ್ಕಾಗಿ ರೈಲು ನಿಲ್ದಾಣ ಅಭಿವೃದ್ಧಿ । ಯೋಜನೆಗೆ ವಿಡಿಯೋ ಕಾನ್ಪರೆನ್ಸ್ ಮೂಲಕ ಪ್ರಧಾನಮಂತ್ರಿಯವರಿಂದ ಚಾಲನೆ

ಕನ್ನಡಪ್ರಭ ವಾರ್ತೆ ತಿಪಟೂರು

ಭಾರತೀಯ ರೈಲ್ವೆ ನಿಲ್ದಾಣಗಳ ಅಭಿವೃದ್ಧಿಗಾಗಿ ‘ಅಮೃತ್ ಭಾರತ್ ಸ್ಟೇಷನ್’ ಯೋಜನೆಯಡಿ ತಿಪಟೂರು ರೈಲ್ವೆ ನಿಲ್ದಾಣವನ್ನು ಪುನರಾಭಿವೃದ್ಧಿಗಾಗಿ ಆಯ್ದುಕೊಳ್ಳಲಾಗಿದ್ದು, ಈ ಹಿನ್ನೆಲೆಯಲ್ಲಿ ಪ್ರಧಾನ ಮಂತ್ರಿ ನರೇಂದ್ರ ಮೋದಿಯವರು ವಿಡಿಯೋ ಕಾನ್ಪರೆನ್ಸ್ ಮೂಲಕ ಸೋಮವಾರ ಉದ್ಘಾಟಿಸಿದರು.

ನಗರದ ತಿಪಟೂರು ರೈಲ್ವೆ ನಿಲ್ದಾಣದಲ್ಲಿ ನೈಋತ್ಯ ರೈಲ್ವೆ ಮೈಸೂರು ವಿಭಾಗದಿಂದ ಆಯೋಜಿಸಿದ್ದ ಕಾರ್ಯಕ್ರಮವನ್ನು ಶಾಸಕ ಕೆ. ಷಡಕ್ಷರಿ ಉದ್ಘಾಟಿಸಿ ಮಾತನಾಡಿ, ಸಾರ್ವಜನಿಕ ಸ್ಥಳಗಳ ಅಭಿವೃದ್ಧಿಗೆ ಕೇಂದ್ರ ಸರ್ಕಾರ ಹೆಚ್ಚು ಪ್ರಾಮುಖ್ಯತೆ ನೀಡಿದ್ದು, ಅದರಲ್ಲಿ ತಿಪಟೂರು ರೈಲ್ವೆ ನಿಲ್ದಾಣವನ್ನು 25.63 ಕೋಟಿ ರು.ವೆಚ್ಚದಲ್ಲಿ ಪ್ರಧಾನಿ ನರೇಂದ್ರ ಮೋದಿಯವರು ಪುನರಾಭಿವೃದ್ಧಿಗೊಳಿಸುವ ಮೂಲಕ ಎಲ್ಲಾ ರೀತಿಯ ಅಗತ್ಯ ಮೂಲಭೂತ ಸೌಲಭ್ಯಗಳನ್ನು ಕಲ್ಪಿಸಿ ಹೈಟೆಕ್ ರೈಲ್ವೆ ನಿಲ್ದಾಣಕ್ಕೆ ಮುಂದಾಗಿರುವುದು ಶ್ಲಾಘನೀಯ. ಹಿಂದೆಲ್ಲಾ ರೈಲುಗಳ ಓಡಾಟ ತೀರಾ ಕಡಿಮೆ ಇತ್ತು. ಆದರೆ ಜನಸಂಖ್ಯೆ ಹೆಚ್ಚಾದಂತೆ ರೈಲುಗಳ ಸಂಖ್ಯೆಯೂ ಹೆಚ್ಚಾಗಿದೆ. ರೈಲ್ವೆ ಮತ್ತು ಬಸ್ ನಿಲ್ದಾಣಗಳಲ್ಲಿ ಪ್ರತಿನಿತ್ಯ ಸಾವಿರಾರು ಸಂಖ್ಯೆಯಲ್ಲಿ ಪ್ರಯಾಣಿಕರು ಓಡಾಡುತ್ತಾರೆ. ಆದರೆ ಇಲ್ಲಿ ಮೂಲಭೂತ ಸೌಲಭ್ಯ ಕಲ್ಪಿಸಿಕೊಡುವುದು ಜನಪ್ರತಿನಿಧಿಗಳ ಹೊಣೆಯಾಗಿದ್ದು, ಬಸ್ ನಿಲ್ದಾಣ, ರೈಲ್ವೆ ನಿಲ್ದಾಣ ಮತ್ತು ಸ್ಮಶಾನ ಸೇರಿ ಪ್ರಮುಖ ಸ್ಥಳಗಳಲ್ಲಿ ಜನರಿಗೆ ಯಾವುದೇ ಕೊರತೆ ಬಾರದಂತೆ ನೋಡಿಕೊಳ್ಳಬೇಕು. ಸರ್ಕಾರ ಅಭಿವೃದ್ಧಿಗಾಗಿ ಕೋಟ್ಯಾಂತರ ರು. ಅನುದಾನ ನೀಡುತ್ತದೆ, ಆದರೆ ನಿರ್ವಹಣೆ ಮಾಡುವ ಅಧಿಕಾರಿಗಳು ಜವಾಬ್ದಾರಿಯಿಂದ ಕೆಲಸ ಮಾಡಬೇಕು. ಇಲ್ಲಿ ಕುಡಿಯುವ ನೀರು, ಕ್ಯಾಂಟಿನ್, ಶೌಚಾಲಯ, ವಿಶ್ರಾಂತಿ ಕೊಠಡಿಗಳು, ಪ್ರಯಾಣಿಕರ ಮಾಹಿತಿ ವ್ಯವಸ್ಥೆ ಸೇರಿ ಎಲ್ಲಾ ರೀತಿಯ ಸೌಲಭ್ಯಗಳು ಬರಲಿದ್ದು, ಪ್ರತಿಯೊಬ್ಬರೂ ಸದ್ಬಳಕೆ ಮಾಡಿಕೊಂಡು ಸ್ವಚ್ಛತೆಯನ್ನು ಕಾಪಾಡಬೇಕೆಂದರು.

ಮಾಜಿ ಸಚಿವ ಬಿ.ಸಿ. ನಾಗೇಶ್ ಮಾತನಾಡಿದರು. ಈ ಸಂದರ್ಭದಲ್ಲಿ ಕಾರ್ಯಕ್ರಮ ಅಂಗವಾಗಿ ವಿವಿಧ ಶಾಲೆಗಳ ಮಕ್ಕಳಿಗಾಗಿ ಏರ್ಪಡಿಸಿದ್ದ ಪ್ರಬಂಧ ಸ್ಪರ್ಧೆ, ಚಿತ್ರಕಲಾ ಸ್ಪರ್ಧೆಗಳಲ್ಲಿ ವಿಜೇತರಾದವರಿಗೆ ಪ್ರಶಸ್ತಿ ಪತ್ರ ಮತ್ತು ಬಹುಮಾನ ವಿತರಣೆ ಮಾಡಲಾಯಿತು. ನಂತರ ಮಕ್ಕಳಿಂದ ನೃತ್ಯ ಕಾರ್ಯಕ್ರಮಗಳು ನಡೆದವು.

ಕಾರ್ಯಕ್ರಮದಲ್ಲಿ ರೈಲ್ವೆ ಇಲಾಖೆಯ ಎಡಿಎಂ ತಿವಾರಿ, ಹಿರಿಯ ವಿಭಾಗೀಯ ವಾಣಿಜ್ಯ ವ್ಯವಸ್ಥಾಪಕ ಜೆ. ಲೋಹಿತೇಶ್ವರ, ತಹಸೀಲ್ದಾರ್ ಪವನ್‌ ಕುಮಾರ್, ತಾಪಂ ಇಒ ಸುದರ್ಶನ್, ನಿಲ್ದಾಣ ವ್ಯವಸ್ಥಾಪಕ ಸತೀಶ್ ಆನಂದ್, ರೈಲ್ವೆ ಅಧಿಕಾರಿ ಜಯರಾಂ, ಶುಭಂನಾಯ್ಕ್ ಸೇರಿದಂತೆ ರೈಲ್ವೆ ಇಲಾಖೆಯ ಅಧಿಕಾರಿಗಳು, ಸಿಬ್ಬಂದಿ ವರ್ಗದವರು ಭಾಗವಹಿಸಿದ್ದರು.

--------------

ತಿಪಟೂರು ರೈಲ್ವೆ ನಿಲ್ದಾಣದಲ್ಲಿ ಆಯೋಜಿಸಿದ್ದ ಕಾರ್ಯಕ್ರಮ ಉದ್ಘಾಟಿಸಿದ ಶಾಸಕ ಕೆ. ಷಡಕ್ಷರಿ,ರೈಲ್ವೆ ಇಲಾಖೆಯ ಎಡಿಎಂ ತಿವಾರಿ, ಹಿರಿಯ ವಿಭಾಗೀಯ ವಾಣಿಜ್ಯ ವ್ಯವಸ್ಥಾಪಕ ಜೆ. ಲೋಹಿತೇಶ್ವರ, ತಹಸೀಲ್ದಾರ್ ಪವನ್‌ ಕುಮಾರ್ ಮತ್ತಿತರರಿದ್ದರು.

Share this article