ಕನ್ನಡಪ್ರಭವಾರ್ತೆ ಚಳ್ಳಕೆರೆ
ಸ್ಥಳೀಯ ಜನ ಜಾನುವಾರುಗಳಿಗೆ ಕಾವಲ್ ಪ್ರದೇಶಕ್ಕೆ ಪ್ರವೇಶ ನಿರ್ಬಂಧಿಸಿ ತೊಂದರೆ ಕೊಡಲು ಶುರು ಮಾಡಿದ ಟ್ರಸ್ಟ್‌ನ ಕುರಿತು ಸಾರ್ವಜನಿಕರು ಅಮೃತ್ ಮಹಲ್ ಕಾವಲ್ ಭೂಮಿಯಲ್ಲಿ ಈಗೆಲ್ಲಾ ಮರಗಿಡಗಳ ಮಾರಣ ಹೋಮ ನಡೆಯಬಾರದು ಅನೇಕ ಔಷಧೀಯ ಗುಣಗಳುಳ್ಳ ಗಿಡಗಳ ನಾಶ ಮಾಡಿ ಬೇರೆ ಗಿಡ ನೆಡುವುದರ ಹಿಂದಿನ ಹಕೀಕತ್ತೇನು ಎಂದು ಪ್ರಶ್ನಿಸಲು ಶುರು ಮಾಡಿ ಸಂಬಂಧ ಪಟ್ಟ ಇಲಾಖೆಗೆ ದೂರು ನೀಡಿ ಸಾಮಾಜಿಕ ಜಾಲತಾಣಗಳಲ್ಲಿ ಹಂಚಿಕೊಂಡಿದ್ದರು. ಇದಾದ ನಂತರ ಇಲ್ಲಿನ ಅನೇಕ ಅಕ್ರಮಗಳು ಬಯಲಿಗೆ ಬಂದಿವೆ.ಕಾವಲ್ ಭೂಮಿ ವ್ಯಾಪ್ತಿಯಲ್ಲಿ ಬೃಹತ್ ಕಾಂಕ್ರೀಟ್ ಕಟ್ಟಡಗಳು, ಶಿವಲಿಂಗ ಇರುವ ದೇಗುಲ, ಈಜುಕೊಳ, ಬೃಹತ್ ಮೈದಾನ ಪಕ್ಕದಲ್ಲೇ ಎರಡು ಹಂತಸ್ತಿನ ಕಟ್ಟಡ, ಅದರ ಪಕ್ಕದಲ್ಲೇ ಅಡಕೆ ತೋಟ ಹೀಗೆ ಸ್ವಂತದ್ದು ಎಂಬಂತೆ ಕಾವಲ್ ಭೂಮಿಯಲ್ಲಿ ಬೇಕಾಬಿಟ್ಟಿ ನಿಯಮ ಮೀರಲಾಗಿದೆ. ಈ ಹಿನ್ನೆಲೆಯಲ್ಲಿ ಮೈಸೂರಿನ ಪಶುಪಾಲನಾ ಇಲಾಖೆ ರಾಜ್ಯ ವಲಯದ ಜಂಟಿ ನಿರ್ದೇಶಕ ಟಿ.ಎಸ್. ಶ್ರೀಧರಮೂರ್ತಿ ನೇತೃತ್ವದಲ್ಲಿ ಅಧಿಕಾರಿಗಳ ತಂಡ ಸ್ಥಳ ಪರಿಶೀಲನೆ ನಡೆಸಿದೆ.
ಅಜ್ಜಂಪುರ ಅಮೃತ್ ಮಹಲ್ ತಳಿ ಸಂವರ್ಧನಾ ಕೇಂದ್ರದ ಉಪ ನಿರ್ದೇಶಕ ಪ್ರಭಾಕರ್, ರಾಮಗಿರಿ ಉಪಕೇಂದ್ರದ ಮಂಜಪ್ಪ, ಎಮ್ಮಿಗನೂರಿನ ಡಾ.ಗಜೇಂದ್ರಕುಮಾರ್, ಚಳ್ಳಕೆರೆ ಪಶು ಸಂಗೋಪನಾ ಇಲಾಖೆ ಸಹಾಯಕ ನಿರ್ದೇಶಕ ಶ್ರೀನಿವಾಸ್ ಬಾಬು, ನಾಯಕನಹಟ್ಟಿ ಪಶು ವೈದ್ಯಾಧಿಕಾರಿಗಳಾದ ವಿಜಯಕುಮಾರ್ ಹಾಗೂ ಸುಮಂತ್ ನಾಯಕ್, ತಾಲೂಕು ಭೂಮಾಪನ ಅಧಿಕಾರಿ ಮತ್ತು ಕಂದಾಯ ಇಲಾಖೆ ಸಿಬ್ಬಂದಿ ಪರಿಶೀಲನೆ ನಡೆಸಿದ್ದಾರೆ.ಐತಿಹಾಸಿಕ ಅಮೃತ್ ಮಹಲ್ ಕಾವಲ್ ಜಮೀನಿನಲ್ಲಿ ಕೋಟಿ ವೃಕ್ಷ ಅಭಿಯಾನದ ನೆಪದಲ್ಲಿ ಸರ್ಕಾರದ ಆದೇಶಗಳ ಸ್ಪಷ್ಟ ಉಲ್ಲಂಘನೆ ಆಗಿರುವುದನ್ನು ಪತ್ತೆ ಹಚ್ಚಿದ್ದಾರೆ. ಸರ್ಕಾರಿ ಆದೇಶದ ಜಂಟಿ ಕ್ರ.ಸಂ: 6 ಮತ್ತು 7ರ ಅನ್ವಯ ಅಕ್ರಮವಾಗಿ ನಿರ್ಮಿಸಿರುವ ಕಟ್ಟಡಗಳು, ಈಜುಕೊಳ ಹಾಗೂ ಅಡಕೆ ತೋಟವನ್ನು ಕೂಡಲೇ ತೆರವು ಗೊಳಿಸುವಂತೆ ಪಶುಪಾಲನಾ ಇಲಾಖೆಯ ಜಂಟಿ ನಿರ್ದೇಶಕರು ಸ್ಥಳೀಯ ಅನುಷ್ಠಾನಾಧಿಕಾರಿಗಳಿಗೆ ಸೂಚನೆ ನೀಡಿ, ಸಂಬಂಧಪಟ್ಟ ಟ್ರಸ್ಟ್ ವಿರುದ್ಧ ಕಾನೂನು ಕ್ರಮ ಕೈಗೊಳ್ಳುವಂತೆ ಅಧಿಕಾರಿಗಳಿಗೆ ತಾಕೀತು ಮಾಡಲಾಗಿದೆ.
ಗುರುವಾರ ದೇನಾ ಭಗತ್ ಸ್ವಾಮೀಜಿ ಎಂದು ಹೇಳಿಕೊಂಡು ಅಮೃತ ಮಹಲ್ ಕಾವಲ್ ಪ್ರದೇಶದಲ್ಲಿ ತನ್ನ ಸ್ವಂತದ್ದೆಂದು ಹೇಳಿಕೊಂಡು ಕಟ್ಟಡ ನಿರ್ಮಿಸಿರುವುದೂ ಸೇರಿದಂತೆ ಅಡಕೆ ತೋಟವನ್ನೂ ಮಾಡಿಕೊಂಡಿದ್ದು ಅಕ್ರಮವಾಗಿದೆ ಎಂಬುದು ಸಾಬೀತಾಗಿರುವುದರಿಂದ ಅಡಕೆ ಗಿಡಗಳನ್ನು ಜೆಸಿಬಿ ಮೂಲಕ ತೆರವುಗೊಳಿಸುವ ಕಾರ್ಯಕ್ಕೆ ಚಾಲನೆ ನೀಡಲಾಗಿದೆ.