ಹುಬ್ಬಳ್ಳಿಯಲ್ಲಿ ಶಿರಹಟ್ಟಿ ಫಕೀರ ಶ್ರೀಗಳ ಅಮೃತ ಮಹೋತ್ಸವ

KannadaprabhaNewsNetwork |  
Published : Dec 22, 2023, 01:30 AM IST
ಪೂರ್ವಭಾವಿ ಸಭೆಯಲ್ಲಿ ಫಕೀರ ದಿಂಗಾಲೇಶ್ವರ ಶ್ರೀಗಳು ಮಾತನಾಡಿದರು. | Kannada Prabha

ಸಾರಾಂಶ

ಫೆ.1ರಂದು ಶಿರಹಟ್ಟಿಯ ಫಕೀರ ಸಿದ್ಧರಾಮ ಶ್ರೀಗಳ ಜನ್ಮದಿನ. ಅಂದು ಶ್ರೀಗಳ ಮೂರ್ತಿ ಇರುವ ಅಂಬಾರಿ ಹೊತ್ತ ಆನೆಯ ಅದ್ಧೂರಿ ಮೆರವಣಿಗೆ ನಡೆಯಲಿದೆ. ಇಲ್ಲಿನ ಮೂರುಸಾವಿರ ಮಠದಿಂದ ಮಧ್ಯಾಹ್ನ 3ಕ್ಕೆ ಪ್ರಾರಂಭವಾಗುವ ಮೆರವಣಿಗೆಯು ನೆಹರು ಮೈದಾನಕ್ಕೆ ಬರಲಿದೆ. ಅಲ್ಲಿ ಸಂಜೆ 6 ಗಂಟೆಗೆ ಆನೆ ಅಂಬಾರಿ ಸಮೇತವಾಗಿಯೇ ಸಿದ್ಧರಾಮ ಶ್ರೀಗಳ ತುಲಾಭಾರ ಕಾರ್ಯಕ್ರಮ ಹಮ್ಮಿಕೊಳ್ಳಲಾಗಿದೆ. ಲಕ್ಷಕ್ಕೂ ಅಧಿಕ ಸಂಖ್ಯೆಯಲ್ಲಿ ಭಕ್ತರು ಭಾಗವಹಿಸುವ ನಿರೀಕ್ಷೆ ಇದೆ

ಹುಬ್ಬಳ್ಳಿ: ಗದಗ ಜಿಲ್ಲೆ ಶಿರಹಟ್ಟಿ ಫಕೀರ ಸಿದ್ಧರಾಮ ಶ್ರೀಗಳ ಅಮೃತ ಮಹೋತ್ಸವವನ್ನು ಹುಬ್ಬಳ್ಳಿಯಲ್ಲಿ ಜ.10 ರಿಂದ 31ರವರೆಗೆ ಆಯೋಜಿಸಲು ನಿರ್ಧರಿಸಲಾಗಿದೆ. ಜ.10 ರಿಂದ 31ರವರೆಗೆ ಭಾವೈಕ್ಯತಾ ಸಂಚಾರಿ ರಥಯಾತ್ರೆ ಹಾಗೂ ಫೆ.1ರಂದು ಜನ್ಮದಿನೋತ್ಸವ. ಅಂದು ಆನೆ, ಅಂಬಾರಿ ಸಮೇತವಾಗಿ ಶ್ರೀಗಳ ನಾಣ್ಯಗಳ ತುಲಾಭಾರ ನಡೆಸಲು ನಿರ್ಧರಿಸಲಾಗಿದೆ. ತುಲಾಭಾರ ಕಾರ್ಯಕ್ರಮವು ಇಲ್ಲಿನ ನೆಹರು ಮೈದಾನದಲ್ಲಿ ನಡೆಯಲಿದೆ.

ಈ ಸಂಬಂಧ ಇಲ್ಲಿನ ಖಾಸಗಿ ಹೋಟೆಲ್‌ನಲ್ಲಿ ನಡೆದ ಪೂರ್ವಭಾವಿ ಸಭೆಯಲ್ಲಿ ಫಕೀರ ದಿಂಗಾಲೇಶ್ವರ ಶ್ರೀಗಳು ಈ ವಿಷಯ ತಿಳಿಸಿದರು.

ಶಿರಹಟ್ಟಿಯಲ್ಲಿನ ಫಕೀರೇಶ್ವರ ಮಠವು ಭಾವೈಕ್ಯತೆ ಸಾರುವ ಮಠ. 500 ವರ್ಷದ ಹಿಂದೆಯೇ ಹಿಂದು- ಮುಸ್ಲಿಮರಲ್ಲಿ ಸಾಮರಸ್ಯ ಸ್ಥಾಪಿಸಲು ಬಹುಸಂಖ್ಯಾತ ಸೂಫಿಗಳು ಅವತರಿಸಿದರು. ಅವರಲ್ಲಿ ಶಿರಹಟ್ಟಿ ಶ್ರೀಗಳು ಅಗ್ರಗಣ್ಯರು. ಇಂದಿಗೂ ಶ್ರೀಮಠವು ದ್ವೇಷ ಬಿಡು, ಪ್ರೀತಿ ಮಾಡು ಎಂಬ ಧ್ಯೇಯದೊಂದಿಗೆ ಎಲ್ಲ ವರ್ಗದ ಜನರೊಂದಿಗೆ ಬೆಸೆದು ಹಿಂದಿನ ಪರಂಪರೆ ಮುಂದುವರೆಸಿಕೊಂಡು ಬಂದಿದೆ ಎಂದರು.ಕಳೆದ ಹಲವು ದಶಕಗಳಿಂದ ಪೀಠಾಧಿಪತಿಯಾಗಿರುವ ಸಿದ್ಧರಾಮ ಶ್ರೀಗಳಿಗೆ ಈಗ 75 ವರ್ಷ. ಈ ಹಿನ್ನೆಲೆಯಲ್ಲಿ ಅಮೃತ ಮಹೋತ್ಸವ ಆಚರಿಸಲಾಗುತ್ತಿದೆ. ಭಿನ್ನ,ವೈಶಿಷ್ಟ್ಯವಾಗಿ ಆಚರಿಸಲು ಭಕ್ತರು ತೀರ್ಮಾನಿಸಿದ್ದಾರೆ. ಜ. 10ರಿಂದ 31ರ ವರೆಗೆ 21ದಿನಗಳ ಕಾಲ ನಗರದ ಪ್ರತಿ ವಾರ್ಡ್‌ಗಳಲ್ಲಿ ಭಾವೈಕ್ಯತಾ ಸಂಚಾರಿ ರಥಯಾತ್ರೆ ಜರುಗಲಿದೆ ಎಂದರು.ಆನೆ ಅಂಬಾರಿ ತುಲಾಭಾರ:ಫೆ.1ರಂದು ಶಿರಹಟ್ಟಿಯ ಫಕೀರ ಸಿದ್ಧರಾಮ ಶ್ರೀಗಳ ಜನ್ಮದಿನ. ಅಂದು ಶ್ರೀಗಳ ಮೂರ್ತಿ ಇರುವ ಅಂಬಾರಿ ಹೊತ್ತ ಆನೆಯ ಅದ್ಧೂರಿ ಮೆರವಣಿಗೆ ನಡೆಯಲಿದೆ. ಇಲ್ಲಿನ ಮೂರುಸಾವಿರ ಮಠದಿಂದ ಮಧ್ಯಾಹ್ನ 3ಕ್ಕೆ ಪ್ರಾರಂಭವಾಗುವ ಮೆರವಣಿಗೆಯು ನೆಹರು ಮೈದಾನಕ್ಕೆ ಬರಲಿದೆ. ಅಲ್ಲಿ ಸಂಜೆ 6 ಗಂಟೆಗೆ ಆನೆ ಅಂಬಾರಿ ಸಮೇತವಾಗಿಯೇ ಸಿದ್ಧರಾಮ ಶ್ರೀಗಳ ತುಲಾಭಾರ ಕಾರ್ಯಕ್ರಮ ಹಮ್ಮಿಕೊಳ್ಳಲಾಗಿದೆ. ಲಕ್ಷಕ್ಕೂ ಅಧಿಕ ಸಂಖ್ಯೆಯಲ್ಲಿ ಭಕ್ತರು ಭಾಗವಹಿಸುವ ನಿರೀಕ್ಷೆ ಇದೆ ಎಂದರು.

ಸಭೆಯಲ್ಲಿ ಮುಖಂಡರಾದ ವಿ.ಎಸ್‌.ವಿ. ಪ್ರಸಾದ, ಶಿವಕುಮಾರ ಹಿರೇಮಠ, ಎನ್‌.ಎಚ್‌. ಚರಂತಿಮಠ, ರಾಜಶೇಖರ ಮೆಣಸಿನಕಾಯಿ, ರಜತ್‌ ಉಳ್ಳಾಗಡ್ಡಿಮಠ, ಮಹೇಂದ್ರ ಸಂಘಿ ಸೇರಿದಂತೆ ಹಲವರು ಕಾರ್ಯಕ್ರಮದ ಸಿದ್ಧತೆ ಕುರಿತು ಸಲಹೆ ನೀಡಿದರು. ಈ ಸಂದರ್ಭದಲ್ಲಿ ಧಾರವಾಡ ಮುರುಘಾಮಠದ ಡಾ. ಮಲ್ಲಿಕಾರ್ಜುನ ಶ್ರೀಗಳು, ಎರಡೆತ್ತಿನಮಠದ ಸಿದ್ಧಲಿಂಗೇಶ್ವರ ಶ್ರೀಗಳು, ಬೊಮ್ಮನಹಳ್ಳಿಯ ಶಿವಯೋಗಿ ಶ್ರೀಗಳು, ರುದ್ರಾಕ್ಷಿಮಠದ ಬಸವಲಿಂಗ ಶ್ರೀಗಳು, ರಾಯನಾಳದ ಅಭಿನವ ರೇವಣಸಿದ್ದೇಶ್ವರ ಶ್ರೀಗಳು, ನವನಗರದ ರಾಜಶೇಖರ ಶಿವಾಚಾರ್ಯರು, ಮುಖಂಡರಾದ ರಾಜಣ್ಣ ಕೊರವಿ, ಶರಣಪ್ಪ ಕೊಟಗಿ, ಬಂಗಾರೇಶ ಹಿರೇಮಠ, ಡಿ.ಟಿ. ಪಾಟೀಲ, ಸಿದ್ದರಾಮಯ್ಯ ಹಿರೇಮಠ ಸೇರಿದಂತೆ ಹಲವರಿದ್ದರು.

₹1 ಕೋಟಿಗೂ ಹೆಚ್ಚು ಖರ್ಚು: ಈಗಾಗಲೇ ಇದಕ್ಕೆ ತಗಲುವ ವೆಚ್ಚ ಕುರಿತು ಮಾಹಿತಿ ಸಂಗ್ರಹಿಸಲಾಗಿದೆ. ತುಲಾಭಾರಕ್ಕೆ ₹48 ಲಕ್ಷ ನಾಣ್ಯ, ತುಲಾಭಾರದ ಆನೆ ಹೊರಲು 40 ಅಡಿ ಅಗಲ, 20 ಅಡಿ ಎತ್ತರದ ತಕ್ಕಡಿ ತಯಾರಿಕೆಗೆ ₹ 20 ಲಕ್ಷ ಖರ್ಚಾಗಲಿದೆ ಎಂದು ಅಂದಾಜಿಸಲಾಗಿದೆ. ಸಿದ್ಧತೆ ಈಗಾಗಲೇ ಮಾಡಿಕೊಳ್ಳಲಾಗುತ್ತಿದೆ. ಕಾರ್ಯಕ್ರಮ ಪೂರ್ಣಗೊಳಲು ₹1 ಕೋಟಿಗೂ ಅಧಿಕ ಹಣ ಖರ್ಚಾಗಬಹುದು ಎಂದು ಅಂದಾಜಿಸಲಾಗಿದೆ ಎಂದರು.

ಶ್ರೀಗಳ ಸ್ವರ್ಣ ತುಲಾಭಾರಕ್ಕೆ ಚಿಂತನೆ:

ಹುಬ್ಬಳ್ಳಿಯಲ್ಲಿ ನಡೆಯುವ ಕಾರ್ಯಕ್ರಮ ಮುಗಿದ ಬಳಿಕ ಶಿರಹಟ್ಟಿಯ ಮಠದಲ್ಲಿ 2024ನೇ ಸಾಲಿನಲ್ಲಿ ಫಕೀರ ಸಿದ್ಧರಾಮ ಶ್ರೀಗಳ ಸ್ವರ್ಣ ತುಲಾಭಾರ ನಡೆಸಲಾಗುವುದು. ಇದರಿಂದ ಸಂಗ್ರಹವಾಗುವ ಚಿನ್ನವನ್ನು ಬಡ ಮಕ್ಕಳ ಶಿಕ್ಷಣಕ್ಕಾಗಿ ಮೀಸಲಿಡಲಾಗುವುದು. ಸ್ವರ್ಣ ತುಲಾಭಾರ ಕಾರ್ಯಕ್ರಮದ ಪೂರ್ವದಲ್ಲಿ 75 ದಿನಗಳ ಕಾಲ ನಿರಂತರ ಪ್ರವಚನ ಹಾಗೂ ಅನ್ನದಾಸೋಹ ವ್ಯವಸ್ಥೆ, 75 ಸಾಧಕರ ಸನ್ಮಾನ, 75 ಗ್ರಂಥಗಳ ಬಿಡುಗಡೆ, 750 ಲೀ.ರಕ್ತದಾನ ಮಾಡುವ ಯೋಚನೆಯೂ ಇದೆ. ನಾಡಿನ ಎಲ್ಲ ಮಠಾಧೀಶರು, ರಾಜ್ಯಪಾಲ ಥಾವರಚಂದ ಗೆಹಲೋತ್‌, ಇನ್ಫೋಸಿಸ್‌ನ ಸುಧಾಮೂರ್ತಿ ಮುಖ್ಯ ಅತಿಥಿಗಳಾಗಿ ಆಹ್ವಾನಿಸಲು ನಿರ್ಧರಿಸಲಾಗಿದೆ. ಆದರೆ ಶಿರಹಟ್ಟಿಯಲ್ಲಿ ಯಾವಾಗ ಕಾರ್ಯಕ್ರಮ ಮಾಡಬೇಕೆಂಬುದನ್ನು ನಿರ್ಧರಿಸಿಲ್ಲ. ಬಳಿಕ ಭಕ್ತರೊಂದಿಗೆ ಚರ್ಚಿಸಿ ಅಂತಿಮಗೊಳಿಸಲಾಗುವುದು ಎಂದು ದಿಂಗಾಲೇಶ್ವರ ಶ್ರೀಗಳು ತಿಳಿಸಿದರು.

PREV
Get the latest news from across Karnataka (ಕರ್ನಾಟಕ ನ್ಯೂಸ್)— breaking headlines, politics, local developments, crime reports, district updates, civic issues and more. Stay informed with Kannada Prabha’s real‑time Karnataka news coverage.

Recommended Stories

ಗೌಡ ಸಾರಸ್ವತ ಬ್ರಾಹ್ಮಣ ಸೇವಾ ಸಂಘದ ವಾಗ್ದೇವಿ ಟವರ್ಸ್‌ಗೆ ಭೂಮಿ ಪೂಜೆ
ಆತ್ಮನಿರ್ಭರ ಭಾರತಕ್ಕೆ ಸ್ವದೇಶಿ ವಸ್ತು ಬಳಕೆ ಅಗತ್ಯ: ನಾರಾಯಣಸಾ ಭಾಂಡಗೆ