ಬಾಲ್ಯವಿವಾಹ, ದೇವದಾಸಿ ಪದ್ಧತಿ ಇನ್ನೂ ಜೀವಂತ

KannadaprabhaNewsNetwork | Published : Dec 22, 2023 1:30 AM

ಸಾರಾಂಶ

ಬಳ್ಳಾರಿ ನಗರದ ಡಾ. ರಾಜ್‍ಕುಮಾರ್ ರಸ್ತೆಯ ಬಿಡಿಎ ಫುಟ್‍ಬಾಲ್‌ ಸಭಾಂಗಣದಲ್ಲಿ ಬಾಲ್ಯವಿವಾಹ ಮತ್ತು ದೇವದಾಸಿ ಪದ್ಧತಿಯ ತಡೆಗಟ್ಟುವಲ್ಲಿನ ಸವಾಲುಗಳು ಮತ್ತು ಪರಿಹಾರ ಕುರಿತು ಎರಡನೇ ದಿನದ ರಾಜ್ಯಮಟ್ಟದ ಕಾರ್ಯಾಗಾರವನ್ನು ಪ್ರಧಾನ ಜಿಲ್ಲಾ ಮತ್ತು ಸತ್ರ ನ್ಯಾಯಾಧೀಶರಾದ ಎಸ್.ಎಚ್. ಪುಷ್ಪಾಂಜಲಿ ದೇವಿ ಉದ್ಘಾಟಿಸಿದರು. ಬಾಲ್ಯವಿವಾಹ, ದೇವದಾಸಿ ಪದ್ಧತಿ ಇನ್ನೂ ಜೀವಂತ ಇರುವ ಬಗ್ಗೆ ಅವರು ಕಳವಳ ವ್ಯಕ್ತಪಡಿಸಿದರು. ಅಲ್ಲದೆ ಕಾನೂನು ಬಗ್ಗೆ ಮಾಹಿತಿ ನೀಡಿದರು.

ಬಳ್ಳಾರಿ: 21ನೇ ಶತಮಾನದಲ್ಲೂ ಬಾಲ್ಯ ವಿವಾಹ ಮತ್ತು ದೇವದಾಸಿ ಪದ್ಧತಿ ಇನ್ನೂ ಜೀವಂತವಾಗಿರುವುದು ಅತ್ಯಂತ ನೋವಿನ‌ ಸಂಗತಿ ಎಂದು ಪ್ರಧಾನ ಜಿಲ್ಲಾ ಮತ್ತು ಸತ್ರ ನ್ಯಾಯಾಧೀಶರಾದ ಎಸ್.ಎಚ್. ಪುಷ್ಪಾಂಜಲಿ ದೇವಿ ಬೇಸರ ವ್ಯಕ್ತಪಡಿಸಿದರು.

ರೀಡ್ಸ್ ಸಂಸ್ಥೆ ಹಾಗೂ ಜಿಲ್ಲಾ ಕಾನೂನು ಸೇವೆಗಳ ಪ್ರಾಧಿಕಾರ ಮತ್ತು ಸಿಎಸಿಎಲ್ ಕರ್ನಾಟಕ ಇವರ ಸಂಯುಕ್ತಾಶ್ರಯದಲ್ಲಿ ನಗರದ ಡಾ. ರಾಜ್‍ಕುಮಾರ್ ರಸ್ತೆಯ ಬಿಡಿಎ ಫುಟ್‍ಬಾಲ್‌ ಸಭಾಂಗಣದಲ್ಲಿ ಗುರುವಾರ ಹಮ್ಮಿಕೊಂಡಿದ್ದ ಬಾಲ್ಯವಿವಾಹ ಮತ್ತು ದೇವದಾಸಿ ಪದ್ಧತಿಯ ತಡೆಗಟ್ಟುವಲ್ಲಿನ ಸವಾಲುಗಳು ಮತ್ತು ಪರಿಹಾರ ಕುರಿತ ಎರಡನೇ ದಿನದ ರಾಜ್ಯಮಟ್ಟದ ಕಾರ್ಯಾಗಾರ ಉದ್ಘಾಟಿಸಿ ಅವರು ಮಾತನಾಡಿದರು. ಬಾಲ್ಯ ವಿವಾಹ ನಿಷೇಧ ಕಾಯ್ದೆ 2006 ಕಾನೂನು ಜಾರಿಗೊಂಡರೂ‌ ಇನ್ನೂ ನಿಯಂತ್ರಣವಾಗುತ್ತಿಲ್ಲ. ಪೋಷಕರು ಜಾಗೃತರಾದಲ್ಲಿ‌ ಮಾತ್ರ ಸಾಮಾಜಿಕ ‌ಪಿಡುಗುಗಳನ್ನು‌ ತಡೆಗಟ್ಟಲು ಸಾಧ್ಯವಾಗುತ್ತದೆ ಎಂದರಲ್ಲದೆ, 2016 ಕರ್ನಾಟಕ ತಿದ್ದುಪಡಿ ಕಾಯ್ದೆ ಪ್ರಕಾರ ಬಾಲ್ಯವಿವಾಹ ಮಾಡಿದರೆ ಒಂದು ವರ್ಷ ಜೈಲು ಶಿಕ್ಷೆಯಿದೆ. ಸಂಬಂಧಪಟ್ಟ ಪೊಲೀಸ್ ಅಧಿಕಾರಿಗಳು ಸುಮೋಟೋ ಕೇಸ್ ದಾಖಲಿಸಿಕೊಳ್ಳಬಹುದು ಎಂದರು.ಜಿಲ್ಲಾ ಕಾನೂನು ಸೇವೆಗಳ ಪ್ರಾಧಿಕಾರದ ಸದಸ್ಯ ಕಾರ್ಯದರ್ಶಿ ರಾಜೇಶ್ ಎನ್. ಹೊಸಮನಿ ಮಾತನಾಡಿ, ಬಾಲ್ಯ ವಿವಾಹದಿಂದ ಆಗುವ ತಾಯಿ ಮರಣ, ಶಿಶು ಮರಣ, ರಕ್ತ ಹೀನತೆ, ಅಪೌಷ್ಟಿಕತೆ ಕುರಿತು ಮಾಹಿತಿ ನೀಡಿದರು. ಈ ಸಂದರ್ಭದಲ್ಲಿ ದೇವದಾಸಿ ಸಮರ್ಪಣಾ ನಿಷೇಧ ಕಾಯ್ದೆ ಪರಿಣಾಮಕಾರಿ ಅನುಷ್ಠಾನ ಕುರಿತು ಮಾಜಿ ದೇವದಾಸಿಯರಿಗೆ ಮತ್ತು ಅವರ ಮಕ್ಕಳಿಗೆ ಪುನರ್ವಸತಿ ಯೋಜನೆಗಳ ಬಗ್ಗೆ ಮಾಹಿತಿ ಸಹ ನೀಡಲಾಯಿತು. ರಾಜ್ಯ ಮಕ್ಕಳ ಹಕ್ಕುಗಳ ರಕ್ಷಣಾ ಆಯೋಗದ ಸದಸ್ಯ ಶಶಿಧರ ಕೋಸಂಬೆ ಮಾತನಾಡಿ, ಸರ್ಕಾರ ಮತ್ತು ಜನರ ಮಧ್ಯೆ ಸೇತುವೆಯಾಗಿ ಸ್ವಯಂಸೇವಾ ಸಂಸ್ಥೆಗಳು ಕೆಲಸ ಮಾಡುತ್ತಿರುವುದು ಶ್ಲಾಘನೀಯ. ಸತತ ಪ್ರಯತ್ನದಿಂದ ಬಾಲ್ಯ ವಿವಾಹ ಮತ್ತು ದೇವದಾಸಿ ಪದ್ಧತಿಯನ್ನು ತಡೆಗಟ್ಟಬಹುದು ಎಂದರು. ರೀಡ್ಸ್ ಸಂಸ್ಥೆಯ ನಿರ್ದೇಶಕ ಹನುಮಂತರೆಡ್ಡಿ, ರೀಡ್ಸ್ ಸಂಸ್ಥೆ ಕಾರ್ಯನಿರ್ವಾಹಕ ನಿರ್ದೇಶಕ ಸಿ. ತಿಪ್ಪೇಶಪ್ಪ, ಕರ್ನಾಟಕ ರಾಜ್ಯ ಮಕ್ಕಳ ಹಕ್ಕುಗಳ ರಕ್ಷಣಾ ಆಯೋಗ ನಿಕಟಪೂರ್ವ ಸದಸ್ಯ ಎಚ್.ಸಿ. ರಾಘವೇಂದ್ರ, ಬಾಲಕಾರ್ಮಿಕ ಯೋಜನೆ ಯೋಜನಾ ನಿರ್ದೇಶಕ ಮೌನೇಶ, ಜಿಲ್ಲಾ ಮಕ್ಕಳ ಕಲ್ಯಾಣ ಸಮಿತಿ ವಿಜಯಲಕ್ಷ್ಮಿ, ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆ ಉಪ ನಿರ್ದೇಶಕ ವಿಜಯ್ ಕುಮಾರ್ ಹಾಗೂ ರೀಡ್ಸ್ ಸಂಸ್ಥೆಯ ಸಿಬ್ಬಂದಿ ಉಪಸ್ಥಿತರಿದ್ದರು.

Share this article