ಕನ್ನಡಪ್ರಭ ವಾರ್ತೆ ಪಾವಗಡ
ಪಾವಗಡ ನಗರದ 23ವಾರ್ಡಿನ ಮನೆಮನೆಗೆ ಶುದ್ಧ ಕುಡಿಯುವ ನೀರು ಪೂರೈಕೆ ಹಿನ್ನೆಲೆಯಲ್ಲಿ ಶನಿವಾರ ಪಟ್ಟಣದ ಗುಟ್ಟಹಳ್ಳಿ ಮತ್ತು ಮೆಹರ್ ಬಾಬಾ ಮಂದಿರದ ಬಳಿ ಕೇಂದ್ರ ಹಾಗೂ ಪುರಸಭೆ ಸಹಯೋಗದ ಅಮೃತ್ ಯೋಜನೆಯಡಿಯ 32 ಕೋಟಿ ರು. ವೆಚ್ಚದ ಅಧಿಕೃತ ಕಾಮಗಾರಿಗೆ ಶಾಸಕ ಎಚ್.ವಿ.ವೆಂಕಟೇಶ್ ಭೂಮಿಪೂಜೆ ನೆರವೇರಿಸಿದರು.ಇದೇ ವೇಳೆ ಪಟ್ಟಣದ ಕನಮನ ಚೆರ್ಲು (ಭೋವಿ ಕಾಲೋನಿ) ಗಂಗಮ್ಮನ ಗುಡಿಬೀದಿ ಹಾಗೂ ರೆಡ್ಡಿ ಕಾಲೋನಿಯ ತಲಾ 20 ಲಕ್ಷ ರು. ನಂತೆ ಒಟ್ಟು 60 ಲಕ್ಷ ರು. ವೆಚ್ಚದಲ್ಲಿ ಮೂರು ನೂತನ ಅಂಗನವಾಡಿ ಕೇಂದ್ರದ ಕಟ್ಟಡದ ನಿರ್ಮಾಣಕ್ಕೆ ಗುದ್ದಲಿಪೂಜೆ ನೇರವೇರಿಸಿದ್ದು, ನಗರದ ಹೊರವಲದಲ್ಲಿರುವ ವಲಯ ಅರಣ್ಯ ಅಧಿಕಾರಿಗಳ ಕಚೇರಿಯ ಆವರಣದಲ್ಲಿ 18 ಲಕ್ಷ ರು. ವೆಚ್ಚದ ಅರಣ್ಯಾಧಿಕಾರಿಗಳ ನೂತನ ಕಚೇರಿಯ ಕಟ್ಟಡ ನಿರ್ಮಾಣಕ್ಕೆ ಭೂಮಿಪೂಜೆ ನೆರವೇರಿಸಿದರು.
ಪಟ್ಟಣಾಭಿವೃದ್ಧಿ ಕುರಿತು ಸುದ್ದಿಗಾರರ ಜತೆ ಮಾತನಾಡಿದ ಅವರು, ಪಟ್ಟಣದ ಜನತೆಗೆ ಕುಡಿಯುವ ನೀರು ಕಲ್ಪಿಸುವ ಸಲುವಾಗಿ ಇಲ್ಲಿನ 23 ವಾರ್ಡಿನ ಮನೆಮನೆಗೆ ಕೊಳಾಯಿ (ನಲ್ಲಿ) ಅಳವಡಿಸಲು ಸರ್ಕಾರ 32 ಕೋಟಿ ರು. ಅನುದಾನ ಕಲ್ಪಿಸುವ ಮೂಲಕ ನಲ್ಲಿ ಅಳವಡಿಕೆಯ ಕಾಮಗಾರಿ ಪ್ರಗತಿಗೆ ಈಗಾಗಲೇ ಗುದ್ದಲಿಪೂಜೆ ನೆರೆವೇರಿಸಲಾಗಿದೆ. ಮನೆಯಿಲ್ಲದ ನಗರದ ಕಡುಬಡವರಿಗೆ ಸೂರು ಕಲ್ಪಿಸುವ ಸಲುವಾಗಿ ಪುರಸಭೆಯಿಂದ ಈಗಾಗಲೇ ನಿವೇಶನ ಹಂಚಿಕೆಗೆ 5 ಎಕರೆ ಜಮೀನು ನಿಗದಿಪಡಿಸಿದ್ದು, 3500 ಮನೆಗಳ ನಿರ್ಮಾಣದ ಗುರಿ ಹೊಂದಲಾಗಿದೆ. ಅದರಂತೆಯೇ ಮನೆ ಮಂಜೂರಾತಿ ಕಲ್ಪಿಸಲು ಸಿಎಂ ಸಿದ್ದರಾಮಯ್ಯ ಹಾಗೂ ಸಂಂಬಂಧಪಟ್ಟ ಸಚಿವರಿಗೆ ಪ್ರಸ್ತಾವನೆ ಸಲ್ಲಿಸಿ ಮನವಿ ಮಾಡಲಾಗಿದೆ ಎಂದು ಹೇಳಿದರು.ಅಲ್ಪ ಸಂಖ್ಯಾತರ ಇಲಾಖೆಯಿಂದ ಬಿಡುಗಡೆಯಾದ 150 ಕೋಟಿ ರು. ಅನುದಾನದಲ್ಲಿ ಅಲ್ಪ ಸಂಖ್ಯಾತ ಕಾಲೋನಿಗಳ ಪ್ರಗತಿಗೆ ಈ ಹಣ ವಿನಿಯೋಗಿಸಿದ್ದು, ಸಿಸಿ ರಸ್ತೆ ಇತರೆ ಅಭಿವೃದ್ಧಿ ಕಾಮಗಾರಿ ಪ್ರಗತಿ ಹಂತದಲ್ಲಿದೆ. ನಗರದ ಪ್ರಗತಿಗೆ ಇನ್ನೂ 5 ಕೋಟಿ ರು. ಬಿಡುಗಡೆಗೆ ಈಗಾಗಲೇ ಸರ್ಕಾರಕ್ಕೆ ಪ್ರಸ್ತಾವನೆ ಸಲ್ಲಿಸಿರುವುದಾಗಿ ಹೇಳಿದರು.
ಈ ಭಾಗದ ರೈಲ್ವೆ ಕಾಮಗಾರಿಯ ವೇಗ ಹೆಚ್ಚಿಸಲು ಸಂಬಂಧಪಟ್ಟ ಗುತ್ತಿಗೆದಾರರಿಗೆ ಸೂಚಿಸಲಾಗಿದೆ. ಪಟ್ಟಣದಲ್ಲಿ ಜನಸಾಮಾನ್ಯರಿಗೆ ಆಗುತ್ತಿರುವ ಹೆಚ್ಚು ಕಿರಿಕಿರಿ ತಪ್ಪಿಸಲು ಬೈಪಾಸು ರಸ್ತೆ ನಿರ್ಮಾಣಕ್ಕೆ ಡಿಪಿಆರ್ ಸಿದ್ಧಪಡಿಸಿ ಸಿಎಂಗೆ ಪ್ರಸ್ತಾವನೆ ಸಲ್ಲಿಸಲಾಗಿದೆ. ಮುಂದಿನ ದಿನಗಳಲ್ಲಿ ಬೈಪಾಸು ರಸ್ತೆ ನಿರ್ಮಾಣದ ಕೆಲಸ ನಡೆಯುವುದಾಗಿ ಹೇಳಿದರು.ಪುರಸಭೆ ಅಧ್ಯಕ್ಷ ಪಿ.ಎಚ್.ರಾಜೇಶ್, ನಗರ ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ಹಾಗೂ ಪುರಸಭೆ ಸದಸ್ಯ ಸುದೇಶ್ ಬಾಬು, ಉಪಾಧ್ಯಕ್ಷ ಗೀತಾ ಆರ್.ಎ.ಹನುಮಂತರಾಯಪ್ಪ, ಮುಖಂಡರಾದ ತೆಂಗಿನಕಾಯಿ ರವಿ, ಪ್ರಮೋದ್‌ಕುಮಾರ್, ವಿಶ್ವನಾಥ್, ಪುರಸಭೆ ಸದಸ್ಯರಾದ ವೆಂಕಟರಮಣಪ್ಪ, ರಾಮಾಂಜಿನಪ್ಪ, ನಾಗರಾಜ್, ಗುಟ್ಟಹಳ್ಳಿ ಲಕ್ಷ್ಮೀದೇವಿ ಅಂಜಪ್ಪ, ಸ್ಥಳೀಯರಾದ ಐ.ಜಿ.ನಾಗರಾಜ್ ರಾಮಲಿಂಗಪ್ಪ, ರಮೇಶ್ (ಗಜಿ) ಷಾ, ಬಾಬು, ರಿಜ್ವಾನ್, ಕನಿಕಲಬಂಡೆ ಅನಿಲ್‌ಕುಮಾರ್ ಇದ್ದರು.