ತನಿಮಾನಿಗ ದೈವ ಪಾತ್ರ ನಿರ್ವಹಿಸಿದ 11ರ ಬಾಲಕ!

KannadaprabhaNewsNetwork | Published : Apr 5, 2025 12:48 AM

ಸಾರಾಂಶ

11 ವರ್ಷದ ಬಾಲಕನೊಬ್ಬ ಭೂತ ಕೋಲ ಕಟ್ಟಿದ ಅಪರೂಪದ ವಿದ್ಯಮಾನ ಕಾರ್ಕಳ ತಾಲೂಕಿನಲ್ಲಿ ಗಮನ ಸೆಳೆದಿದೆ. ಕಾರ್ಕಳ ತಾಲೂಕಿನ ಸೂಡಿ ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆಯ 6ನೇ ತರಗತಿ ವಿದ್ಯಾರ್ಥಿ ಸಮರ್ಥ್‌ ಗಗ್ಗರ ಕಟ್ಟಿ ಯಶಸ್ವಿಯಾಗಿ ಭೂತ ಪಾತ್ರಿಯಾಗಿ ಕೋಲದಲ್ಲಿ ಪಾಲ್ಗೊಂಡಿದ್ದಾನೆ.

ರಾಂ ಅಜೆಕಾರು

ಕನ್ನಡಪ್ರಭ ವಾರ್ತೆ ಕಾರ್ಕಳ

ದೈವರಾಧನೆಗೆ ತುಳುನಾಡಿನಲ್ಲಿ ಐತಿಹಾಸಿಕ ಪರಂಪರೆ ಇದೆ. ಸಂಸ್ಕೃತಿ ಅಧಃಪತನದತ್ತ ಸಾಗುತ್ತಿದೆ ಎಂಬ ಆರೋಪಗಳ ನಡುವೆ 11 ವರ್ಷದ ಬಾಲಕನೊಬ್ಬ ಭೂತ ಕೋಲ ಕಟ್ಟಿದ ಅಪರೂಪದ ವಿದ್ಯಮಾನ ಕಾರ್ಕಳ ತಾಲೂಕಿನಲ್ಲಿ ಗಮನ ಸೆಳೆದಿದೆ.

ಕಾರ್ಕಳ ತಾಲೂಕಿನ ಸೂಡಿ ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆಯ 6ನೇ ತರಗತಿ ವಿದ್ಯಾರ್ಥಿ ಸಮರ್ಥ್‌ ಗಗ್ಗರ ಕಟ್ಟಿ ಯಶಸ್ವಿಯಾಗಿ ಭೂತ ಪಾತ್ರಿಯಾಗಿ ಕೋಲದಲ್ಲಿ ಪಾಲ್ಗೊಂಡಿದ್ದಾನೆ.

ಶಿರ್ಲಾಲು ಸೂಡಿ ಪಂಗ್ಲಬೆಟ್ಟು, ಮುಂಡ್ಲಿ ಮುಗೇರಕಲ ದೈವಗಳ ಪ್ರತಿಷ್ಠಾ ವರ್ಧಾತ್ಯುತ್ಸವ ಶುಕ್ರವಾರ ಬೆಳಗ್ಗಿನ ಜಾವ ನಡೆದಿದ್ದು, ಈ ಸಂದರ್ಭದಲ್ಲಿ ತನಿಮಾನಿಗ ಹೆಣ್ಣು ದೈವದ ಪಾತ್ರಿಯಾಗಿ ಸಮರ್ಥ್‌ ಗಗ್ಗರ ಕಟ್ಟಿದ್ದಾನೆ.

ಅಜ್ಜನಿಂದ ಬಳುವಳಿ:

ಮೊಗೇರ ಸಮುದಾಯಕ್ಕೆ ಸೇರಿದ ಈ ದೈವಸ್ಥಾನದಲ್ಲಿ ವಾರ್ಷಿಕ‌ ನೇಮ‌ ನಡೆಯುತ್ತದೆ.‌ ಮೋನು ಪಾಣರರ ವ್ಯಾಪ್ತಿಗೆ (ಅಜಲ್‌ಗೆ) ಈ ದೈವಸ್ಥಾನ ಬರುತ್ತದೆ. ಹಿಂದೆ ಅಜ್ಜ ಮೋನು ಪಾಣರ ಕೋಲ ಕಟ್ಟುತಿದ್ದರು. ಅವರ ಮಗ ಹರೀಶ ಧರ್ಮರಸು ದೈವ ಕೋಲ ಕಟ್ಟುತ್ತಿದ್ದಾರೆ. ಹರೀಶ ಅವರ ಮಗ ಸಮರ್ಥ್ ಈಗ ಬಣ್ಣ ತುಂಬುತ್ತಿದ್ದು ಈ ಮೂಲಕ ಮೂರನೇ ತಲೆಮಾರಿನ ಬಾಲಕನೂ ಧಾರ್ಮಿಕ ಪರಂಪರೆಯನ್ನು ಮುಂದುವರಿಸಿರುವುದೇ ಅಲ್ಲದೆ ಎಳೆಯ ವಯಸ್ಸಿನಲ್ಲೇ ಅಜ್ಜ, ತಂದೆಯವರ ಹಾದಿಯನ್ನು ಪ್ರಕಾಶಮಾನಗೊಳಿಸುತ್ತಿದ್ದಾನೆ.

ವಿಶಿಷ್ಟ ಆಚರಣೆ:

ಸ್ಥಳೀಯರ ಮಾಹಿತಿ ಪ್ರಕಾರ ತನಿಮಾನಿಗ ದೈವದ ಕೋಲ ಕಟ್ಟುವವರು ಅವಿವಾಹಿತರಾಗಿರಬೇಕು. ಇದು ಬೆಳಗ್ಗಿನ ಜಾವ 2 ಗಂಟೆ ವೇಳೆಗೆ ನಡೆಯುವ ಕೋಲ. ಈ ಕೋಲದಲ್ಲಿ ಕರಿಮಣಿ ಕಟ್ಟುವ ವಿಶೇಷ ಪದ್ಧತಿ ಇದೆ. ಎಡ್ಮೂರ ಮಾಯಗಾರ ತನಿಮಾನಿಗ ಸೇರಿದಂತೆ ಒಟ್ಟು ನಾಲ್ಕು ದೈವಗಳಿದ್ದು ನೇಮದ ಸಮಯದಲ್ಲಿ ತನಿಮಾನಿಗ ಹೆಣ್ಣು ದೈವಕ್ಕೆ ಮದುವೆ ಮಾಡಿಸುವ ರಿವಾಜು ಇದೆ. ತುಳುನಾಡಿನ 66 ಕೋಟಿ-ಚೆನ್ನಯ್ಯರ ಗರಡಿ, 33 ಮೊಗೆರಕಳ (ಕಲ್ಲಕಳ)ಗಳಲ್ಲಿ ಶಿರ್ಲಾಲು ಸೂಡಿ ಪಂಗ್ಲಬೆಟ್ಟು, ಮುಂಡ್ಲಿ ಮುಗೇರಕಲವೂ ಒಂದು‌. ಇದೀಗ ಬಾಲಕನೊಬ್ಬ ಯಶಸ್ವಿಯಾಗಿ ಈ ಕಟ್ಟುಪಾಡುಗಳನ್ವಯ ಭೂತಪಾತ್ರಿಯಾಗಿ ನಿರ್ವಹಣೆ ಮಾಡಿರುವುದು ಜನ ಮನ ಸೆಳೆದಿದೆ...............ಯುವಪೀಳಿಗೆ ಸಂಸ್ಕೃತಿ ಉಳಿಸುವ ಕೆಲಸ ಮಾಡುತ್ತಿದೆ. ಇದೊಂದು ಷುಖಿಯ ಬೆಳವಣಿಗೆ. ಮಕ್ಕಳಲ್ಲಿ ಸಂಸ್ಕೃತಿ ಪ್ರಜ್ಞೆ ಭವಿಷ್ಯದಲ್ಲೂ ಸುರಕ್ಷಿತವಾಗಿರುತ್ತದೆ.

-ಎಸ್‌.ಕೆ.ಸಾಲಿಯಾನ್, ಪಡಿಬೆಟ್ಟು ಬರ್ಕೆ......................ಸಂಸ್ಕೃತಿ ಉಳಿಸಲು ನಮ್ಮೆಲ್ಲರ ಪ್ರಯತ್ನ ಅಗತ್ಯ. ಅಜ್ಜ ಹೇಳಿಕೊಟ್ಟ ಕೋಲ ಸಂಸ್ಕೃತಿಯ ವಿದ್ಯೆ ನಾವೆಲ್ಲರು ಪಾಲಿಸಿಕೊಂಡು ಬರುತಿದ್ದೇವೆ.

-ಸಿದ್ಧಾರ್ಥ್‌, ಬಾಲಕ.

.....................

ಪ್ರಾಚೀನ ಪರಂಪರೆ ಆಚಾರ ವಿಚಾರಗಳು ವಿಭಿನ್ನ ಸಂಪ್ರದಾಯಗಳು ಉಳಿಸಬೇಕಾದರೆ ಮಕ್ಕಳಲ್ಲಿ ಕಲೆ ಆಸಕ್ತಿ ಬೆಳೆಸುವುದು ಮುಖ್ಯ. ಈ ಹುಡುಗನ ಸಾಹಸ ಮೆಚ್ಚುವಂತದ್ದು.

-ಕೃಷ್ಣ ನಾಯಕ್ ಕಡ್ತಲ ಪ್ರತ್ಯಕ್ಷದರ್ಶಿ.

Share this article