ಜನತೆಯನ್ನು ಬೆಚ್ಚಿಬೀಳಿಸಿದ ಅಪಘಾತ: ಮಳೆಗಾಲ ಬಂತೆಂದರೆ ಭಯ

KannadaprabhaNewsNetwork |  
Published : Jul 10, 2026, 01:00 AM IST
ಅಪಘಾತ. | Kannada Prabha

ಸಾರಾಂಶ

ಗುರುವಾರ ನಸುಕಿನಲ್ಲಿ ಯಲ್ಲಾಪುರ ಬಳಿ ಕ್ರೂಸರ್ ಹಾಗೂ ಲಾರಿ ನಡುವೆ ಅಪಘಾತ ಉಂಟಾಗಿ 7 ಜನರು ಮೃತಪಟ್ಟ ದುರ್ಘಟನೆ ಇಡಿ ಜಿಲ್ಲೆಯನ್ನೇ ಬೆಚ್ಚಿಬೀಳಿಸಿದೆ.

ಕನ್ನಡಪ್ರಭ ವಾರ್ತೆ ಕಾರವಾರ

ಗುರುವಾರ ನಸುಕಿನಲ್ಲಿ ಯಲ್ಲಾಪುರ ಬಳಿ ಕ್ರೂಸರ್ ಹಾಗೂ ಲಾರಿ ನಡುವೆ ಅಪಘಾತ ಉಂಟಾಗಿ 7 ಜನರು ಮೃತಪಟ್ಟ ದುರ್ಘಟನೆ ಇಡಿ ಜಿಲ್ಲೆಯನ್ನೇ ಬೆಚ್ಚಿಬೀಳಿಸಿದೆ.

ಆರತಿಬೈಲ್ ಘಟ್ಟದಲ್ಲಿ ಅಪಘಾತ ಉಂಟಾಗುತ್ತಿದ್ದಂತೆ ಧಾರವಾಡದಲ್ಲಿ ಆಕ್ರಂದನದ ಅಲೆ ಎದ್ದಿತು. ಮೃತಪಟ್ಟವರೆಲ್ಲ ಧಾರವಾಡ ಜಿಲ್ಲೆಯವರು. ಅದರಲ್ಲೂ ಹೆಚ್ಚಿನವರು ಬೇರೆ ಬೇರೆ ಕಂಪನಿಗಳ ಡಿಲೆವರಿ ಬಾಯ್ ಗಳಾಗಿ ದುಡಿಯುತ್ತಿದ್ದವರು. ಅವರ ಕುಟುಂಬದವರು ಆಪ್ತರು ಆಗಮಿಸಿ ಮೃತಪಟ್ಟ ತಮ್ಮ ಕುಟುಂಬದ ಕುಡಿಗಳನ್ನು ನೋಡಿ ಮಮ್ಮಲ ಮರುಗಿದರು. ಮನೆಯಿಂದ ಹೊರಹೋದ ಕೆಲವೇ ಗಂಟೆಗಳಲ್ಲಿ ಶವ ನೋಡೋವಂತಾಗಿದ್ದು ದುರ್ದೈವದ ಸಂಗತಿ ಎಂದು ಘಟನೆಯನ್ನು ಅರಗಿಸಿಕೊಳ್ಳಲಾಗದೆ ಪರಿತಪಿಸಿದರು.

ಯಲ್ಲಾಪುರದ ಆರತಿಬೈಲ್ ಘಟ್ಟದಲ್ಲಿ ಉಂಟಾದ ಈ ಭೀಕರ ಅಪಘಾತದಲ್ಲಿ ಯುವಕರು ಬಲಿಯಾದ ಸುದ್ದಿ ಜಿಲ್ಲೆಯ ಜನತೆ ಬೆಳ್ಳಂಬೆಳಗ್ಗೆ ದಿಗ್ಗನೆ ಎದ್ದು ಕುಳಿತುಕೊಳ್ಳುವಂತಾಯಿತು. 2025ರ ಜನವರಿಯಲ್ಲಿ ಗುಳ್ಳಾಪುರ ಬಳಿ ಸವಣೂರಿನಿಂದ ಕುಮಟಾಕ್ಕೆ ತರಕಾರಿ ಹೊತ್ತೊಯ್ಯುತ್ತಿದ್ದ ಲಾರಿ ಉರುಳಿಬಿದ್ದು 11 ಜನರು ಬಲಿಯಾದ ದುರ್ಘಟನೆ ಜನತೆಯ ಸ್ಮೃತಿ ಪಟಲದಲ್ಲಿ ಹಾದುಹೋಗುವಂತಾಯಿತು.

ಯಲ್ಲಾಪುರ ಅಂಕೋಲಾ ನಡುವಣ ಹೆದ್ದಾರಿ ಘಟ್ಟ ಪ್ರದೇಶ ಹಾಗೂ ತಿರುವುಗಳಿಂದ ಕೂಡಿರುವುದರಿಂದ ಹೆಚ್ಚು ಕಡಿಮೆ ಪ್ರತಿದಿನವೂ ಒಂದಲ ಒಂದು ಚಿಕ್ಕಪುಟ್ಟ ಅಪಘಾತಕ್ಕೆ ಸಾಕ್ಷಿಯಾಗುತ್ತಲೇ ಇದೆ. ಆದರೆ 7 ಜನರು ಒಂದೇ ಅಪಘಾತದಲ್ಲಿ ಬಲಿಯಾದ ಘಟನೆ ಹೆದ್ದಾರಿ ಸಂಚಾರಿಗರಿಗೆ ತೀವ್ರ ಕಳವಳ ಮೂಡಿಸಿದೆ.

2024ರಲ್ಲಿ ಅಂಕೋಲಾ ತಾಲೂಕಿನ ಶಿರೂರಿನಲ್ಲಿ ನಡೆದ ಗುಡ್ಡ ಕುಸಿತದಲ್ಲಿ 11 ಜನರು ಬಲಿಯಾಗಿದ್ದು, 2009ರಲ್ಲಿ ಕಾರವಾರದ ಕಡವಾಡದಲ್ಲಿ ಬೃಹತ್ ಗುಡ್ಡ ಕುಸಿದು 19 ಜನರು ಜೀವಂತ ಸಮಾಧಿಯಾದ ಘಟನೆ ಜಿಲ್ಲೆಯ ಜನತೆಯ ಹೃದಯವನ್ನು ಘಾಸಿಗೊಳಿಸಿದೆ. ಆ ದುರಂತಗಳಿಂದ ಹೊರಬರುವ ಮುನ್ನವೇ ಈ ಅಪಘಾತ ಜನರ ಪಾಲಿಗೆ ಗಾಯದ ಮೇಲೆ ಬರೆ ಎಳೆದಂತಾಗಿದೆ. ಮಳೆಗಾಲದಲ್ಲೇ ಉಂಟಾದ ದುರಂತಗಳು

ಮಳೆಗಾಲ ಬಂತೆಂದರೆ ಜಿಲ್ಲೆಯ ಜನತೆ ಆತಂಕದಲ್ಲೇ ಇರುವಂತಾಗಿದೆ. ಇದುವರೆಗೆ ಜಿಲ್ಲೆಯಲ್ಲಿ ನಡೆದ ಬಹುತೇಕ ದುರಂತಗಳು ಮಳೆಗಾಲದಲ್ಲೇ ಉಂಟಾಗಿವೆ. ಸುರಿಯುತ್ತಿರುವ ಮಳೆಯ ನಡುವೆ ರಕ್ಷಣಾ ಕಾರ್ಯಾಚರಣೆಗೂ ಪರದಾಡಬೇಕಾದ ಪರಿಸ್ಥಿತಿ ಉಂಟಾಗುತ್ತಿದೆ. ದೊಡ್ಡ ದೊಡ್ಡ ದುರಂತಗಳ ಜೊತೆ ಚಿಕ್ಕಪುಟ್ಟ ದುರಂತಗಳೂ ಜನತೆಯ ಜೀವವನ್ನು ಹಿಂಡುತ್ತಿದೆ.

PREV
Get the latest news from across Karnataka (ಕರ್ನಾಟಕ ನ್ಯೂಸ್)— breaking headlines, politics, local developments, crime reports, district updates, civic issues and more. Stay informed with Kannada Prabha’s real‑time Karnataka news coverage.

Recommended Stories

ಮುಟ್ಟಳ್ಳಿ ಶಾಲೆಯ ವಿದ್ಯಾರ್ಥಿಗಳಿಂದ ಗದ್ದೆಯಲ್ಲಿ ಭತ್ತ ನಾಟಿ
12ರಂದು ಕರಾವಳಿ ಪ್ರತಿಬಿಂಬ ಕಾರ್ಯಕ್ರಮ