ಕೊಪ್ಪಳ: ಶಿಕ್ಷಣ, ಆರೋಗ್ಯ,ಪರಿಸರ ಸಂರಕ್ಷಣೆ ಸೇರಿದಂತೆ ಸಮುದಾಯದ ಸಮಗ್ರ ಅಭಿವೃದ್ಧಿಗೆ ರೋಟರಿ ಕ್ಲಬ್ ಮೊದಲ ಆದ್ಯತೆ ನೀಡುತ್ತಿದೆ ಎಂದು ರೋಟರಿ ಕ್ಲಬ್ ಅಧ್ಯಕ್ಷ ಮಂಜುನಾಥ ಅಂಗಡಿ ಹೇಳಿದರು.
ನಗರದ ಹೃದಯ ಭಾಗದಲ್ಲಿ 1 ಎಕರೆ ಪ್ರದೇಶದಲ್ಲಿ ನೂತನ ಕಟ್ಟಡ ನಿರ್ಮಾಣ ಕಾರ್ಯ ನಡೆದಿದೆ. ₹50 ಲಕ್ಷ ವೆಚ್ಚದಲ್ಲಿ ರೋಟರಿ ಭವನ ನಿರ್ಮಾಣವಾಗಲಿದೆ. ₹ 10 ಕೋಟಿ ವೆಚ್ಚದಲ್ಲಿ ಫಿಸಿಯೋಥೆರಪಿ ಸೇರಿದಂತೆ ವಿವಿಧ ಆರೋಗ್ಯ ಸೇವೆಯ ವ್ಯವಸ್ಥೆ ಮಾಡುವ ಯೋಜನೆ ರೂಪಿಸಲಾಗಿದೆ ಎಂದು ಹೇಳಿದರು.
ಎಲೆ ಮರೆ ಕಾಯಿಗಳಂತೆ ಸಮಾಜ ಸೇವೆಗೆ ಶ್ರಮಿಸುತ್ತಿರುವ ವೈದ್ಯರು, ಚಾರ್ಟರ್ಡ್ ಅಕೌಂಟೆಂಟ್ ಮತ್ತು ಪತ್ರಕರ್ತರನ್ನು ಸನ್ಮಾನ ಮಾಡುವುದು ನಮ್ಮ ಕರ್ತವ್ಯ ಎಂದು ಹೇಳಿದರು.ರೋಟರಿ ಕ್ಲಬ್ ಹಿರಿಯ ಸದಸ್ಯ ಡಾ.ಕೆ.ಜಿ ಕುಲಕರ್ಣಿ ಮಾತನಾಡಿ, ಸಮಾಜಸೇವೆ ಮತ್ತು ರಾಜಕೀಯ ಎರಡನ್ನೂ ನಿಭಾಯಿಸಿದ ಡಾ. ಬಿ.ಸಿ. ರಾಯ್ ಸವಿನೆನಪಿಗಾಗಿ ಜು.1 ರಂದು ವೈದ್ಯರ ದಿನ ಆಚರಣೆ ಮಾಡಲಾಗುತ್ತಿದೆ. ವೈದ್ಯರ ಕೆಲಸ ತುಂಬಾ ಸಂಕೀರ್ಣವಾಗಿದೆ. ಸಮಾಜ ಸೇವೆಗೆ ನಮ್ಮನ್ನು ತೊಡಗಿಸಿಕೊಂಡು ಸಮಾಜ ಸುಧಾರಣೆಗೆ ಶ್ರಮಿಸುವ ಅಗತ್ಯವಿದೆ ಎಂದು ಹೇಳಿದರು.
ಆರ್ ಡಿಸಿಸಿ ಬ್ಯಾಂಕ್ ನಿರ್ದೇಶಕ ಶರಣಪ್ಪ ಹ್ಯಾಟಿ, ಗಂಗಾ ಯಮುನಾ ಪತ್ತಿನ ಸೌಹಾರ್ದ ಸಹಕಾರಿ ಬ್ಯಾಂಕ್ ಉಪಾಧ್ಯಕ್ಷ ರಮೇಶ ಕವಲೂರು, ಸಿಇಓ ಶಶಿಕುಮಾರ್ ಗಡ್ಡಿ, ವೀರಣ್ಣ ಕಮತರ, ಆಕಾಶ ಹುರಕಡ್ಲಿ, ಬಸವರಾಜ ವಡಗೇರಿ, ಆನಂದ್ ಕುಲಕರ್ಣಿ, ರೋಟರಿ ಕ್ಲಬ್ ಕಾರ್ಯದರ್ಶಿ ಚಂದ್ರಶೇಖರಯ್ಯ ಸೊಪ್ಪಿಮಠ ಸೇರಿ ಹಲವರು ಇದ್ದರು. ಚಿನ್ನಪ್ಪ ನಿರೂಪಿಸಿದರು. ಬೊಮ್ಮಣ್ಣ ಅಕ್ಕಸಾಲಿ ವಂದಿಸಿದರು.