ಹಿರೇಕೆರೂರು: ಚತುರ್ವಿಧ ಪುರುಷಾರ್ಥಗಳಾದ ಧರ್ಮ, ಅರ್ಥ, ಕಾಮ, ಮೋಕ್ಷ ಇವುಗಳಲ್ಲಿ ಒಂದನ್ನಾದರೂ ಜೀವನದಲ್ಲಿ ಸಾಧಿಸದಿದ್ದರೆ ಮಾನವ ಜೀವನ ವ್ಯರ್ಥ. ಐಹಿಕ ಭೋಗ ಭಾಗ್ಯಗಳನ್ನು ಬಯಸುವ ಮನುಷ್ಯ ಧರ್ಮದ ಪರಿಪಾಲನೆ ಮಾಡದಿದ್ದರೆ ಯಾವ ಪ್ರಯೋಜನವೂ ಇಲ್ಲ. ಕ್ರಿಯಾಶೀಲ ಬದುಕು ಜೀವನ ಶ್ರೇಯಸ್ಸಿಗೆ ಮೂಲವಾಗಿದೆ ಎಂದು ಬಾಳೆಹೊನ್ನೂರು ರಂಭಾಪುರಿ ಡಾ. ವೀರಸೋಮೇಶ್ವರ ಜಗದ್ಗುರುಗಳು ಹೇಳಿದರು.ತಾಲೂಕಿನ ಚನ್ನಳ್ಳಿ ಸಮೀಪದ ಕಡೇನಂದಿಹಳ್ಳಿಯ ರೇವಣಸಿದ್ದೇಶ್ವರ ಪುಣ್ಯಾಶ್ರಮದಲ್ಲಿ ಜರುಗಿದ ಜಗದ್ಗುರು ರೇಣುಕಾಚಾರ್ಯ ಗುರು ಪರಂಪರೆ ಜಾತ್ರೋತ್ಸವ, ರಂಭಾಪುರಿ ಜಗದ್ಗುರು ರೇವಣಸಿದ್ಧೇಶ್ವರ ರಾಷ್ಟ್ರೀಯ ಪ್ರಶಸ್ತಿ ಪ್ರದಾನ ಸಮಾರಂಭದ ಸಾನ್ನಿಧ್ಯ ವಹಿಸಿ ಶ್ರೀಗಳು ಆಶೀರ್ವಚನ ನೀಡಿದರು. ಜಗದ್ಗುರು ರೇಣುಕಾಚಾರ್ಯರು ಬದುಕಿ ಬಾಳುವ ಮನುಷ್ಯರಿಗಾಗಿ ದಶ ಧರ್ಮ ಸೂತ್ರಗಳನ್ನು ಬೋಧಿಸಿದ್ದು ಅವು ಎಲ್ಲರಿಗೂ ಮಾನ್ಯವಾಗಿವೆ. ಮಠಗಳು ಸಂಸ್ಕಾರ ನೀಡುವ ಕೇಂದ್ರಗಳಾಗಿ ಸಮಾಜದಲ್ಲಿ ಸಾಮರಸ್ಯ ಸೌಹಾರ್ದತೆ ಬೆಳೆಸುವ ಕಾರ್ಯ ಮಾಡುತ್ತ ಬಂದಿವೆ. ವೀರಶೈವ ಧರ್ಮ ಮಾನವ ಧರ್ಮವನ್ನು ಎತ್ತಿ ಹಿಡಿದಿದೆ. ಇದರಲ್ಲಿರುವ ಧರ್ಮ ಚಿಂತನಗಳು ಎಲ್ಲರ ಉನ್ನತಿಗಾಗಿ ಇವೆಯೇ ಹೊರತು ಅವನತಿಗಾಗಿ ಅಲ್ಲ. ಏನೊಂದು ಇಲ್ಲದ ಸ್ಥಳದಲ್ಲಿ ರೇವಣಸಿದ್ದೇಶ್ವರ ಪುಣ್ಯಾಶ್ರಮದಲ್ಲಿ ಕುಟೀರವೊಂದನ್ನು ಕಟ್ಟಿಕೊಂಡು ದಶಕದ ಅವಧಿಯಲ್ಲಿ ಇಷ್ಟೊಂದು ಗುಣಾತ್ಮಕ ಮತ್ತು ರಚನಾತ್ಮಕ ಕಾರ್ಯಗಳ ಮೂಲಕ ಎಲ್ಲರ ನಿರೀಕ್ಷೆ ಮೀರಿ ಅಭಿವೃದ್ಧಿ ಮಾಡಿರುವ ರೇವಣಸಿದ್ದೇಶ್ವರ ಶಿವಾಚಾರ್ಯ ಸ್ವಾಮಿಗಳಲ್ಲಿ ಅವರು 11 ತಿಂಗಳು ಮಾಡಿದ ಅನುಷ್ಠಾನದ ಶಕ್ತಿ ಅಡಗಿದೆ. ರೇವಣಸಿದ್ದೇಶ್ವರ ಶಿವಾಚಾರ್ಯ ಸ್ವಾಮಿಗಳು ದೂರದೃಷ್ಟಿಯಿಂದ ಕಾರ್ಯ ನಿರ್ವಹಿಸುತ್ತಿದ್ದು ಭಕ್ತರನ್ನು ಆದರ್ಶ ಮಾರ್ಗದ ಕಡೆಗೆ ಕರೆದೊಯ್ಯುವ ಕೆಲಸ ಮಾಡುತ್ತಿದ್ದು ಅವರ ಎಲ್ಲ ಸತ್ಕಾರ್ಯಗಳಿಗೆ ರಂಭಾಪುರಿ ಜಗದ್ಗುರುಗಳ ಆಶೀರ್ವಾದ ನಿರಂತರವಾಗಿ ಇರುತ್ತದೆ ಎಂದರು.ಸಮಾರಂಭ ಉದ್ಘಾಟಿಸಿ ಮಾತನಾಡಿದ ಶಿವಮೊಗ್ಗ ಸಂಸದ ಬಿ.ವೈ.ರಾಘವೇಂದ್ರ, ರೇವಣಸಿದ್ದೇಶ್ವರ ಶಿವಾಚಾರ್ಯರು ಭಕ್ತರ ಶ್ರೇಯೋಭಿವೃದ್ಧಿಗಾಗಿ ತಮ್ಮನ್ನು ತಾವು ಸಮರ್ಪಿಸಿಕೊಂಡು ಕಾರ್ಯ ನಿರ್ವಹಿಸುತ್ತಿದ್ದಾರೆ. ಇಂದು ಕೆಲವರು ಹಿಂದೂ ಧರ್ಮವನ್ನು ಅವಹೇಳನ ಮಾಡುವ ಕಾರ್ಯ ಮಾಡುತ್ತಿದ್ದು ಇದು ಒಳ್ಳೆಯ ಬೆಳವಣಿಗೆ ಅಲ್ಲ. ರಂಭಾಪುರಿ ಜಗದ್ಗುರುಗಳು ಈ ಇಳಿ ವಯಸ್ಸಿನಲ್ಲಿಯೂ ಹಗಲಿರುಳೆನ್ನದೇ ಸಂಚರಿಸಿ ಧರ್ಮ ಜಾಗೃತಿ ಕಾರ್ಯ ಮಾಡುತ್ತಿದ್ದು ನಾವೆಲ್ಲ ಅವರ ಮಾರ್ಗದರ್ಶನದಲ್ಲಿ ಮುಂದುವರಿಯಬೇಕು ಎಂದರು.ಮಹಾಮೃತ್ಯುಂಜಯ ಮಂತ್ರ ಬರಹ ಪತ್ರವನ್ನು ಬಿಡುಗಡೆ ಮಾಡಿದ ಗೌರಿಗದ್ದೆ ವಿನಯ ಗುರೂಜಿ ಮಾತನಾಡಿ, ದುಡ್ಡಿದ್ದರೆ ಏನೆಲ್ಲ ಸಿಗಬಹುದು ಆದರೆ ಗುರು ಕಾರುಣ್ಯ ಪ್ರಾಪ್ತವಾಗುವುದು ಕಷ್ಟ. ಮನುಷ್ಯ ತನ್ನಲ್ಲಿರುವ ಅಹಂಕಾರವನ್ನು ತೊರೆದು ಶರಣಾದಾಗ ಮಾತ್ರ ಗುರುವಿನ ಆಶೀರ್ವಾದ ದೊರೆಯುವುದು. ಇಂದು ನಾಡಿನಲ್ಲಿ ಸಂಸ್ಕಾರ ಏನಾದರೂ ಉಳಿದಿದ್ದರೆ ಅದು ಮಠಗಳಿಂದ ಮಾತ್ರ. ನಾವು ರೇಣುಕರನ್ನು ನೋಡಿಲ್ಲ. ಆದರೆ ಪ್ರಸ್ತುತ ರಂಭಾಪುರಿ ಜಗದ್ಗುರುಗಳಲ್ಲಿ ರೇಣುಕರನ್ನು ಕಾಣುತ್ತಿದ್ದೇವೆ ಎಂದರು.ನೇತೃತ್ವ ವಹಿಸಿದ ದುಗ್ಲಿ-ಕಡೇನಂದಿಹಳ್ಳಿ ರೇವಣಸಿದ್ಧೇಶ್ವರ ಶಿವಾಚಾರ್ಯ ಸ್ವಾಮಿಗಳು ಮಾತನಾಡಿ ರಂಭಾಪುರಿ ಜಗದ್ಗುರುಗಳ ಕೃಪಾಶೀರ್ವಾದ ಮತ್ತು ಭಕ್ತರ ಸಹಕಾರದಿಂದಾಗಿ ಎಲ್ಲ ಅಭಿವೃದ್ಧಿ ಕಾರ್ಯಗಳು ನಡೆದಿವೆ. ಮುಂಬರುವ ದಿನಗಳಲ್ಲಿ ರಥವೊಂದನ್ನು ನಿರ್ಮಿಸಿ ಪ್ರತಿ ತಿಂಗಳು ರಥೋತ್ಸವ ಮಾಡುವ ಯೋಜನೆ ಇದೆ ಎಂದರು.ಇದೇ ಸಂದರ್ಭದಲ್ಲಿ ಶಿಕಾರಿಪುರದ ಪ್ರಥಮ ದರ್ಜೆ ಗುತ್ತಿಗೆದಾರ ದೇವೇಂದ್ರಪ್ಪ ಪಿ.ಎಸ್. ಅವರಿಗೆ ರಂಭಾಪುರಿ ಜಗದ್ಗುರು ರೇವಣಸಿದ್ಧೇಶ್ವರ ರಾಷ್ಟ್ರೀಯ ಪ್ರಶಸ್ತಿ ಪ್ರದಾನ ಮಾಡಲಾಯಿತು.
ಕನ್ನೂರು-ಸಿಂಧನೂರು ಸೋಮನಾಥ ಸ್ವಾಮೀಜಿ, ಕಾರ್ಜುವಳ್ಳಿಯ ಸದಾಶಿವ ಸ್ವಾಮೀಜಿ, ಚನ್ನಗಿರಿ ಡಾ.ಕೇದಾರಲಿಂಗ ಸ್ವಾಮೀಜಿ, ಜಕ್ಕಲಿ-ಹಾರನಹಳ್ಳಿ ವಿಶ್ವಾರಾಧ್ಯ ಸ್ವಾಮೀಜಿ, ಹಾರನಹಳ್ಳಿ ಶಿವಯೋಗಿ ಸ್ವಾಮೀಜಿ, ನಾಗವಂದದ ಶಿವಯೋಗಿ ಶಿವಾನಂದ ಸ್ವಾಮೀಜಿ, ನಂದೀಪುರದ ನಂದೀಶ್ವರ ಸ್ವಾಮೀಜಿ, ಗೋವಿನಕೋವಿ ಶಿವಯೋಗಿ ವಿಶ್ವಾರಾಧ್ಯ ಮಹಾಲಿಂಗ ಸ್ವಾಮೀಜಿ, ಲಿಂಗಸುಗೂರಿನ ಮಾತಾ ಮಾಣಿಕ್ಕೇಶ್ವರಿ ಆಶ್ರಮದ ನಂದಿಕೇಶ್ವರಿ ಅಮ್ಮನವರು, ಕೆ.ಎಸ್.ಗುರುಮೂರ್ತಿ, ತಹಸೀಲ್ದಾರ್ ಮಲ್ಲೇಶ ಪೂಜಾರ, ಸುಧೀರ ಮಾರವಳ್ಳಿ, ಕೆ.ಆರ್. ಪ್ರಕಾಶ್, ರುದ್ರಮುನಿ ಸಜ್ಜನ, ಶಿವಕುಮಾರ ತಿಪ್ಪಶೆಟ್ಟಿ, ಬಸವರಾಜಪ್ಪ ಚನ್ನಳ್ಳೇರ, ವೀರೇಶ ವಡಕಪ್ಪಳಿ, ಅವಿನಾಶ ಬಿ., ಪಾಲಾಕ್ಷಗೌಡ ಪಾಟೀಲ ಸೇರಿದಂತೆ ಅಪಾರ ಭಕ್ತರು ಭಾಗವಹಿಸಿದ್ದರು. ಬೆಳಗ್ಗೆ ದುರ್ಗಾ ಸಪ್ತಶತಿ ಪಾರಾಯಣ ಸ್ವಯಂವರ ಪಾರ್ವತಿ ಯಾಗ ಜರುಗಿದವು. ಸಮಾರಂಭದ ನಂತರ 36 ಅಡಿ ಎತ್ತರದ ಶ್ರೀ ಜಗದ್ಗುರು ರೇಣುಕಾಚಾರ್ಯರ ಮಂಗಲ ಮೂರ್ತಿಗೆ ಭವ್ಯ ಬೆಳಕಿನ ವಿಶೇಷ ಆರತಿ ಕಾರ್ಯಕ್ರಮ ಜರುಗಿತು. ನಂತರ ದನ ಕಾಯೋರ ದೊಡ್ಡಾಟ ನಾಟಕ ಪ್ರದರ್ಶನಗೊಂಡಿತು.