ಅಮೆರಿಕ ದಂಪತಿ ಮಡಿಲು ಸೇರಿದ ಭಾರತದ ಅನಾಥ ಅಂಗವಿಕಲ ಮಗು

KannadaprabhaNewsNetwork |  
Published : Sep 21, 2024, 02:00 AM IST
ಕೊಪ್ಪಳದ ಮಗುವನ್ನು ಅಮೆರಿಕ ದಂಪತಿ ದತ್ತು ಪಡೆದರು. | Kannada Prabha

ಸಾರಾಂಶ

ಕೊಪ್ಪಳದ ಅನಾಥ, ಅಂಗವಿಕಲ ಮಗುವನ್ನು ಅಮೆರಿಕ ದಂಪತಿ ದತ್ತು ಪಡೆದಿದ್ದಾರೆ. ದತ್ತು ಪ್ರಕ್ರಿಯೆ ಪೂರ್ಣಗೊಂಡಿರುವ ಹಿನ್ನೆಲೆಯಲ್ಲಿ ಮಗುವನ್ನು ಕೊಪ್ಪಳ ಜಿಲ್ಲಾಧಿಕಾರಿ ನಲಿನ್ ಅತುಲ್ ಅವರು ಶುಕ್ರವಾರ ಅಮೆರಿಕ ದಂಪತಿಗೆ ಹಸ್ತಾಂತರ ಮಾಡಿದ್ದಾರೆ.

ಸೋಮರಡ್ಡಿ ಅಳವಂಡಿ

ಕೊಪ್ಪಳ: ವಿವಾಹಪೂರ್ವ ಜನಿಸಿದ ಊನ ಮಗುವೊಂದು ತಾಯಿಯಿಂದಲೂ ತಿರಸ್ಕಾರವಾಗಿ ಅನಾಥವಾಗಿತ್ತು. ಇದನ್ನು ಈಗ ಅಮೆರಿಕ ದಂಪತಿ ದತ್ತು ಪಡೆಯುವ ಮೂಲಕ ಮಗುವಿಗೆ ಆಸರೆಯಾಗಲು ಮುಂದಾಗಿದ್ದಾರೆ.

ದತ್ತು ಪ್ರಕ್ರಿಯೆ ಪೂರ್ಣಗೊಂಡಿರುವ ಹಿನ್ನೆಲೆಯಲ್ಲಿ ಮಗುವನ್ನು ಕೊಪ್ಪಳ ಜಿಲ್ಲಾಧಿಕಾರಿ ನಲಿನ್ ಅತುಲ್ ಅವರು ಶುಕ್ರವಾರ ಅಮೆರಿಕ ದಂಪತಿಗೆ ಹಸ್ತಾಂತರ ಮಾಡಿದ್ದು, ಮಗು ಈಗ ಕ್ಯಾಲೋಪೋರ್ನಿಯಾಗೆ ಪ್ರಯಾಣ ಬೆಳೆಸಿದೆ.

ತನ್ನ ಮೂಲವನ್ನೇ ಅರಿಯದೇ ಇದ್ದರೂ ಅಮೆರಿಕ ದಂಪತಿ ಮಡಿಲಲ್ಲಿ ನಗುತ್ತ ಇರುವ ದೃಶ್ಯ ಮಾತ್ರ ಎಲ್ಲರ ಮನಸ್ಸಿನಲ್ಲಿ ಉಳಿಯಿತು.

ದಂಪತಿ ನಿರ್ಧಾರ: ಅಮೆರಿಕದ ಕ್ಯಾಲಿಪೋರ್ನಿಯಾ ನಿವಾಸಿಗಳಾದ ಈ ದಂಪತಿ ಸಾಫ್ಟ್‌ವೇರ್ ಕಂಪನಿಯೊಂದರಲ್ಲಿ ಉತ್ತಮ ಉದ್ಯೋಗಸ್ಥರು. ಅವರಿಗೆ ಮಗು ಪಡೆಯುವ ಎಲ್ಲ ಅರ್ಹತೆಯೂ ಇದೆ. ಆದರೆ, ಸ್ವಯಂ ಪ್ರೇರಿತವಾಗಿ ತಾವು ಮಗು ಮಾಡಿಕೊಂಡು ಬೆಳೆಸುವುದಕ್ಕಿಂತ ಅನಾಥ ಊನ ಮತ್ತು ತಂದೆ-ತಾಯಿಯಿಂದ ತಿರಸ್ಕಾರವಾದ ಅನಾಥ ಮಕ್ಕಳನ್ನು ಸಾಕಲು ನಿರ್ಧರಿಸಿದ್ದಾರೆ.

ಅವರು ನಿರ್ಧಾರ ಮಾಡಿದ ಮೇಲೆ ಈ ಮಗುವಿನ ಮಾಹಿತಿ ಪಡೆದು, ಅರ್ಜಿ ಹಾಕಿದ್ದಾರೆ. ಅರ್ಜಿ ಪ್ರಕ್ರಿಯೆ ಪೂರ್ಣಗೊಂಡಿರುವ ಹಿನ್ನೆಲೆಯಲ್ಲಿ ಈಗ 9 ತಿಂಗಳ ಮಗುವನ್ನು ಪಡೆದಿರುವ ಅಮೆರಿಕ ದಂಪತಿ, ಮರಳಿ ತಮ್ಮೂರಿಗೆ ಪ್ರಯಾಣ ಬೆಳೆಸಿದ್ದಾರೆ.

ಯಾವುದಿ ಮಗು?: ಕುಷ್ಟಗಿಯಲ್ಲಿ ವಿವಾಹಪೂರ್ವದಲ್ಲಿ ಜನಿಸಿದ ಈ ಮಗುವನ್ನು ಮಕ್ಕಳ ರಕ್ಷಣಾ ಸಮಿತಿಗೆ ಒಪ್ಪಿಸಲಾಗಿತ್ತು. 9 ತಿಂಗಳ ಹಿಂದೆ ಸಿಕ್ಕ ಈ ಮಗುವನ್ನು ಕೊಪ್ಪಳ ಜಿಲ್ಲಾಸ್ಪತ್ರೆಯಲ್ಲಿ ದಾಖಲಿಸಿ, ಚಿಕಿತ್ಸೆ ಕೊಡಿಸಲಾಗಿದೆ. ಕಾಲುಗಳು ಮಡಿಚಿಕೊಂಡಿದ್ದು, ಅವುಗಳಿಗೂ ಚಿಕಿತ್ಸೆ ಕೊಡಿಸಲಾಗಿದೆಯಾದರೂ ಪಾದಗಳು ಇನ್ನು ಮಡಿಚಿಕೊಂಡೇ ಇವೆ. ಇನ್ನು ಕೆಲಕಾಲ ಚಿಕಿತ್ಸೆ ನೀಡಿದರೆ ಸರಿಯಾಗುತ್ತವೆ ಎನ್ನುತ್ತಾರೆ ವೈದ್ಯರು.

ವೆಬ್‌ಸೈಟ್‌ನಲ್ಲಿ ಮಗುವಿನ ಮಾಹಿತಿ: ಈ ಮಗುವಿನ ಮಾಹಿತಿಯನ್ನು ಕಾರಾ (ಇದು ಅನಾಥ ಮಕ್ಕಳ ಮಾಹಿತಿಯನ್ನು ನೀಡುವ ಭಾರತ ಸರ್ಕಾರದ ಅಧಿಕೃತ ವೆಬ್‌ಸೈಟ್) ಪೋರ್ಟಲ್‌ನಲ್ಲಿ ಹಾಕಲಾಯಿತು.

ಈ ಮಗುವಿನ ಮಾಹಿತಿಯನ್ನು ತಿಳಿದ ಅಮೆರಿಕ ದಂಪತಿ ಕಳೆದೆರಡು ತಿಂಗಳ ಹಿಂದೆ ಅರ್ಜಿ ಸಲ್ಲಿಸಿದ್ದರು. ಅರ್ಜಿ ಪ್ರಕ್ರಿಯೆ ಪೂರ್ಣಗೊಂಡ ಹಿನ್ನೆಲೆಯಲ್ಲಿ ಜಿಲ್ಲಾಧಿಕಾರಿಗಳು ಅಮೆರಿಕ ದಂಪತಿಗೆ ಮಗುವನ್ನು ಹಸ್ತಾಂತರಿಸಿದ್ದಾರೆ.ದತ್ತು ಪಡೆಯಲು ಆಸಕ್ತಿ: ಅಮೆರಿಕದವರಿಗೆ ಭಾರತದ ಮಕ್ಕಳು ಎಂದರೆ ಅಚ್ಚುಮೆಚ್ಚು. ಅದರಲ್ಲೂ ಅಮೆರಿಕ ಸೇರಿದಂತೆ ವಿವಿಧ ದೇಶದವರು ಊನ ಮತ್ತು ಅನಾಥ ಮಕ್ಕಳನ್ನೇ ಪಡೆಯುವುದಕ್ಕೆ ಆಸಕ್ತರಾಗಿರುತ್ತಾರೆ.

ಅನಾಥ ಮಗುವನ್ನು ದತ್ತು ಪಡೆಯುವ ಪ್ರಕ್ರಿಯೆ ನಿಯಮಾನುಸಾರ ಪೂರ್ಣಗೊಂಡ ಹಿನ್ನೆಲೆಯಲ್ಲಿ ಅಮೆರಿಕ ದಂಪತಿಗೆ ಮಗು ಹಸ್ತಾಂತರ ಮಾಡಲಾಗಿದೆ ಎಂದು ಕೊಪ್ಪಳ ಜಿಲ್ಲಾ ಮಕ್ಕಳ ರಕ್ಷಣಾಧಿಕಾರಿ ಮಹಾಂತೇಶಸ್ವಾಮಿ ಪೂಜಾರ ಹೇಳಿದರು.

PREV
Get the latest news from across Karnataka (ಕರ್ನಾಟಕ ನ್ಯೂಸ್)— breaking headlines, politics, local developments, crime reports, district updates, civic issues and more. Stay informed with Kannada Prabha’s real‑time Karnataka news coverage.

Recommended Stories

ಶೇ.11ರಷ್ಟು ಟೊಯೋಟಾ ಕಾರುಗಳು ರಾಜ್ಯದಲ್ಲೇ ಸೇಲ್‌
ರಾಜ್ಯದಲ್ಲಿ 2 ದಿನ ಮೋಡಕವಿದ ವಾತಾವರಣ, ಮಳೆ