ಶನಿವಾರಸಂತೆ : ವರ್ತಕರ ಸಂಘವು ಪಟ್ಟಣ, ವ್ಯಾಪಾರಿಗಳು ವಾಣಿಜ್ಯೋದ್ಯಮಿಗಳ ಕಷ್ಟ ನಷ್ಟಕ್ಕೆ ಸ್ಪಂದಿಸುವ ಏಕೈಕ ವಾಣಿಜೋದ್ಯಮ ಸಂಸ್ಥೆ ಎಂದು ಕೊಡಗು ಜಿಲ್ಲಾ ವಾಣಿಜ್ಯ ಮತ್ತು ಕೈಗಾರಿಕಾ ಸ್ಥಾಯಿ ಸಮಿತಿ ಅಧ್ಯಕ್ಷ ನಾಗೇಂದ್ರ ಪ್ರಸಾದ್ ಅಭಿಪ್ರಾಯ ಪಟ್ಟರು. ಆಲೂರು ಸಿದ್ದಾಪುರ ಗ್ರಾಮದಲ್ಲಿ ನೂತನವಾಗಿ ಸ್ಥಾಪನೆಗೊಂಡಿರುವ ವರ್ತಕರ ಸಂಘದ ಪದಗ್ರಹಣ ಸಮಾರಂಭ ಉದ್ಘಾಟಿಸಿ ಮಾತನಾಡುತ್ತಿದ್ದರು.
ಪಟ್ಟಣ, ನಗರ ಪ್ರದೇಶಗಳಿಗೆ ಸೀಮಿತವಾಗಿದ್ದ ವರ್ತಕರ ಸಂಘವು ಆಲೂರುಸಿದ್ದಾಪುರದಂತಹ ಪುಟ್ಟ ಗ್ರಾಮದಲ್ಲಿ ಸ್ಥಾಪನೆಗೊಂಡಿರುವುದು ಶ್ಲಾಘನೀಯ ಎಂದ ಅವರು, ಇಂದು ವರ್ತಕರ ಸಂಘಗಳಲ್ಲಿ ಬ್ಯಾಂಕ್ ಶಾಖೆಗಳಿದ್ದು ಈ ಮೂಲಕ ವ್ಯಾಪಾರಿಗಳಿಗೆ ಪಿಗ್ಮಿ ಸಾಲ ಸೌಲಭ್ಯಗಳನ್ನು ನೀಡುತ್ತಿದೆ ಎಂದರು.
ನ್ಯಾಯಬದ್ಧ ವ್ಯವಹಾರ ಬೇಕು: ಜಿಲ್ಲಾ ಸ್ಥಾಯಿ ಸಮಿತಿ ಪ್ರಧಾನ ಕಾರ್ಯದರ್ಶಿ ಮೊಂತಿ ಗಣೇಶ್ ಮಾತನಾಡಿ-ವ್ಯಾಪಾರಿಗಳು ಗ್ರಾಹಕರೊಂದರಿಗೆ ನ್ಯಾಯಬದ್ದವಾಗಿ ವ್ಯಾಪಾರ ವ್ಯವಹಾರ ನಡೆಸಬೇಕು. ವರ್ತಕರ ಸಂಘದ ಸದಸ್ಯರು ಕೇವಲ ವ್ಯಾಪಾರ ವ್ಯವಹಾರಕ್ಕೆ ಸೀಮಿತವಾಗದೆ ಸಮಾಜ ಸೇವೆಯಲ್ಲಿ ತೊಡಗಿಸಿಕೊಳ್ಳಬೇಕು ಎಂದರು. ಜಿಲ್ಲಾ ಸ್ಥಾಯಿ ಸಮಿತಿ ಉಪಾಧ್ಯಕ್ಷ ನವೀನ್ ಅಂಬೆಕಲ್ ಮಾತನಾಡಿ-ವರ್ತಕರ ಸಂಘಕ್ಕೆ ಜಾತಿ ಧರ್ಮ ಇಲ್ಲ ಒಂದೆ ಜಾತಿ ಅದು ವರ್ತಕರ ಜಾತಿ ಮಾತ್ರ ಕೊಡಗು ಜಿಲ್ಲೆಯಲ್ಲಿ ವರ್ತಕರ ಸಂಘವು ಉತ್ತಮವಾಗಿ ಕಾರ್ಯನಿರ್ವಹಿಸುತ್ತಿದೆ ಎಂದರು. ಸಮಾರಂಭದಲ್ಲಿ ಜಿಲ್ಲಾ ಉಪಾಧ್ಯಕ್ಷ ತಿಮ್ಮ ಶೆಟ್ಟಿ ಮಾತನಾಡಿದರು. ಆಲೂರು ಸಿದ್ದಾಪುರ ನೂತನ ವರ್ತಕರ ಸಂಘಧ ಅಧ್ಯಕ್ಷ ಅಂಚೆಟಿರ ಕರುಂಬಯ್ಯ, ಕಾರ್ಯದರ್ಶಿ ಮಧು ಹುಲಿಮನೆ ಖಜಾಂಜಿ ಡಿ.ಎಸ್.ಮಧು ಹಾಜರಿದ್ದರು.