ಕನ್ನಡಪ್ರಭ ವಾರ್ತೆ ಹಾಸನ
ನಗರದ ಕೆಎಸ್‌ಆರ್‌ಟಿಸಿ ಬಸ್ ನಿಲ್ದಾಣದ ಸಮೀಪ ಜಿಲ್ಲಾಡಳಿತ, ಜಿಲ್ಲಾ ಪಂಚಾಯಿತಿ ಹಾಗೂ ತೋಟಗಾರಿಕೆ ಇಲಾಖೆಯಿಂದ ಆಯೋಜಿಸಲಾದ ಆಲೂಗಡ್ಡೆ ಮೇಳ ಮತ್ತು ಕೃಷಿ ಇಲಾಖೆಯಿಂದ ಸಿರಿಧಾನ್ಯ ಹಬ್ಬ ಹಾಗೂ ವಾಣಿಜ್ಯ ಮೇಳವನ್ನು ಉದ್ಘಾಟಿಸಿ ಅವರು ಮಾತನಾಡಿ, ಆಲೂಗಡ್ಡೆ ಮೇಳ, ಸಿರಿಧಾನ್ಯ ಪ್ರದರ್ಶನ ಮತ್ತು ಕೃಷಿ ಯಂತ್ರೋಪಕರಣಗಳ ಪ್ರದರ್ಶನ ಒಂದೇ ಸೂರಿನಡಿ ರೈತರಿಗೆ ಅರಿವು, ಜಾಗೃತಿ ಹಾಗೂ ನವೀನ ತಂತ್ರಜ್ಞಾನಗಳ ಮಾಹಿತಿ ನೀಡುವ ವೇದಿಕೆಯಾಗಿದ್ದು, ರೈತರು ಇದರ ಸಂಪೂರ್ಣ ಪ್ರಯೋಜನ ಪಡೆಯಬೇಕು ಎಂದರು. ಆಲೂಗಡ್ಡೆ ಬೆಳೆಯನ್ನು ಉಳಿಸಿಕೊಳ್ಳುವುದು ಅತ್ಯಂತ ಅಗತ್ಯವಾಗಿದೆ. ಬಿತ್ತನೆ ವಿಧಾನ, ರೋಗ ನಿಯಂತ್ರಣ, ಕಟಾವು ಹಾಗೂ ಸಂಗ್ರಹಣೆಯ ನವೀನ ತಂತ್ರಜ್ಞಾನಗಳ ಬಗ್ಗೆ ಒಂದೇ ಸ್ಥಳದಲ್ಲಿ ಮಾಹಿತಿ ನೀಡುತ್ತಿರುವುದು ಈ ಮೇಳದ ವಿಶೇಷತೆ ಎಂದರು. ಇದರಿಂದ ರೈತರು ವೈಜ್ಞಾನಿಕವಾಗಿ ಬೆಳೆ ಬೆಳೆಯಲು ಸಹಕಾರಿಯಾಗಲಿದೆ ಎಂದು ಹೇಳಿದರು.
ಸಿರಿಧಾನ್ಯಗಳಿಗೆ ಸಾವಿರಾರು ವರ್ಷಗಳ ಇತಿಹಾಸವಿದ್ದು, ಅವು ಅತ್ಯಂತ ಪೌಷ್ಟಿಕ ಆಹಾರಗಳಾಗಿವೆ. ಸಿರಿಧಾನ್ಯ ಬೆಳೆಗಳಿಗೆ ಹೆಚ್ಚಿನ ನೀರಾವರಿ ಅಗತ್ಯವಿಲ್ಲ. ಸಾಧಾರಣ ಮಳೆಯಲ್ಲೇ ಉತ್ತಮ ಬೆಳೆಯ ಸಾಧ್ಯತೆ ಇದೆ. ಬೆಳೆ ಬೆಳೆಯಲು ಖರ್ಚು ಕಡಿಮೆ ಹಾಗೂ ಪರಿಸರದ ಮೇಲೆ ದುಷ್ಪರಿಣಾಮವೂ ಕಡಿಮೆ ಇರುವುದರಿಂದ ರೈತರು ಸಿರಿಧಾನ್ಯ ಬೆಳೆಗೆ ಹೆಚ್ಚಿನ ಆದ್ಯತೆ ನೀಡಬೇಕು ಎಂದು ಸಲಹೆ ನೀಡಿದರು.ಕೂಲಿ ಕಾರ್ಮಿಕರ ಕೊರತೆಯನ್ನು ನಿವಾರಿಸಲು ಕೃಷಿಯಲ್ಲಿ ಯಂತ್ರೋಪಕರಣಗಳ ಬಳಕೆ ಅಗತ್ಯವಾಗಿದೆ. ಯಂತ್ರೋಪಕರಣಗಳನ್ನು ಅಳವಡಿಸಿಕೊಂಡು ಕೃಷಿಯನ್ನು ಲಾಭದಾಯಕವಾಗಿ ನಡೆಸಬಹುದು. ಆಲೂಗಡ್ಡೆ ಮೇಳ ಹಾಗೂ ಸಿರಿಧಾನ್ಯ ಹಬ್ಬವನ್ನು ರೈತರು ಮತ್ತು ಸಾರ್ವಜನಿಕರು ಸದುಪಯೋಗಪಡಿಸಿಕೊಳ್ಳಬೇಕು ಎಂದು ಸಚಿವರು ಕರೆ ನೀಡಿದರು.
ಈ ಸಂದರ್ಭದಲ್ಲಿ ಜಿಲ್ಲೆಯ ವಿವಿಧ ತಾಲೂಕುಗಳಲ್ಲಿ ನವೀನ ತಂತ್ರಜ್ಞಾನ ಅಳವಡಿಸಿಕೊಂಡು ಮಾದರಿ ಕೃಷಿ ಮಾಡುತ್ತಿರುವ ರೈತರನ್ನು ಸನ್ಮಾನಿಸಲಾಯಿತು. ಕಾರ್ಯಕ್ರಮದಲ್ಲಿ ಸಂಸದ ಶ್ರೇಯಸ್ ಪಟೇಲ್, ಶಾಸಕ ಸ್ವರೂಪ್ ಪ್ರಕಾಶ್, ಜಿಲ್ಲಾಧಿಕಾರಿ ಕೆ. ಎಸ್. ಲತಾಕುಮಾರಿ, ಜಿಲ್ಲಾ ಪಂಚಾಯಿತಿ ಮುಖ್ಯ ಕಾರ್ಯನಿರ್ವಹಣಾಧಿಕಾರಿ ಪೂರ್ಣಿಮಾ, ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಶುಭನ್ವಿತ ಸೇರಿದಂತೆ ಇತರರು ಉಪಸ್ಥಿತರಿದ್ದರು.