ಎಚ್ಡಿಕೆಗೆ ಕಾನೂನು ಬದ್ಧವಾಗಿ ಅರ್ಜಿ ಸಲ್ಲಿಸುವ ಸಾಮಾನ್ಯ ಜ್ಞಾನವೂ ಇಲ್ಲ

KannadaprabhaNewsNetwork |  
Published : Jan 27, 2026, 02:45 AM IST
ಸಚಿವ ಎನ್. ಚಲುವರಾಯಸ್ವಾಮಿ  | Kannada Prabha

ಸಾರಾಂಶ

ಮಂಡ್ಯದಲ್ಲಿ ಕೈಗಾರಿಕೆಗೆ ಭೂಮಿ ಕೊಡಿ ಎನ್ನುತ್ತಾರೆ. ಇಲ್ಲಿ ಬೇಡ ಎನ್ನುವವರು ಯಾರು. ಕೈಗಾರಿಕೆ ಸ್ಥಾಪನೆಗೆ ತನ್ನದೇ ಆದ ಕಾನೂನು ಇದೆ. ಆ ಹಾದಿಯಲ್ಲಿ ಬರಬೇಕಲ್ಲವೆ. ಅದು ಬಿಟ್ಟು ಕೇವಲ ಪತ್ರ ವ್ಯವಹಾರ ಮಾಡುತ್ತೇವೆ ಎಂದರೆ ಅದನ್ನು ಕಾನೂನು ಕೇಳುವುದಿಲ್ಲ. ಅದಕ್ಕೆ ತನ್ನದೇ ಆದ ರೀತಿ ನೀತಿ ಇದ್ದು, ಕೃಷಿಯೇತರ ಭೂಮಿ ಕೊಡಬೇಕಾಗುತ್ತದೆ.

ಕನ್ನಡಪ್ರಭ ವಾರ್ತೆ ಮಂಡ್ಯ

ಮಂಡ್ಯ ಜಿಲ್ಲೆಗೆ ಕಾರ್ಖಾನೆಗಳು ಬಂದು ಉದ್ಯೋಗ ಸೃಷ್ಟಿಯಾಗಬೇಕು ಎಂಬುದು ನಮ್ಮಗೂ ಆಸೆ ಇದೆ. ಆದರೆ, ಕಂಪನಿಯವರು ಕಾನೂನು ಬದ್ಧವಾಗಿ ಅರ್ಜಿ ಮತ್ತು ಯೋಜನಾ ವರದಿ ಸಲ್ಲಿಸಿದಲ್ಲಿ ಭೂಮಿ ಕೊಡಲು ಸಿದ್ಧರಿದ್ದೇವೆ ಎಂದು ಜಿಲ್ಲಾ ಉಸ್ತುವಾರಿ ಸಚಿವ ಎನ್. ಚಲುವರಾಯಸ್ವಾಮಿ ಪರೋಕ್ಷವಾಗಿ ಕೇಂದ್ರ ಸಚಿವ ಕುಮಾರಸ್ವಾಮಿಗೆ ಟಾಂಗ್ ನೀಡಿದರು.

ಸುದ್ದಿಗಾರರೊಂದಿಗೆ ಮಾತನಾಡಿ, ಶಾಸಕರು, ಸಚಿವರಿಗೆ ಕೈಗಾರಿಕೆಗೆ ಭೂಮಿ ನೀಡಲು ಅಧಿಕಾರವಿಲ್ಲ. ಮುಖ್ಯಮಂತ್ರಿಗಳು, ಕೈಗಾರಿಕಾ ಸಚಿವರಿಗೆ ಪತ್ರ ಬರೆದಲೂ ಸಾಧ್ಯವಿಲ್ಲ. ಕಾನೂನು ಬದ್ಧವಾಗಿ ಕೆಐಡಿಬಿಗೆ ಅರ್ಜಿ ಸಲ್ಲಿಸಿದಲ್ಲಿ ಆ ಬಗ್ಗೆ ನಾವು ಸಂಪುಟದಲ್ಲಿ ಚರ್ಚೆ ಮಾಡಿ ಅಗತ್ಯ ಭೂಮಿ ಕೊಡಬಹುದು. ಇಂತಹ ಸಾಮಾನ್ಯ ಜ್ಞಾನವೂ ಎಚ್ಡಿಕೆಗೆ ಇಲ್ಲ ಎಂದು ಪ್ರಶ್ನಿಸಿದರು.

ಮಂಡ್ಯದಲ್ಲಿ ಕೈಗಾರಿಕೆಗೆ ಭೂಮಿ ಕೊಡಿ ಎನ್ನುತ್ತಾರೆ. ಇಲ್ಲಿ ಬೇಡ ಎನ್ನುವವರು ಯಾರು. ಕೈಗಾರಿಕೆ ಸ್ಥಾಪನೆಗೆ ತನ್ನದೇ ಆದ ಕಾನೂನು ಇದೆ. ಆ ಹಾದಿಯಲ್ಲಿ ಬರಬೇಕಲ್ಲವೆ. ಅದು ಬಿಟ್ಟು ಕೇವಲ ಪತ್ರ ವ್ಯವಹಾರ ಮಾಡುತ್ತೇವೆ ಎಂದರೆ ಅದನ್ನು ಕಾನೂನು ಕೇಳುವುದಿಲ್ಲ. ಅದಕ್ಕೆ ತನ್ನದೇ ಆದ ರೀತಿ ನೀತಿ ಇದ್ದು, ಕೃಷಿಯೇತರ ಭೂಮಿ ಕೊಡಬೇಕಾಗುತ್ತದೆ ಎಂದರು.

ಕಾಡಾಕ್ಕೆ ಸೇರಿದ 100 ಎಕರೆ ಜಮೀನು ಇದೆ. ಇಲ್ಲವೇ ಬಸರಾಳು ಬಳಿ ಜಮೀನು ಇದೆ. ಅಷ್ಟೇ ಏಕೆ ಮಳವಳ್ಳಿ ತಾಲೂಕಿನಲ್ಲೂ ಸಾಕಷ್ಟು ಭೂಮಿ ಇದೆ. ಕೊಡಲು ಸಾವು ಸಿದ್ಧರಿದ್ದೇವೆ. ಉದ್ಯಮಿಗಳು ಯಾವ ಉದ್ದೇಶಕ್ಕೆ ಎಂಬುದನ್ನು ಕಾನೂನು ಪ್ರಕಾರ ಸಂಬಂಧಿಸಿದ ಪ್ರಾಧಿಕಾರಕ್ಕೆ ಅರ್ಜಿ ಸಲ್ಲಿಸಬೇಕು. ಅದು ಬಿಟ್ಟು ಕೇವಲ ಮಾತಿನಲ್ಲೇ ಎಲ್ಲವನ್ನೂ ಹೇಳಿದರೆ ಕೊಡಲು ಸಾಧ್ಯವೇ ಎಂದರು.

ಸೆಮಿಕಂಡಕ್ಟರ್ ಕೈಗಾರಿಕೆ ಬಗ್ಗೆ ತಿಳಿಸಿದ್ದರು. ಈಗ ಬೇರೆ ಕಂಪನಿ ಹೆಸರು ಹೇಳುತ್ತಿದ್ದಾರೆ. ಅವರೂ ಸಹ ಪ್ರಯತ್ನ ಮಾಡುತ್ತಿರಬಹುದು. ಉದ್ಯಮಿಗಳು ಬರದೆಯೂ ಇರಬಹುದು. ನಾವು ಅವರ ಪ್ರಯತ್ನ ಕೇಳುತ್ತಿಲ್ಲ. ಎಲ್ಲವೂ ಕಾನೂನು ಬದ್ಧವಾಗಿ ನಡೆಯಲಿ ಎಂಬುದೇ ನಮ್ಮ ಆಶಯ ಎಂದರು.

ಮಧ್ಯವರ್ತಿಗಳನ್ನು ನಂಬಬೇಡಿ:

ಕೃಷ್ಣ ಭೈರೇಗೌಡ ಕಂದಾಯ ಸಚಿವರಾದ ನಂತರ ಆ ಇಲಾಖೆಯಲ್ಲಿ ಪರಿಣಾಮಕಾರಿ ಕಾನೂನು ಜಾರಿಗೊಳಿಸಿದ್ದಾರೆ. ಮಧ್ಯವರ್ತಿಗಳು, ಕೆಲ ಅಧಿಕಾರಿಗಳ ಮಾತನ್ನು ನಂಬಿ ಹಣ ಕಳೆದುಕೊಳ್ಳಬೇಡಿ ಎಂದು ರೈತರಿಗೆ ಕಿವಿಮಾತು ಹೇಳಿದರು.

ಜಮೀನು ಕೊಡಿಸುವುದಾಗಿ ಸುಳ್ಳು ಹೇಳಿ ವಂಚಿಸುತ್ತಿರುವ ಪ್ರಕರಣಗಳೂ ಬೆಳಕಿಗೆ ಬಂದಿವೆ. ಒಂದು ವೇಳೆ ಆಗಿದ್ದರೂ ಅದು ಯಾವತ್ತಿದ್ದರೂ ಸರ್ಕಾರದ ವಶಕ್ಕೆ ಹೋಗುತ್ತದೆ ಎಂಬುದನ್ನು ಯಾರೂ ಮರೆಯಬಾರದು ಎಂದು ಎಚ್ಚರಿಸಿದರು.

ನಾಗಮಂಗಲ ತಾಲೂಕಿನಲ್ಲಿ ನಡೆದಿರುವ ಭೂ ಅವ್ಯವಹಾರವನ್ನು ಲೋಕಾಯುಕ್ತರು ಹಾಗೂ ಪೊಲೀಸರು ತನಿಖೆ ನಡೆಸುತ್ತಿದ್ದಾರೆ. ಪೊಲೀಸರು ಕ್ರಿಮಿನಲ್ ಪ್ರಕರಣಗಳನ್ನು ಮಾತ್ರ ತನಿಖೆ ನಡೆಸುತ್ತಾರೆ ನಿಜ. ಆದರೆ, ಲೋಕಾಯುಕ್ತದಲ್ಲಿ ನಿವೃತ್ತ ನ್ಯಾಯಮೂರ್ತಿಗಳು ಇದ್ದಾರೆ. ಅವರು ನಿಷ್ಪಕ್ಷಪಾತವಾಗಿ ತನಿಖೆ ನಡೆಸುತ್ತಾರೆ. ಸಿಬಿಐಗೆ ಕೊಡಬೇಕೆಂದೇನೂ ಇಲ್ಲ ಎಂದರು.

ಸಿಬಿಐನವರೇ ಪತ್ರ ಬರೆದಿದ್ದಾರೆ. ನಮ್ಮಲ್ಲಿ ಹೆಚ್ಚು ಪ್ರಕರಣಗಳಿವೆ. ನೀವು ನಮಗೆ ಸಿಬ್ಬಂದಿ ನೀಡಬೇಕು. ಇಲ್ಲದಿದ್ದಲ್ಲಿ ತನಿಖೆ ಮಾಡಲು ಸಾಧ್ಯವಿಲ್ಲ ಎಂದಿದ್ದಾರೆ. ಸಿಬಿಐ ಸಹ ತನಿಖೆ ನಡೆಸಲು ಆಗದ ಸ್ಥಿತಿ ನಿರ್ಮಾಣ ಆಗಿದೆ. ಇ.ಡಿ ಚೆನ್ನಾಗಿ ಕೆಲಸ ಮಾಡುತ್ತಿದೆ. ಆದರೆ, ಅದಕ್ಕೆ ಸ್ವತಂತ್ರ ನೀಡಬೇಕು. ಅದನ್ನು ದುರ್ಬಳಕೆ ಮಾಡಿಕೊಳ್ಳುತ್ತಿರುವುದನ್ನು ನಾವು ನೋಡಿದ್ದೇವೆ ಎಂದು ಟೀಕಿಸಿದರು.

ಕೇಂದ್ರ ಸರ್ಕಾರ ಭಾವನೆ ಮತ್ತು ಧರ್ಮ ಇಟ್ಟುಕೊಂಡು ರಾಜಕೀಯ ಮಾಡುತ್ತಿದೆ. ರಾಜ್ಯಪಾಲರ ನಡೆ ಸರಿಯಲ್ಲ. ಎರಡೂವರೆ ವರ್ಷಗಳ ಕಾಲ ಆಡಳಿತ ನಡೆಸಿರುವ ಸರ್ಕಾರದ ಕಾರ್ಯಯಕ್ರಮಗಳನ್ನು ರಾಜ್ಯಪಾಲರ ಮೂಲಕ ಜನರಿಗೆ ತಿಳಿಸುವ ಪ್ರಯತ್ನ ಮಾಡುತ್ತೇವೆ. ಅಂತಹ ಭಾಷಣವನ್ನು ರಾಜ್ಯಪಾಲರು ಓದದೆ ಇದಿದ್ದು ಸರಿಯಲ್ಲ ಎಂದರು.

ಸುದ್ದಿಗೋಷ್ಠಿಯಲ್ಲಿ ಶಾಸಕರಾದ ಪಿ.ರವಿಕುಮಾರ್, ದಿನೇಶ್ ಗೂಳಿಗೌಡ, ಮೈಷುಗರ್ ಅಧ್ಯಕ್ಷ ಸಿ.ಡಿ. ಗಂಗಾಧರ್, ಕೈಗಾರಿಕಾ ಅಭಿವೃದ್ಧಿ ನಿಗಮದ ಉಪಾಧ್ಯಕ್ಷೆ ವಿಜಯಲಕ್ಷ್ಮಿ ರಘುನಂದನ್ ಇದ್ದರು.

PREV
Get the latest news from across Karnataka (ಕರ್ನಾಟಕ ನ್ಯೂಸ್)— breaking headlines, politics, local developments, crime reports, district updates, civic issues and more. Stay informed with Kannada Prabha’s real‑time Karnataka news coverage.

Recommended Stories

ಮುಖ್ಯಮಂತ್ರಿ ಸಿದ್ದರಾಮಯ್ಯ ನನ್ನ ಪಾಲಿನ ಶ್ರೀರಾಮ : ಶಾಸಕ ಪ್ರದೀಪ್‌ ಈಶ್ವರ್‌
ಜಿ ರಾಮ್‌ ಜಿ ವಿರುದ್ಧ ಸಿಡಿದೆದ್ದ ಕಾಂಗ್ರೆಸ್‌ ಪಡೆ - ದುಡಿವ ಕೈಗಳ ಅನ್ನ ಕಸಿವ ಕಾಯ್ದೆ