ರಾಮನಗರ: ಮತದಾರರ ಪಟ್ಟಿಯ ತೀವ್ರ ಪರಿಷ್ಕರಣೆ (ಎಸ್ ಐಆರ್) ಪ್ರಕ್ರಿಯೆಯನ್ನು ಬಳಸಿಕೊಂಡು ಬಿಜೆಪಿ ರಾಜ್ಯದಲ್ಲಿ ಕಾಂಗ್ರೆಸ್ ನ ಸಾಂಪ್ರದಾಯಿಕ ಮತದಾರರನ್ನು ಪಟ್ಟಿಯಿಂದ ಹೊರಗಿಟ್ಟು ಗೆಲುವು ಸಾಧಿಸುವ ತಂತ್ರ ರೂಪಿಸಿದೆ ಎಂದು ಕೆಪಿಸಿಸಿ ರಾಜ್ಯ ಉಪಾಧ್ಯಕ್ಷ ವಿ.ಆರ್.ಸುದರ್ಶನ್ ಆರೋಪಿಸಿದರು.
ರಾಜ್ಯದಲ್ಲಿ ಬುಧವಾರ ಬೆಳಗಿವರೆಗಿನ ಅಂಕಿ ಅಂಶಗಳ ಪ್ರಕಾರ ವಿವಿಧ ಕಾರಣಗಳಿಂದಾಗಿ 1 ಕೋಟಿ 11 ಲಕ್ಷ ಜನರು ಮತದಾರರ ಪಟ್ಟಿಯಿಂದ ಹೊರಗುಳಿಯುತ್ತಾರೆ. ಇದೊಂದು ಗಂಭೀರ ವಿಚಾರವಾಗಿದ್ದು, ಈ ಬಗ್ಗೆ ಚುನಾವಣಾ ಆಯೋಗವು ಗಮನ ಹರಿಸಬೇಕು. ಒಬ್ಬ ಅರ್ಹ ಮತದಾರನ ಹೆಸರು ಮತದಾರರ ಪಟ್ಟಿಯಿಂದ ಕೈ ಬಿಟ್ಟು ಹೋಗದಂತೆ ಎಚ್ಚರ ವಹಿಸಬೇಕು ಎಂದು ಒತ್ತಾಯಿಸಿದರು.
ಪ್ರತಿ 10 ವರ್ಷಕ್ಕೆ ಒಮ್ಮೆ ಜನಗಣತಿ ನಡೆದಂತೆ ಎಸ್‌ಐಆರ್ ಕಾರ್ಯವೂ ಆಗಬೇಕು. 2015-16ರಲ್ಲಿ ನಡೆಯಬೇಕಿದ್ದ ಈ ಪ್ರಕ್ರಿಯೆಯನ್ನು ಚುನಾವಣಾ ಆಯೋಗ ಈಗ ನಡೆಸುತ್ತಿರುವುದರ ಹಿಂದಿನ ಆಸಕ್ತಿ ಏನು. ಈ ಹಿಂದೆ ಕಾಂಗ್ರೆಸ್ ಆಡಳಿತದ ಅವಧಿಯಲ್ಲಿಯೂ ಎಸ್‌ಐಆರ್ ನಡೆದಿತ್ತು. ಆದರೆ ಈಗಿನಂತೆ ಗೊಂದಲ, ಆತಂಕ ಇರಲಿಲ್ಲ. ದೇಶದ ಬಡವರು, ಅಲೆಮಾರಿಗಳು, ದಲಿತರಲ್ಲಿ ಭಯದ ವಾತಾವರಣ ಉಂಟಾಗಿದೆ. ಹಾಗಾಗಿ ಯಾವುದೇ ಆತಂಕ, ಅನುಮಾನಕ್ಕೆ ಎಡೆ ಮಾಡಿಕೊಡದೇ ಚುನಾವಣಾ ಆಯೋಗ ಎಸ್‌ಐಆರ್ ಕೆಲಸ ಮಾಡಬೇಕಿದೆ ಎಂದರು.ಎಸ್ ಐಆರ್ ಪ್ರಕ್ರಿಯೆ ಹೊಸದಲ್ಲ:
ದೇಶದಲ್ಲಿ ಎಸ್ ಐಆರ್ ಪ್ರಕ್ರಿಯೆಯಿಂದ ಉಂಟಾದ ರಾಜಕೀಯ ಸ್ಥಿತ್ಯಂತರಗಳನ್ನು ಕೆಪಿಸಿಸಿ ಅದ್ಯಕ್ಷರಾಗಿದ್ದ, ಹಾಲಿ ಮುಖ್ಯಮಂತ್ರಿ ಡಿ.ಕೆ.ಶಿವಕುಮಾರ್ ರವರು ಗಂಭೀರವಾಗಿ ಪರಿಗಣಿಸಿದ್ದರು. ಹೀಗಾಗಿ ಒಂದು ವರ್ಷದ ಹಿಂದೆಯೇ ಎಸ್ ಐಆರ್ ಪ್ರಕ್ರಿಯೆಯನ್ನು ಗಂಭೀರವಾಗಿ ತೆಗೆದುಕೊಳ್ಳಬೇಕು. ಅರ್ಹ ಮತದಾರರ ಹೆಸರುಗಳು ಪಟ್ಟಿಯಲ್ಲಿ ಬಿಟ್ಟು ಹೋಗದಂತೆ ಎಚ್ಚರ ವಹಿಸಬೇಕು ಎಂದು ಪಕ್ಷದ ಕಾರ್ಯಕರ್ತರಿಗೆ ಸೂಚನೆ ನೀಡಿದ್ದರು.
ನೈಜ ಮತದಾರನ ಹಕ್ಕು ಚುನಾವಣಾ ಆಯೋಗ ಕಸಿದುಕೊಳ್ಳಬಾರದು. ಇದೊಂದು ಸಂವಿಧಾನ ಗಟ್ಟಿಗೊಳಿಸುವ ಪ್ರಕ್ರಿಯೆ. ಈ ನಿಟ್ಟಿನಲ್ಲಿ ಚುನಾವಣಾ ಆಯೋಗಕ್ಕೆ ರಾಜ್ಯ ಸರ್ಕಾರ ಎಲ್ಲಾ ರೀತಿಯ ಸಹಕಾರ ಕೊಡುತ್ತಿದೆ. ಆದರೆ ಈ ವಿಷಯವನ್ನು ಬಿಜೆಪಿ ಮತ್ತು ಜೆಡಿಎಸ್ ರಾಜಕೀಯಗೊಳಿಸಿವೆ. ಪ್ರತಿ ಜಿಲ್ಲೆಗೂ ಭೇಟಿ ನೀಡಲಾಗುತ್ತಿದ್ದು ಎಸ್‌ಐಆರ್ ಪ್ರಕ್ರಿಯೆ ನಡೆಸಲು ಚುನಾವಣಾ ಆಯೋಗ ಯಾವ ರೀತಿಯ ವ್ಯವಸ್ಥೆಗಳನ್ನು ಮಾಡಿಕೊಂಡಿದೆ ಎನ್ನುವುದರ ಪರಿಶೀಲನೆ ನಡೆಸಲಾಗುತ್ತಿದೆ. ಕೊರತೆಗಳು ಕಂಡುಬಂದಾಗ ಚುನಾವಣಾ ಆಯೋಗದ ಗಮನ ಸೆಳೆಯಲಾಗುತ್ತದೆ ಎಂದರು.
ಸುದ್ದಿಗೋಷ್ಠಿಯಲ್ಲಿ ವಿಧಾನ ಪರಿಷತ್ ಸದಸ್ಯ ಎಸ್.ರವಿ, ರಾಜ್ಯ ಕಾಂಗ್ರೆಸ್ ಕಾನೂನು ಘಟಕದ ಅನಂತನಾಯ್ಕ್, ಎಸ್ಐಆರ್ ಸಮಿತಿ ಉಸ್ತುವಾರಿ ನಿಜಾಂ ಫೌಜ್ದಾರ್, ಜಿಲ್ಲಾ ಕಾಂಗ್ರೆಸ್ ಅಧ್ಯಕ್ಷ ಎಸ್.ಗಂಗಾಧರ್, ಗ್ಯಾರಂಟಿ ಯೋಜನೆಗಳ ಅನುಷ್ಠಾನ ಸಮಿತಿ ಅಧ್ಯಕ್ಷ ಕೆ.ರಾಜು, ರಾಮನಗರ ನಗರಾಭಿವೃದ್ಧಿ ಪ್ರಾಧಿಕಾರ ಅಧ್ಯಕ್ಷ ಎ.ಬಿ.ಚೇತನ್‌ಕುಮಾರ್, ಮಾಜಿ ಅಧ್ಯಕ್ಷ ಸಿಎನ್ ಆರ್ ವೆಂಕಟೇಶ್, ಜಿಪಂ ಮಾಜಿ ಅಧ್ಯಕ್ಷ ಕೆ.ರಮೇಶ್,ನಗರಸಭೆ ಸದಸ್ಯೆ ಬಿ.ಸಿಪಾರ್ವತಮ್ಮ, ಎಸ್ಸಿ ವಿಭಾಗದ ಜಿಲ್ಲಾಧ್ಯಕ್ಷ ನರಸಿಂಹಯ್ಯ, ಕಾರ್ಮಿಕ ವಿಭಾಗ ಜಿಲ್ಲಾಧ್ಯಕ್ಷ ಪುಟ್ಟರಾಜು, ಬ್ಲಾಕ್ ಅಧ್ಯಕ್ಷರಾದ ಸುನಿಲ್, ದಿಲೀಪ್ , ಮುಖಂಡರಾದ ಅಕ್ಕೂರು ಪುಟ್ಟರಾಜು, ಸ್ವಾಮಿ ಮತ್ತಿತರರು ಇದ್ದರು.
ಅಶೋಕ್ ಕುಚೋದ್ಯದ
ಸಚಿವ ಸಂಪುಟದಲ್ಲಿ ಒಂದು ಸ್ಥಾನ ಖಾಲಿ ಉಳಿದಿದೆ. ಅದನ್ನು ಮಹಿಳೆಗೆ ಕೊಡಬೇಕೆಂಬುದು ಮುಖ್ಯಮಂತ್ರಿ ಡಿ.ಕೆ.ಶಿವಕುಮಾರ್ ಅವರ ಮನಸ್ಸಿನಲ್ಲಿದೆ. ಅದಕ್ಕೆ ಅವಕಾಶ ಕಲ್ಪಿಸಬಹುದಾಗಿದೆ. ಆದರೆ, ಸಚಿವ ಸಂಪುಟದಲ್ಲಿನ ಸಚಿವರು ಪೇಮೆಂಟ್ ಸೀಟಿನ ಸಚಿವರು ಎಂದು ವಿಪಕ್ಷ ನಾಯಕ ಆರ್.ಅಶೋಕ್ ಕುಚೋದ್ಯದ ಮಾತುಗಳನ್ನಾಡಿದ್ದಾರೆ. ಇದು ಅವರ ಅನುಭವದ ಮಾತುಗಳಾಗಿವೆ ಎಂದು ವಿ.ಆರ್.ಸುದರ್ಶನ್ ತಿರುಗೇಟು ನೀಡಿದರು.
ರಾಜ್ಯದಲ್ಲಿ ಬಿಜೆಪಿ - ಜೆಡಿಎಸ್ ಮೈತ್ರಿಯಾಗಿರುವ ಸಮಯದಲ್ಲಿ ಪ್ರತಿ ಬೂತ್ ಹಂತದಲ್ಲಿ ಪಕ್ಷ ಸಂಘಟನೆ ಮಾಡಿಕೊಳ್ಳುವ ಅಗತ್ಯವಿದೆ. ಮತದಾರರು ಮತ್ತು ಅವರ ಮತ ಎರಡೂ ಸಹ ಬಹಳ ಮುಖ್ಯವಾಗಿದೆ. ಪ್ರತಿ ಕ್ಷೇತ್ರಕ್ಕೆ ನಾಲ್ಕು ವಕೀಲರನ್ನು ನೇಮಕ ಮಾಡಿಕೊಳ್ಳಬೇಕು. ಎಸ್ ಐ ಆರ್ ನಲ್ಲಿ ಏನಾದರೂ ಸಮಸ್ಯೆಗಳು ಬಂದರೆ, ಅಂತಹ ಸಮಯದಲ್ಲಿ ಆಕ್ಷೇಪಣೆ ಸಲ್ಲಿಸಲು ನೆರವಾಗಲಿದೆ.
- ವಿ.ಆರ್ .ಸುದರ್ಶನ್ , ರಾಜ್ಯ ಉಪಾಧ್ಯಕ್ಷರು, ಕೆಪಿಸಿಸಿ5ಕೆಆರ್ ಎಂಎನ್ 5.ಜೆಪಿಜಿ
ರಾಮನಗರದಲ್ಲಿ ಕೆಪಿಸಿಸಿ ರಾಜ್ಯ ಉಪಾಧ್ಯಕ್ಷ ವಿ.ಆರ್.ಸುದರ್ಶನ್ ಸುದ್ದಿಗೋಷ್ಠಿಯಲ್ಲಿ ಮಾತನಾಡಿದರು.