ಕೃಷಿ ಮೌಲ್ಯವರ್ಧನೆ , ಮಹಿಳಾ ಸ್ವಸಹಾಯ ಸಂಘಗಳ ಸಬಲೀಕರಣಕ್ಕೆ ಪ್ರಧಾನ ಆದ್ಯತೆ ನೀಡಿ: ಉಮಾ ಮಹಾದೇವನ್

KannadaprabhaNewsNetwork |  
Published : Aug 06, 2026, 01:15 AM IST
೫ಕೆಎಲ್‌ಆರ್-೪ಕೋಲಾರದ ಜಿಲ್ಲಾಧಿಕಾರಿ ಕಚೇರಿಯಲ್ಲಿ ಜಿಲ್ಲೆಯ ಅಭಿವೃದ್ಧಿ ಪ್ರಗತಿ ಪರಿಶೀಲನಾ ಸಭೆಯಲ್ಲಿ ಮಾತನಾಡುತ್ತಿರುವ ಸರ್ಕಾರದ ಅಪರ ಮುಖ್ಯ ಕಾರ್ಯದರ್ಶಿ ಹಾಗೂ ಅಭಿವೃದ್ಧಿ ಆಯುಕ್ತೆ ಉಮಾ ಮಹಾದೇವನ್. | Kannada Prabha

ಸಾರಾಂಶ

ಅಂತರ್ಜಲ ಮಟ್ಟ ಕುಸಿದು ೯೦೩ ಬೋರ್ ವೆಲ್ ಗಳು ತಾತ್ಕಾಲಿಕವಾಗಿ ಸ್ಥಗಿತಗೊಂಡಿದ್ದು, ಟ್ಯಾಂಕರ್ ಮೂಲಕ ನೀರು ಪೂರೈಸುತ್ತಿರುವ ಬಗ್ಗೆ ಮಾಹಿತಿ ಪಡೆದ ಅವರು, ಜಲ ಜೀವನ್ ಮಿಷನ್ ಅಡಿ ಕುಡಿಯುವ ನೀರಿನ ಘಟಕಗಳ ನಿರ್ವಹಣೆ ಗ್ರಾಪಂ ಮಟ್ಟದಲ್ಲಿ ತರಬೇತಿ ಪಡೆದ ಮಹಿಳಾ ಸ್ವಸಹಾಯ ಸಂಘಗಳ ಸದಸ್ಯರಿಗೆ ವಹಿಸುವಂತೆ ಸೂಚಿಸಿದರು.

ಕನ್ನಡಪ್ರಭ ವಾರ್ತೆ ಕೋಲಾರ

ಕೇವಲ ಉತ್ಪಾದನೆಗೆ ಸೀಮಿತವಾಗದೆ ಕೃಷಿ ಬೆಳೆಗಳ ಮೌಲ್ಯವರ್ಧನೆ ಹಾಗೂ ಗ್ರಾಮೀಣ ಮಹಿಳೆಯರ ಆರ್ಥಿಕ ಸ್ವಾವಲಂಬನೆಗೆ ಹೆಚ್ಚಿನ ಒತ್ತು ನೀಡುವಂತೆ ಸರ್ಕಾರದ ಅಪರ ಮುಖ್ಯ ಕಾರ್ಯದರ್ಶಿ ಹಾಗೂ ಅಭಿವೃದ್ಧಿ ಆಯುಕ್ತೆ ಉಮಾ ಮಹಾದೇವನ್ ಅಧಿಕಾರಿಗಳಿಗೆ ಕಟ್ಟುನಿಟ್ಟಿನ ಸೂಚನೆ ನೀಡಿದರು.

ನಗರದ ಜಿಲ್ಲಾಧಿಕಾರಿ ಕಚೇರಿಯಲ್ಲಿ ಜಿಲ್ಲೆಯ ಅಭಿವೃದ್ಧಿ ಪ್ರಗತಿ ಪರಿಶೀಲನಾ ಸಭೆಯಲ್ಲಿ ಮಾತನಾಡಿ, ಕುಡಿಯುವ ನೀರು ನಿರ್ವಹಣೆ, ಮೀನುಗಾರಿಕೆ ಹಾಗೂ ಕೋಳಿ ಸಾಕಾಣಿಕೆ ಸೇರಿದಂತೆ ಗ್ರಾಮೀಣ ಆರ್ಥಿಕತೆಯ ಪ್ರತಿಯೊಂದು ಹಂತದಲ್ಲೂ ಸಂಜೀವಿನಿ ಮಹಿಳಾ ಸ್ವಸಹಾಯ ಸಂಘಗಳನ್ನು ತೊಡಗಿಸಿಕೊಳ್ಳುವಂತೆ ನಿರ್ದೇಶನ ನೀಡಿದರು.

ಕೃಷಿ ಮೌಲ್ಯವರ್ಧನೆ ಮತ್ತು ರಫ್ತಿಗೆ ಒತ್ತು:

ಟೊಮೆಟೋ ಬೆಲೆ ಪ್ರತಿ ಕೆಜಿಗೆ ₹೧೬ಕ್ಕಿಂತ ಕಡಿಮೆಯಾಗಿರುವ ಬಗ್ಗೆ ತೀವ್ರ ಕಳವಳ ವ್ಯಕ್ತಪಡಿಸಿದ ಆಯುಕ್ತರು, ಟೊಮೆಟೋ ಮತ್ತು ಮಾವಿನ ಹಣ್ಣಿನ ಮೌಲ್ಯವರ್ಧನೆಗೆ ತಕ್ಷಣದ ಕ್ರಮ ಕೈಗೊಳ್ಳಬೇಕು, ವಿಶೇಷವಾಗಿ ಸನ್ ಡ್ರ್ರೈಡ್ ಟೊಮೆಟೋ ತಯಾರಿಸಿ ಯುರೋಪ್ ಹಾಗೂ ಗಲ್ಫ್ ರಾಷ್ಟ್ರಗಳಿಗೆ ರಫ್ತು ಮಾಡುವ ಸಾಧ್ಯತೆಗಳನ್ನು ಪರಿಶೀಲಿಸಲು ಮತ್ತು ಜಿಲ್ಲೆಯಲ್ಲೇ ಪಲ್ಪಿಂಗ್ ಯೂನಿಟ್ ಗಳನ್ನು ಸ್ಥಾಪಿಸಲು ನಬಾರ್ಡ್ (ಓಂಃಂಖಆ) ನೆರವು ಪಡೆಯುವಂತೆ ಕೃಷಿ ಮತ್ತು ತೋಟಗಾರಿಕಾ ಇಲಾಖೆಗೆ ಸೂಚಿಸಿದ ಅವರು, ಜಿಲ್ಲೆಯಲ್ಲಿ ರಸಗೊಬ್ಬರ ಕೊರತೆಯಿಲ್ಲ ಹಾಗೂ ಮಳೆ ಕೊರತೆಯಾದರೆ ಪರ್ಯಾಯ ಬೆಳೆ ಯೋಜನೆ ಸಿದ್ಧವಿದೆ ಎಂದು ಅಧಿಕಾರಿಗಳು ಸಭೆಗೆ ಮಾಹಿತಿ ನೀಡಿದರು.

ಅಂತರ್ಜಲ ಮಟ್ಟ ಕುಸಿದು ೯೦೩ ಬೋರ್ ವೆಲ್ ಗಳು ತಾತ್ಕಾಲಿಕವಾಗಿ ಸ್ಥಗಿತಗೊಂಡಿದ್ದು, ಟ್ಯಾಂಕರ್ ಮೂಲಕ ನೀರು ಪೂರೈಸುತ್ತಿರುವ ಬಗ್ಗೆ ಮಾಹಿತಿ ಪಡೆದ ಅವರು, ಜಲ ಜೀವನ್ ಮಿಷನ್ ಅಡಿ ಕುಡಿಯುವ ನೀರಿನ ಘಟಕಗಳ ನಿರ್ವಹಣೆ ಗ್ರಾಪಂ ಮಟ್ಟದಲ್ಲಿ ತರಬೇತಿ ಪಡೆದ ಮಹಿಳಾ ಸ್ವಸಹಾಯ ಸಂಘಗಳ ಸದಸ್ಯರಿಗೆ ವಹಿಸುವಂತೆ ಸೂಚಿಸಿದರು.

ಜಿಲ್ಲೆಯ ೩೫೦ಕ್ಕೂ ಹೆಚ್ಚು ಕೆರೆಗಳಲ್ಲಿ ಶೇ.೫೦ಕ್ಕಿಂತ ಹೆಚ್ಚು ನೀರಿದ್ದು, ಈ ಕೆರೆಗಳಲ್ಲಿ ಮೀನು ಮರಿಗಳನ್ನು ಬಿಡುವ ಜವಾಬ್ದಾರಿ ಎಸ್.ಎಚ್.ಜಿ ಮಹಿಳೆಯರಿಗೆ ನೀಡುವ ಮೂಲಕ ಅವರಿಗೆ ಸ್ಥಳೀಯವಾಗಿ ಆದಾಯ ತಂದುಕೊಡಬೇಕು. ಅಲ್ಲದೆ ಸ್ಥಳೀಯವಾಗಿ ಮೀನು, ಕುರಿ, ಕೋಳಿ ಮೊಟ್ಟೆಗಳನ್ನು ಸ್ಥಳೀಯವಾಗಿ ಮಾರುಕಟ್ಟೆ ಮಾಡಲು ಪ್ರೋತ್ಸಾಹಿಸಬೇಕೆಂದು ತಿಳಿಸಿದರು.

ಪೌಷ್ಠಿಕಾಂಶ ಭದ್ರತೆ ಹಾಗೂ ಆರ್ಥಿಕ ಸಬಲೀಕರಣದ ದೃಷ್ಟಿಯಿಂದ ಜಿಲ್ಲೆಯಲ್ಲೇ ಮಹಿಳಾ ಸ್ವಸಹಾಯ ಸಂಘಗಳ ಮೂಲಕ ಬ್ಯಾಕ್ ಯಾರ್ಡ್ ಪೌಲ್ಟ್ರಿ ಘಟಕಗಳನ್ನು ಸ್ಥಾಪಿಸಿ, ಮೊಟ್ಟೆ ಉತ್ಪಾದನೆಗೆ ಉತ್ತೇಜನ ನೀಡಬೇಕು ಎಂದು ತಿಳಿಸಿದರು.

ರಾಜ್ಯಾದ್ಯಂತ ಶಾಲೆ ಮತ್ತು ಅಂಗನವಾಡಿಗಳಿಗೆ ಪ್ರತಿದಿನ ಲಕ್ಷಾಂತರ ಮೊಟ್ಟೆಗಳ ಅಗತ್ಯವಿದ್ದು, ಸ್ಥಳೀಯವಾಗಿಯೇ ಉತ್ಪಾದಿಸುವ ಮೂಲಕ ಬೇಡಿಕೆ ಪೂರೈಸಬಹುದು, ಜಿಲ್ಲೆಯಲ್ಲಿ ೨೯ ವಾರಗಳಿಗೆ ಆಗುವಷ್ಟು ಮೇವಿನ ದಾಸ್ತಾನು ಲಭ್ಯವಿರುವ ಬಗ್ಗೆಯೂ ಅಧಿಕಾರಿಗಳು ವಿವರಿಸಿದರು.

ಕೋಲಾರ ಜಿಲ್ಲೆಯ ೨೦ ಸಾವಿರಕ್ಕೂ ಹೆಚ್ಚು ರೇಷ್ಮೆ ಬೆಳೆಗಾರರ ಹಿತದೃಷ್ಟಿಯಿಂದ, ನರೇಗಾ ಯೋಜನೆಯಡಿ ರೇಷ್ಮೆ ಕೃಷಿಗೆ ಪೂರಕವಾದ ಮೂಲಸೌಕರ್ಯ, ಟ್ರೆಂಚ್ ನಿರ್ಮಾಣ ಹಾಗೂ ಹಿಪ್ಪುನೇರಳೆ ಕೃಷಿಗೆ ಹೆಚ್ಚಿನ ಆದ್ಯತೆ ನೀಡುವಂತೆ ಸೂಚಿಸಿದರು.

ಪ್ರತಿಯೊಂದು ಗ್ರಾಪಂನಲ್ಲೂ ಮಹಿಳಾ ಸ್ವಸಹಾಯ ಸಂಘಗಳಿಗೆ ಕಾರ್ಯಾಗಾರ ನಿರ್ಮಿಸಲು ಹಾಗೂ ಹಳೆಯ ಕಟ್ಟಡಗಳನ್ನು ನವೀಕರಿಸಿ ಗ್ರಾಮೀಣ ಗ್ರಂಥಾಲಯ ನಿರ್ವಹಣೆ ಮತ್ತು ಪ್ರವಾಸೋಧ್ಯಮ ಅಭಿವೃದ್ಧಿಗೆ ಬಳಸಿಕೊಳ್ಳಲು ಜಿಲ್ಲಾಡಳಿತಕ್ಕೆ ನಿರ್ದೇಶನ ನೀಡಿದರು.

ಸಭೆಯಲ್ಲಿ ಜಿಲ್ಲಾಧಿಕಾರಿ ಎಂ.ಆರ್.ರವಿಕುಮಾರ್, ಜಿಪಂ ಸಿಇಒ ಡಾ.ಪ್ರವೀಣ್ ಪಿ.ಬಾಗೇವಾಡಿ, ಕೋಲಾರ ಎಸ್‌ಪಿ ಕನ್ನಿಕಾ ಸಿಕ್ರಿವಾಲ್, ಕೆ.ಜಿ.ಎಫ್ ಎಸ್.ಪಿ ಶಿವಾಂಶು ರಜಪೂತ್, ಎಡೀಸಿ ಎಸ್.ಎಂ.ಮಂಗಳ, ಜಿಪಂ ಉಪಕಾರ್ಯದರ್ಶಿ ಟಿ.ಕೆ.ರಮೇಶ್, ಕೃಷಿ ಜಂಟಿ ನಿರ್ದೇಶಕಿ ಮಂಜುಳ, ತೋಟಗಾರಿಕೆ ಉಪನಿರ್ದೇಶಕ ಕುಮಾರಸ್ವಾಮಿ, ಪಶುಪಾಲನಾ ಇಲಾಖೆ ಉಪನಿರ್ದೇಶಕ ಡಾ.ರಮೇಶ್ ಇದ್ದರು.

PREV
Get the latest news from across Karnataka (ಕರ್ನಾಟಕ ನ್ಯೂಸ್)— breaking headlines, politics, local developments, crime reports, district updates, civic issues and more. Stay informed with Kannada Prabha’s real‑time Karnataka news coverage.

Recommended Stories

ಚಿಕ್ಕಬಳ್ಳಾಪುರ ಜಿಲ್ಲೆಯಲ್ಲಿ ತೀವ್ರ ಬರ: ಪರಿಹಾರ ಕ್ರಮಕ್ಕೆ ಸಚಿವ ಬಿ.ಎಸ್.ಸುರೇಶ ಸೂಚನೆ
ದಾಂಪತ್ಯದಲ್ಲಿ ವಿಶ್ವಾಸ ವಿಟ್ಟಲ್ಲಿ ಆನಂದ ಪ್ರಾಪ್ತಿ