ತುರ್ತು ಪರಿಸ್ಥಿತಿ ಘೋಷಣೆಗೆ 50 ವರ್ಷ, ಬಿಜೆಪಿ ಯುವ ಮೋರ್ಚಾದಿಂದ ಪ್ರತಿಭಟನೆ
ದೇಶದಲ್ಲಿ ತುರ್ತು ಪರಿಸ್ಥಿತಿ ಜಾರಿಗೆ 50 ವರ್ಷ ತುಂಬಿರುವ ಹಿನ್ನೆಲೆಯಲ್ಲಿ ಮಂಗಳವಾರ ಬಿಜೆಪಿ ಯುವ ಮೋರ್ಚಾ ಕಾರ್ಯಕರ್ತರು ನಗರದಲ್ಲಿ ಪ್ರತಿಭಟನೆ ನಡೆಸಿದರು.
ಬೆಳಗ್ಗೆಯೇ ನಗರದ ಕೆಲವೆಡೆ ಕಾಂಗ್ರೆಸ್ ಪಕ್ಷದ ವಿರುದ್ಧ ಬಿಜೆಪಿ ಕಾರ್ಯಕರ್ತರು ತುರ್ತು ಪರಿಸ್ಥಿತಿ ಕರಾಳ ದಿನ ಎಂಬುದಾಗಿ ಪೋಸ್ಟರ್ ಅಂಟಿಸಿದ್ದರು. ಇವುಗಳು ಕಣ್ಣಿಗೆ ಬೀಳುತ್ತಿದ್ದಂತೆ ಪೊಲೀಸರು ತೆರವುಗೊಳಿಸಿದರು. ನಂತರ ಮಧ್ಯಾಹ್ನ 1 ಗಂಟೆಗೆ ಇಲ್ಲಿನ ಕೆ.ಎಂ. ರಸ್ತೆಯಲ್ಲಿರುವ ಕಾಂಗ್ರೆಸ್ ಕಚೇರಿಗೆ ತೆರಳಿ ಕರಾಳ ದಿನ ಪೋಸ್ಟರ್ ಅಂಟಿಸುವ ಮೂಲಕ ಪ್ರತಿಭಟನೆ ನಡೆಸಲು ಯುವ ಮೋರ್ಚಾ ಮುಖಂಡರು ಹಾಗೂ ಕಾರ್ಯಕರ್ತರು ಪ್ಲಾನ್ ಮಾಡಿಕೊಂಡಿದ್ದರು.ಈ ವಿಷಯ ತಿಳಿಯುತ್ತಿದಂತೆ ಪೊಲೀಸರು ಕಾಂಗ್ರೆಸ್ ಕಚೇರಿ ಮೇಲೆ ಕಣ್ಣಿಟ್ಟಿದ್ದರು. ಬಿಜೆಪಿ ಮುಖಂಡರು ಕಾಂಗ್ರೆಸ್ ಕಚೇರಿಗೆ ತೆರಳುವಾಗ ರಸ್ತೆ ಮಧ್ಯದಲ್ಲಿ ಪೊಲೀಸರು ಅವರನ್ನು ಬಂಧಿಸಿದರು. ನಂತರ ಪೊಲೀಸ್ ಠಾಣೆಗೆ ಕರೆದುಕೊಂಡು ಹೋಗಿ ಕೆಲ ಸಮಯದ ಬಳಿಕ ಬಿಟ್ಟರು. ಬಳಿಕ ಜಿಲ್ಲಾ ಕಾಂಗ್ರೆಸ್ ಕಚೇರಿಯಲ್ಲಿ ಬಂದೋಬಸ್ತ್‌ಗಾಗಿ ಪೊಲೀಸರನ್ನು ನಿಯೋಜನೆ ಮಾಡಲಾಗಿತ್ತು.
ಕಳೆದ 1975ರ ಜೂನ್ 25 ರಂದು ದೇಶದ ಪ್ರಜಾಪ್ರಭುತ್ವವನ್ನು ಅಮಾನತಿನಲ್ಲಿಟ್ಟಿದ್ದ ಅಂದಿನ ಪ್ರಧಾನಿ ಇಂದಿರಾಗಾಂಧಿ ರಾಷ್ಟ್ರೀಯ ತುರ್ತು ಪರಿಸ್ಥಿತಿಯನ್ನು ಹೇರುವ ಮೂಲಕ ದೇಶದ ನಾಗರಿಕರ ಹಕ್ಕನ್ನು ಮೊಟಕುಗಳಿಸಿದ್ದರು.
ದೇಶದಲ್ಲಿ 21 ತಿಂಗಳು ತುರ್ತುಪರಿಸ್ಥಿತಿ ಹೇರಿದ್ದ 50ನೇ ವರ್ಷಕ್ಕೆ ಕಾಲಿಡುತ್ತಿದ್ದೇವೆ. ತುರ್ತು ಪರಿಸ್ಥಿತಿಯ ವೇಳೆ ಆಂತರಿಕ ಭದ್ರತಾ ನಿರ್ವಹಣೆ ಕಾಯ್ದೆ (ಮಿಸಾ) ಆಧ್ಯಾದೇಶ ಹೊರಡಿಸುವ ಮೂಲಕ ತಿದ್ದುಪಡಿಯನ್ನು ತರಲಾಗಿತ್ತು. ಯಾವುದೇ ವ್ಯಕ್ತಿಯನ್ನು ವಿಚಾರಣೆ ಇಲ್ಲದೆ ಬಂಧಿಸುವ ಅಧಿಕಾರವನ್ನು ಪೊಲೀಸರಿಗೆ ನೀಡಲಾಯಿತು.
--------------
ದೇಶದಲ್ಲಿ ತುರ್ತು ಪರಿಸ್ಥಿತಿ ಜಾರಿಗೆ 50 ವರ್ಷ ತುಂಬಿರುವ ಹಿನ್ನೆಲೆಯಲ್ಲಿ ಮಂಗಳವಾರ ಬಿಜೆಪಿ ಯುವ ಮೋರ್ಚಾದ ಕಾರ್ಯಕರ್ತರು ಚಿಕ್ಕಮಗಳೂರಿನ ಕಾಂಗ್ರೆಸ್ ಕಚೇರಿಗೆ ಪೋಸ್ಟರ್ ಅಂಟಿಸಲು ತೆರಳುವ ವೇಳೆ ಪೊಲೀಸರು ಬಂಧಿಸಿದರು.