ಕನ್ನಡಪ್ರಭ ವಾರ್ತೆ ಶಿವಮೊಗ್ಗ
ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ಅವರು, ಎಡಮನೆ ಪಂಚಾಯಿತಿ ವ್ಯಾಪ್ತಿಯ 16 ಕುಟುಂಬಗಳನ್ನು ಒಕ್ಕಲೆಬ್ಬಿಸುವ ಕೆಲಸವನ್ನು ಅರಣ್ಯ ಇಲಾಖೆಯು ಪೊಲೀಸ್ ಬೆಂಬಲದೊಂದಿಗೆ ತರಾತುರಿಯಲ್ಲಿ ಮಾಡುತ್ತಿದೆ. ಇಂತಹ ಕ್ರಮ ಮಾನವೀಯತೆಯ ವಿರುದ್ಧವಾಗಿದ್ದು, ಇದಕ್ಕೆ ಅವಕಾಶ ನೀಡುವುದಿಲ್ಲ ಎಂದು ಎಚ್ಚರಿಸಿದರು.
ಮೂರು ತಲೆಮಾರಿನಿಂದ ಈ ಗ್ರಾಮದಲ್ಲಿಯೇ ವಾಸವಾಗಿರುವ 16 ಕುಟುಂಬಗಳು ಆಧಾರ್ ಕಾರ್ಡ್ ಹೊಂದಿರುವುದು ಮಾತ್ರವಲ್ಲದೆ, ಕೇಂದ್ರ ಸರ್ಕಾರದ ಯೋಜನೆಯಡಿ ಕುಡಿಯುವ ನೀರಿನ ಸಂಪರ್ಕ ಪಡೆದುಕೊಂಡಿದೆ. ವಿದ್ಯುತ್ ಹಾಗೂ ಪಂಚಾಯಿತಿಯಿಂದ ಆಶ್ರಯ ಮನೆ ಪಡೆದಿವೆ. ಆದರೆ ಈಗ ಅರಣ್ಯ ಇಲಾಖೆ ಬಲಪ್ರಯೋಗದಿಂದ ಈ ಕುಟುಂಬಗಳನ್ನು ಹೊರದಬ್ಬುವ ಕೆಲಸ ಮಾಡುತ್ತಿದೆ ಎಂದು ರಾಜ್ಯ ಸರ್ಕಾರದ ವಿರುದ್ಧ ಆಕ್ರೋಶ ವ್ಯಕ್ತಪಡಿಸಿದರು.ನಾವೆಲ್ಲರೂ ರೈತಸಂಘದವರ ಜೊತೆಗೂಡಿ ಸ್ಥಳಕ್ಕೆ ತೆರಳಿ ಸಂತ್ರಸ್ಥರನ್ನು ಭೇಟಿ ಮಾಡಿದ್ದೇವೆ. ಈ ನಿವಾಸಿಗಳು ಬಗರ್‌ಹುಕುಂ ಸಾಗುವಳಿದಾರರಲ್ಲ. ಬದಲಾಗಿ ಶರಾವತಿ ಸಂತ್ರಸ್ಥರಾಗಿದ್ದು, ಸರ್ಕಾರವೇ ಇವರನ್ನು ಆ ಸಂದರ್ಭದಲ್ಲಿ ಈ ಜಾಗ ತೋರಿಸಿ ವಾಸಿಸಲು ಅವಕಾಶ ಕಲ್ಪಿಸಿತ್ತು. ಆದರೆ ಈಗ ಇಲ್ಲಿಂದಲೂ ಒಕ್ಕಲೆಬ್ಬಿಸಿದರೆ ಅವರು ಎಲ್ಲಿಗೆ ಹೋಗಬೇಕು ? ಅವರಿಗೆ ನೀಡಲು ಭೂಮಿ ಎಲ್ಲಿದೆ ? ಎಂಬ ಪ್ರಶ್ನೆಗೆ ಉತ್ತರವಿಲ್ಲ ಎಂದರು.
ನೋಟೀಸು ಕೊಡುವುದಾದರೆ ಪೊಲೀಸ್ ಜೀಪ್ ಮತ್ತು ಆ್ಯಂಬುಲೆನ್ಸ್ ಏಕೆ ಹೋಗಬೇಕು ಎಂದು ಪ್ರಶ್ನಿಸಿದ ಅವರು, ಯಾವುದೇ ಕಾರಣಕ್ಕೂ ಭೂಮಿ ಬಿಡುವ ಪ್ರಶ್ನೆಯೇ ಇಲ್ಲ. ದೊಡ್ಡಮಟ್ಟದ ಹೋರಾಟ ಹಮ್ಮಿಕೊಳ್ಳುತ್ತೇವೆ ಎಂದು ದೂರಿದರು.
ಇಲ್ಲಿ ನಾಡಿಗೆ ಬೆಳಕು ನೀಡಲು ತ್ಯಾಗ ಮಾಡಿದ ಇವರಿಗೆ ಹಕ್ಕು ನೀಡದ ಸರ್ಕಾರ ಒಂದು ಸಾವಿರ ದಿನದ ಸಾಧನಾ ಸಮಾವೇಶ ಮಾಡಲು ಹೊರಟಿದೆ. ಸರ್ಕಾರದ ಸಾವಿರ ದಿನದ ಕೊಡುಗೆ ಏನೆಂದರೆ ಬಗರ್‌ಹುಕುಂ ರೈತರನ್ನು ಮತ್ತು ಶರಾವತಿ ಸಂತ್ರಸ್ಥರನ್ನು ಒಕ್ಕಲೆಬ್ಬಿಸುವುದೇ ಸಾಧನೆಯಾಗಿದೆ ಎಂದು ವಾಗ್ದಾಳಿ ನಡೆಸಿದರು.
ಪ್ರತ್ಯೇಕ ಹೊಸನಗರ ವಿಧಾನಸಭಾ ಕ್ಷೇತ್ರ ನೀಡಿ: ಹೊಸನಗರ ಪ್ರತ್ಯೇಕ ವಿಧಾನಸಭಾ ಕ್ಷೇತ್ರ ರಚನೆಗೆ ಈಗ ಸರಿಯಾದ ಸಮಯ. ಕನಿಷ್ಠ 2 ಲಕ್ಷ ಜನಸಂಖ್ಯೆ ಆಧಾರಿತ ಕ್ಷೇತ್ರ ಎಂಬ ನಿಯಮವನ್ನು ಮಲೆನಾಡು ಮತ್ತು ಗುಡ್ಡಗಾಡು ಭಾಗದಲ್ಲಿ ಸಡಿಲಿಸಿ ಕಿ.ಮೀ.ವ್ಯಾಪ್ತಿ ಪರಿಗಣಿಸಬೇಕು. ಹೊಸನಗರವನ್ನು ವಿಧಾನಸಭಾ ಕ್ಷೇತ್ರವನ್ನಾಗಿ ಮಾಡಬೇಕು. ತಜ್ಞರು ಕೂಡ ಇದಕ್ಕೆ ಒಪ್ಪಿಗೆ ಸೂಚಿಸಿದ್ದಾರೆ. ಈ ಬಗ್ಗೆ ನಾನು ಹಿಂದೆ ವಿಧಾನಸಭಾಧ್ಯಕ್ಷರಾದ ಭೋಪಯ್ಯ, ಕಾಗೇರಿ, ಹಾಗೂ ಪರಿಷತ್ ಸಭಾಪತಿ ಬಿ.ಎಲ್. ಶಂಕರ್ ಅವರಿಗೆ ಒತ್ತಾಯಿಸಿದ್ದೆ ಗೋವಾ ಮತ್ತು ಉತ್ತರಾಖಂಡ ಹಾಗೂ ಪೂರ್ವಾಂಚಲ ರಾಜ್ಯಗಳಲ್ಲಿ ಈ ರೀತಿಯ ವಿಧಾನಸಭಾ ಕ್ಷೇತ್ರಗಳಿವೆ. ಅಭಿವೃದ್ಧಿ ದೃಷ್ಠಿಯಿಂದ ಹೊಸನಗರವನ್ನು ಕೂಡ ವಿಧಾನಸಭಾ ಕ್ಷೇತ್ರವನ್ನಾಗಿ ಮಾಡುವ ಅನಿವಾರ್ಯತೆ ಇದೆ ಎಂದರು.